ಬೆಂಗಳೂರು: ಸಂಪನ್ಮೂಲ ಕೊರತೆಯಿಂದ ದಿಕ್ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ಲಭ್ಯವಿರುವ ಹಣದಲ್ಲಿ ಸಕಲ ಜೀವಾತ್ಮರನ್ನೂ ಓಲೈಸಿ, ಸಂತೈಸುವ ಕಸರತ್ತನ್ನು ಬಜೆಟ್‌ನಲ್ಲಿ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಪ್ರಸಾದ’ ಹಂಚಲು ಬೇಕಾದ ಮೊತ್ತ ಕ್ರೋಡೀಕರಣಕ್ಕೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೇರುವ ಮೂಲಕ ಸರ್ವರಿಗೂ ಬರೆ ಹಾಕಲು ಮುಂದಾಗಿದ್ದಾರೆ.
ಕೇಂದ್ರ–ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಅನುದಾನ ಕಡಿತಗೊಂಡಿರುವ ಆಘಾತ, ಆರ್ಥಿಕ ಹಿಂಜರಿತದಿಂದಾಗಿ ಹೆಚ್ಚಿದ ಸಂಕಷ್ಟ, ಹೆಚ್ಚುತ್ತಿರುವ ಸಾಲದ ಹೊರೆಯಿಂದ ಸಂಪನ್ಮೂಲ ಸಂಗ್ರಹ ಕಗ್ಗಂಟಾಗಿರುವುದನ್ನು ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಹಿಂದಿನ ಬಜೆಟ್‌ಗೆ ಹೋಲಿಸಿದರೆ ಬಜೆಟ್‌ನ ಒಟ್ಟಾರೆ ಮೊತ್ತ ₹3,740 ಕೋಟಿಯಷ್ಟು(ಶೇ 1.60ರಷ್ಟು) ಮಾತ್ರ ಏರಿಕೆಯಾಗಿರುವುದು ಆರ್ಥಿಕ ಸಂಕಷ್ಟದ ಸೂಚಕದಂತಿದೆ.
ಹಾಗಿದ್ದರೂ ಕೃಷಿಕರು, ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಕಾರ್ಮಿಕರು–ಹೀಗೆ ಎಲ್ಲ ಸಮುದಾಯಗಳನ್ನು ಗುರುತಿಸಿ ಅನುದಾನ ನೀಡುವ ಪ್ರಯತ್ನ ಮಾಡಿದ್ದಾರೆ.ಉಪ್ಪಾರ, ಅಂಬಿಗ, ಕುಂಬಾರ, ವಿಶ್ವಕರ್ಮ, ಗೊಲ್ಲರಂತಹ ತಳ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಬಸವಣ್ಣ, ಕೆಂಪೇಗೌಡರಂತಹ ಇತಿಹಾಸ ಪುರುಷರ ಪ್ರತಿಮೆಗಳ ಸ್ಥಾಪನೆಗೂ ಧನಸಹಾಯ ನೀಡಲಾಗಿದೆ. ಗರ್ದಿ ಗಮ್ಮತ್ತಿನ ಮಾಯಾ ಚಿತ್ರಗಳಂತೆ ಎಲ್ಲರ ಮೇಲೆ ಮೋಡಿ ಮಾಡಲು ಇದು ಮುಖ್ಯಮಂತ್ರಿಯವರು ನಡೆಸಿದ ಕಸರತ್ತು ಎಂಬಂತೆ ತೋರುತ್ತದೆ.
ಮಠ–ದೇಗುಲಗಳ ಬಗ್ಗೆ ವಿಶೇಷ ಆಸಕ್ತಿ ತೋರಿಲ್ಲ. ಆದರೆ, ಈ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆ ಎಂದಿಗೂ ಇರುತ್ತದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
ಬಜೆಟ್‌ನಲ್ಲಿಯೇ ಎರಡು ಉಪ ಬಜೆಟ್‌ಗಳೂ ಇವೆ. ಮಕ್ಕಳ ಬಜೆಟ್‌ನ ಪರಿಕಲ್ಪನೆಯನ್ನು ಹೊಸದಾಗಿ ತೇಲಿಬಿಡುವ ಜತೆಗೆ ಮತ್ತೆ ಮಹಿಳಾ ಬಜೆಟ್‌ನ ಪ್ರಸ್ತಾಪವನ್ನೂ ಮಾಡಲಾಗಿದೆ. ಈ ಎರಡೂ ವಲಯಗಳಿಗೆ ಒಟ್ಟಾಗಿ ₹ 74 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತವನ್ನು ಒದಗಿಸಲಾಗಿದೆ. ಬೃಹತ್ ಮೊತ್ತದ ಅನುದಾನ ಕೊಟ್ಟಂತೆ ಮಾಡಿದ್ದರೂ ಯಾವ ಯೋಜನೆಗೆ ಎಷ್ಟು ಮೊತ್ತ, ಎಷ್ಟು ಸಂಖ್ಯೆಯ ಫಲಾನುಭವಿಗಳಿಗೆ ಲಾಭವಾಗಲಿದೆ ಎಂಬ ವಿವರವನ್ನು ನೀಡುವ ಗೋಜಿಗೆ ಹೋಗದ ಅವರು, ಈ ಮಾಹಿತಿಯನ್ನು ನಿಗೂಢವಾಗಿಯೇ ಇಟ್ಟಿದ್ದಾರೆ.
ಇಲಾಖಾವಾರು ಅನುದಾನ ಹಂಚಿಕೆ ಮಾಡುವ ಸಿದ್ಧ ಮಾದರಿಯನ್ನು ಕೈಬಿಟ್ಟಿರುವ ಮುಖ್ಯಮಂತ್ರಿ, ಇದೇ ಮೊದಲ ಬಾರಿಗೆ ಆದ್ಯತೆಯ ಆಧಾರದ ಮೇಲೆ ಆರು ವಲಯಗಳಾಗಿ ವರ್ಗೀಕರಿಸಿ ಅನುದಾನ ನೀಡಿದ್ದಾರೆ. ಹೀಗಾಗಿ ಈ ಸಲದ ಬಜೆಟ್ ತನ್ನ ಎಂದಿನ ‘ಫೋಕಸ್’ಅನ್ನು ಕಳೆದುಕೊಂಡಿದೆ. ಇಲಾಖಾವಾರು, ಯೋಜನಾವಾರು ಅನು ದಾನ ಘೋಷಣೆ ಮಾಡಿದರೆ ಸಚಿವರು, ಶಾಸಕರು ತಮ್ಮ ಇಲಾಖೆ ಅಥವಾ ಕ್ಷೇತ್ರದ ಯೋಜನೆಗಳಿಗೆ ಅನುದಾನ ಬೇಡಿಕೆ ಮಂಡಿಸಲಿದ್ದಾರೆ. ಸಂಪನ್ಮೂಲ ಕೊರತೆ ಇರುವುದರಿಂದ ಎಲ್ಲರನ್ನು ತೃಪ್ತಿ ಪಡಿಸುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿ ಈ ಮಾರ್ಗವನ್ನು ಯಡಿಯೂರಪ್ಪ ಹುಡುಕಿದ್ದಾರೆಯೇ ಎಂಬ ಅನು ಮಾನವೂ ವ್ಯಕ್ತವಾಗಿದೆ.
ವಲಯವಾರು ವರ್ಗೀಕರಣವೂ ಗೋಜಲುಗೋಜಲಾಗಿದೆ. ಮೊದಲು ಒಂದೇ ಲೆಕ್ಕ ಶೀರ್ಷಿಕೆಯಡಿ ಸಿಗುತ್ತಿದ್ದ ನೀರಾವರಿ ಇಲಾಖೆಯ ವಿವರಗಳು ಈ ಬಾರಿ ಮೂರು ವಲಯಗಳಲ್ಲಿ ಹರಿದು ಹಂಚಿಹೋಗಿವೆ. ಅಲ್ಲದೆ, ಈ ಮಹತ್ವದ ಇಲಾಖೆಗೆ ಸಂಬಂಧಿಸಿದಂತೆ ತುಂಬಾ ಅಸ್ಪಷ್ಟ ವಿವರಗಳನ್ನು ಒದಗಿಸಲಾಗಿದೆ. ಏತ ನೀರಾವರಿ ಯೋಜನೆಗಳಿಗೆ ₹ 5ಸಾವಿರ ಕೋಟಿ ಮೀಸಲಿ ಟ್ಟಿರುವುದನ್ನೇ ಗಮನಿ ಸಿದರೆ, ಆ ಯೋಜನೆಗಳು ಯಾವುವು ಎಂಬ ವಿಷ ಯವಾಗಿ ಒಂದೇ ಒಂದು ಮಾಹಿತಿಯನ್ನೂ ಹಂಚಿಕೊಂಡಿಲ್ಲ.
ರಾಜ್ಯದ ಹಕ್ಕು ಕೇಳಿದ ಬಿಎಸ್‌ವೈ
ಕೇಂದ್ರದಿಂದ ಬರಬೇಕಿದ್ದ ಪ್ರಮಾಣದಷ್ಟು ತೆರಿಗೆ ಪಾಲು ಬಂದಿಲ್ಲ ಎನ್ನುವುದನ್ನು ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ದಿಟ್ಟತನದಿಂದ ಪ್ರಸ್ತಾಪ ಮಾಡಿದ್ದಾರೆ.
ರಾಜ್ಯಕ್ಕೆ ಈ ಸಾಲಿನಲ್ಲಿ ಬರಬೇಕಿದ್ದ ಕೇಂದ್ರದ ತೆರಿಗೆಯ ಪಾಲು ₹ 8,887 ಕೋಟಿ, ಜಿಎಸ್‌ಟಿ ಪರಿಹಾರದ ಮೊತ್ತ ₹ 3,000 ಕೋಟಿ ಖೋತಾ ಆಗಿದೆ ಎಂದಿದ್ದಾರೆ.
ಮುಂದಿನ ಸಾಲಿನಲ್ಲಿ ಕೂಡ ₹11,215 ಕೋಟಿ ಕೊರತೆಯಾಗಲಿದೆ ಎಂಬ ವಾಸ್ತವಾಂಶವನ್ನು ಜನರ ಮುಂದಿಡುವ ಮೂಲಕ, ಕೇಂದ್ರ ಸರ್ಕಾರ ನೆರವಿಗೆ ಬಂದಿಲ್ಲ ಎಂಬ ಅಸಹಾಯಕತೆಯನ್ನು ತೋಡಿಕೊಳ್ಳುವ ಯತ್ನವನ್ನೂ ಮಾಡಿದ್ದಾರೆ.
ಬಜೆಟ್ ಕೊಡುಗೆಗಳು
* ಎತ್ತಿನಹೊಳೆ ಯೋಜನೆಗೆ ₹1,500 ಕೋಟಿ
* ಮಹದಾಯಿ ಅನುಷ್ಠಾನಕ್ಕೆ ₹500 ಕೋಟಿ
* ಏತ ನೀರಾವರಿ ಯೋಜನೆಗಳಿಗೆ ₹5,000 ಕೋಟಿ
* ಅಡಿಕೆ ಬೆಳೆಗಾರರ ₹2 ಲಕ್ಷದವರೆಗಿನ ದೀರ್ಘಾವಧಿ ಸಾಲಕ್ಕೆ ಶೇ 5ರಷ್ಟು ಬಡ್ಡಿ ವಿನಾಯಿತಿ
* ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ಜಾತಿ, ಪಂಗಡದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ₹1 ಲಕ್ಷ ಬಹುಮಾನ
* ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ₹78 ಕೋಟಿ
* ಗಾರ್ಮೆಂಟ್ಸ್‌ನ 1 ಲಕ್ಷ ಮಹಿಳಾ ನೌಕರರಿಗೆ ‘ವನಿತಾ ಸಂಗಾತಿ’ ಹೆಸರಿನಲ್ಲಿ ಬಿಎಂಟಿಸಿ ಬಸ್ ಪಾಸ್ ಉಚಿತ
**
ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಶಾಲು ಹಾಕಿದ ಮಾತ್ರಕ್ಕೆ ರೈತರು ಉದ್ಧಾರ ಆಗುತ್ತಾರಾ. ಬಜೆಟ್‌ನಲ್ಲಿ ಹಸಿ ಸುಳ್ಳು ಯಾಕೆ ಹೇಳಿದ್ದೀರಿ.
-ಸಿದ್ದರಾಮಯ್ಯ,ವಿರೋಧ ಪಕ್ಷದ ನಾಯಕ
**
ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನದಲ್ಲಿ ಆಸ್ಪತ್ರೆಗಳಿಗೆ ಕನಿಷ್ಠ ಸುಣ್ಣ– ಬಣ್ಣ ಬಳಿಯುವುದಕ್ಕೂ ಸಾಧ್ಯವಿಲ್ಲ.
-ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.