ಬೆಂಗಳೂರು:ಮಠ–ಮಂದಿರಗಳಿಗೆ ಆದ್ಯತೆ ಸಿಗುತ್ತದೆ ಎಂಬ ಅಂದಾಜನ್ನು ಈ ಬಜೆಟ್ ಹುಸಿಯಾಗಿಸಿದೆ. ಮಠ–ಮಂದಿರಗಳಿಗೆ ಆದ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪಬಜೆಟ್‌ಗೂ ಮುನ್ನ ಹಲವು ಬಾರಿ ಹೇಳಿದ್ದರು. ಆದರೆ, ‘ರಾಜ್ಯದ ವಿವಿಧ ಸಮುದಾಯಗಳ ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರಾದರೂ, ನಿರ್ದಿಷ್ಟವಾಗಿ ಯಾವ ಮಠಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂಬುದನ್ನು ಹೇಳಿಲ್ಲ.
ಇದರ ಹೊರತಾಗಿ, ಶ್ರೀಕ್ಷೇತ್ರ ಮಂತ್ರಾಲಯ, ತುಳಜಾಪುರ, ಪಂಢರಾಪುರ, ವಾರಾಣಸಿ, ಉಜ್ಜಯಿನಿ, ಶ್ರೀಶೈಲ ದೇವಾಲಯಗಳ ಅತಿಥಿ ಗೃಹಗಳಿಗೆ ಮೂಲಸೌಕರ್ಯ ಕಲ್ಪಿಸಲು ₹25 ಕೋಟಿ ಘೋಷಿಸಲಾಗಿದೆ.ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹20 ಕೋಟಿ ತೆಗೆದಿರಿಸಲಾಗಿದೆ.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರ ಕ್ಷೇತ್ರವಾದ ಬಾದಾಮಿಸಮಗ್ರ ಅಭಿವೃದ್ಧಿಗಾಗಿ ₹25 ಕೋಟಿ ಘೋಷಿಸಲಾಗಿದೆ.
ಜೀವನಚೈತ್ರ ಯಾತ್ರೆ: ಆರ್ಥಿಕವಾಗಿ ಹಿಂದುಳಿದವರು ರಾಜ್ಯದ ಹಾಗೂ ದೇಶದ ಪ್ರಸಿದ್ಧ ತೀರ್ಥಕ್ಷೇತ್ರ ದರ್ಶಿಸಲು ಅನುವಾಗಲು ಈ ಬಾರಿ ‘ಜೀವನ ಚೈತ್ರಯಾತ್ರೆ’ ಯೋಜನೆ ಘೋಷಿಸಲಾಗಿದೆ. ಬಿಪಿಎಲ್ ಕುಟುಂಬದ 60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಉಚಿತವಾಗಿ ತೀರ್ಥಕ್ಷೇತ್ರ ಭಾಗ್ಯ ಕಲ್ಪಿಸುವ ಈ ಯೋಜನೆ ಜಾರಿಗೆ ₹20 ಕೋಟಿ ಅನುದಾನ ನಿಗದಿಪಡಿಸಲಾಗಿದೆ.
ರಾಜ್ಯದಲ್ಲಿರುವ ಐತಿಹಾಸಿಕ ಮಹತ್ವದ 25 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳು, ಪ್ರಾಚೀನ ಸ್ಥಳ ಮತ್ತು ಸ್ಮಾರಕಗಳ ರಕ್ಷಣೆಗಾಗಿ ‘ಸಂರಕ್ಷಣಾ ಯೋಜನೆ’ ಘೋಷಿಸಲಾಗಿದೆ. ಈ ಯೋಜನೆಯಡಿ ಇವುಗಳನ್ನು ಹಂತ–ಹಂತವಾಗಿ ಸಂರಕ್ಷಿಸಿ ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.