ಬೆಂಗಳೂರು: ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಿದ್ದ ತೆರಿಗೆ ಪಾಲಿನಲ್ಲಿ ಕುಸಿತವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದ ರಾಜಸ್ವವು ಸ್ವಂತ ತೆರಿಗೆ, ತೆರಿಗೆಯೇತರ ಸ್ವೀಕೃತಿ, ಕೇಂದ್ರ ತೆರಿಗೆ, ಕೇಂದ್ರ ಸಹಾಯಧನಗಳನ್ನು ಒಳಗೊಂಡಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಜಾರಿಗೆ ತರಲಾದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆ ಕುಸಿತಕಂಡಿತು. ಕೇಂದ್ರಕ್ಕೂ ತೆರಿಗೆ ಸಂಗ್ರಹಣೆ ಕುಸಿದಿದೆ. ಹೀಗಾಗಿ ರಾಜ್ಯಕ್ಕೆ ನೀಡುವ ತೆರಿಗೆ ಪಾಲು ಕಡಿಮೆಯಾಗಿದೆ.
ಈ ಆರ್ಥಿಕ ಸಾಲಿನಲ್ಲಿ ನಿರೀಕ್ಷೆ ಮಾಡಲಾಗಿದ್ದ ₹28,591 ಕೋಟಿ ತೆರಿಗೆಗೆ ಪ್ರತಿಯಾಗಿ ₹20,053 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದರು.
2021-22ನೇ ಸಾಲಿಗೆ ₹24,273 ಕೋಟಿ ತೆರಿಗೆ ಪಾಲು ನೀಡುವುದಾಗಿ ಕೇಂದ್ರ ತಿಳಿಸಿದೆ. ರಾಜ್ಯದ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಇದನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ. ಆದರೆ, ಕೇಂದ್ರ ಸರ್ಕಾರ ಸಾಲ ಪಡೆದು ಹಣ ನೀಡುವುದಾಗಿ ಹೇಳಿದೆ. ಈ ಸಾಲ ಮರುಪಾವತಿಯನ್ನು ಜಿಎಸ್‌ಟಿ ಮರುಪಾವತಿ ಉಪಕ್ರಮದಲ್ಲಿ ನೀಡುವುದಾಗಿ ಹೇಳಿದೆ.
2020- 21ನೇ ಸಾಲಿನಲ್ಲಿ ₹12,407 ಕೋಟಿಯನ್ನು ಕೇಂದ್ರ ಸರ್ಕಾರ ಸಾಲ ಪಡೆದು ಜಿಎಸ್‌ಟಿಗೆ ಪರಿಹಾರವಾಗಿ ನೀಡಿದೆ.
15ನೇ ಹಣಕಾಸು ಆಯೋಗದಲ್ಲಿ ₹3,548 ಕೋಟಿ ಸ್ಥಳಿಯ ಸಂಸ್ಥೆಗಳ ಅಭಿವೃದ್ಧಿಗೆ, ₹791 ವಿಪ್ಪತ್ತು ನಿರ್ವಹಣೆಗೆ, ₹1,631 ರಾಜಸ್ವ ಕೊರತೆ ಅನುದಾನವಾಗಿ ನೀಡಲಾಗಿದೆ. ₹3,000 ಕೋಟಿಯನ್ನು ಬೆಂಗಳೂರಿನ ಪೆರಿಫೆರಲ್ ರಸ್ತೆ ಅಭಿವೃದ್ಧಿಗೆ ಮತ್ತು 3000 ಕೋಟಿಯನ್ನು ಜಲಮೂಲ ರಕ್ಷಣೆಗೆ ನೀಡಲಾಗಿದೆ ಎಂದು ತಿಳಿಸಿದರು.
2021-22ನೇ ಸಾಲಿನ ಬಜೆಟ್ ಗಾತ್ರ ಎರಡೂವರೆ ಲಕ್ಷ ಕೋಟಿ ಎಂದೂ ಯಡಿಯೂರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.