ಕೋವಿಡ್‌ನಿಂದ ಸರ್ಕಾರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಈ ಬಾರಿ ಜಾತಿ ಆಧಾರಿತ ನಿಗಮಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಕಡಿತ ಮಾಡಿ ಆ ಹಣವನ್ನು ಮೂಲಸೌಕರ್ಯ ಕಲ್ಪಿಸಲು ಒದಗಿಸಬಹುದಾಗಿತ್ತು. ಮಹಿಳಾ ಸಬಲೀಕರಣದ ಬಗ್ಗೆ ಈ ಹಿಂದಿನಿಂದಲೂ ಸರ್ಕಾರಗಳು ಉಚ್ಚರಿಸುತ್ತಿದ್ದರೂ ಆ ನಿಟ್ಟಿನಲ್ಲಿ ಆದ್ಯತೆ ದೊರೆತಿರಲಿಲ್ಲ. ಈ ಬಾರಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಒಟ್ಟಾರೆ ಇದು ಜನಪ್ರಿಯ ಮತ್ತು ಜನಪರ ಮಿಶ್ರಣ ಹೊಂದಿರುವ ಬಜೆಟ್ ಆಗಿದೆ.
ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ (–) 2.6ರಷ್ಟು ಕುಸಿತ ಕಾಣಲಿದೆ. ಕೈಗಾರಿಕಾ ವಲಯವು ಶೇ(–) 5.1ರಷ್ಟು ಹಾಗೂ ಸೇವಾ ವಲಯವು ಶೇ(–) 3.1ರಷ್ಟು ಇಳಿಕೆ ಕಾಣಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕೋವಿಡ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದ ಕಾರಣ ರಾಜ್ಯ ಹಾಗೂ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು ಬಜೆಟ್ ಅಂದಾಜಿಗಿಂತ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ನಿಗಮ ಮಂಡಳಿಗಳು ಸೇರಿದಂತೆ ವಿವಿಧ ಸಮುದಾಯಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸುಮಾರು ₹ 3 ಸಾವಿರ ಕೋಟಿ ನೀಡಲಾಗಿದೆ. ಈ ಹಣವನ್ನು ಧಾರ್ಮಿಕ ಕೇಂದ್ರಗಳಿಗೆ ಅಗತ್ಯವಿರುವ ರಸ್ತೆ, ಸಾರಿಗೆ ಸೇರಿದಂತೆ ಮೂಲಸೌಕರ್ಯಕ್ಕೆ ನೀಡಿದರೂ ಧಾರ್ಮಿಕ ಪ್ರವಾಸೋದ್ಯಮ ಬೆಳವಣಿಗೆ ಹೊಂದುತ್ತಿತ್ತು.
ಮಹಿಳೆಯರಿಗೆ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವುದು ಉತ್ತಮವಾದ ನಡೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ₹ 2 ಕೋಟಿವರೆಗೆ ಶೇಕಡ 4ರ ರಿಯಾಯಿತಿ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸುತ್ತಿರುವುದು ಮಹಿಳೆಯರಿಗೆ ನೆರವಾಗಲಿದೆ. ಹಪ್ಪಳ, ಉಪ್ಪಿನಕಾಯಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಬ್ರ್ಯಾಂಡಿಂಗ್ ಇಲ್ಲದೆಯೇ ಸೊರಗಿದ್ದವು. ಅವುಗಳ ಬಗ್ಗೆ ಕೂಡ ಯೋಚಿಸಿ, ಇ–ಮಾರುಕಟ್ಟೆಯ ಪರಿಕಲ್ಪನೆಯನ್ನೂ ಮುಂಚೂಣಿಗೆ ತರಲಾಗುತ್ತಿರುವುದು ಸ್ವಾಗತಾರ್ಹ.
ಯಾವಾಗಲೂ ಜನರ ಜೀವನ ಮಟ್ಟ ಹಸನುಗೊಳಿಸಲು ಬೆಲೆಯನ್ನು ಮಿತಿಯಲ್ಲಿ ಇಡಬೇಕು. ಪೆಟ್ರೋಲ್, ಡೀಸೆಲ್ ಕರವು ನೇರವಾಗಿ ಸರ್ಕಾರಕ್ಕೆ ಹೋಗುತ್ತದೆ. ಅದನ್ನು ಹೆಚ್ಚಿಸದಿರುವುದು ಸಮಾಧಾನ.
(ಲೇಖಕ: ಅರ್ಥಶಾಸ್ತ್ರ ಪ್ರಾಧ್ಯಾಪಕ, ಬೆಂಗಳೂರು ವಿ.ವಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.