ಬೆಂಗಳೂರು: ಸಿಎಂ ಬಸವರಾಜು ಬೊಮ್ಮಾಯಿ ಅವರ ಚೊಚ್ಚಲ ಬಜೆಟ್‌ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ. ರೂ. ಮೀಸಲು ಇರಿಸಲಾಗಿದೆ.
'ರೈತ ಶಕ್ತಿ' ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ.ಗಳಂತೆ ಡೀಸೆಲ್ ಸಹಾಯಧನ ಘೋಷಿಸಲಾಗಿದೆ. ಇದಕ್ಕಾಗಿ 600 ಕೋಟಿ. ರೂ. ಮೀಸಲಿರಿಸಲಾಗಿದೆ.
ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆಗೆ ನಿರ್ಧರಿಸಲಾಗಿದೆ.
ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣಿಕೆಗೆ ವಿಜಯಪುರ ಜಿಲ್ಲೆಯ ತೊರವಿಯಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ವ್ಯವಸ್ಥೆ ಸ್ಥಾಪನೆ ಹಾಗೂ ಶೀತಲೀಕೃತ ಸರಕು ಸಾಗಣೆ ವಾಹನ ಪೂರೈಕೆಗೆ ನಿರ್ಧರಿಸಲಾಗಿದೆ.
ಬಡ್ಡಿ ರಿಯಾಯಿತಿ ಯೋಜನೆಯಡಿ 3 ಲಕ್ಷ ಹೊಸ ರೈತರೂ ಸೇರಿದಂತೆ 33 ಲಕ್ಷ ರೈತರಿಗೆ 24,000 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದೆ.
ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ರೈತರ ಕ್ಷೇಮಾಭಿವೃದ್ಧಿ
ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪರಿಷ್ಕೃತ ರೂಪದಲ್ಲಿ ಯಶಸ್ವಿ ಯೋಜನೆ ಮರುಜಾರಿ ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 300 ಕೋಟಿ. ರೂ. ಅನುದಾನವನ್ನು ಇರಿಸಲಾಗಿದೆ.
ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆಗೆ ನಿರ್ಧರಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲಾಗುವುದು.
ಆಕಸ್ಮಿಕ ಕುರಿ/ಮೇಕೆ ಮರಣ ಹೊಂದಿದರೆ ಸಾಕಣಿಕೆದಾರರಿಗೆ/ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯವನ್ನು ಘೋಷಿಸಲಾಗಿದೆ.
ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು 'ಮತ್ಸ್ಯ ಸಿರಿ' ಯೋಜನೆ ಜಾರಿಗೊಳಿಸಲಾಗುವುದು ಎಂದು ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ತಿಳಿಸಿದರು.
57 ತಾಲ್ಲೂಕುಗಳಲ್ಲಿ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆೃಜಲಾನಯನ ಅಭಿವೃದ್ಧಿ ಘಟಕ-2.0 ಜಾರಿಗೆ ನಿರ್ಧರಿಸಲಿದ್ದಾರೆ.
ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.