ಮುಂಬರುವ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರವು ವಿತ್ತೀಯ ಕೊರತೆಯುನ್ನು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್‌ಡಿಪಿ) ಶೇಕಡ 2.6ಕ್ಕೆ ಹಾಗೂ ಸಾಲಗಳನ್ನು ಶೇ 24.2ಕ್ಕೆ ಮಿತಿಗೊಳಿಸಬೇಕು ಎಂಬ ಗುರಿಯನ್ನು ಹೊಂದಿದೆ. ₹ 402 ಕೋಟಿಯ ಮಿಗತೆ ವರಮಾನ ಹೊಂದುವ ಗುರಿಯನ್ನೂ ಇರಿಸಿಕೊಂಡಿದೆ. ಇವೆಲ್ಲವೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಪರಿಧಿಯೊಳಗೇ ಇವೆ. ವಿತ್ತೀಯ ಕೊರತೆಯು 2020–21ರಿಂದ ನಿರಂತರವಾಗಿ ಕಡಿಮೆ ಆಗುತ್ತಿದೆ. ರಾಜ್ಯ ಸರ್ಕಾರವು ವಿತ್ತೀಯ ನಿರ್ವಹಣೆಯನ್ನು, ಕೊರತೆಯನ್ನು ತಗ್ಗಿಸುವುದನ್ನು ಬದ್ಧತೆಯಾಗಿ ಇರಿಸಿಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ.
ರಾಜ್ಯದ ವರಮಾನವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 6.38ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ ಈಗಿನ ಹಣದುಬ್ಬರ ಪ್ರಮಾಣ ಗಮನಿಸಿದರೆ ಈ ಏರಿಕೆಯು ಕಡಿಮೆ. 2022–23ರ ಪರಿಷ್ಕೃತ ಅಂದಾಜಿನ ಅನ್ವಯ ರಾಜ್ಯದ ಸ್ವಂತ ತೆರಿಗೆ ವರಮಾನವು ಬಜೆಟ್ ಅಂದಾಜಿಗಿಂತ ಶೇ 17ರಷ್ಟು ಹೆಚ್ಚಿರಲಿದೆ. ಇದು ಶ್ಲಾಘನೆಗೆ ಅರ್ಹ. ಜಿಎಸ್‌ಟಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ ಸಂಗ್ರಹ ಉತ್ತಮವಾಗಿದ್ದುದು ಇದಕ್ಕೆ ಕಾರಣವಾಗಿರಬಹುದು. ಸ್ವಂತ ತೆರಿಗೆ ವರಮಾನ ಸಂಗ್ರಹವು ಹೆಚ್ಚಾಗಿದ್ದರೂ, ಜಿಎಸ್‌ಡಿಪಿ ಜೊತೆ ಹೋಲಿಸಿದರೆ ಅದು ಕೋವಿಡ್ ಪೂರ್ವದ ಮಟ್ಟಕ್ಕಿಂತ ಕಡಿಮೆ ಇರುವುದು ಗೊತ್ತಾಗುತ್ತದೆ. ಅಂದರೆ ರಾಜ್ಯವು ತೆರಿಗೆ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಲು ಗಮನ ನೀಡಬೇಕು.
ತೆರಿಗೆ ಮಾತ್ರವಲ್ಲದೆ ರಾಜ್ಯಗಳು ತಾವು ನೀಡುವ ಸೇವೆಗಳು ಹಾಗೂ ಮಾರಾಟ ಮಾಡುವ ಉತ್ಪನ್ನಗಳಿಗೆ ಶುಲ್ಕ ವಿಧಿಸಿ ವರಮಾನ ಸಂಗ್ರಹಿಸಬಹುದು. ವಿದ್ಯುತ್ ಶುಲ್ಕ, ಅರಣ್ಯ ಉತ್ಪನ್ನಗಳಿಗೆ ಶುಲ್ಕ ಇತ್ಯಾದಿಗಳನ್ನು ಉದಾಹರಣೆಯಾಗಿ ಇಲ್ಲಿ ಹೇಳಬಹುದು. 2023–24ರಲ್ಲಿ ತೆರಿಗೆ ಹೊರತುಪಡಿಸಿದ ವರಮಾನವು 2021–22ಕ್ಕೆ ಹೋಲಿಸಿದರೆ ಶೇ 6.6ರಷ್ಟು ಕಡಿಮೆ ಆಗುವ ಅಂದಾಜು ಇದೆ. ಇದು ಕಳವಳಕಾರಿ. ಜಿಎಸ್‌ಡಿಪಿ ಜೊತೆ ಹೋಲಿಸಿದರೆ ಇದು 2023–27ರ ನಡುವಿನ ಅವಧಿಯಲ್ಲಿ ಶೇ 0.5ಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ತೆರಿಗೆ ಹೊರತುಪಡಿಸಿದ ವರಮಾನ ತಂದುಕೊಡುವ ಶುಲ್ಕಗಳನ್ನು ಹಲವು ವರ್ಷಗಳಿಂದ ಪರಿಷ್ಕರಿಸದೆ ಇರುವುದು ವರಮಾನ ನಷ್ಟಕ್ಕೆ ಕಾರಣವಾಗಿದೆ. ಸರ್ಕಾರವು ತೆರಿಗೆ ಹೊರತುಪಡಿಸಿದ ವರಮಾನ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಇನ್ನಷ್ಟು ಪ್ರಯತ್ನ ನಡೆಸಬೇಕು.
//ರಾಜಸ್ವ ಸ್ವೀಕೃತಿಯ// ಶೇ 60ರಷ್ಟು ಮೊತ್ತವು ವೇತನ, ಪಿಂಚಣಿ, ಬಡ್ಡಿ ಪಾವತಿ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ವಿನಿಯೋಗವಾಗುತ್ತದೆ. 2023–24ರಲ್ಲಿ ಬಡ್ಡಿ ಪಾವತಿಗಾಗಿ ಶೇ 15.1ರಷ್ಟು ಮೊತ್ತ ವಿನಿಯೋಗವಾಗುತ್ತದೆ. 2019–20ರಲ್ಲಿ ಇದು ಶೇ 10.6ರಷ್ಟು ಮಾತ್ರ ಆಗಿತ್ತು.
ವೇತನಗಳ ಮೇಲಿನ ವೆಚ್ಚವು 2021–22ನೆಯ ಸಾಲಿಗೆ ಹೋಲಿಸಿದರೆ ಶೇ 44ರಷ್ಟು ಹೆಚ್ಚುವ ಅಂದಾಜು ಇದೆ. ಏಳನೆಯ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದಾಗ ವೇತನ ಹಾಗೂ ಪಿಂಚಣಿ ವೆಚ್ಚಗಳು ಹೆಚ್ಚಬಹುದು. ಬಜೆಟ್‌ನ ದೊಡ್ಡ ಪಾಲನ್ನು ಈ ರೀತಿ ಬದ್ಧವೆಚ್ಚಗಳಿಗೆ ಮೀಸಲಿಟ್ಟಾಗ, ಅಭಿವೃದ್ಧಿ ಯೋಜನೆಗಳಿಗೆ ಉಳಿಯುವ ಹಣ ಕಡಿಮೆ ಆಗುತ್ತದೆ.
ರಾಜ್ಯದ ಸಾಲಗಳು 2021–22ರಲ್ಲಿ ಜಿಎಸ್‌ಡಿಪಿಯ ಶೇ 26.71ರಷ್ಟು ಇದ್ದಿದ್ದು, 2022–23ರ ಪರಿಷ್ಕೃತ ಅಂದಾಜಿನಲ್ಲಿ ಶೇ 23.52ಕ್ಕೆ ತಗ್ಗಿವೆ. ಸಾಲಗಳ ಪ್ರಮಾಣವು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯೊಳಗೇ (ಶೇ 24.2) ಇರುವ ನಿರೀಕ್ಷೆ ಇದೆ. ಕಾಯ್ದೆ ನಿಗದಿ ಮಾಡಿರುವ ಮಿತಿಯೊಳಗೆ ಇದ್ದರೂ, ಶೇ 24.2 ಎಂಬುದು 2021–22ನೇ ಸಾಲಿಗೆ ಮೊದಲಿನ (2019–20ರಲ್ಲಿ ಶೇ 19.87, 2020–21ರಲ್ಲಿ ಶೇ 22.37) ಮಟ್ಟಕ್ಕಿಂತ ಹೆಚ್ಚಿನದೇ ಆಗಿರುತ್ತದೆ. ಹೆಚ್ಚಿನ ಸಾಲ ಎಂಬುದು ಮುಂದಿನ ತಲೆಮಾರುಗಳ ಮೇಲೆ ಒಂದಿಷ್ಟು ವೆಚ್ಚವನ್ನು ಹೊರಿಸುವುದು. ಇದರಿಂದಾಗಿ ಹಣಕಾಸಿನ ವಿಚಾರಗಳಲ್ಲಿ ಅಸಮತೋಲನ ಸೃಷ್ಟಿಯಾಗಬಹುದು. ಇದರ ಜೊತೆಯಲ್ಲೇ, ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ಹಣಕಾಸಿನ ಸ್ಥಿತಿಯು ದುರ್ಬಲವಾಗುತ್ತಿರುವುದು ರಾಜ್ಯದ ಹಣಕಾಸಿನ ಸ್ಥಿತಿಯ ಮೇಲೆಯೂ ಅಪಾಯ ಉಂಟುಮಾಡುತ್ತದೆ. ಏಕೆಂದರೆ, ಎಸ್ಕಾಂಗಳು ಹಾಗೂ ಕೆಪಿಸಿಎಲ್ ಮಾಡಿರುವ ಸಾಲಗಳಿಗೆ ರಾಜ್ಯ ಸರ್ಕಾರವೇ ಖಾತರಿದಾರ ಆಗಿ ನಿಂತಿದೆ. ಈ ಕಂಪನಿಗಳಿಗೆ ತಮ್ಮ ಸಾಲವನ್ನು ಮರುಪಾವತಿ ಮಾಡಲು ಆಗದೆ ಇದ್ದರೆ, ರಾಜ್ಯ ಸರ್ಕಾರದ ಒಟ್ಟು ಸಾಲವು ಹೆಚ್ಚಾದಂತೆಯೇ. ರಾಜ್ಯ ಸರ್ಕಾರವು ತನ್ನ ಒಟ್ಟು ಸಾಲಗಳ ಮೊತ್ತವನ್ನು ತಗ್ಗಿಸಲು ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು.
2023–24ನೆಯ ಸಾಲಿನ ಬಜೆಟ್, ಸಾಲ ಹಾಗೂ ವಿತ್ತೀಯ ಕೊರತೆಯನ್ನು ತಗ್ಗಿಸುವ ಆದ್ಯತೆ ಸರ್ಕಾರದ್ದು ಎಂಬುದನ್ನು ಹೇಳಿದೆ. ಸರ್ಕಾರವು ಇಷ್ಟಕ್ಕೇ ಸುಮ್ಮನಾಗಬಾರದು. ತನ್ನ ತೆರಿಗೆ ಹಾಗೂ ತೆರಿಗೆ ಹೊರತುಪಡಿಸಿದ ವರಮಾನ ಹೆಚ್ಚಿಸಿಕೊಳ್ಳಲಿಕ್ಕೆ ಕೂಡ ಅದು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು.
ಲೇಖಕರು: ಸಹಾಯಕ ಪ್ರಾಧ್ಯಾಪಕ,
ತಕ್ಷಶಿಲಾ ಇನ್ಸ್ಟಿಟ್ಯೂಷನ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.