ADVERTISEMENT

ಕರ್ನಾಟಕ ಬಜೆಟ್‌ 2023| ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 17:25 IST
Last Updated 17 ಫೆಬ್ರುವರಿ 2023, 17:25 IST
   

ಬೆಂಗಳೂರು: ಅಸಂಘಟಿತ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸಲು ‘ಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ’ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಹೊರ ರಾಜ್ಯದಿಂದ ವಲಸೆ ಬಂದ ಕಟ್ಟಡ ಕಾರ್ಮಿಕರ ಯೋಗಕ್ಷೇಮಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೆರವು ನೀಡಲಾಗುವುದು. ಸದ್ಯಕ್ಕೆ ಆಸ್ತಿ ತೆರಿಗೆ ಮೇಲೆ ವಿಧಿಸಿರುವ ಸೆಸ್ ಪ್ರಮಾಣ ಹೆಚ್ಚಿಸದೆ ಆಂತರಿಕವಾಗಿ ಸೆಸ್ ದರಗಳನ್ನು ಮಾರ್ಪಾಡುಗೊಳಿಸಲಾಗುವುದು. ಈ ಸೆಸ್ ಹಣದಲ್ಲಿ ನೋಂದಾಯಿತ 75 ಲಕ್ಷಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಲಾಗಿದೆ.

ಏಳು ಇಎಸ್‌ಐ ಆಸ್ಪತ್ರೆಗಳಲ್ಲಿ ಐಸಿಯು ಸ್ಥಾಪನೆ, ಆರು ಆಸ್ಪತ್ರೆಗಳಲ್ಲಿ ಆಯುಷ್ ಘಟಕ ಪ್ರಾರಂಭ, ಜಿಲ್ಲೆಗೊಂದು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಉನ್ನತೀಕರಿಸಲು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹೊಸದಾಗಿ ಆರಂಭಿಸಿರುವ 19 ಇಎಸ್‌ಐ ಚಿಕಿತ್ಸಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಹಾಗೂ ಆರು ಹೊಸ ಇಎಸ್‌ಐ ಚಿಕಿತ್ಸಾಲಯಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ವಿವರಿಸಲಾಗಿದೆ.

ADVERTISEMENT

ಕಾರ್ಮಿಕರಿಗೆ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಒದಗಿಸುತ್ತಿರುವ ಎಲ್ಲಾ ಸೇವೆಗಳು ಸುಲಭ ಮತ್ತು ಸಕಾಲದಲ್ಲಿ ದೊರಕುವಂತೆ ಮಾಡಲು ಆನ್‌ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಪ್ರಸಕ್ತ ವರ್ಷದಲ್ಲಿ 5 ಲಕ್ಷ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.

ಸಾಂಪ್ರದಾಯಿಕ ಕೌಶಲಗಳ ಪುನರುಜ್ಜೀವನಕ್ಕಾಗಿ ಬಿದಿರಿನ ಉತ್ಪನ್ನಗಳಲ್ಲಿ ಮೇದಾರ ಸಮುದಾಯಕ್ಕೆ, ಚನ್ನಪಟ್ಟಣ ಗೊಂಬೆಗಳ ತಯಾರಿಕೆಗೆ, ಕಿನ್ಹಾಳ ಕಲೆಗಾಗಿ ಚಿತ್ರಗಾರ ಸಮುದಾಯಕ್ಕೆ ಹಾಗೂ ಕುಂಬಾರಿಕೆ, ಬಿದರಿ ಕಲೆ, ಕಸೂತಿ ಮುಂತಾದ ಕಲೆಗಳಲ್ಲಿ ಆಯ್ದ 100 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಕೌಶಲವರ್ಧನೆ ತರಬೇತಿ ನೀಡಲು ಪ್ರಕಟಿಸಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ‘ಪ್ರಧಾನಮಂತ್ರಿ ಸ್ವನಿಧಿ’ ಯೋಜನೆಯಡಿ 2022ರ ನವೆಂಬರ್ ಅಂತ್ಯದವರೆಗೆ 69 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ₹70 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದಷ್ಟೇ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.