ವಾಣಿಜ್ಯ ತೆರಿಗೆಗಳು
ದೇಶದ ದೊಡ್ಡ ರಾಜ್ಯಗಳಲ್ಲಿ ನಮ್ಮ ರಾಜ್ಯವು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 21 ರಷ್ಟು ಅತ್ಯಧಿಕ ಬೆಳವಣಿಗೆ ದರವನ್ನು ಸಾಧಿಸಿದೆ. ಪ್ರಸ್ತುತ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ಕೆ.ಜಿ.ಎಸ್.ಟಿ ರಾಜಸ್ವ ಸಂಗ್ರಹವು 18,962 ಕೋಟಿ ರೂ.ಗಳಾಗಿರುತ್ತದೆ.
ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕವನ್ನು ನೀಡಲು, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ಶೀಘ್ರದಲ್ಲಿ ಕಾರ್ಯೋನ್ಮುಖಗೊಳಿಸಲಾಗುವುದು. ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲಾಗುವುದು.
ದತ್ತಾಂಶ ವಿಶ್ಲೇಷಣೆಗಾಗಿ ಮತ್ತು ರಾಜಸ್ವ ಸಂಗ್ರಹಣೆಯನ್ನು ವೃದ್ಧಿಗೊಳಿಸಲು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
2023-24ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿಯನ್ನು 1,01,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.
ಅಬಕಾರಿ
ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ (ಅ) ರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇ.20ರಷ್ಟು ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ. ಹಾಗೆಯೇ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ರಿಂದ ಶೇ.185ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ. ಅಬಕಾರಿ ಸುಂಕದ ದರಗಳ ಹೆಚ್ಚಳದ ನಂತರವೂ ನಮ್ಮ ರಾಜ್ಯದಲ್ಲಿ ಮದ್ಯದ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ.
ಇದರೊಂದಿಗೆ, ಹೆಚ್ಚು ಪರಿಣಾಮಕಾರಿಯಾದ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ
2018-19ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ದಿನಾಂಕ:01.01.2019 ರಿಂದ ಜಾರಿಗೆ ತರಲಾಗಿತ್ತು. ನಂತರದಲ್ಲಿ ಕೋವಿಡ್-19 ಕಾರಣದಿಂದ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿರುವುದಿಲ್ಲ.
ಪ್ರಸ್ತುತ ಸ್ವತ್ತುಗಳು ಭೌತಿಕ ಬದಲಾವಣೆಗೊಂಡು ಮಾರುಕಟ್ಟೆ ದರಗಳಲ್ಲಿ ವ್ಯತ್ಯಾಸಗಳು ಆಗಿರುವುದರಿಂದ ಇದನ್ನು ಸರಿಪಡಿಸಲು ಸರಿಯಾದ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವುದು ಅವಶ್ಯಕವಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಜಾರಿಗೆ ತರಲು ಉದ್ದೇಶಿಸಲಾಗಿದೆ.
2023-24ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 25,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಸಾರಿಗೆ
ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಸರಳೀಕರಿಸಲು ಉದ್ದೇಶಿಸಿದೆ. ಮೋಟಾರು ವಾಹನ ತೆರಿಗೆ ವ್ಯವಹಾರಗಳ ನಿಖರವಾದ ಪರಿಶೀಲನೆಗಾಗಿ ಸರಳೀಕೃತ ತಂತ್ರಾಂಶವನ್ನು ತರಲಾಗುವುದು. ಪ್ರಸ್ತುತ ಆಯ್ದ ವಾಹನದ ವರ್ಗಗಳಿಗೆ ವಿಧಿಸುವ ತೆರಿಗೆಯನ್ನು ಪರಿಷ್ಕರಿಸಲಾಗುವುದು.
2023-24ನೇ ಆರ್ಥಿಕ ವರ್ಷಕ್ಕೆ ಸಾರಿಗೆ ಇಲಾಖೆಗೆ ಒಟ್ಟು 11,500 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಖನಿಜ ಮತ್ತು ಉಪಖನಿಜಗಳ ಮೇಲಿನ ಮೇಲ್ವಿಚಾರಣೆ ನಡೆಸಿ ಸುಸ್ಥಿರ, ಸುರಕ್ಷಿತ ಮತ್ತು ವೈಜ್ಞಾನಿಕ ಗಣಿಗಾರಿಕೆಯನ್ನು ಉತ್ತೇಜಿಸಿ, ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಲು ಅವಶ್ಯಕ ಸುಧಾರಣೆಗಳನ್ನು ಜಾರಿಗೊಳಿಸಲಾಗುವುದು.
2023-24ನೇ ಸಾಲಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 9,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
2023-24ನೇ ಸಾಲಿನಲ್ಲಿ ರಾಜಸ್ವ ಜಮೆಗಳು 2,38,410 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಜಿ.ಎಸ್.ಟಿ. ಪರಿಹಾರ ಒಳಗೊಂಡಂತೆ 1,75,653 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂ.ಗಳನ್ನು ಹಾಗೂ 13,005 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 85,818 ಕೋಟಿ ರೂ.ಗಳ ಒಟ್ಟು ಸಾಲಗಳು, 23 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 228 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ಜಮೆಗಳು 3,24,478 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
2023-24ನೇ ಸಾಲಿನಲ್ಲಿ ಒಟ್ಟು 2,50,933 ಕೋಟಿ ರೂ.ಗಳ ರಾಜಸ್ವ ವೆಚ್ಚ, 54,374 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,27,747 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ
ನಮ್ಮ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದೆ. ʻನೈತಿಕ ಪೊಲೀಸ್ ಗಿರಿʼಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ, ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಸಮಾಜದಲ್ಲಿ ಹದಗೆಟ್ಟಿದ್ದ ಸಾಮರಸ್ಯದ ವಾತಾವರಣವನ್ನು ಮರುನಿರ್ಮಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ.
ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಸತಿ ಗೃಹವನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಪೊಲೀಸ್ ಗೃಹ 2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷ 450 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲು 2023-24ನೇ ಸಾಲಿನಲ್ಲಿ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆ ಮತ್ತು ಕಛೇರಿ ಕಟ್ಟಡಗಳು, ಎಂ.ಟಿ. ಶೆಡ್, ಶಸ್ತ್ರಾಗಾರ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಗಳನ್ನು ಒದಗಿಸಲಾಗುವುದು.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಹೊಸದಾಗಿ ಐದು ಸಂಚಾರ ಪೊಲೀಸ್ ಠಾಣೆಗಳನ್ನು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳನ್ನು ಮತ್ತು ಕಛೇರಿಗಳನ್ನು ಬಲಪಡಿಸಲು ಎರಡು ಹಂತಗಳಲ್ಲಿ ಒಟ್ಟು 2,454 ಹುದ್ದೆಗಳನ್ನು ಸೃಜಿಸಲಾಗುವುದು.
ಅಪರಾಧಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಪರಾಧ ತನಿಖಾ ವಿಭಾಗ (CID), ಸೈಬರ್ ಅಪರಾಧ ಘಟಕ (CCD) ಮತ್ತು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳ ಘಟಕಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲು ಕ್ರಮವಹಿಸಲಾಗುವುದು.
ಕರ್ತವ್ಯದ ಸಮಯದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ದಿನನಿತ್ಯ ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ತರಬೇತಿ ಶಾಲೆಗಳನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಬಲವರ್ಧನೆ ಮಾಡಲಾಗುವುದು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಡ್ರೋನ್ ಕ್ಯಾಮರಾ, ಕಣ್ಗಾವಲು ಕ್ಯಾಮರಾ ಹಾಗೂ ಬಾಡಿವೋರ್ನ್ ಕ್ಯಾಮರಾಗಳನ್ನು ಒದಗಿಸಲು ಕ್ರಮವಹಿಸಲಾಗುವುದು.
ಬೆಂಗಳೂರು ಕೇಂದ್ರ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ. ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ (STP) ಕಾರ್ಯವನ್ನು ಹಾಗೂ ಐದು ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ ಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು.
ಕಾರಾಗೃಹದಲ್ಲಿನ ಬಂದಿಗಳಿಗೆ ಕೆಲಸ ನೀಡಲು ಮತ್ತು ಪುನರ್ ವಸತಿಗೆ ಪೂರಕವಾಗಿ ಕೌಶಲ್ಯ ತರಬೇತಿ ನೀಡಲು ರಾಜ್ಯದ ಕಾರಾಗೃಹಗಳಲ್ಲಿ ಹೊಸದಾಗಿ ಕಾರ್ಯಾಗಾರಗಳನ್ನು ಸ್ಥಾಪಿಸಲು ಮತ್ತು ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಕಾರ್ಯಾಗಾರಗಳನ್ನು ಉನ್ನತೀಕರಿಸಲು ಕ್ರಮವಹಿಸಲಾಗುವುದು.
ರಾಜ್ಯದ ಕಾರಾಗೃಹಗಳಲ್ಲಿನ ಬಂದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವ್ಯವಸ್ಥೆಯನ್ನು ಬಲಪಡಿಸಲು ಮೂರು ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಉದ್ದೇಶಿಸಲಾಗಿದೆ.
ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರಿಸನ್ಸ್ ಅಕಾಡೆಮಿಯನ್ನು ಪ್ರಸಕ್ತ ವರ್ಷದಲ್ಲಿ ಕಾರ್ಯಾರಂಭಗೊಳಿಸಲು ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಲು ಐದು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಡಿ 2023-24ನೇ ಸಾಲಿನಲ್ಲಿ ಕೆ-ಸೇಫ್ ಯೋಜನೆಯಡಿ ಸೂಪ, ಯಲಹಂಕ, ಭಟ್ಕಳ, ಅರಕೇರಾ, ನಾಗರಬಾವಿ, ಎನ್.ಆರ್.ಪುರ, ಶಿರಹಟ್ಟಿ, ಹೊನ್ನಾವರ, ನರಸಾಪುರ (ಕೋಲಾರ ಜಿಲ್ಲೆ) ಕೈಗಾರಿಕಾ ಪ್ರದೇಶ ಮತ್ತು ದೇವನಹಳ್ಳಿ ಏರೋಸ್ಪೇಸ್ ಕೈಗಾರಿಕಾ ಪ್ರದೇಶಗಳಲ್ಲಿ 3 ಬೇ ಅಗ್ನಿಶಾಮಕ ಠಾಣಾ (3 Bay fire stations) ಕಟ್ಟಡಗಳ ನಿರ್ಮಾಣವನ್ನು ಹಾಗೂ ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು 100 ಕೋಟಿ ರೂ. ಗಳ ವೆಚ್ಚದಲ್ಲಿ ಒದಗಿಸಲಾಗುವುದು.
ಅಗ್ನಿಶಮನ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಹೈ ಪ್ರೆಶರ್ ವಾಟರ್ ಮಿಸ್ಟ್ (High pressure water mist), ಫೋಮ್ ಕಾಂಪೌಂಡ್ (Foam compound) ಮತ್ತು ಏರ್ ಬ್ಲೋವರ್ (Air blower) ಮುಂತಾದ ಯಂತ್ರೋಪಕರಣಗಳನ್ನು ಸಂಗ್ರಹಿಸಲು ಪ್ರಸಕ್ತ ವರ್ಷ ಮೂರು ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಭಾರತದ ಒಟ್ಟಾರೆ ಉದ್ಯೋಗಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ. 29 ಮಾತ್ರವಿದೆ. ಜಿಡಿಪಿಗೆ ಮಹಿಳೆಯರ ಕೊಡುಗೆಯು ಕೇವಲ ಶೇ. 17 ರಷ್ಟಿದ್ದು, ಇದು ಜಾಗತಿಕ ಸರಾಸರಿ ಶೇ. 40 ಕ್ಕಿಂತ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ತೊಡಗಿದಲ್ಲಿ, ಬಡ ಮತ್ತು ಕೆಳಮಧ್ಯಮ ವರ್ಗಗಳ ಕೊಳ್ಳುವ ಸಾಮರ್ಥ್ಯ ಹೆಚ್ಚಳವಾಗುವುದು. ಸಹಜವಾಗಿ ಇದು ಆರ್ಥಿಕತೆಯ ಚಲನಶೀಲತೆಗೆ ಹೆಚ್ಚಿನ ವೇಗ ನೀಡಲಿದೆ.
ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳಾದ BMTC, KSRTC, NWKRTC ಹಾಗೂ KKRTC ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯದ ʻಶಕ್ತಿʼ ಯೋಜನೆಯು ದುಡಿಯುವ, ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿಸುವ ಯೋಜನೆಯಾಗಿದೆ. ಎಲ್ಲ ವರ್ಗದ ಮಹಿಳೆಯರಿಗೂ ವೇಗದೂತ, ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವುದರಿಂದ ಬಡತನದ ಕಾರಣ ತಮ್ಮ ಸುತ್ತ ತಾವೇ ನಿರ್ಮಿಸಿಕೊಂಡ ಬೇಲಿಯನ್ನು ಅಳಿಸಿ, ನಿರ್ಬಂಧಗಳನ್ನು ಹೋಗಲಾಡಿಸಿ, ಶಿಕ್ಷಣ, ಉದ್ಯೋಗ, ಪ್ರವಾಸ, ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತಮ ಅವಕಾಶ ಕಲ್ಪಿಸಿದಂತಾಗಿದೆ. ದೂರದ ಸ್ಥಳಗಳಿಗೂ ಹೋಗಿ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆ. ಪ್ರಯಾಣ ವೆಚ್ಚದ ಉಳಿತಾಯ ಅವರಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಲಿದೆ. ಈ ಯೋಜನೆ ಜಾರಿಯಾದ ನಂತರ ಇಲ್ಲಿಯವರೆಗಿನ 25 ದಿನಗಳಲ್ಲಿ 13 ಕೋಟಿಗೂ ಹೆಚ್ಚು ಟಿಕೆಟ್ಗಳನ್ನು ನೀಡಲಾಗಿದ್ದು, ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಸರ್ಕಾರಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಮಹಿಳೆಯರಿಗೆ ನಿರ್ಭೀತಿಯಿಂದ ಯಾವುದೇ ಸಮಯದಲ್ಲೂ ಪ್ರಯಾಣಿಸಲು ಸುರಕ್ಷಿತ ವಾತಾವರಣ ಮೂಡಿದೆ. ಮಹಿಳೆಯರಿಂದ ಈ ಯೋಜನೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆಯು ಧನ್ಯತೆಯ ಭಾವ ಮೂಡಿಸಿದೆ. ʻಶಕ್ತಿʼ ಯೋಜನೆಗಾಗಿ ವಾರ್ಷಿಕ ಸುಮಾರು 4,000 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ನಿಧಿಯಡಿ 2023-24ನೇ ಸಾಲಿನಿಂದ ಸಾರಿಗೆ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಪ್ರತ್ಯೇಕವಾಗಿ ಅನುದಾನವನ್ನು ಒದಗಿಸುವುದರ ಮೂಲಕ ರಸ್ತೆ ಸುರಕ್ಷತೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿರುತ್ತದೆ. ಈ ಉದ್ದೇಶಕ್ಕಾಗಿ 2023-24 ನೇ ಸಾಲಿನಲ್ಲಿ 450 ಕೋಟಿ ರೂ. ಗಳನ್ನು ಒದಗಿಸಲಾಗಿರುತ್ತದೆ.
ರಾಜ್ಯದ ಹಲವಾರು ಪ್ರದೇಶಗಳಲ್ಲಿನ ವಾಯುಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. ಈ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ ಹಸಿರು ತೆರಿಗೆ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ 2023-24 ನೇ ಸಾಲಿಗೆ 35 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ರಸ್ತೆ ಸುರಕ್ಷತೆ ಮತ್ತು ಅಪಘಾತ ನಿಯಂತ್ರಣ ದೃಷ್ಟಿಯಿಂದ ಚಾಲಕರಿಗೆ ತರಬೇತಿ ನೀಡುವ ಮೂಲಕ ಅವರ ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯವಿರುತ್ತದೆ. ಇದಕ್ಕಾಗಿ ಸುಸಜ್ಜಿತ ವಾಹನ ಚಾಲನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ PPP ಮಾದರಿಯಲ್ಲಿ ರಾಮನಗರದ ಬಿಡದಿಯಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನಾ ಚಾಲನಾ ತರಬೇತಿ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರದಿಂದ ಐದು ಕೋಟಿ ರೂ.ಗಳ ಸಹಾಯಧನವನ್ನು ಒದಗಿಸಲಾಗುವುದು.
ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆ ಎಂದೇ ಜನಜನಿತವಾಗಿದೆ. ಜನಸಾಮಾನ್ಯರು ದೈನಂದಿನ ಬದುಕಿನಲ್ಲಿ ಕಂದಾಯ ಇಲಾಖೆಯಿಂದ ಒಂದಲ್ಲ ಒಂದು ಸೇವೆ ಪಡೆಯುತ್ತಲೇ ಇರುತ್ತಾರೆ. ಇಲಾಖೆಯ ಸ್ಪಂದನಾಶೀಲತೆಯು ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಜನರು ಹಲವಾರು ಸವಾಲುಗಳನ್ನು, ಅಡಚಣೆಗಳನ್ನು ಎದುರಿಸುತ್ತಿದ್ದು, ತಮ್ಮ ಕಾರ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಧ್ಯವರ್ತಿಗಳ ಸಹಾಯವನ್ನು ಪಡೆಯುವ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ. ನಮ್ಮ ಸರ್ಕಾರವು ರಾಜ್ಯದ ಜನತೆಗೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಲು ಮತ್ತು ಇಲಾಖೆಯನ್ನು ಮತ್ತಷ್ಟು ಜವಾಬ್ದಾರಿಯಿಂದ ನಡೆಸಲು ಕಟಿಬದ್ಧವಾಗಿದೆ. ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಸರಳವಾಗಿ, ನೇರವಾಗಿ ಮತ್ತು ಸಕಾಲದಲ್ಲಿ ಜನರಿಗೆ ತಲುಪಿಸಲು ಕ್ರಮ ವಹಿಸಲಾಗುವುದು.
ಕರ್ನಾಟಕ ಭೂ-ಕಂದಾಯ ಕಾಯಿದೆಯ ಸೆಕ್ಷನ್ 95ಕ್ಕೆ ತಿದ್ದುಪಡಿ ತಂದು ಜಮೀನನ್ನು ಸ್ವಯಂ ಘೋಷಣೆಯ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನನ್ನು ಪುನರ್ ಸ್ಥಾಪಿಸುವುದಕ್ಕಾಗಿ ಮನವಿ ಸಲ್ಲಿಸಲು ಕಾಲಮಿತಿಯನ್ನು ಕಾಯ್ದೆಯಲ್ಲಿಯೇ ನಿಗದಿಪಡಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ (PTCL), 1978ಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದು.
ಜಿಲ್ಲಾ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಜಿಲ್ಲಾಡಳಿತ ಕಛೇರಿ ಸಂಕೀರ್ಣ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ, ರಾಯಚೂರು, ಉತ್ತರ ಕನ್ನಡ, ಚಿತ್ರದುರ್ಗ, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
ಜೊತೆಗೆ, ತಾಲ್ಲೂಕು ಮಟ್ಟದ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ತಾಲ್ಲೂಕು ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಗತಿಯಲ್ಲಿರುವ 25 ತಾಲ್ಲೂಕು ಆಡಳಿತ ಸೌಧ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ʻಉದ್ಯಮ ಶಕ್ತಿʼ ಎಂಬ ಯೋಜನೆಯಡಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮ ವಹಿಸಲಿದೆ. ಪೆಟ್ರೋಲಿಯಂ ಕಂಪನಿಗಳು ಇದರ ನಿರ್ಮಾಣಕ್ಕೆ ಬಂಡವಾಳ ಹೂಡಲಿವೆ. ರಾಜ್ಯ ಸರ್ಕಾರವು ಪೆಟ್ರೋಲ್ ಬಂಕ್ ಸ್ಥಾಪನೆಗೆ ಭೂಮಿ ಒದಗಿಸುವುದರೊಂದಿಗೆ ತರಬೇತಿ, ಪರವಾನಗಿ, ಮತ್ತಿತರ ಬೆಂಬಲ ನೀಡಲಿದೆ.
ಹವಾಮಾನ ವೈಪರೀತ್ಯಗಳಾದ ಪ್ರವಾಹ, ಅನಾವೃಷ್ಟಿ, ನದಿ ತೀರದ ಸವೆತದಿಂದ ಉಂಟಾಗುವ ಪರಿಣಾಮಗಳನ್ನು ಪರಿಹರಿಸಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಪ್ರಸಕ್ತ ಸಾಲಿನಲ್ಲಿ 422 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ.
ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿಯಲ್ಲಿ (NDMF) ನಿರ್ದಿಷ್ಟ ವಿಪತ್ತು ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರವಾಹ ನಿಯಂತ್ರಣ ಹಾಗೂ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ಭೂಕುಸಿತದ ಅಪಾಯ ತಗ್ಗಿಸುವಿಕೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಬಲವರ್ಧನೆ ಮುಂತಾದ ವಿಪತ್ತು ಪರಿಹಾರ ಕಾರ್ಯಕ್ರಮಗಳನ್ನು ಒಟ್ಟು 721 ಕೋಟಿ ರೂ.ಗಳ ವೆಚ್ಚದಲ್ಲಿ ತೆಗೆದುಕೊಳ್ಳಲು ಉದ್ದೇಶಿಸಿದೆ.
ಬೆಳೆಹಾನಿ ಪರಿಹಾರ ದರದಲ್ಲಿ ವಿಮಾ ಯೋಜನೆ ಮೊತ್ತವನ್ನು ಸಂಯೋಜಿಸಿರುವುದನ್ನು ಕೈಬಿಡುವಂತೆ ಹಾಗೂ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ನಿಗದಿಪಡಿಸಿರುವ ಬೆಳೆಹಾನಿ ಪರಿಹಾರ ದರಗಳಂತೆ ಕೇಂದ್ರ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು.
ರಾಜ್ಯದಲ್ಲಿ ಭಾರೀ ಮಳೆ, ಬಲವಾದ ಗಾಳಿ, ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು Doppler Weather Radar ಕಣ್ಗಾವಲು ಯಂತ್ರವನ್ನು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
ನೋಂದಣಿಯೇತರ ದಸ್ತಾವೇಜುಗಳಾದ ಒಪ್ಪಂದಗಳು, ಬ್ಯಾಂಕ್ ಗ್ಯಾರಂಟಿಗಳು, ಷೇರು ಪ್ರಮಾಣ ಪತ್ರಗಳು ಹಾಗೂ ಬ್ಯಾಂಕಿಂಗ್ ದಾಖಲೆಗಳು ಮುಂತಾದ ವಹಿವಾಟುಗಳಿಗೆ ಇ-ಮುದ್ರಾಂಕ ಮತ್ತು ಡಿಜಿಟಲ್ ಸ್ಟಾಂಪಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದರ ಮೂಲಕ ಮುದ್ರಾಂಕ ರಾಜಸ್ವದಲ್ಲಿ ಪಾರದರ್ಶಕತೆ ಹಾಗೂ ನಿಖರತೆ ತರಲಾಗುವುದು.
ಈವರೆಗೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
ಬೆಂಗಳೂರಿನಲ್ಲಿರುವ ಉಪ-ನೋಂದಣಾಧಿಕಾರಿ ಕಛೇರಿಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ಕಡಿಮೆ ಮಾಡಲು ಬೆಂಗಳೂರಿನ ಎಂಟು ಕಛೇರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನಸ್ನೇಹಿ ಕಛೇರಿಗಳನ್ನಾಗಿ ಉನ್ನತೀಕರಿಸಲಾಗುವುದು.
ಇ-ಆಡಳಿತ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳಾದ FRUITS, Kutumba, GIS ಗಳನ್ನು ಬಳಸಿಕೊಂಡು ತಾಲ್ಲೂಕು ಹಂತದ ಕಛೇರಿಗಳಲ್ಲಿನ ಶಾಸನಬದ್ಧ ಕಾಲಮಿತಿ ಇರುವಂತಹ ಸೇವೆಗಳನ್ನು ಹೊರತುಪಡಿಸಿ, ಉಳಿದ ಸೇವೆಗಳನ್ನು ತತ್ಕ್ಷಣವೇ ಅಥವಾ ಅದೇ ದಿನದಂದು ಅಥವಾ ಅತ್ಯಂತ ಸಂಕೀರ್ಣ ಪ್ರಕರಣಗಳಲ್ಲಿ ಒಂದು ವಾರದೊಳಗೆ ಸಾರ್ವಜನಿಕರಿಗೆ ಒದಗಿಸಲು ಯತ್ನಿಸಲಾಗುವುದು. ಪ್ರಾಯೋಗಿಕವಾಗಿ ಒಂಭತ್ತು ಕೋಟಿ ರೂ.ಗಳ ವೆಚ್ಚದಲ್ಲಿ ಈ ವಿಧಾನವನ್ನು ಜಾರಿಗೆ ತರಲು ಚಿಕ್ಕಬಳ್ಳಾಪುರ, ಕೊರಟಗೆರೆ, ಚಾಮರಾಜನಗರ, ರಾಯಚೂರು, ಧಾರವಾಡ ಮತ್ತು ಬಂಟ್ವಾಳ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಸಕಾಲದಡಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ಸಂಪರ್ಕಿತ ಡೇಟಾಬೇಸ್ (Connected database) ವಿಧಾನ ಬಳಸಿ ಕಡಿಮೆ ಅವಧಿಯಲ್ಲಿ ಸೇವೆಗಳನ್ನು ನೀಡಲು ಬ್ಯಾಕ್ ಎಂಡ್ ಪ್ರಕ್ರಿಯೆಗಳಲ್ಲಿ (backend processes) ಪಾರದರ್ಶಕತೆ ತರಲಾಗುವುದು.
100 ಪ್ರಮುಖ ಸೇವಾಸಿಂಧು ಸೇವೆಗಳನ್ನು ಸಕಾಲ ವಿನ್ಯಾಸಕ್ಕೆ ಅನುಗುಣವಾಗಿ ಪರಿವರ್ತಿಸಲು Business Process Re-engineering ಕೋಶವನ್ನು ಸ್ಥಾಪಿಸಲಾಗುವುದು. ಇದರಲ್ಲಿ ಪ್ರಮುಖವಾಗಿ ಆದಾಯ ಪ್ರಮಾಣ ಪತ್ರಕ್ಕಾಗಿ ಕುಟುಂಬ ಆದಾಯವನ್ನು ವಸ್ತುನಿಷ್ಠ ನಿರ್ಣಯ ರೂಪದಲ್ಲಿ ಪರಿವರ್ತಿಸಲಾಗುವುದು. ಈ ಯೋಜನೆಗಾಗಿ ಮೂರು ಕೋಟಿ ರೂ.ಗಳನ್ನು ಒದಗಿಸಲಾಗುವುದು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕೆ-ಜಿ.ಐ.ಎಸ್. (KGIS) ತಂತ್ರಜ್ಞಾನವನ್ನು ಆಧರಿಸಿ ವೈಜ್ಞಾನಿಕ ಮತ್ತು ತರ್ಕಬದ್ದ ಮಾರ್ಗಸೂಚಿ ದರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ರಸ್ತೆಗಳು ಮತ್ತು ಬೀದಿಗಳಿಗೆ ಹೊಂದಿಕೊಂಡಿರುವ ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಹಾಗೂ ಅದರ ನಿಖರ ಮುದ್ರಾಂಕ ಶುಲ್ಕವನ್ನು ಆನ್ಲೈನ್ ನಲ್ಲಿ ಪಡೆಯಲು ಅನುಕೂಲವಾಗಲಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಒಂದು ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು ಮತ್ತು ಹಂತ ಹಂತವಾಗಿ ರಾಜ್ಯದೆಲ್ಲೆಡೆ ಜಾರಿಗೊಳಿಸಲಾಗುವುದು.
ಸರ್ಕಾರದ ವಿವಿಧ ಕಾರ್ಯಕ್ರಮ/ಯೋಜನೆಗಳ ಅನುಷ್ಠಾನಕ್ಕಾಗಿ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಿ ಜಂಟಿ ನಿರ್ಧಾರ ಕೈಗೊಂಡು ಅನುಮೋದನೆ ನೀಡಲು ಅನುವಾಗುವಂತೆ ಜಿಐಎಸ್ (GIS) ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
ರಾಜ್ಯ ವಿಧಾನ ಮಂಡಲದ ಕಲಾಪಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಹಾಗೂ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪದ ಮಾಹಿತಿ ಸುಲಭವಾಗಿ ಲಭ್ಯವಾಗಿಸುವ ನಿಟ್ಟಿನಲ್ಲಿ ವಿಧಾನ ಮಂಡಲದ ಚಟುವಟಿಕೆಗಳ ಡಿಜಿಟಲೀಕರಣದ ಯೋಜನೆಯನ್ನು ಹೊಸದಾಗಿ ರೂಪಿಸಿ ಅನುಷ್ಠಾನಗೊಳಿಸಲಾಗುವುದು.
2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರ್ಕಾರವು ಸದರಿ ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ ಇಲ್ಲಿಯವರೆಗೂ ಅನುಷ್ಠಾನಗೊಳಿಸಿರುವುದಿಲ್ಲ. ನಮ್ಮ ಸರ್ಕಾರವು ಹಿಂದೆ ಘೋಷಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲಿದೆ.
ಬೆಂಗಳೂರಿನಲ್ಲಿರುವ ಡಾ. ರಾಜ್ಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು.
ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ, ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು.
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 10 ಸಾವಿರ ರೂ. ಗಳಿಂದ 12 ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು. ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟಾಗ ನೀಡಲಾಗುವ ಕುಟುಂಬ ಮಾಸಾಶನ ಮೊತ್ತವನ್ನು ಮೂರು ಸಾವಿರ ರೂ. ಗಳಿಂದ ಆರು ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು.
ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಮತ್ತು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ದಿ ಕೈಗೊಳ್ಳುವ ದೃಷ್ಟಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು.
ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೊರ ರಾಜ್ಯದ ಶಿಲ್ಪಿಗಳ ಮೇಲೆ ಅವಲಂಬಿತರಾಗಿದ್ದು, ನಮ್ಮ ರಾಜ್ಯದಲ್ಲಿಯೂ ದೇವಾಲಯಗಳ ನಿರ್ಮಾಣಕ್ಕಾಗಿ ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು.
ಭೂ ಸುಧಾರಣಾ ಕಾಯ್ದೆ, 1974 ರನ್ವಯ ನಾನ್ ಇನಾಂ ಜಮೀನುಗಳು ಸರ್ಕಾರದಲ್ಲಿ ವಿಹಿತವಾಗಿರುವುದಕ್ಕೆ ಪರಿಹಾರಾರ್ಥವಾಗಿ ಒಟ್ಟು 3,721 ಸಂಸ್ಥೆಗಳಿಗೆ ಪ್ರಸ್ತುತ ಮಂಜೂರು ಮಾಡುತ್ತಿರುವ ವರ್ಷಾಸನ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದಕ್ಕಾಗಿ ಒಟ್ಟು 22 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
ಯಾವುದೇ ಗಮನಾರ್ಹ ಆದಾಯವಿಲ್ಲದ ʻಸಿʼ ವರ್ಗದ ಒಟ್ಟು 121 ಮುಜರಾಯಿ ದೇವಸ್ಥಾನಗಳಿಗೆ ಕನಿಷ್ಠ 35 ರೂ.ಗಳಿಂದ 15,000 ರೂ.ಗಳವರೆಗೆ ನಗದು ಸಹಾಯಾನುದಾನ ನೀಡಲಾಗುತ್ತಿದ್ದು, ಎಲ್ಲಾ ದೇವಸ್ಥಾನಗಳಿಗೆ ಸಮಾನವಾಗಿ 15,000 ರೂ.ಗಳ ಸಹಾಯಾನುದಾನವನ್ನು ನೀಡಲಾಗುವುದು.
ರಾಜ್ಯದಲ್ಲಿ ಮಾನವ – ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಒಂದು 520 ಕಿ.ಮೀ.ಗಳ ಬ್ಯಾರಿಕೇಡ್ಗಳನ್ನು ನಿರ್ಮಿಸಲು ಘೋಷಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ 312 ಕಿ.ಮೀ. ನಷ್ಟು ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಬಾಕಿ ಉಳಿದಿರುವ ಬ್ಯಾರಿಕೇಡ್ ನಿರ್ಮಾಣ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಈ ಕಾಮಗಾರಿಗಳ ಅನುಷ್ಠಾನಕ್ಕೆ 2023-24 ರಲ್ಲಿ 120 ಕೋಟಿ ರೂ. ಮೀಸಲಿಡಲಾಗಿದೆ.
ಮಾನವ - ಕಾಡಾನೆ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಎರಡು ಹೊಸ ಆನೆ ಕಾರ್ಯಪಡೆಗಳನ್ನು ರಚಿಸಲಾಗುವುದು.
ಮಾನವ-ವನ್ಯಪ್ರಾಣಿ ಸಂಘರ್ಷದಲ್ಲಿ ಸಂರಕ್ಷಿಸಿದ, ಗಾಯಗೊಂಡ, ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ರಕ್ಷಣೆ/ನಿರ್ವಹಣೆ ಮಾಡುತ್ತಿರುವ ಬನ್ನೇರುಘಟ್ಟ ಮತ್ತು ಮೈಸೂರಿನಲ್ಲಿರುವ ಪುನರ್ವಸತಿ ಕೇಂದ್ರಗಳ ಸಾಮರ್ಥ್ಯ ವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಹೊಸದಾಗಿ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು.
ಬೀದರ್ ಜಿಲ್ಲೆಯಲ್ಲಿ ಕೃಷ್ಣಮೃಗಗಳು (Blackbuck) ಹೆಚ್ಚಾಗಿ ಕಂಡು ಬರುವುದರಿಂದ, ಇವುಗಳ ಸಂರಕ್ಷಣೆಗಾಗಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶವನ್ನು ಘೋಷಿಸಲಾಗುವುದು. ಈ ಸಂರಕ್ಷಣಾ ಮೀಸಲು ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗಾಗಿ ಎರಡು ಕೋಟಿ ರೂ. ಮೀಸಲಿಡಲಾಗಿದೆ.
ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭೌಗೋಳಿಕ ವಿಸ್ತೀರ್ಣದ ಶೇ.33 ರಷ್ಟು ಭಾಗ ಅರಣ್ಯ ಪ್ರದೇಶದಿಂದ ಆವೃತಗೊಂಡಿರಬೇಕಾಗಿದ್ದು, ಕರ್ನಾಟಕ ರಾಜ್ಯದ ಬಯಲುಸೀಮೆ ಪ್ರದೇಶದ 17 ಜಿಲ್ಲೆಗಳಲ್ಲಿ ಶೇ.10 ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇರುತ್ತದೆ. ಹಾಗಾಗಿ ಈ ಜಿಲ್ಲೆಗಳಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ʻಹಸಿರೀಕರಣ ಕಾರ್ಯಕ್ರಮʼ ವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಇಂಗಾಲದ ಹೆಜ್ಜೆಗುರುತನ್ನು (Carbon Footprint) ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳಲ್ಲಿ ಪರಿಸರ ಹೊಂದಾಣಿಕೆಯನ್ನು ಮಾಡುವ ಕುರಿತು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (EMPRI) ವತಿಯಿಂದ ಮೌಲ್ಯಮಾಪನ ಮಾಡಲಾಗುವುದು.
ಡಿಕಾರ್ಬೊನೈಸೇಷನ್ನಿನ (Decarbonization) ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮತ್ತು ಹಸಿರು ಬೆಳವಣಿಗೆಯನ್ನು ಉತ್ತೇಜಿಸಲು, ರಾಜ್ಯದಲ್ಲಿನ ಸಂಸ್ಥೆಗಳಿಂದ ಸ್ವಯಂಪ್ರೇರಿತವಾಗಿ Green House Gases (GHG) ಹೊರಸೂಸುವಿಕೆಯನ್ನು ಬಹಿರಂಗಪಡಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು.
ನಮ್ಮ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ, ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚಾಗಿರುವುದರಿಂದ ಅಂತಹ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ʻಒಂದು ರಾಜ್ಯ ಹಲವು ಜಗತ್ತುʼ ಎಂಬ ಘೋಷವಾಕ್ಯದಂತೆ ಕರ್ನಾಟಕವು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದ್ದರೂ, ಅದರ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಕಲ್ಪನೆಗಳನ್ನು ಅನುಷ್ಠಾನಗೊಳಿಸಲು ಮಾಸ್ಟರ್ ಪ್ಲಾನ್ ಅನ್ನು ತಯಾರಿಸಲಾಗುವುದು.
ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳಾದ ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ ಮತ್ತು ಮಳಖೇಡ, ಬೀದರ್, ರಾಯಚೂರು ಹಾಗೂ ಕಲಬುರಗಿ ಕೋಟೆಗಳ ಸಮಗ್ರ ಅಭಿವೃದ್ಧಿಗಾಗಿ 75 ಕೋಟಿ ರೂ. ಗಳನ್ನು ಒದಗಿಸಲಾಗುವುದು.
ಕಿತ್ತೂರು ಕರ್ನಾಟಕ ಭಾಗದಲ್ಲಿನ ಸವದತ್ತಿ ಯಲ್ಲಮ್ಮನ ಗುಡ್ಡ, ದೇವರಗುಡ್ಡ, ಕಪ್ಪತ್ತಗುಡ್ಡ, ಬಾದಾಮಿ ಬನಶಂಕರಿ, ಲಕ್ಕುಂಡಿ ಪ್ರವಾಸಿ ತಾಣಗಳನ್ನು ಮತ್ತು ಗದಗ ಜಿಲ್ಲೆಯ ಮಾಗಡಿ ಪಕ್ಷಿಧಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುವುದು ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯನ್ನು ತಯಾರಿಸಲಾಗುವುದು.
ಸಸಿಹಿತ್ಲು ಕಡಲ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಅಭಿವೃದ್ಧಿಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ರೂಪಿಸಲಾಗುವುದು.
ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯಾತ್ರಿನಿವಾಸ/ಡಾರ್ಮಿಟರಿಗಳನ್ನು ನಿರ್ಮಾಣ ಮಾಡಲಾಗುವುದು.
ಮೈಸೂರಿನ ಹೃದಯ ಭಾಗದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು.
ರಾಜ್ಯದಲ್ಲಿರುವ 16 ವಸ್ತುಸಂಗ್ರಹಾಲಯಗಳನ್ನು ಹಂತ ಹಂತವಾಗಿ ಆಕರ್ಷಕ ಮತ್ತು ಸಂವಾದಾತ್ಮಕವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಆರ್ಥಿಕ ಸಾಲಿನಲ್ಲಿ ಕಲಬುರಗಿ, ಗದಗ ಮತ್ತು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯಗಳ ಅಭಿವೃದ್ಧಿಪಡಿಸಲು ಮತ್ತು ವಿಜಯಪುರದಲ್ಲಿರುವ ಆನಂದಮಹಲ್ ಕಟ್ಟಡವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.
ಮೈಸೂರಿನಲ್ಲಿ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುವ ಕಾರಣದಿಂದ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿನ ಎರಡೂವರೆ ಎಕರೆ ಜಮೀನಿನಲ್ಲಿ ಕರ್ನಾಟಕದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು Augmented Reality (AR) ಮತ್ತು Virtual Reality (VR) ತಂತ್ರಜ್ಞಾನದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ʻಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿʼ ನಿರ್ಮಾಣ ಮಾಡಲಾಗುವುದು.
ರಾಜ್ಯದಲ್ಲಿರುವ ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾದ ಹಂಪಿಯ ವಿಜಯವಿಠಲ ದೇವಸ್ಥಾನ, ಬೀದರ್ ಕೋಟೆ, ನಂದಿಬೆಟ್ಟದ ಶ್ರೀ ಭೋಗನಂದೀಶ್ವರ ದೇವಸ್ಥಾನ, ವಿಜಯಪುರದ ಗೋಲಗುಂಬಜ್, ಕಿತ್ತೂರು ಕೋಟೆ ಮತ್ತು ಬಾದಾಮಿ ಗುಹೆಗಳ ಬಳಿ ರಾತ್ರಿ ವೇಳೆ ಪ್ರವಾಸಿಗರ ಭೇಟಿಯನ್ನು ಉತ್ತೇಜಿಸಲು ಹಾಗೂ ಕರ್ನಾಟಕ ರಾಜ್ಯದ ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರದರ್ಶಿಸಲು 3D ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಸೌಂಡ್ ಮತ್ತು ಲೈಟ್ ಷೋ ಯೋಜನೆಯನ್ನು ಕೈಗೊಳ್ಳಲಾಗುವುದು.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿ ಪ್ರಾರಂಭಿಸಿದ ನಗರೋತ್ಥಾನ, ಇಂದಿರಾ ಕ್ಯಾಂಟೀನ್ ನಂತಹ ಹಲವಾರು ಜನಪರ ಯೋಜನೆಗಳನ್ನು ನಿರ್ಲಕ್ಷಿಸುವ ಮೂಲಕ ಹಿಂದಿನ ಸರ್ಕಾರದ ಅವಧಿಯಲ್ಲಿ ನಗರಗಳ ಅಭಿವೃದ್ಧಿಯು ಕುಂಠಿತಗೊಂಡಿರುತ್ತದೆ. ಅಲ್ಲದೇ, 2022-23ನೇ ಸಾಲಿಗೆ 45,000 ಕೋಟಿ ರೂ.ಗಳ ಅಪೂರ್ಣ ಕಾಮಗಾರಿಗಳ ಮತ್ತು ಬಾಕಿ ಮೊತ್ತದ ಹೊರೆಯನ್ನು ಹಿಂದಿನ ಸರ್ಕಾರ ನಮ್ಮ ಸರ್ಕಾರದ ಮೇಲೆ ಹೊರೆಸಿರುತ್ತದೆ. ಪ್ರಸ್ತುತ ಇರುವ ಆಯವ್ಯಯದ ಮಿತಿಯಲ್ಲಿ ಬಾಕಿ ಹೊರೆಯನ್ನು ತೀರಿಸಲು ಕನಿಷ್ಠ 6-8 ವರ್ಷಗಳ ಕಾಲಾವಕಾಶದ ಅಗತ್ಯತೆ ಇರುತ್ತದೆ. ಇದು ಅವರ ಅಶಿಸ್ತು ಮತ್ತು ಅವಿವೇಚನೆಗೆ ಹಿಡಿದ ಕನ್ನಡಿಯಾಗಿರುತ್ತದೆ. ಆದಾಗ್ಯೂ, ನಮ್ಮ ಸರ್ಕಾರ ನಗರಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ.
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ, ಹೈಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಮತ್ತಿತರ ಹಲವಾರು ಪ್ರಗತಿಯಲ್ಲಿರುವ ಯೋಜನೆಗಳಿಗೆ ಪ್ರಸ್ತುತ 12,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ವ್ಯಯಿಸಲಾಗುತ್ತಿದೆ. ಇದಲ್ಲದೆ ಸಂಚಾರ ದಟ್ಟಣೆ ನಿವಾರಣೆಗಾಗಿ 30,000 ಕೋಟಿ ರೂ.ಗಳಿಗೂ ಹೆಚ್ಚಿನ ಅಂದಾಜು ವೆಚ್ಚದಲ್ಲಿ ನಮ್ಮ ಮೆಟ್ರೋ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳು ಪೂರ್ಣಗೊಳ್ಳಲು ಐದು ವರ್ಷಗಳ ಕಾಲಾವಕಾಶದ ಅಗತ್ಯವಿದೆ. ಇಷ್ಟು ಬೃಹತ್ ಮೊತ್ತದ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿದ್ದರೂ ಹಿಂದಿನ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರ ಹಾಗೂ ಅಸಮರ್ಪಕ ನಿರ್ವಹಣೆಯ ಕಾರಣದಿಂದ ನಗರದ ಮೂಲ ಸೌಕರ್ಯಗಳಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿರುವುದಿಲ್ಲ.
ʻಬ್ರಾಂಡ್ ಬೆಂಗಳೂರುʼ ಪರಿಕಲ್ಪನೆಯು ಬೆಂಗಳೂರು ನಗರದ ನಿವಾಸಿಗಳ ಸುರಕ್ಷತೆ ಹಾಗೂ ಅನುಕೂಲವನ್ನು ಕೇಂದ್ರಬಿಂದುವಾಗಿಸಿದೆ. ಈ ಪರಿಕಲ್ಪನೆಯು ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆ - ಈ ಒಂಬತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ನಮ್ಮ ಗುರಿಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು 1,411 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸ್ವಂತ ಸಂಪನ್ಮೂಲದಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದ್ದು, ಮಾರ್ಚ್ 2026 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಗಳ ಮೂಲಕ ಬೆಂಗಳೂರಿನಲ್ಲಿ ಸುಸ್ಥಿರ ಜಲ ಮತ್ತು ಪರಿಸರ ಸಂರಕ್ಷಣೆಯಾಗಲಿದೆ.
ನೈಋತ್ಯ ರೈಲ್ವೇ ಇಲಾಖೆಯವರು ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನಿರ್ಮಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಸರಿಯಾದ ಮೆಟ್ರೋ ಮತ್ತು ರಸ್ತೆಗಳ ಸಂಪರ್ಕ ಇಲ್ಲದೇ ಇರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಈ ಸಮಸ್ಯೆಯ ನಿವಾರಣೆಗಾಗಿ ೨೬೩ ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಹೊಸ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು.
ಪದೇ ಪದೇ ದುರಸ್ತಿಗೆ ಮರುಕಳಿಸುವ ವೆಚ್ಚವನ್ನು ತಪ್ಪಿಸಲು ನಗರದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ನಮ್ಮ ಸರ್ಕಾರದಿಂದ 2016-17 ಮತ್ತು 2017-18ರಲ್ಲಿ ವೈಟ್ ಟಾಪಿಂಗ್ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾದ 190 ಕಿ.ಮೀ. ರಸ್ತೆಗಳು ಇಂದಿಗೂ ಅತ್ಯುತ್ತಮ ಸ್ಥಿತಿಯಲ್ಲಿವೆ. ತದನಂತರ, ಹಿಂದಿನ ಸರ್ಕಾರ ಯಾವುದೇ ವೈಟ್ ಟಾಪಿಂಗ್ ಯೋಜನೆಯನ್ನು ಕೈಗೊಂಡಿರುವುದಿಲ್ಲ. ಈ ಯೋಜನೆಯನ್ನು ಪುನರಾರಂಭಿಸಿ 2023-24ನೇ ಸಾಲಿನಲ್ಲಿ 800 ಕೋಟಿ ರೂ. ವೆಚ್ಚದಲ್ಲಿ 100 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ವೈಟ್ ಟಾಪ್ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುವುದು.
ಬೆಂಗಳೂರು ನಗರದಲ್ಲಿರುವ ಹೆಚ್ಚಿನ ಸಂಚಾರ ದಟ್ಟಣೆಯನ್ನು ಹೊಂದಿರುವ 192 ಕಿ.ಮೀ. ಉದ್ದದ ವಿವಿಧ 12 ಪ್ರಮುಖ ರಸ್ತೆಗಳನ್ನು ಹೈ ಡೆನ್ಸಿಟಿ ಕಾರಿಡಾರ್ಗಳೆಂದು (High Density Corridor) 2016ರಲ್ಲಿ ಗುರುತಿಸಲಾಗಿರುತ್ತದೆ. ಈ ಪೈಕಿ 92 ಕಿ.ಮೀ. ಉದ್ದದ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. 2023-24ನೇ ಸಾಲಿನಲ್ಲಿ 83 ಕಿ.ಮೀ. ಉದ್ದದ ರಸ್ತೆಗಳನ್ನು 273 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗಾಗಿ ರೂಪಿಸಿರುವ ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಪ್ರಕ್ರಿಯೆಯು ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಎದುರಾದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸರ್ವೋಚ್ಛ ನ್ಯಾಯಾಲಯದಿಂದ ದಿನಾಂಕ: 25.11.2021 ರಂದು ಅನುಮತಿ ದೊರಕಿದೆ. ಇದೀಗ ನಮ್ಮ ಸರ್ಕಾರವು ಎಲ್ಲಾ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತ್ವರಿತವಾಗಿ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಬೆಂಗಳೂರಿನಲ್ಲಿ ಮಳೆನೀರು ಸರಾಗವಾಗಿ ಹರಿಯದಿರಲು ರಾಜಕಾಲುವೆಗಳ ಒತ್ತುವರಿ ಪ್ರಮುಖ ಕಾರಣವಾಗಿದ್ದು, ಇದರಿಂದಾಗಿ ಪ್ರವಾಹ ಉಂಟಾಗುವುದಲ್ಲದೆ, ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಂತು, ಮನೆಗಳಿಗೆ ನೀರು ನುಗ್ಗಿ ಅನಾಹುತಗಳು ಸಂಭವಿಸುತ್ತಿವೆ. ಈ ಸಮಸ್ಯೆಯನ್ನು ನಿವಾರಿಸಲು ಕಂದಾಯ ಇಲಾಖೆ ಗುರುತಿಸಿರುವ ಒತ್ತುವರಿಗಳನ್ನು ಆದ್ಯತೆ ಮೇಲೆ ತೆರವುಗೊಳಿಸಲಾಗುವುದು.
ಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ಬೆಂಗಳೂರು ನಗರದ 97 ಲಕ್ಷ ಟನ್ನಷ್ಟು ಹಳೆ ತ್ಯಾಜ್ಯವನ್ನು (legacy waste) ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರದ ಮೂಲಕ ಸಂಸ್ಕರಿಸಲಾಗುವುದು ಮತ್ತು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇಂತಹ 256 ಎಕರೆ ಭೂಮಿಯನ್ನು ಉದ್ಯಾನವನಗಳಾಗಿ ಪರಿವರ್ತಿಸಲಾಗುವುದು.
ಸುಮಾರು 5.7 ಲಕ್ಷ ಪ್ರಯಾಣಿಕರು ದಿನಂಪ್ರತಿ ಸಂಚರಿಸುವ 70 ಕಿ.ಮೀ. ಉದ್ದದ ಸಂಪರ್ಕ ಜಾಲವನ್ನು ಹೊಂದಿರುವ ನಮ್ಮ ಮೆಟ್ರೋ ರಾಷ್ಟ್ರದಲ್ಲಿಯೇ ಎರಡನೇ ಅತೀ ದೊಡ್ಡ ಮೆಟ್ರೋ ಸೇವೆಯಾಗಿರುತ್ತದೆ. 2024ರ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರದವರೆಗೆ, ಕೆಂಗೇರಿಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ಮಾದಾವರದವರೆಗೆ, ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಒಟ್ಟು 27 ಕಿ.ಮೀ.ಗಳ ನೂತನ ಮಾರ್ಗಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಈಗಿರುವ ೭೦ ಕಿ.ಮೀ.ನ ಸಂಪರ್ಕಜಾಲವನ್ನು 176 ಕಿ.ಮೀ.ಗೆ ವಿಸ್ತರಿಸುವ ಮೂಲಕ ಮೆಟ್ರೊ ಕಾರ್ಯಾಚರಣೆಯ ಸಂಪರ್ಕ ಜಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗುವುದು. ಪ್ರಗತಿಯಲ್ಲಿರುವ ಏರ್ಪೋರ್ಟ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ 2026 ರಲ್ಲಿ ಕಾರ್ಯಾರಂಭ ಮಾಡಲಾಗುವುದು.
ಇದಲ್ಲದೇ, ಮೆಟ್ರೋ 3ನೇ ಹಂತದಡಿ ಅಂದಾಜು 16,328 ಕೋಟಿ ರೂ. ವೆಚ್ಚದಲ್ಲಿ ಕೆಂಪಾಪುರದಿಂದ ಜೆ.ಪಿ. ನಗರ 4ನೇ ಹಂತದವರೆಗಿನ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಓ.ಆರ್.ಆರ್. ಮಾರ್ಗವನ್ನು ಒಳಗೊಳ್ಳುವಂತಹ 45 ಕಿ.ಮೀ. ಉದ್ದದ ಮಾರ್ಗದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ, 15,000 ಕೋಟಿ ರೂ. ಅಂದಾಜು ವೆಚ್ಚದ, ಹೆಬ್ಬಾಳದಿಂದ ಸರ್ಜಾಪುರದವರೆಗಿನ 37 ಕಿ.ಮೀ. ಉದ್ದದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುವುದು.
ಬೆಂಗಳೂರು ನಗರದ ಸುಗಮ ಸಂಚಾರಕ್ಕೆ ಪೂರಕವಾಗಿ ರೂಪಿಸಲಾಗಿರುವ ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಜಾರಿಗೊಳಿಸಲು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಹಿಂದಿನ ಸರ್ಕಾರವು ವಿಫಲವಾಗಿದೆ. ಈ ಯೋಜನೆಯ ಒಟ್ಟು ಮೊತ್ತ 15,767 ಕೋಟಿ ರೂ.ಗಳಾಗಿದ್ದು, ಕೇಂದ್ರ ಸರ್ಕಾರದ ಪಾಲು 3,242 ಕೋಟಿ ರೂ.ಗಳು, ರಾಜ್ಯ ಸರ್ಕಾರದ ಪಾಲು 5,087 ಕೋಟಿ ರೂ.ಗಳು ಮತ್ತು ಸಾಲದ (ಬಾಹ್ಯ ಮೂಲಗಳಿಂದ) ಮೊತ್ತ 7,438 ಕೋಟಿ ರೂ.ಗಳಾಗಿರುತ್ತದೆ. ಸದರಿ ಯೋಜನೆಗೆ ಈವರೆಗೂ ಕೇಂದ್ರ ಸರ್ಕಾರವು 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದಿಂದ 660 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಪ್ರಸ್ತುತ ಸಾಲಿನಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರವು 1,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಪಾರಂಪರಿಕ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಹಾಗೂ ಒಳಚರಂಡಿ ನೀರು ಸಂಸ್ಕರಿಸುವ ಆಧುನಿಕ ಪದ್ಧತಿಗಳನ್ನು ಅಳವಡಿಸುವ ಮೂಲಕ ನದಿಗಳು ಮತ್ತು ಕೆರೆಗಳಿಗೆ ಹರಿಯುವ ಮಾಲಿನ್ಯ ನಿಯಂತ್ರಿಸಲು 1,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಮತ್ತು ಇತರೇ ಪಟ್ಟಣಗಳಲ್ಲಿ 2,150 ಕೋಟಿ ರೂ. ವೆಚ್ಚದಲ್ಲಿ ಒಟ್ಟಾರೆ 3,400 ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ 2.0 ಯೋಜನೆಯನ್ನು ವೆಚ್ಚ ಹಂಚಿಕೆ ಆಧಾರದಲ್ಲಿ ಜಾರಿಗೊಳಿಸಿದ್ದು, ಬಿ.ಬಿ.ಎಂ.ಪಿ. ಸೇರಿದಂತೆ ರಾಜ್ಯದ 314 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 4,500 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 1,900 ಕೋಟಿ ರೂ. ಮತ್ತು ರಾಜ್ಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪಾಲು 2,600 ಕೋಟಿ ರೂ. ಗಳಾಗಿವೆ. ಈ ಯೋಜನೆಯಡಿಯಲ್ಲಿ ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಮತ್ತು ಬಳಸಿದ ನೀರಿನ ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ರಾಜ್ಯದ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ 287 ಪಟ್ಟಣಗಳಲ್ಲಿ ನೀರು ಸರಬರಾಜು ಮತ್ತು ಜಲಮೂಲಗಳ ಸಂರಕ್ಷಣೆ ಕಾಮಗಾರಿ ಕೈಗೊಳ್ಳಲು 9,230 ಕೋಟಿ ರೂ. ಗಳ ಮೊತ್ತದಲ್ಲಿ ಯೋಜಿಸಲಾಗಿದೆ. ಈ ಅನುದಾನದಲ್ಲಿ ಕೇಂದ್ರ ಸರ್ಕಾರದ ಪಾಲು 4,615 ಕೋಟಿ ರೂ. ಗಳು, ರಾಜ್ಯ ಸರ್ಕಾರದ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪಾಲು 4,612 ಕೋಟಿ ರೂ. ಗಳಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ಒಟ್ಟು 80೦ ಕೋಟಿ ರೂ. ಗಳನ್ನು ಒದಗಿಸಲಾಗಿದೆ.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಯೋಜನೆಯು ನಗರ ಪ್ರದೇಶಗಳಲ್ಲಿ ಬಡವರು ಹಾಗೂ ಶ್ರಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸುವ ಮೂಲಕ ಅವರ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಹಿಂದಿನ ಸರ್ಕಾರ ವಿವಿಧ ನೆಪಗಳೊಡ್ಡಿ, ಈ ಯೋಜನೆಯನ್ನು ಸ್ಥಗಿತಗೊಳಿಸಿ, ಬಡವರ ವಿರೋಧಿ ಕ್ರಮವನ್ನು ಅನುಸರಿಸಿತು. ಇದೀಗ ಮೊದಲನೇ ಹಂತದಲ್ಲಿ (Phase-1) ಹೊಸ ಮೆನುವಿನೊಂದಿಗೆ, ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಿಬಿಎಂಪಿ ಹಾಗೂ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು. ಎರಡನೇ ಹಂತದಲ್ಲಿ (Phase-2) ಎಲ್ಲಾ ಹೊಸ ಪಟ್ಟಣಗಳಲ್ಲಿ ಮತ್ತು ಬಿಬಿಎಂಪಿಯ ಹೊಸ ವಾರ್ಡ್ಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ಗಳ ದುರಸ್ತಿ, ನವೀಕರಣ ಹಾಗೂ ನಿರ್ವಹಣೆಗೆ ರಾಜ್ಯ ಸರ್ಕಾರವು 100 ಕೋಟಿ ರೂ. ಒದಗಿಸಲಿದೆ.
ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಹೆಚ್ಚು ವೈಜ್ಞಾನಿಕವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ವಿಲೇವಾರಿ ಮಾಡಲು ಬೆಂಗಳೂರು ಘನತಾಜ್ಯ ನಿರ್ವಹಣಾ ಸಂಸ್ಥೆಯ (BSWMCL) ಪರಿಣಾಮಕಾರಿ ಕಾರ್ಯಾಚರಣೆಗಾಗಿ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ರೈಲ್ವೆ ಜಾಲದ ಸಾಂದ್ರತೆಯನ್ನು ಹೆಚ್ಚಿಸಿ, ಕರ್ನಾಟಕದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ, ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡುವುದು, ಜನಸಾಮಾನ್ಯರ ಸುಗಮ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುವು ಮಾಡಿಕೊಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸುಮಾರು 8,766 ಕೋಟಿ ರೂ.ಗಳ ರಾಜ್ಯದ ಹೂಡಿಕೆಯೊಂದಿಗೆ, 1,110 ಕಿ.ಮೀ. ಉದ್ದದ, ಒಂಬತ್ತು ರೈಲ್ವೆ ಯೋಜನಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಇದರ ಜೊತೆಗೆ, ರಸ್ತೆ ಮಾರ್ಗದ ವಾಹನ ದಟ್ಟಣೆಯನ್ನು ನಿವಾರಿಸಿ ಸುಗಮ ರೈಲು ಸಂಚಾರಕ್ಕಾಗಿ ಅನುಮೋದಿತ ರೈಲ್ವೆ ಮೇಲ್ಸೇತುವೆ / ಕೆಳ ಸೇತುವೆಗಳ ನಿರ್ಮಾಣದ ಸುಮಾರು 803 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.
ರಾಜ್ಯದಲ್ಲಿ ವಾಯುಯಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡಲು ಸಮಗ್ರ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಲಾಗುವುದು. ಈ ನೀತಿಯಡಿ ಕೈಗೆಟಕುವ ಬೆಲೆಯಲ್ಲಿ ವಾಯುಯಾನ ಸಂಚಾರ, ಪ್ರವಾಸೋದ್ಯಮ, ಸರಕು ಸಾಗಣೆ ಹಾಗೂ ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು.
ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಏರ್ಸ್ಟ್ರಿಪ್ಗಳನ್ನು (Airstrip) ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಪ್ರಾರಂಭಿಸಲಾಗುವುದು.
ರಾಜ್ಯದಲ್ಲಿನ ನೈಸರ್ಗಿಕ ಅನಿಲ (Natural Gas) ವಿತರಣಾ ಜಾಲದ ವಿಸ್ತರಣೆಗೆ ಅನುವು ಮಾಡಿಕೊಡಲು, ರಾಜ್ಯಾದ್ಯಂತ ಏಕರೂಪದ ಅನುಮತಿ ಶುಲ್ಕ ಒಳಗೊಂಡಂತೆ, ನಗರ ಅನಿಲ ವಿತರಣಾ ನೀತಿಯನ್ನು (City Gas Distribution Policy) ರೂಪಿಸಲಾಗುವುದು.
ಬಂದರು ಅವಲಂಬಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸರ್ವ ಋತು ಡೀಪ್ವಾಟರ್ ಗ್ರೀನ್ಫೀಲ್ಡ್ ಬಂದರು ಅಭಿವೃದ್ಧಿ ಪಡಿಸಲಾಗುವುದು.
ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಬಹುಪಯೋಗಿ ಬಂದರಿನ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು.
ಮೀನುಗಾರಿಕಾ ದೋಣಿಗಳು ತಂಗುವ ಜೆಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು ಮತ್ತು ಮಲ್ಪೆ, ಹೊನ್ನಾವರ, ಭಟ್ಕಳ, ಕುಂದಾಪುರ ಮತ್ತು ಬೇಲೆಕೇರಿ ಬಂದರುಗಳಲ್ಲಿ ಎರಡು ವರ್ಷಗಳಿಗೊಮ್ಮೆ ಹೂಳೆತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ರಾಜ್ಯದ ಕಿರು ಬಂದರುಗಳ ವಾಣಿಜ್ಯೀಕರಣ ಮತ್ತು ಸುಸ್ಥಿರ ಕಾರ್ಯನಿರ್ವಹಣೆಗೆ ವಿಸ್ತೃತ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು.
ನೈಸರ್ಗಿಕ ಮೀನುಗಾರಿಕಾ ಬಂದರುಗಳನ್ನು ಸುಸ್ಥಿತಿಯಲ್ಲಿಡಲು ಸಮಗ್ರ ಕರಾವಳಿ ನಿರ್ವಹಣಾ ಸಮಿತಿಯ ಸಬಲೀಕರಣ ಮಾಡಲಾಗುವುದು.
ನವೋದ್ಯಮಿಗಳಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ವಿಶ್ವದರ್ಜೆಯ ಪರಿಪೋಷಣ ಕೇಂದ್ರ ʻINNOVERSEʼ ಅನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಸ್ಟಾರ್ಟಪ್ ನೀತಿಯಡಿಯಲ್ಲಿ ಅನುದಾನ ನೀಡಿರುವ ಸ್ಟಾರ್ಟ್ಅಪ್ಗಳ ಪರಿಹಾರಗಳ ಅಳವಡಿಕೆಯನ್ನು ವೇಗಗೊಳಿಸಲು ʻPropelʼ ಎಂಬ ಯೋಜನೆಯನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ.
ಸ್ಟಾರ್ಟ್ಅಪ್ಗಳಿಗೆ Global Innovation Alliance- Market Access Programme (GIA-MAP) ಕಾರ್ಯಕ್ರಮವನ್ನು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ.
New Age Incubation Network (NAIN) ಕೇಂದ್ರಗಳನ್ನು ಬೆಂಬಲಿಸಲು ತಂತ್ರಜ್ಞಾನ ವರ್ಗಾವಣೆ ಸಂಸ್ಥೆಯನ್ನು (Technology Transfer Organisation) ನಾಲ್ಕು ಕೋಟಿ ರೂ. ಗಳ ಯೋಜನಾ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಹೆಲ್ತ್-ಟೆಕ್ ಮತ್ತು ಮೆಡ್-ಟೆಕ್ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (Centre of Excellence in Health Tech & Med Tech) ಕೇಂದ್ರವನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಜೈವಿಕ-ಬ್ಯಾಂಕ್ (Bio Bank) ಅನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ʻCentre of Excellence in Wireless & Wired Technologies in Karnataka (COEWWT)ʼ ಅನ್ನು 25 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಐದು ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡಿಸೈನ್ (Centre of Excellence in Design) ಕೇಂದ್ರವನ್ನು 20 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಎಂಟು ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಕರ್ನಾಟಕ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನೀತಿಯ ಅನುಷ್ಠಾನಕ್ಕೆ ದೃಢವಾದ ಮತ್ತು ಪಾರದರ್ಶಕ ಆಡಳಿತದ ಚೌಕಟ್ಟನ್ನು ರಚಿಸುವುದು ಹಾಗೂ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ. ಈ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನವನ್ನು (ಕೆಎಸ್ಆರ್ಎಫ್) ರಚಿಸಲಾಗುವುದು.
ರಾಜ್ಯದ ವಿಜ್ಞಾನ ಕೇಂದ್ರಗಳ ಮೂಲಸೌಲಭ್ಯಗಳನ್ನು ಬಲಪಡಿಸಲು, ಎರಡು ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ತಲಾ 50 ಲಕ್ಷ ರೂ. ವೆಚ್ಚದಲ್ಲಿ ಮತ್ತು ನಾಲ್ಕು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ತಲಾ 30 ಲಕ್ಷ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಈ ಯೋಜನೆಗೆ ಪ್ರಸ್ತುತ ವರ್ಷದಲ್ಲಿ ಎರಡು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
ಸಂಶೋಧನೆ ಮತ್ತು ನಾವೀನ್ಯತೆ ವ್ಯವಸ್ಥೆಯು ಉದ್ಯಮಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಗಳು ಸೇರಿದಂತೆ ಇವರ ನಡುವಿನ ಸಂಬಂಧಗಳ ಸಂಕೀರ್ಣ ವ್ಯವಸ್ಥೆಯಾಗಿದೆ. ಈ ಎಲ್ಲಾ ಭಾಗೀದಾರರನ್ನು ಒಟ್ಟುಗೂಡಿಸಲು ಮತ್ತು ಅವರ ನಡುವೆ ಸಮನ್ವಯತೆಯನ್ನು ಸಾಧಿಸಲು ಇ-ಪ್ಲಾಟ್ಫಾರ್ಮ್ -KRDIP ಅನ್ನು ರಚಿಸಲಾಗುವುದು.
ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ರೈತರು, ಕುಶಲಕರ್ಮಿಗಳು, ಕಾರ್ಮಿಕರು, ಯಂತ್ರಕಾರರು ಮತ್ತು ಸಾಮಾನ್ಯ ಜನರು ರಚಿಸಿದ ತಳಹಂತದ ನಾವೀನ್ಯತೆಗಳನ್ನು ಗುರುತಿಸಿ, ವ್ಯಾಖ್ಯಾನಿಸಲು ಮತ್ತು ಅವುಗಳಿಗೆ ಮೌಲ್ಯವನ್ನು ದೊರಕಿಸುವ ಮೂಲಕ ವಾಣಿಜ್ಯೀಕರಣಕ್ಕೆ ಬೆಂಬಲವನ್ನು ನೀಡುವ ಯೋಜನೆಗೆ ಐದು ಕೋಟಿ ರೂ. ಒದಗಿಸಲಾಗುವುದು.
ನಿರುದ್ಯೋಗವೆನ್ನುವುದು ದೇಶದ ಯುವಜನತೆಯ ಆತ್ಮಸ್ಥೈರ್ಯವನ್ನೇ ಕುಂದಿಸುತ್ತಿದೆ. ಇದನ್ನು ನಿವಾರಿಸಲು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೆಲಸ ಒಂದೆಡೆ ನಡೆಯಬೇಕು, ಮತ್ತೊಂದೆಡೆ ದೇಶದ ಯುವಜನರ ಔದ್ಯೋಗಿಕ ಕೌಶಲ್ಯವನ್ನು ವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೈಗಾರಿಕೋದ್ಯಮವನ್ನು ಉತ್ತೇಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ.
ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಕರ್ನಾಟಕದ ಅಗ್ರಸ್ಥಾನವನ್ನು ಮುಂದುವರೆಸಲು ಪೂರಕವಾಗಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಲು ಬೆಂಗಳೂರಿನ ಕಾಡುಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ Technology Innovation Park ಅನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ತಾಂತ್ರಿಕ ಸಂಶೋಧನಾ ಸಂಸ್ಥೆ ಸ್ಥಾಪನೆ ಜೊತೆಗೆ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ವಿನ್ಯಾಸ ಇತ್ಯಾದಿಗಳಿಗೆ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು.
ಯಾವುದೇ ಒಂದು ಉದ್ಯಮ ಪ್ರಾರಂಭಿಸಲು ಒಂದೇ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿ, ಬೇಕಾಗುವ ಎಲ್ಲಾ ಪರವಾನಗಿಗಳನ್ನು ಅದೇ ಪೋರ್ಟಲ್ನಲ್ಲಿ ಸಕಾಲದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಉದ್ಯಮಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಅನುಕೂಲವಾಗಲಿದೆ.
ರಾಜ್ಯ ಸರ್ಕಾರವು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರದ ಸ್ವಾಧೀನದಲ್ಲಿರುವ BEML ಜಮೀನಿನಲ್ಲಿ ಬೃಹತ್ ʻಕೈಗಾರಿಕಾ ಟೌನ್ಷಿಪ್ʼ ಅನ್ನು ಅಭಿವೃದ್ಧಿಪಡಿಸಲಾಗುವುದು.
ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್ ಮತ್ತು ದಕ್ಷಿಣ ಕನ್ನಡದಲ್ಲಿ ರಫ್ತು ಆಧಾರಿತ ಕೈಗಾರಿಕೆಗಳ ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸಲಾಗುವುದು.
ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಒಂದು ಹೊಸ ನೀತಿಯನ್ನು ಜಾರಿಗೆ ತರಲಾಗುವುದು.
ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಪರಿವರ್ತಿಸದೆ ಬಳಸಲು ಅವಕಾಶ ನೀಡಲಾಗುವುದು. ಇದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು.
ಏರೋಸ್ಪೇಸ್ ವಲಯದಲ್ಲಿ ರಾಜ್ಯದ ಬಲವನ್ನು ಮತ್ತಷ್ಟು ವೃದ್ಧಿಸಲು ಮತ್ತು ವಿಶೇಷವಾಗಿ MSME ಗಳ ಮೇಲೆ ಕೇಂದ್ರಿಕರಿಸಲು, ಅತ್ಯಾಧುನಿಕ ಕರ್ನಾಟಕ ಏರೋಸ್ಪೇಸ್ ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ನಲ್ಲಿ ಸ್ಥಾಪಿಸಲಾಗುವುದು.
ರಾಜ್ಯದಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು (Common Facility Center) PPP ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಿದ್ದು, ಇದರಿಂದ ಯಂತ್ರೋಪಕರಣಗಳು, ಉಪಕರಣಗಳು ಮತ್ತು ಸಾಮೂಹಿಕ ಮೂಲಸೌಲಭ್ಯಗಳನ್ನು MSME ಗಳು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ.
ರಾಜ್ಯದ ಸಾರ್ವಜನಿಕ ಉದ್ದಿಮೆಗಳಲ್ಲಿ ಆಧುನೀಕರಣ ಹಾಗೂ ವೃತ್ತಿಪರತೆಯನ್ನು ತರುವ ಮೂಲಕ ತಮ್ಮ ಚಟುವಟಿಕೆಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಉತ್ಪನ್ನ ಮತ್ತು ಸೇವೆಗಳನ್ನು ಪರಿಚಯಿಸಿ, ಮಾರ್ಕೆಟಿಂಗ್ ತಂತ್ರದ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಉತ್ತೇಜನ ನೀಡಲಾಗುವುದು.
ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (KSSIDC) ವತಿಯಿಂದ ಹುಬ್ಬಳ್ಳಿ, ಕಲಬುರಗಿಯ ಚಿತ್ತಾಪುರ, ಉತ್ತರ ಕನ್ನಡದ ಕೋಡ್ಕಣಿ, ಬೆಳಗಾವಿಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ವಿಜಯಪುರದ ಇಂಡಿ ಮತ್ತು ಯಾದಗಿರಿಯ ಶಹಪೂರ ಹೀಗೆ ಏಳು ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಹಂತ ಹಂತವಾಗಿ ಸ್ಥಾಪಿಸಲಾಗುವುದು.
ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ಕೈಮಗ್ಗದ ವಸ್ತ್ರಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಕೈಮಗ್ಗ ವಲಯದಲ್ಲಿ ಸುಸ್ಥಿರ ಉದ್ಯೋಗ ಒದಗಿಸಲು ಸಾಕಷ್ಟು ಅವಕಾಶವಿದೆ. ಈ ಅವಕಾಶದ ಸದ್ಬಳಕೆಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಹಾತ್ಮಾ ಗಾಂಧಿ ವಸ್ತ್ರೋದ್ಯಮ ಕೋಶವನ್ನು ಸ್ಥಾಪಿಸಲಾಗುವುದು. ಈ ಕೋಶವು ವಿನ್ಯಾಸಕಾರರು, ನೇಕಾರರು, ನೂಲು ಬಿಚ್ಚಾಣಿಕೆದಾರರು, ಮತ್ತಿತರ ಭಾಗೀದಾರರನ್ನು ಒಂದೇ ವೇದಿಕೆಯಡಿ ತರುವುದರೊಂದಿಗೆ ಮಾರುಕಟ್ಟೆಯೊಂದಿಗೆ ಸಮನ್ವಯಗೊಳಿಸಲಿದೆ. ಅಲ್ಲದೇ, ಕುಸಿತ ಕಾಣುತ್ತಿರುವ ಕೈಮಗ್ಗ ಉದ್ಯಮದ ಪುನಃಶ್ಚೇತನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ.
ಜವಳಿ ಮತ್ತು ಸಿದ್ದ ಉಡುಪು ನೀತಿಯಡಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು. 10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ, ಮಾಸಿಕ ಗರಿಷ್ಠ
ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ನೇಕಾರರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಕ್ರಮ ವಹಿಸಲಾಗುವುದು.
ಮಂಡ್ಯದಲ್ಲಿರುವ ಮೈಸೂರು ಷುಗರ್ ಕಂಪನಿ ಲಿ., ನಮ್ಮ ರಾಜ್ಯದ ಪ್ರತಿಷ್ಠಿತ ಮತ್ತು ಪ್ರಮುಖ ಕಾರ್ಖಾನೆಯಾಗಿದ್ದು, ಇದು ಹಳೆ ಮೈಸೂರು ಭಾಗದ ಕೃಷಿಕರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಕಂಪನಿಯನ್ನು ಪುನರುಜ್ಜೀವನಗೊಳಿಸಲು ಮತ್ತು 2023-24ನೇ ಸಾಲಿನಲ್ಲಿಯೇ ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸಿ ಲಾಭದಾಯಕವಾಗಿ ನಡೆಸಲು ಈಗಾಗಲೇ ನಮ್ಮ ಸರ್ಕಾರ 50 ಕೋಟಿ ರೂ. ಬಂಡವಾಳ ನೀಡಿದೆ. ದುಡಿಯುವ ಬಂಡವಾಳ ನೀಡುವ ಜೊತೆಗೆ ಕಾರ್ಖಾನೆಯ ಸುಸ್ಥಿರತೆ ಮತ್ತು ಉನ್ನತೀಕರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಸುಸ್ಥಿರ, ಸುರಕ್ಷಿತ ಮತ್ತು ವೈಜ್ಞಾನಿಕ ಗಣಿಗಾರಿಕೆಯನ್ನು ಉತ್ತೇಜಿಸಿ, ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವಶ್ಯಕ ಸುಧಾರಣೆಗಳನ್ನು ಜಾರಿಗೊಳಿಸಲಾಗುವುದು.
ರಾಜ್ಯದಲ್ಲಿ Rare Earth Elements ಗಳಲ್ಲಿ ಒಂದಾದ ಲೀಥಿಯಂ (Lithium) ಖನಿಜಾನ್ವೇಷಣೆಯನ್ನು ಕೈಗೊಂಡು ಹೊಸ ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕ್ರಮವಹಿಸಲಾಗುವುದು.
ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು.
ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಂ. ಎಂ. ಕಲಬುರಗಿ ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಅನ್ನು ಸ್ಥಾಪಿಸಲಾಗುವುದು.
ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದ ಮೂಲಕ ಅವರ ಸಾಹಿತ್ಯ ಹಾಗೂ ಪರಿಸರ ಸಂರಕ್ಷಣೆಯ ಚಿಂತನೆಗಳನ್ನು ಯುವಜನಾಂಗಕ್ಕೆ ಪರಿಚಯಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಎರಡು ಕೋಟಿ ರೂ. ಗಳನ್ನು ಒದಗಿಸಲಾಗುವುದು.
ನಮ್ಮ ರಾಜ್ಯದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಪ್ರಮುಖ ಪಾತ್ರವಹಿಸುತ್ತಿರುವ ರಾಮನಗರ ಜಿಲ್ಲೆಯ ಜಾನಪದ ಲೋಕಕ್ಕೆ ಎರಡು ಕೋಟಿ ರೂ. ಅನುದಾನ ನೀಡಲಾಗುವುದು. ಇದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕ ಸ್ಥಾಪನೆ ಮಾಡಲಾಗುವುದು.
ಬಂಜಾರ ಸಮುದಾಯದ ಸಾಂಸ್ಕೃತಿಕ ಮತ್ತು ಜಾನಪದ ನೃತ್ಯ ಕಲೆಗಳು ನಶಿಸಿ ಹೋಗುತ್ತಿರುವ ಕಾರಣ ಅವರ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಕರ್ನಾಟಕದ ಬುಡಕಟ್ಟು ಸಮುದಾಯದ ಜನರ ಕಲಾಪ್ರತಿಭೆಯನ್ನು ಪರಿಚಯಿಸುವ ಹಿತದೃಷ್ಟಿಯಿಂದ ಮತ್ತು ಅವರ ಸಂಸ್ಕೃತಿ, ಜಾನಪದ ವೈದ್ಯ ಪದ್ಧತಿ, ಜಾನಪದ ಕಲೆಗಳ ಪ್ರದರ್ಶನ, ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದಕ್ಕೆ ಉತ್ತೇಜನ ನೀಡಲು ಬುಡಕಟ್ಟು ಜನಾಂಗದ ಕಲಾವಿದರ ಸಮಾವೇಶವನ್ನು ಆಯೋಜಿಸಲಾಗುವುದು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವುಳ್ಳ ರಾಜ್ಯದ ಕ್ರೀಡಾಪಟುಗಳನ್ನು ತಯಾರಿಸಲು ಬೆಂಗಳೂರಿನಲ್ಲಿ ಬಾಸ್ಕೆಟ್ಬಾಲ್ ಪ್ರಾದೇಶಿಕ ತರಬೇತಿ ಕೇಂದ್ರ ಮತ್ತು ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಅನ್ನು ತಲಾ 10 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಕ್ರೀಡಾ ಚಟುವಟಿಕೆಗಳಲ್ಲಿ ವಿಶೇಷಚೇತನರ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳು ಮತ್ತು ನುರಿತ ತರಬೇತುದಾರರ ಸೇವೆಯನ್ನು ಒದಗಿಸಲು 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಐದು ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು ಮತ್ತು ಕ್ರೀಡಾಪಟುಗಳಿಗೆ ತಂಗಲು ಅನುಕೂಲವಾಗುವಂತೆ ಸುಸಜ್ಜಿತವಾದ ಕ್ರೀಡಾ ವಸತಿ ನಿಲಯವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
ಒಲಂಪಿಕ್ ಹಾಗೂ ಪ್ಯಾರಾಲಿಂಪಿಕ್ ವಿಜೇತರಿಗೆ ಗ್ರೂಪ್ ಎ ಹುದ್ದೆ ಮತ್ತು ಏಷಿಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾ ವಿಜೇತರಿಗೆ ಗ್ರೂಪ್-ಬಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಪ್ರಸಕ್ತ ಸಾಲಿನಿಂದ ಕ್ರಮಕೈಗೊಳ್ಳಲಾಗುವುದು.
ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ. 3 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು.
ಕರ್ನಾಟಕ ಈಜು ಅಸೋಸಿಯೇಷನ್ ಸಹಭಾಗಿತ್ವದಲ್ಲಿ ರಾಜ್ಯದ ಪ್ರತಿಭಾವಂತ ಈಜು ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಲು ತರಬೇತಿಯನ್ನು ನೀಡುವ ಸಲುವಾಗಿ ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ ಎರಡು ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
* ಸಮಾಜದಲ್ಲಿ ಹಲವು ಪೀಳಿಗೆಗಳಿಂದ ತುಳಿತಕ್ಕೊಳಗಾದ, ಅವಕಾಶ ವಂಚಿತರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಅಭ್ಯುದಯಕ್ಕೆ ನಮ್ಮ ಸರ್ಕಾರದ ಬದ್ಧತೆ ಪ್ರಶ್ನಾತೀತ. ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳಿಗೆ ಈ ಹಿಂದೆ, ಅಂದರೆ, 2012-13ನೇ ಸಾಲಿನಲ್ಲಿ ಹಾಗೂ ಅದಕ್ಕೂ ಹಿಂದಿನ ಸಾಲುಗಳಲ್ಲಿ ವೈಜ್ಞಾನಿಕವಾಗಿ ಅನುದಾನ ಹಂಚಿಕೆಯಾಗುತ್ತಿರಲಿಲ್ಲ. ಈ ನ್ಯೂನತೆಯನ್ನು ಸರಿಪಡಿಸುವ ಸಲುವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಜನಸಂಖ್ಯೆಯನ್ನಾಧರಿಸಿ, ಅವರ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡುವ ಹಾಗೂ ನಿರ್ದಿಷ್ಟ ಉದ್ದೇಶಗಳಿಗೇ ಅನುದಾನ ಬಳಕೆಯಾಗುವ ಕುರಿತು ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ, 2013ನ್ನು (SCSP/TSP Act, 2013) ಜಾರಿಗೆ ತಂದ ಶ್ರೇಯ ನಮ್ಮ ಸರ್ಕಾರದ್ದಾಗಿದೆ.
* ಈ ಯೋಜನೆಯ ಅನುದಾನ ಹಂಚಿಕೆಯಲ್ಲಿ ವ್ಯಾಪಕ ಬದಲಾವಣೆಯಾಗಿದ್ದು, 2013-14ರಲ್ಲಿ 8,988 ಕೋಟಿ ರೂ. ಇದ್ದ ಹಂಚಿಕೆ, 2014-15 ರಲ್ಲಿ 13,043 ಕೋಟಿ ರೂ. ಗಳಿಗೆ ಏರಿಕೆಯಾಗಿರುತ್ತದೆ. ನಂತರದ ಸಾಲುಗಳಲ್ಲಿ ಅಂದರೆ, 2015-16 ರಿಂದ 2022-23ರ ವರೆಗಿನ ಸಾಲುಗಳಲ್ಲಿ ಈ ಯೋಜನೆಯಡಿ ಆಯವ್ಯಯದ ಶೇ. 24.1ರಷ್ಟು ಅನುದಾನ ಈ ಸಮುದಾಯಕ್ಕೆ ಕಡ್ಡಾಯವಾಗಿ ದೊರಕಿಸಿಕೊಟ್ಟಂತಾಗಿದೆ. ಆದಾಗ್ಯೂ, ಹಿಂದಿನ ಸರ್ಕಾರದ ಅವಧಿಯಲ್ಲಿ ಒಟ್ಟಾರೆ ಅನುದಾನ ಹಂಚಿಕೆಯು ನಿರಾಶಾದಾಯಕವಾಗಿತ್ತು. 2023ರ ಫೆಬ್ರವರಿ ತಿಂಗಳಿನಲ್ಲಿ ಹಿಂದಿನ ಸರ್ಕಾರ ಮಂಡಿಸಿದ್ದ ಆಯವ್ಯಯದಲ್ಲಿ SCSP/TSP ಯೋಜನೆಗೆ ಹಂಚಿಕೆ ಮಾಡಿದ್ದ 30,21೫ ಕೋಟಿ ರೂ. ಅನುದಾನವನ್ನು, ನಾನು ಈ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ 24,333 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ 9,960 ಕೋಟಿ ರೂ. ಸೇರಿದಂತೆ ಒಟ್ಟಾರೆ 34,294 ಕೋಟಿ ರೂ.ಗಳಿಗೆ ಹೆಚ್ಚಿಸಿ, 4,079 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ಒದಗಿಸಿರುತ್ತೇನೆ. ಇದು ಈ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಮ್ಮ ಸರ್ಕಾರವು ನೀಡುವ ಆದ್ಯತೆಗೆ ಸ್ಪಷ್ಟ ನಿದರ್ಶನವಾಗಿದೆ.
* SCSP/TSP ಅಧಿನಿಯಮ, 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳ ಒಳಿತಿಗೇ ಬಳಕೆಯಾಗಬೇಕೆನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ.
ಈ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಮತ್ತು ಚಿಂತಕರ ಬಹುದಿನಗಳ ಒತ್ತಾಯದನ್ವಯ ಕಾಯ್ದೆಯ ಸೆಕ್ಷನ್ ೭(ಡಿ) ಅನ್ನು ಕೈಬಿಡಲಾಗುವುದು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಹತ್ತು ಕ್ರೈಸ್ ವಸತಿ ಶಾಲೆಗಳಲ್ಲಿ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಉತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯವನ್ನು ಒದಗಿಸಲು ತಲಾ ಎರಡು ಕೋಟಿ ರೂ.ಗಳಂತೆ ಒಟ್ಟು 20 ಕೋಟಿ ರೂ. ನೀಡಲಾಗುವುದು.
* ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ವಿಶ್ವದಲ್ಲಿ 250 ರೊಳಗೆ University Ranking ಹೊಂದಿರುವ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಕೈಗೊಳ್ಳುವ ಸಲುವಾಗಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಕ್ಕನುಗುಣವಾಗಿ ವ್ಯಾಸಂಗದ ಸಂಪೂರ್ಣ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ನೀಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 36 ಕೋಟಿ ರೂ. ಅನುದಾನ ಒದಗಿಸಲಾಗಿದೆ.
* ISEC ಸಂಸ್ಥೆಯಲ್ಲಿ Ph.D. ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನೀಡಲು ಎರಡು ಕೋಟಿ ರೂ. Corpus Fund ನೀಡಲಾಗುವುದು.
* ʻಸ್ವಾವಲಂಬಿ ಸಾರಥಿʼ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇ.75 ರಷ್ಟು, ಗರಿಷ್ಠ ನಾಲ್ಕು ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು.
* ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಎರಡು ಕೋಟಿ ರೂ.ವರೆಗೆ ಸರ್ಕಾರದಿಂದ ಸಮಾನಾಂತರ ಖಾತ್ರಿ ನೀಡುವ ಯೋಜನೆ ಜಾರಿಯಲ್ಲಿದ್ದು, ಸಮಾನಾಂತರ ಖಾತ್ರಿಯನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆಯುವ ಸಾಲಕ್ಕೂ ವಿಸ್ತರಿಸಲಾಗುವುದು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ (ಇಡಿಪಿ) ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಂದು ಲಕ್ಷ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುವುದು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ವಾಣಿಜ್ಯ ಬ್ಯಾಂಕ್ಗಳಿಂದ ಪಡೆಯುವ ಸಾಲಕ್ಕೆ ಗರಿಷ್ಠ ಶೇ.20ರಷ್ಟು ಅಥವಾ ಒಂದು ಲಕ್ಷ ರೂ.ಗಳು ಮೀರದಂತೆ ಸಾಲ ಸಹಾಯಧನ ನೀಡಲಾಗುವುದು.
* ಚರ್ಮ ಆಧಾರಿತ ಸಾಂಪ್ರದಾಯಿಕ ಕುಶಲಕರ್ಮಿಗಳ ಕುಟುಂಬಗಳ 100 ಯುವಜನರಿಗೆ ಚರ್ಮ ಉದ್ಯಮದಲ್ಲಿನ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳು ಹಾಗೂ ಮಾರುಕಟ್ಟೆಯ ಬೇಡಿಕೆಗಳಿಗೆ ಪರಿಚಯಿಸಲು ಚರ್ಮ ಆಧಾರಿತ ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಾದ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತರಬೇತಿ ಪಡೆಯಲು ಕಳುಹಿಸಲಾಗುವುದು.
* ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿರಿಯ ನಾಗರಿಕರ ಆರೈಕೆ ಮತ್ತು ನೆರವಿಗಾಗಿ ವೃದ್ಧಾಶ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ (CRC) ಮತ್ತು NGO ಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು.
* ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವನ್ನು ದೌರ್ಜನ್ಯ ತಡೆ ಅಧಿನಿಯಮದಡಿ ರಕ್ಷಣಾ ಕೋಶವನ್ನಾಗಿ ಘೋಷಿಸಲಾಗಿದೆ.
ಈ ಕೋಶವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮವಹಿಸಲಾಗುವುದು.
* ಪರಿಶಿಷ್ಟ ಪಂಗಡಗಳ ಜನಾಂಗದಲ್ಲಿ ಸೋಲಿಗ ಸಮುದಾಯ ಒಳಗೊಂಡಂತೆ ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ರಾಜ್ಯದ ೮ ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು ವಾರ್ಷಿಕ ಆರು ತಿಂಗಳುಗಳಿಗೆ ನೀಡಲಾಗುತ್ತಿದ್ದು, ಇದನ್ನು 12 ತಿಂಗಳಿಗೆ ವಿಸ್ತರಿಸಲಾಗುವುದು. ಇದಕ್ಕೆ ವಾರ್ಷಿಕವಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಅರಣ್ಯ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಬುಡಕಟ್ಟು ಪ್ರದೇಶಗಳಲ್ಲಿ 100 ಅರಣ್ಯ ಉತ್ಪನ್ನ ಘಟಕಗಳನ್ನು TRIFED ಸಮನ್ವಯದಲ್ಲಿ ಸ್ಥಾಪಿಸಲಾಗುವುದು.
* ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದರೂ, ಗಂಡು-ಹೆಣ್ಣು, ಮೇಲು-ಕೀಳು ಎಂಬ ತಾರತಮ್ಯ ಸಮಾಜದಲ್ಲಿ ಹಾಸುಹೊಕ್ಕಾಗಿ ಬೆಳೆದಿರುವುದು ಸುಳ್ಳಲ್ಲ. ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಈ ತಾರತಮ್ಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ಹಿನ್ನೆಲೆಯಲ್ಲಿ ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ.ಗಳ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಿ ನಮ್ಮ ಸರ್ಕಾರ ಮಹಿಳೆಯರನ್ನು ನಿಜವಾದ ಅರ್ಥದಲ್ಲಿ ʻಗೃಹಲಕ್ಷ್ಮಿʼಯಾಗಿಸಿದೆ. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಾಜಿ ದೇವದಾಸಿಯರೂ ಸಹ ಈ ಯೋಜನೆಯ ವ್ಯಾಪ್ತಿಗೆ ಸೇರುತ್ತಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಾಗುತ್ತದೆ. ಬಡತನದಲ್ಲಿ ಗಣನೀಯ ಇಳಿಕೆಯಾಗುತ್ತದೆ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಕುಟುಂಬಗಳಿಗೆ ತುಸು ನೆಮ್ಮದಿ ಸಿಗುವಂತಾಗುತ್ತದೆ. ಖರೀದಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ. ಪಶುಪಾಲನೆ, ಗುಡಿ ಕೈಗಾರಿಕೆಯಂತಹ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಗರ್ಭಿಣಿಯರು, ತಾಯಂದಿರು, ಮಹಿಳಾ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತ ಮಹಿಳೆಯರು ಕೆಲಸ ಮಾಡುವ ಅನಿವಾರ್ಯತೆಯನ್ನು ನಿವಾರಿಸುತ್ತದೆ.
* ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂ.ಗಳನ್ನು ವರ್ಗಾಯಿಸಲಾಗುವುದು. ಈ ಯೋಜನೆಗಾಗಿ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ.
* ವಿಶೇಷಚೇತನರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢತೆಯನ್ನು ಒದಗಿಸಲು ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು. ಇದಲ್ಲದೆ, ನೋಂದಣಿಯಾಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು.
* ಮಹಿಳಾ ಉದ್ಯಮಿಗಳು ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ, ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿ ರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು.
* 2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿ NGOಗಳ ಸಹಯೋಗದೊಂದಿಗೆ ಎರಡು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
* ರಾಜ್ಯದಲ್ಲಿನ ಆಸಿಡ್ ದಾಳಿ ಸಂತ್ರಸ್ತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಇವರಿಗೆ ಸ್ವಯಂ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಐದು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲು ಎರಡು ಕೋಟಿ ರೂ. ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು.
* ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. ಆಯವ್ಯಯ ನಿಗದಿಪಡಿಸಲಾಗಿದೆ.
* ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2023-24 ನೇ ಸಾಲಿನಲ್ಲಿ 51,229 ಕೋಟಿ ರೂ. ಅನುದಾನ ಒದಗಿಸಲಾಗಿದೆ.
* ರಾಜ್ಯದಲ್ಲಿ ಈಗಾಗಲೇ ಆರಂಭಿಸಲಾಗಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 450 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ಕಾರವಾರ ಮತ್ತು ಕೊಡಗು ಜಿಲ್ಲೆಗಳಲ್ಲಿ 450 ಬೆಡ್ ಆಸ್ಪತ್ರೆಗಳ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು.
* ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು.
* ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರ್ಯಾರಂಭ ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* NIMHANS ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ.ಗಳ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಜೊತೆಯಲ್ಲಿ ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಖಾಯಿಲೆಯ (NAFLD) ರೋಗಿಗಳಲ್ಲಿ ಸಿರೋಸಿಸ್ ಮತ್ತು ಕ್ಯಾನ್ಸರ್ ಪತ್ತೆ ಹಚ್ಚಲು ಒಂದು FibroScan ಅನ್ನು ಒದಗಿಸಲಾಗುವುದು.
* ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (GIMS) 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 70 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
* ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಹಾಗೂ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ (Allied Health Sciences) ಕಾಲೇಜುಗಳನ್ನು ಸ್ಥಾಪಿಸಲಾಗುವುದು.
* ಮೈಸೂರು ಮತ್ತು ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್ಗಳ (Trauma Care Center) ಕಾರ್ಯಾಚರಣೆಗೆ 30 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ರಾಜ್ಯದ ಸಾವಿರಾರು ಬಡಜನರಿಗೆ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು (Kidwai Memorial Institute of Oncology) ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಕಲಬುರಗಿ ಮತ್ತು ಮೈಸೂರಿನಲ್ಲಿರುವ ಪ್ರಾದೇಶಿಕ ಘಟಕಗಳಲ್ಲಿ ಸೌಲಭ್ಯಗಳ ಸುಧಾರಣೆಗೆ 20 ಕೋಟಿ ರೂ. ಒದಗಿಸಲಾಗುವುದು.
* ಚಿತ್ರದುರ್ಗದ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.
* ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಏಕಬಳಕೆಯ ಡಯಾಲೈಸರ್ಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸುವ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 173 ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 92 ಕೋಟಿ ರೂ. ಗಳನ್ನು ಒದಗಿಸಲಾಗುವುದು.
* ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಈಗಾಗಲೇ 23 PHC ಗಳನ್ನು CHC ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ CHC ಗಳನ್ನು ಕಾರ್ಯಗತಗೊಳಿಸಲು ಬೇಕಿರುವ ಅಗತ್ಯ ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಲು 70 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸಮಗ್ರವಾದ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 25 ಕೋಟಿ ರೂ. ಗಳನ್ನು ಒದಗಿಸಲಾಗುವುದು.
* ರಾಜ್ಯವು ಕಳೆದ ವರ್ಷ ನಿಮ್ಹಾನ್ಸ್ ಸಹಯೋಗದೊಂದಿಗೆ ಮೆದುಳಿನ ಆರೋಗ್ಯ ಆರೈಕೆ ಸೇವೆಗಳನ್ನು ಉತ್ತೇಜಿಸಲು ಮೂರು ಜಿಲ್ಲೆಗಳಲ್ಲಿ ʻಬ್ರೈನ್ ಹೆಲ್ತ್ ಇನಿಶಿಯೇಟಿವ್ʼ (Brain Health Initiative) ಎಂಬ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಯಶಸ್ವಿ ಪ್ರಾಯೋಗಿಕ ಅನುಷ್ಠಾನದ ನಂತರ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
* ʻಆಶಾಕಿರಣʼ ಎಂಬ ಕಾರ್ಯಕ್ರಮದಡಿಯಲ್ಲಿ ಅಭಿಯಾನ ರೂಪದಲ್ಲಿ ಕಣ್ಣಿನ ಶಿಬಿರಗಳು, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳ ಚಟುವಟಿಕೆಗಳನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವುದು. 2023-24ನೇ ಸಾಲಿನಲ್ಲಿ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
* ಸಮಾಜದ ದುರ್ಬಲ ವರ್ಗಗಳಲ್ಲಿ ಕ್ಷಯರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಮುದಾಯ ಆಧಾರಿತ ತಪಾಸಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ, ಪ್ರತಿ ಜಿಲ್ಲೆಗೆ ಎರಡರಂತೆ ಕೈಚಾಲಿತ-ಕ್ಷ-ಕಿರಣ (Hand Held X-ray) ಉಪಕರಣವನ್ನು ಒದಗಿಸಲಾಗುವುದು. ಪ್ರತಿ X-ray ಯಂತ್ರಕ್ಕೆ 20 ಲಕ್ಷ ರೂ. ದಂತೆ ಒಟ್ಟು ಮೂರು ಕೋಟಿ ರೂ. ಒದಗಿಸಲಾಗುವುದು.
* ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳನ್ನು ಪತ್ತೆಹಚ್ಚಲು ಮತ್ತು ಅಗತ್ಯ ಔಷಧಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ವಿಭಾಗಗಳ ಎಂಟು ಜಿಲ್ಲೆಗಳಲ್ಲಿ ಸಮಗ್ರ ತಪಾಸಣೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು.
* ಕರ್ನಾಟಕ ರತ್ನ ಡಾ|| ಪುನೀತ್ ರಾಜ್ಕುಮಾರ್ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು.
* ರಾಜ್ಯದಲ್ಲಿ 15 ಸಿ.ಟಿ ಸ್ಕ್ಯಾನಿಂಗ್ ಮತ್ತು ಆರು ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರಗಳನ್ನು ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಈಗಾಗಲೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಿ, ಉಚಿತ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುತ್ತಿದೆ. ಈ ಸೇವೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು.
* ರಾಜ್ಯವು ಈಗಾಗಲೇ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವಂತೆ ಆರೋಗ್ಯ ತಂತ್ರಜ್ಞಾನದ ಆವಿಷ್ಕಾರಗಳ ಅಳವಡಿಕೆಯಲ್ಲಿಯೂ ಪ್ರಮುಖ ಕೇಂದ್ರವಾಗುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ತಂತ್ರಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.
* ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ ಹಾಗೂ ಆರೋಗ್ಯ ದಾಖಲಾತಿಗಳ ಡಿಜಿಟಲೀಕರಣ ಸೇರಿದಂತೆ ಇಲಾಖೆಯ ಇನ್ನಿತರ ಎಲ್ಲಾ ಅಂತರ್ಜಾಲ ಉಪಕ್ರಮಗಳನ್ನು ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿಯನ್ನು (Karnataka Digital Health Society) ಸ್ಥಾಪನೆ ಮಾಡಲಾಗುವುದು.
* ಶಾಲಾ ಶಿಕ್ಷಣ ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ, ಆ ಮೂಲಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವು ಮಕ್ಕಳ ಶಾರೀರಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ, ಜ್ಞಾನ ಮತ್ತು ಮನೋವಿಕಾಸಕ್ಕೆ ಪೂರಕವಾಗಿರಬೇಕು. ಶಿಕ್ಷಣವು ಬಾಂಧವ್ಯ, ಭ್ರಾತೃತ್ವ, ಸಾಮರಸ್ಯ ಮತ್ತು ಸಹಬಾಳ್ವೆಯ ಮನೋಭಾವ ಮೂಡಿಸುವಂತಿರಬೇಕು. ಈ ಆಶಯಕ್ಕೆ ವಿರುದ್ಧವಾದ ಪಠ್ಯಗಳನ್ನು ಹಿಂದಿನ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆಗೊಳಿಸಿದ್ದು, ಅವುಗಳನ್ನು ಪ್ರಸಕ್ತ ಸಾಲಿನಿಂದಲೇ ಕೈಬಿಡಲು ಕ್ರಮ ಕೈಗೊಳ್ಳಲಾಗಿದೆ.
* ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ.ಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
* ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಕಡಿಮೆ ಶೌಚಾಲಯಗಳಿರುವ
5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
*ಹಳೆಯ ಶಾಲಾ ಕಾಲೇಜು ಕಟ್ಟಡಗಳು ಹಾಗೂ ಮಳೆಯಿಂದಾಗಿ ಶಿಥಿಲಗೊಂಡಿರುವ 3,833 ಶಾಲೆಗಳು ಹಾಗೂ 724 ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಬಳಕೆಗೆ ಯೋಗ್ಯಗೊಳಿಸಲಾಗುವುದು.
* ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣೆಗಾಗಿ ನೀಡುತ್ತಿರುವ ಅನುದಾನವನ್ನು ಕನಿಷ್ಠ 20,000 ರೂ. ದಿಂದ 45,000 ರೂ. ಗಳವರೆಗೆ ಹೆಚ್ಚಿಸಿ 4೭,2೭೨ ಶಾಲೆಗಳು ಹಾಗೂ 1,231 ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ ಒಟ್ಟಾರೆಯಾಗಿ 153 ಕೋಟಿ ರೂ. ಅನುದಾನ ಒದಗಿಸಲಾಗುವುದು.
* ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ/ ಶೇಂಗಾ ಚಿಕ್ಕಿ/ ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ 280 ಕೋಟಿ ರೂ.ಗಳ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು.
* ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ನ್ಯೂನತೆಯನ್ನು ಹೋಗಲಾಡಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ʻಮರುಸಿಂಚನʼ ಎಂಬ ಹೊಸ ಯೋಜನೆಯಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು ಪ್ರೌಢ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು.
*ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸ್ಯಾಟ್ಸ್ ತಂತ್ರಾಂಶವನ್ನು SATS 2.0 ಎಂದು ಉನ್ನತೀಕರಿಸಲಾಗುವುದು.
* ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರಲು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್ಗಳನ್ನು ಸ್ಥಾಪಿಸಲಾಗುವುದು.
2023-24ನೇ ಸಾಲಿನಲ್ಲಿ ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ನಾಲ್ಕು ಪ್ರಯೋಗಾಲಯಗಳನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ
ʻಸಸ್ಯ ಶ್ಯಾಮಲʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
* ರಾಜ್ಯದ ಸಾಹಿತಿಗಳ ಹಾಗೂ ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಖರೀದಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು.
ಉನ್ನತ ಶಿಕ್ಷಣ
* ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವಂತಹ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಏಕರೂಪದ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲ. ರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ, ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನೀಡುವ ನಿಟ್ಟಿನಲ್ಲಿ ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು.
* ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಯೂನಿವರ್ಸಿಟಿಯನ್ನು (UVCE) ಉನ್ನತೀಕರಣಗೊಳಿಸಲು ಮೂಲಭೂತ ಸೌಕರ್ಯಕ್ಕಾಗಿ 25 ಕೋಟಿ ರೂ. ಅನುದಾನ ಒದಗಿಸಲಾಗುವುದು.
* ನಕಲಿ ಅಂಕಪಟ್ಟಿ ಹಾವಳಿಯನ್ನು ತಪ್ಪಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು Academic Bank of Credits ನಲ್ಲಿ ನೋಂದಾಯಿಸಿಕೊಂಡು ಹಾಗೂ ನೇಮಕಾತಿಯಲ್ಲಿ NAD/Digilocker ನಲ್ಲಿನ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲು ಕ್ರಮಕೈಗೊಳ್ಳಲಾಗುವುದು.
* ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13,169 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ 224 ವಸತಿ ನಿಲಯಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗುವುದು.
* ಉನ್ನತ ಶಿಕ್ಷಣ ಇಲಾಖೆಯಡಿ ಎಲ್ಲಾ ಶಿಷ್ಯ ವೇತನ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಏಕ ಶಿಷ್ಯ ವೇತನ ಕಾರ್ಯಕ್ರಮದಡಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು.
* ಸಾರ್ವಜನಿಕ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಯನ್ನು ಉತ್ತಮಪಡಿಸಲು 10 ಸುಶಾಸನ ಸೂಚ್ಯಂಕಗಳನ್ನು (Good Governance Indicators) ರಚಿಸಲಾಗಿದ್ದು, ಇದರನ್ವಯ ಅತ್ಯುತ್ತಮ ಸಾಧನೆ ಮಾಡುವ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ. ಗಳಂತೆ ಪ್ರೋತ್ಸಾಹ ಧನ ನೀಡಲಾಗುವುದು.
* ವೃತ್ತಿ ಚೈತನ್ಯ ಯೋಜನೆಯಡಿಯಲ್ಲಿ ಇಲಾಖೆಯ ಸುಮಾರು 7,800 ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಯೋಜಿಸಲಾಗುವುದು.
* ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ Ph.D. ಸೀಟುಗಳನ್ನು ಭರ್ತಿ ಮಾಡುವ ವಿಧಾನದಲ್ಲಿ ಏಕರೂಪತೆಯನ್ನು ತರಲಾಗುವುದು. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ Ph.D. ಸೀಟುಗಳಿಗೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಶೇ.40 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು.
* ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಜವಳಿ ತಂತ್ರಜ್ಞಾನ ವಿಭಾಗವನ್ನು ರಾಷ್ಟ್ರೀಯ Technical Textile ಅಭಿಯಾನ ಮತ್ತು ಪಿಎಂ-ಮಿತ್ರ ಯೋಜನೆಗಳಡಿ Smart and Technical Textile Centre ಆಗಿ ಉನ್ನತೀಕರಿಸಲಾಗುವುದು.
* ರಾಜ್ಯದ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಿಟಿಷ್ ಕೌನ್ಸಿಲ್ ಮತ್ತು ಪ್ರಾದೇಶಿಕ ಆಂಗ್ಲ ಸಂಸ್ಥೆಯ ಸಹಕಾರದೊಂದಿಗೆ ವ್ಯಾವಹಾರಿಕ ಆಂಗ್ಲ ತರಗತಿಗಳನ್ನು ಪ್ರಾರಂಭಿಸಲಾಗುವುದು.
* ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳನ್ನು ಹಾಗೂ ಪಠ್ಯ ವಿಷಯಗಳನ್ನು ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು.
* ಜಲಸಂಪನ್ಮೂಲ ಇಲಾಖೆಯಡಿ ದಿನಾಂಕ:1-4-2023ರವರೆಗೆ ಅನುಮೋದಿಸಲಾಗಿರುವ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂ. ಗಳನ್ನು ಒದಗಿಸುವ ಅವಶ್ಯಕತೆಯಿದೆ. ಈ ಯೋಜನೆಗಳ ವೆಚ್ಚವು ಕಾಮಗಾರಿ ಹಾಗೂ ಭೂಸ್ವಾಧೀನ ವೆಚ್ಚ ಹೆಚ್ಚಳದ ಕಾರಣ
* 25,000 – 40,000 ಕೋಟಿ ರೂ. ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೇ ಕಳೆದ 6 ತಿಂಗಳ ಅವಧಿಯಲ್ಲಿ 25,548 ಕೋಟಿ ರೂ. ಅಂದಾಜು ವೆಚ್ಚದ 1,274 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಾಲನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಆಯವ್ಯಯ ಹಂಚಿಕೆ ವಾರ್ಷಿಕ ಸರಾಸರಿ 20,000 ಕೋಟಿ ರೂ. ಗಳಷ್ಟಿದ್ದು, ಅನುಮೋದಿಸಿರುವ ಯೋಜನೆಗಳ ಅಂದಾಜು ಮೊತ್ತ ಇದರ ಐದು ಪಟ್ಟು ಹೆಚ್ಚಾಗಿರುವುದು ವಿತ್ತೀಯ ಶಿಸ್ತಿನ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ಕಳೆದ ಆರು ತಿಂಗಳ ಅವಧಿಯಲ್ಲಿಯೇ ಇಲಾಖೆಯ ವಾರ್ಷಿಕ ಆಯವ್ಯಯ ಹಂಚಿಕೆಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಾಲನೆ ನೀಡಿರುವುದು ವಿತ್ತೀಯ ಅಶಿಸ್ತಿನ ಪರಮಾವಧಿಯಲ್ಲದೆ ಇನ್ನೇನು? ಹಿಂದಿನ ಸರ್ಕಾರದ ಈ ವಿವೇಚನಾ ರಹಿತ ಕ್ರಮಗಳಿಂದಾಗಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲದಂತಾಗಿದೆ.
* ಜಲ ಸಂಪನ್ಮೂಲ ಇಲಾಖೆಯಡಿ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಸುಮಾರು 25,948 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು.
* ಪ್ರಸಕ್ತ ಸಾಲಿನಲ್ಲಿ ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 39,134 ಹೆಕ್ಟೇರ್ ಅಚ್ಚುಕಟ್ಟು ಸ್ಥಿರೀಕರಣ ಮಾಡಲಾಗುವುದು.
* ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು.
*ನಮ್ಮ ಸರ್ಕಾರದ ಅವಧಿಯಲ್ಲಿ ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಚಾಲನೆಗೊಳಿಸಿದ್ದ 12,912 ಕೋಟಿ ರೂ. ಮೊತ್ತದ ಎತ್ತಿನ ಹೊಳೆ ಯೋಜನೆಯನ್ನು ಹಿಂದಿನ ಸರ್ಕಾರವು ಸಕಾಲದಲ್ಲಿ ಪೂರ್ಣಗೊಳಿಸದ ಕಾರಣ ದರ ಹೆಚ್ಚಳಗೊಂಡು ಈ ಯೋಜನೆಯು 23,252 ಕೋಟಿ ರೂ. ಮೊತ್ತಕ್ಕೆ ಪರಿಷ್ಕೃತಗೊಂಡಿದೆ. ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.
* ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಹಾಗೂ ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. Compensatory afforestationಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು.
* ಮಧ್ಯ ಕರ್ನಾಟಕದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದಾಗ್ಯೂ, ರಾಷ್ಟ್ರೀಯ ಯೋಜನೆಯನ್ನಾಗಿ ಇಲ್ಲಿಯವರೆಗೂ ಅಧಿಕೃತವಾಗಿ ಅನುಮೋದಿಸಿರುವುದಿಲ್ಲ. ಕೇಂದ್ರ ಸರ್ಕಾರವು
* 2023-24ನೇ ಸಾಲಿನ ತನ್ನ ಆಯವ್ಯಯದಲ್ಲಿ 5,300 ಕೋಟಿ ರೂ.ಗಳ ಅನುದಾನವನ್ನು ಭದ್ರಾ ಯೋಜನೆಗೆ ಘೋಷಿಸಿದ್ದು ಸದರಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆಯ ಮೇಲೆ ಕ್ರಮವಹಿಸಲಾಗುವುದು.
* ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ
3.90 ಟಿ.ಎಂ.ಸಿ. ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಅವಶ್ಯಕವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು.
* ಕೇಂದ್ರ ಸರ್ಕಾರದ PMKSY-AIBP ಯೋಜನೆಯಡಿ 2021-26ನೇ ಅವಧಿಗೆ ಪರಿಗಣಿಸಲಾದ ಪಟ್ಟಿಯಲ್ಲಿ ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1 ಮತ್ತು 2ರ ವಿಸ್ತರಣೆ ಹಾಗೂ ಸನ್ನತಿ ಏತ ನೀರಾವರಿ ಯೋಜನೆಗಳನ್ನು ಗುರುತಿಸಲಾಗಿದೆ. ಸದರಿ ಯೋಜನೆಗಳಿಗೆ ಸಕ್ಷಮ ಪ್ರಾಧಿಕಾರಗಳ ತೀರುವಳಿ ಪಡೆದು, ಕೇಂದ್ರ ಸಹಾಯಧನ ಪಡೆಯಲು ಆದ್ಯತೆಯ ಕ್ರಮ ಜರುಗಿಸಲಾಗುವುದು.
* ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನಾ ಜಲಾಶಯ (Balancing reservoir) ನಿರ್ಮಾಣ ಯೋಜನೆಯನ್ನು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ, ಸಹಮತಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು.
* ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಹಂಚಿಕೆಯಾಗಿರುವ 130 ಟಿ.ಎಂ.ಸಿ ನೀರಿನ ಬಳಕೆಗಾಗಿ ಯೋಜನಾ ಕಾಮಗಾರಿಗಳ ಜೊತೆಗೆ ಭೂಸ್ವಾಧೀನತೆ ಹಾಗೂ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
ಸಣ್ಣ ನೀರಾವರಿ
* ನಮ್ಮ ಸರ್ಕಾರದ ಹಿಂದಿನ ಅವಧಿಯ ಅಂತ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ 5,655 ಕೋಟಿ ರೂ. ಮೊತ್ತದ ಬಾಕಿ ಕಾಮಗಾರಿಗಳಿದ್ದು, ನಿಕಟ ಪೂರ್ವ ಸರ್ಕಾರವು ತಮ್ಮ ಅವಧಿಯ ಅಂತ್ಯಕ್ಕೆ ಇದನ್ನು 12,729 ಕೋಟಿ ರೂ. ಗಳಿಗೆ ಹೆಚ್ಚಿಸಿದೆ. ಹಾಗೆಯೇ 2017-18 ರಲ್ಲಿ 440 ಕೋಟಿ ರೂ.ಗಳ ಬಿಲ್ಲುಗಳು ಪಾವತಿಗೆ ಬಾಕಿಯಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಇದು ಸುಮಾರು 2,000 ಕೋಟಿ ರೂ. ಗಳಿಗೆ ಏರಿದೆ. ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತಿನಿಂದಾಗಿ ಬಾಕಿ ಉಳಿದಿರುವ ಬಾಧ್ಯತೆಗಳ ನೈಜತೆಯನ್ನು ಪರಿಶೀಲಿಸಿ ತೀರುವಳಿಗೊಳಿಸಲು ಕ್ರಮವಹಿಸಲಾಗುವುದು.
* ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ
ಕೆ.ಸಿ. ವ್ಯಾಲಿ ಮತ್ತು ಹೆಚ್.ಎನ್. ವ್ಯಾಲಿ ಯೋಜನೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿ ಈ ಜಿಲ್ಲೆಗಳ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡು ರೈತರು ಸಂತಸಗೊಂಡಿದ್ದಾರೆ. ಪ್ರಸ್ತುತ ಎರಡನೇ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 296 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 529 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
* ಕೆರೆಗಳ ಸುತ್ತ ಜೀವಪರಿಸರವನ್ನು ಉಳಿಸಿಕೊಂಡು, ಅವುಗಳ ಪುನರುಜ್ಜೀವನಗೊಳಿಸುವುದಕ್ಕಾಗಿ ಕೆರೆಗಳ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸಿ ಕೆರೆ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಿ ಜಲಬಳಕೆ ಮಾಡಲು ಅರ್ಥಪೂರ್ಣ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು.
* ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂ. ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಅದೇ ರೀತಿ ಶೇ. 3 ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ.ಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ.
* ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುವಾಗುವಂತೆ ಗೋದಾಮು ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ. ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರವು ಶೇ. 7 ರಷ್ಟು ಬಡ್ಡಿ ಸಹಾಯಧನ ನೀಡಲಿದೆ.
* ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ನಾಲ್ಕು ಚಕ್ರದ ಪಿಕ್ಅಪ್ ವ್ಯಾನ್ (Pick-up Van) ಖರೀದಿಸಲು ಏಳು ಲಕ್ಷ ರೂ. ವರೆಗಿನ ಸಾಲವನ್ನು ಶೇ. ೪ರ ಬಡ್ಡಿ ದರದಲ್ಲಿ ವಿತರಿಸಲಾಗುವುದು.
* ಶೀಘ್ರ ಹಾಳಾಗುವ ಹಣ್ಣು, ಹೂವು, ತರಕಾರಿಗಳ ಬೆಲೆ ಕುಸಿತದಿಂದ ರೈತರು ಒತ್ತಡದ ಮಾರಾಟ ಮಾಡುವುದನ್ನು ತಪ್ಪಿಸಿ, ನ್ಯಾಯಯುತ ಬೆಲೆ ಒದಗಿಸುವುದಕ್ಕೆ ನೆರವಾಗಲು ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ KAPPEC ಸಹಯೋಗದೊಂದಿಗೆ ಮಿನಿ ಶೀತಲ ಗೃಹಗಳನ್ನು ಸ್ಥಾಪಿಸಲಾಗುವುದು.
* ಕೃಷಿ ಉತ್ಪನ್ನ ಮಾರುಕಟ್ಟೆಗಳು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಒದಗಿಸಿ, ಅವರ ಹಿತ ಕಾಯುವ ಸಂಸ್ಥೆಗಳಾಗಬೇಕು ಎಂಬ ಆಶಯ ನಮ್ಮ ಸರ್ಕಾರದ್ದಾಗಿದೆ. ಈ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲಪಡಿಸಿ, ಆನ್ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಯಿತು.
* ಹಿಂದಿನ ಸರ್ಕಾರವು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸದೃಢ ಮಾರುಕಟ್ಟೆ ಜಾಲವನ್ನು ದುರ್ಬಲಗೊಳಿಸಿ ಎ.ಪಿ.ಎಂ.ಸಿ ಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತರ ಬದುಕಿನ ಅನಿಶ್ಚಿತತೆಗೆ ಕಾರಣವಾಗಿದೆ. ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯ ಮೊದಲು, 2018-19 ರಲ್ಲಿ ರಾಜ್ಯದ 167 ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ 570 ರಿಂದ 600 ಕೋಟಿ ರೂ. ಗಳಷ್ಟಿದ್ದು, 2022-23 ರಲ್ಲಿ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯ ನಂತರ ಕೇವಲ 193 ಕೋಟಿ ರೂ.ಗಳಿಗೆ ಕುಸಿದಿದೆ. ಅಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿದ, ಶೋಷಣೆಗೆ ಒಳಪಡಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೈತರ ಹಿತರಕ್ಷಣೆ ಮಾಡಲು ನಮ್ಮ ಸರ್ಕಾರವು ಸದರಿ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿದೆ.
ʻಕಾಯಕ ನಿಧಿʼ ಯೋಜನೆಯಡಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಅವರ ಶವಸಂಸ್ಕಾರಕ್ಕಾಗಿ ನೀಡುವ ಮೊತ್ತವನ್ನು 10,000 ರೂ. ಗಳಿಂದ 25,000 ರೂ. ಗಳಿಗೆ ಹೆಚ್ಚಿಸಲಾಗುವುದು.
ಗ್ಯಾರೆಂಟಿ ಯೋಜನೆಗಳಿಗೆ ₹52 ಸಾವಿರ ಕೋಟಿ ಅಗತ್ಯವಿದೆ. ಇದರಿಂದ ರಾಜ್ಯದ 1.03ಕೋಟಿ ಕುಟುಂಬಗಳಿಗೆ ಮಾಸಿಕ ₹4 ರಿಂದ ₹5 ಸಾವಿರ ನೆರವು ಸಿಗಲಿದೆ – ಸಿದ್ದರಾಮಯ್ಯ
ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ ಮೂರು ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.
ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್ನಿಂದ ಎರಡು ಲಕ್ಷ ಕಿಲೋ ಲೀಟರ್ಗಳವರೆಗೆ ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವಾಗಲಿದೆ.
ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್/ಡೀಸೆಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು.
ರಾಜ್ಯದ ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಮೀನು ಮರಿಗಳನ್ನು ಉತ್ಪಾದಿಸುವ ಮೂಲಕ ಒಳನಾಡು ಮೀನುಗಾರಿಕೆಗೆ ಇರುವ ವಿಪುಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಜೊತೆಗೆ, ಹೆಚ್ಚಿನ ಬೇಡಿಕೆಯಿರುವ ಕಾಟ್ಲಾ ಮತ್ತು ರೋಹು ಮೀನು ಮರಿಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸಲಾಗುವುದು.
* ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಉತ್ತಮ ಮಾರುಕಟ್ಟೆಯನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು.
* ಮೀನುಗಾರಿಕೆಗೆ ಈಗ ಲಭ್ಯವಿರುವ ಶೈತ್ಯಾಗಾರಗಳನ್ನು ದುಪ್ಪಟ್ಟುಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.
* ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ʻಅನುಗ್ರಹʼ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರ ಅದನ್ನು ನಿರ್ಲಕ್ಷಿಸಿರುವುದು ಅವರ ರೈತ ವಿರೋಧಿ ಧೋರಣೆಯನ್ನು ಬಿಂಬಿಸುತ್ತದೆ. ಈ ಯೋಜನೆಯನ್ನು ಪುನರ್ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲಾಗುವುದು ಎಂದು ಸಿಎಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ʻಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆʼ ಎಂಬ ಧ್ಯೇಯವಾಕ್ಯ ಹೊಂದಿರುವ ʻನಂದಿನಿʼಯು ಕೋಟ್ಯಾಂತರ ಜನರ ಬದುಕಿಗೆ ಆಸರೆಯಾಗಿದೆ. ನಂದಿನಿ ಬ್ರಾಂಡ್ ಕನ್ನಡಿಗರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಹೊಂದಿದ್ದು, ಇದನ್ನು ಉಳಿಸಿ ಇನ್ನಷ್ಟು ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ.
ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ ಚರ್ಮಗಂಟು ರೋಗದ ಹರಡುವಿಕೆ, ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ, ವಾಣಿಜ್ಯ ಬೆಳೆಗಳ ಪ್ರದೇಶಗಳ ಹೆಚ್ಚಳ ಹಾಗೂ ಮುಂಗಾರು ತಡವಾಗಿರುವ ಕಾರಣಗಳಿಂದ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಹಾಲಿನ ಇಳುವರಿಯಲ್ಲಿ ಶೇ.5 ರಿಂದ ಶೇ.7 ರಷ್ಟು ಇಳಿಕೆಯಾಗಿರುತ್ತದೆ. ಉತ್ತಮ ಹಾಲು ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ, ಔಷಧಿ ಮತ್ತು ಲಸಿಕೆಗಳನ್ನು ಒದಗಿಸುವ ಮೂಲಕ ಹಾಲಿನ ಇಳುವರಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು.
ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಒಟ್ಟು 32,045 ಜಾನುವಾರುಗಳು ಮರಣ ಹೊಂದಿರುತ್ತವೆ. ಈ ಪೈಕಿ ಒಟ್ಟು 25,859 ಮರಣ ಹೊಂದಿದ ಜಾನುವಾರುಗಳಿಗೆ 53 ಕೋಟಿ ರೂ. ಪರಿಹಾರಧನವನ್ನು ವಿತರಿಸಲಾಗಿದೆ. ಬಾಕಿ ಇರುವ 5,851 ಮರಣಹೊಂದಿದ ಜಾನುವಾರುಗಳ ಮಾಲೀಕರಿಗೆ ೧೨ ಕೋಟಿ ರೂ. ಪರಿಹಾರಧನವನ್ನು ವಿತರಿಸಲು ಕ್ರಮ ವಹಿಸಲಾಗುವುದು.
ಗ್ರಾಹಕರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಪ್ರೋಟೀನ್ಯುಕ್ತ ಮಾಂಸ ಮತ್ತು ಮೊಟ್ಟೆ ಪೂರೈಕೆಗೆ ಅವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳು ಹಾಗೂ ಉತ್ತಮವಾದ ಮಾರುಕಟ್ಟೆ ಅಭಿವೃದ್ಧಿ ಮಾಡಲಾಗುವುದು.
ರಾಮನಗರ ಮತ್ತು ಶಿಡ್ಲಘಟ್ಟದ ರೇಷ್ಮೆಗೂಡಿನ ಮಾರುಕಟ್ಟೆಗಳಲ್ಲಿ ಏಶಿಯಾದಲ್ಲಿಯೇ ಅತಿ ಹೆಚ್ಚಿನ ವಹಿವಾಟು ನಡೆಯುತ್ತದೆ. ರಾಮನಗರ ಜಿಲ್ಲೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಅತಿದೊಡ್ಡ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುವಂತೆ ಶಿಡ್ಲಘಟ್ಟದಲ್ಲಿನ ಮಾರುಕಟ್ಟೆಯನ್ನು 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲಾಗುವುದು.
* ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯವನ್ನು ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ.
* ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಸುಲಭವಾಗಿ ದುಡಿಯುವ ಬಂಡವಾಳವನ್ನು ಒದಗಿಸಲು ಮತ್ತು ರೇಷ್ಮೆಗೂಡಿನ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಐದು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಎತ್ತೆಮ್ಮೆ ಹೂಡುವುದು| ಉತ್ತೊಮ್ಮೆ ಹರಗುವುದು|
ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು|
ಎತ್ತುಗೈಯುದ್ದ ಸರ್ವಜ್ಞ||
ಎಂಬ ಸರ್ವಜ್ಞನ ವಚನಗಳನ್ನು ಉಲ್ಲೇಖಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ..
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʻನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲಾಗುವುದು.
ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ʻನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ಒದಗಿಸಲಾಗುವುದು.
ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.4 ರ ಬಡ್ಡಿ ಸಹಾಯಧನ ನೀಡಲಾಗುವುದು.
ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಗೋದಾಮು, ಶೀತಲಗೃಹ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ
ಶೇ. 20ರಷ್ಟು, ಒಂದು ಕೋಟಿ ರೂ. ಮೀರದಂತೆ Seed Capital ಒದಗಿಸಲಾಗುವುದು.
ರಾಜ್ಯದಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕೆಪೆಕ್ ಸಂಸ್ಥೆಯ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು (Startups) ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು ಐದು ಕೋಟಿ ರೂ. ಒದಗಿಸಲಾಗುವುದು.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ, ಇವುಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಹಂತಹಂತವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು,
2023-24ನೇ ಸಾಲಿನಲ್ಲಿ 100 ಹಬ್ಗಳನ್ನು ಸ್ಥಾಪಿಸಲು 50 ಕೋಟಿ ರೂ. ಒದಗಿಸಲಾಗುವುದು.
ತೋಟಗಾರಿಕೆ
ರೈತರ ಆದಾಯವನ್ನು ಹೆಚ್ಚಿಸುವುದರಲ್ಲಿ ತೋಟಗಾರಿಕಾ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ತೋಟಗಾರಿಕಾ ವಲಯದಲ್ಲಿನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. 2023-24ನೇ ಸಾಲಿನಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು. ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗಾಗಿ ಎಂಟು ಶೀತಲ ಘಟಕಗಳನ್ನು ನಿರ್ಮಾಣ ಮಾಡಲಾಗುವುದು.
ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯಗಳು GI Tag ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚುರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೋ ಟೂರಿಸಂ ಅನ್ನು ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರಾಂಡಿಂಗ್ ಮಾಡಲು ಕ್ರಮ ವಹಿಸಲಾಗುವುದು.
ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು GI Tag ಗಳನ್ನು ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮವನ್ನು ರೂಪಿಸಲಾಗುವುದು.
ವಾಣಿಜ್ಯ ಹೂವಿನ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ ಹೊಂದುವ ಸಾಮರ್ಥ್ಯ ಹೊಂದಿದ್ದು, ಇವುಗಳ ತಳಿಗಳ ಕೊರತೆ ನಿವಾರಿಸಲು ಅಂತಹ ತಳಿಗಳನ್ನು ಆಮದು ಮಾಡಿಕೊಂಡು ರೈತರಿಗೆ ಕೈಗೆಟಕುವ ದರದಲ್ಲಿ ಒದಗಿಸಲು ಕ್ರಮವಹಿಸಲಾಗುವುದು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ʻವಿದ್ಯಾರ್ಥಿಗಳಿಗಾಗಿ ತೋಟಗಾರಿಕೆʼ ಯೋಜನೆಯನ್ನು ಜಾರಿಗೊಳಿಸಲಾಗುವುದು.
* ಶಿಕ್ಷಣ ಕ್ಷೇತ್ರ– ₹37ಸಾವಿರ ಕೋಟಿ (ಶೇ 11)
* ಮಹಿಳಾ ಮತ್ತು ಮಕ್ಕಳ ಕಲ್ಯಾಣ– ₹24ಸಾವಿರ ಕೋಟಿ (ಶೇ 7)
* ಇಂಧನ– ₹22ಸಾವಿರ ಕೋಟಿ (ಶೇ 7)
* ನೀರಾವರಿ– ₹19ಸಾವಿರ ಕೋಟಿ (ಶೇ 6)
* ಗ್ರಾಮೀಣಾಭಿವೃದ್ಧಿ– ₹18ಸಾವಿರ ಕೋಟಿ (ಶೇ 5)
* ಒಳಾಡಳಿತ ಮತ್ತು ಸಾರಿಗೆ – ₹16ಸಾವಿರ ಕೋಟಿ (ಶೇ 5)
* ಕಂದಾಯ– ₹16ಸಾವಿರ ಕೋಟಿ (ಶೇ 5)
* ಆರೋಗ್ಯ ಇಲಾಖೆ– ₹14ಸಾವಿರ ಕೋಟಿ (ಶೇ 4)
* ಸಮಾಜ ಕಲ್ಯಾಣ– ₹111ಸಾವಿರ ಕೋಟಿ (ಶೇ 3)
* ಲೋಕೋಪಯೋಗಿ ಇಲಾಖೆ– ₹10ಸಾವಿರ ಕೋಟಿ (ಶೇ 3)
* ಕೃಷಿ ಮತ್ತು ತೋಟಗಾರಿಕೆ– ₹5860 ಕೋಟಿ (ಶೇ 2)
* ಪಶುಸಂಗೋಪನೆ ಮತ್ತು ಮೀನುಗಾರಿಕೆ– ₹3024ಕೋಟಿ (ಶೇ 1)
* ಇತರೆ– ₹1.09ಲಕ್ಷ ಕೋಟಿ (ಶೇ 32)
ಒಟ್ಟು ರಾಜಸ್ವ ಸಂಗ್ರಹ– ₹1.62ಲಕ್ಷ ಕೋಟಿ
* ವಾಣಿಜ್ಯ ತೆರಿಗೆ– ₹1ಲಕ್ಷ ಕೋಟಿ (ಶೇ 58)
* ಅಬಕಾರಿ ತೆರಿಗೆ– ₹38ಸಾವಿರ ಕೋಟಿ (ಶೇ 20)
* ನೋಂದಣಿ ಮತ್ತು ಮುದ್ರಾಂಕ– ₹25ಸಾವಿರ ಕೋಟಿ (ಶೇ 14)
* ಮೋಟಾರು ವಾಹನ ₹11500 ಕೋಟಿ (ಶೇ 7)
* ಇತರೆ– ₹2153 ಕೋಟಿ (ಶೇ 1)
ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು. 2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದರೆ, 2013-14 ರಿಂದ 2017-18ರವರೆಗೆ ಕೈಗಾರಿಕಾ ವಲಯದಲ್ಲಿ ಶೇ. 8.70 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 9.69 ರಷ್ಟು ಬೆಳವಣಿಗೆ (CAGR) ದಾಖಲಾಗಿರುತ್ತದೆ. ಆದರೆ, 2019-20 ರಿಂದ 2022-23ರ ವರೆಗೆ ಕೈಗಾರಿಕಾ ವಲಯದಲ್ಲಿ ಶೇ. 3.86 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 4.25 ರಷ್ಟು ಬೆಳವಣಿಗೆ (CAGR) ದಾಖಲಾಗಿದ್ದು, ಇದು ಕೋವಿಡ್ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.
2022-23ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ತೈಲ ಬೆಲೆಯ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ತೀವ್ರ ಹಣದುಬ್ಬರದಿಂದ ಜನ ಸಾಮಾನ್ಯರು ಕಂಗಾಲಾಗಿದ್ದು, ಅವರನ್ನು ಇಂತಹ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದೇ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆಯಾಗಿದೆ.
2021-22 ರಲ್ಲಿ ರಾಜ್ಯಕ್ಕೆ 22 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು, 2022-23ರಲ್ಲಿ ಇದು 10 ಬಿಲಿಯನ್ ಡಾಲರ್ಗೆ ಇಳಿದಿದೆ. ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ.
ರಾಜ್ಯದ ಹಣಕಾಸು ಪರಿಸ್ಥಿತಿ
ಹಿಂದಿನ ಸರ್ಕಾರವು ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಬಾರಿ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುತ್ತದೆ. ಹಿಂದಿನ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಒಟ್ಟಾರೆ 94,933 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳಲ್ಲಿ ಅನುಮೋದಿಸಿರುತ್ತದೆ. ಈ ಮೇಲ್ಕಂಡ ಇಲಾಖೆಗಳಿಗೆ 2022-23ರ ಆಯವ್ಯಯದಲ್ಲಿ ಕೇವಲ 33,616 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರೂ ಹಾಗೂ 2021-22ರ ಅಂತ್ಯಕ್ಕೆ 2,05,986 ಕೋಟಿ ರೂ.ಗಳಷ್ಟು ಮೊತ್ತದ ಬಾಕಿ ಕಾಮಗಾರಿಗಳಿದ್ದರೂ ಸಹ ಹಿಂದಿನ ಸರ್ಕಾರವು ಇದನ್ನು ಲೆಕ್ಕಿಸದೇ 49,116 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ವಿವೇಚನಾರಹಿತವಾಗಿ ಅನುಮೋದಿಸಿರುತ್ತದೆ. 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
29. ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯವೆಂದೇ ಹೆಸರಾಗಿದೆ. ಆದರೆ ಹಿಂದಿನ ಸರ್ಕಾರವು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸೋತಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಗಳು 2017-18ರ ಅಂತ್ಯಕ್ಕೆ 2,45,737 ಕೋಟಿ ರೂ.ಗಳಷ್ಟಿದ್ದು, 2022-23ರ ಅಂತ್ಯಕ್ಕೆ 5,16,788 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಹಾಗೂ ರಾಜ್ಯ ಸರ್ಕಾರದ ಸಾಲದ ಮೇಲಿನ ಬಡ್ಡಿ ಪಾವತಿಯು 2017-18ರಲ್ಲಿ ರಾಜಸ್ವ ಸ್ವೀಕೃತಿಗಳ ಶೇ.9.5 ರಷ್ಟಿದ್ದರೆ, 2023-24ರಲ್ಲಿ ರಾಜಸ್ವ ಸ್ವೀಕೃತಿಯ ಶೇ.15.06 ಕ್ಕೆ ಹೆಚ್ಚಳವಾಗಿರುತ್ತದೆ.
ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದರೂ ಸಹ ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಒಟ್ಟು ತೆರಿಗೆಯಲ್ಲಿ ಶೇ. 3.65 ರಷ್ಟು ಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ನಮ್ಮ ರಾಜ್ಯಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು, ಇದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ದ್ರೋಹ ಬಗೆದಂತಾಗಿದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿ 10,858 ಕೋಟಿ ರೂ.ಗಳಷ್ಟು ತೆರಿಗೆ ಪಾಲು ಕಡಿಮೆಯಾಗಿರುತ್ತದೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟಾರೆ 26,140 ಕೋಟಿ ರೂ.ಗಳ ನಷ್ಟವಾಗಿರುತ್ತದೆ. ೧೫ನೇ ಹಣಕಾಸು ಆಯೋಗವು ತನ್ನ ವರದಿಯನ್ನು ಸಲ್ಲಿಸುವಾಗ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಸಹ ಹಿಂದಿನ ಸರ್ಕಾರವು ರಾಜ್ಯ ವಿರೋಧಿಯಾಗಿರುವ ಆಯೋಗದ ವರದಿಯನ್ನು ಒಪ್ಪಿಕೊಳ್ಳದಿರುವಂತೆ, ಒತ್ತಡವನ್ನು ತರದೆ ಮೂಕ ಪ್ರೇಕ್ಷಕರಾಗಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ.
* ನಮ್ಮ ಮೆಟ್ರೊಗೆ ₹30ಸಾವಿರ ಕೋಟಿ ಅನುದಾನ
* ಆಹಾರ ಇಲಾಖೆಗೆ ₹10ಸಾವಿರ ಕೋಟಿ ಅನುದಾನ
* ಸಮಾಜ ಕಲ್ಯಾಣ ಇಲಾಖೆಗೆ ₹11 ಸಾವಿರ ಕೋಟಿ ಅನುದಾನ
* ಲೋಕೋಪಯೋಗಿ ಇಲಾಖೆಗೆ ₹10ಸಾವಿರ ಕೋಟಿ ಅನುದಾನ
* ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್ಗೆ ₹10 ಕೋಟಿ ಅನುದಾನ
* 100 ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯಧನ
* ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ ₹10 ಕೋಟಿ ಅನುದಾನ
* ಮೈಸೂರು , ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್ ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಣೆ
* ಇಂದಿರಾ ಕ್ಯಾಂಟೀನ್ಗೆ ₹100 ಕೋಟಿ ಅನುದಾನ
* ಬೆಂಗಳೂರು ಅಭಿವೃದ್ಧಿಗೆ₹45ಸಾವಿರ ಕೋಟಿ ಅನುದಾನ
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಕೋವಿಡ್ 19 ರಿಂದಾಗಿ ಹಾಗೂ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಸಂವೇದನಾರಹಿತ ಕಾರ್ಯನಿರ್ವಹಣೆಯ ಪರಿಣಾಮ, ಒಪ್ಪತ್ತಿನ ಊಟಕ್ಕೂ ಸಂಚಕಾರ ಒದಗಿದ್ದು ಸುಳ್ಳಲ್ಲ. ದುಡಿಯುವ ಕೈಗಳಿಗೆ ಕೆಲಸ ತಪ್ಪಿದ್ದೂ ನೋಡಿದ್ದೇವೆ. ಉದ್ಯಮಗಳು ಮುಚ್ಚಿದ್ದರಿಂದ ಸಾವಿರಾರು ಕಾರ್ಮಿಕರು ನೌಕರಿ ಕಳೆದುಕೊಂಡು ಬೀದಿ ಪಾಲಾಗಬೇಕಾಯಿತು. ತಮ್ಮ ಅರ್ಹತೆಗಿಂತ ಕಡಿಮೆ ಮಟ್ಟದ ನೌಕರಿ ನೆಚ್ಚಿಕೊಂಡವರು ಅದೆಷ್ಟೋ? ಒಂದೆಡೆ ಸಾಂಕ್ರಾಮಿಕದ ಭೀತಿ; ಮತ್ತೊಂದೆಡೆ ಹೊಟ್ಟೆಪಾಡಿನ ಚಿಂತೆ. ಸಂಕಷ್ಟಗಳ ಸರಮಾಲೆಗೆ ಬೆಲೆ ಏರಿಕೆಯ ಸೇರ್ಪಡೆಯಿಂದ, ಬಡಜನರ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸಾಮಾನ್ಯ ವರ್ಗದ ಜನರ ಬದುಕು ಮೂರಾಬಟ್ಟೆಯಾಗಿ ಸಂಕಟ ಅನುಭವಿಸಿದ್ದು ನಾವೆಲ್ಲರೂ ಕಂಡಿದ್ದೇವೆ.
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ನಮ್ಮ ಸರ್ಕಾರವು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಿದೆ.
ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದರ ಜೊತೆಗೆ ಸರ್ಕಾರದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು. ವಿತ್ತೀಯ ಸಂಪನ್ಮೂಲಗಳು ಹಾಗೂ ಆಡಳಿತದ ದಕ್ಷ ನಿರ್ವಹಣೆ ಒಂದು ಕಲೆ ಮತ್ತು ವಿಜ್ಞಾನ; ಕೇವಲ ಸಾಮಾಜಿಕ ಜಾಲತಾಣಗಳ ಸಂದೇಶವಲ್ಲ ಎಂಬುದನ್ನು ಅರಿತರೆ ಒಳ್ಳೆಯದು. ಈ ಯೋಜನೆಗಳು ಅರ್ಹರಿಗೆ ನೇರವಾಗಿ ತಲುಪುವುದರಿಂದ ಹಾಗೂ ಬವಣೆಗಳ ಭಾರದಿಂದ ಏದುಸಿರು ಬಿಡುತ್ತಿರುವ ಬಡವರ ಬದುಕಿನಲ್ಲಿ ಪ್ರಾಣವಾಯುವಿನಂತೆ ಕೆಲಸ ಮಾಡುವುದೆಂಬ ಆಶಯದೊಂದಿಗೆ ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
* ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಈಗಾಗಲೇ ನಾವು ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಮೂಲಕ ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ
ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು,
ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಗೃಹಜ್ಯೋತಿ ಯೋಜನೆಯನ್ನು ಜುಲೈ ತಿಂಗಳಿನಿಂದ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ತರುತ್ತೇವೆ. ಯುವನಿಧಿ ಯೋಜನೆಯು 2023ರಲ್ಲಿ ಪದವಿ ಪಡೆದ ಯುವಜನರಿಗಾಗಿ ಜಾರಿಗೆ ಬರಲಿದೆ. ಅನ್ನಭಾಗ್ಯದಡಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ ಐದು ಕೆ.ಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಒದಗಿಸುವ ಹೆಚ್ಚುವರಿ ಐದು ಕೆ.ಜಿ. ಸೇರಿದಂತೆ ಒಟ್ಟಾರೆ ೧೦ ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ.
* ನಾವು ಗ್ಯಾರಂಟಿ ಯೋಜನೆಗಳನ್ನು ಯಾಕೆ ಘೋಷಿಸಿದ್ದೇವೆ? ಹಾಗೂ ಯಾಕೆ ಜಾರಿಗೊಳಿಸುತ್ತಿದ್ದೇವೆ? ಅವು ಬಿಟ್ಟಿ ಕೊಡುಗೆಗಳಲ್ಲ. ಈ ಸಂದರ್ಭದಲ್ಲಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಸ್ಮರಿಸುತ್ತೇನೆ. ʻಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ. ಯೋಜನೆ ಒಪ್ಪಿತವಾಗಬೇಕಾದರೆ, ಅದು ಮಿತವ್ಯಯದ್ದು ಮತ್ತು ಸುಭದ್ರವು ಆಗಿರಬೇಕು. ಅದು ಮಿತವ್ಯಯದ್ದು ಆಗಿರದಿದ್ದರೆ, ಬಹುಶ: ನಡೆದೀತು. ಆದರೆ, ಸುಭದ್ರವಾಗಿಲ್ಲದಿದ್ದರೆ, ಖಂಡಿತ ನಡೆಯುವುದಿಲ್ಲʼ. ಮುಕ್ತ ಮಾರುಕಟ್ಟೆಯ ಈ ಯುಗದಲ್ಲಿ ಬಂಡವಾಳ ಹೂಡಿಕೆಯನ್ನು ವ್ಯಾಪಕವಾಗಿ ಆಕರ್ಷಿಸುವುದು, ಉದ್ಯೋಗಸಹಿತ ಬೆಳವಣಿಗೆಯನ್ನು ಸಾಕಾರಗೊಳಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಂಪತ್ತಿನ ವ್ಯಾಪಕ ಅಸಮಾನ ಹಂಚಿಕೆಯು ಸೃಷ್ಟಿಸುವ ಬೃಹತ್ ಕಂದರವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದಾಗಿದೆ. ಅಭಿವೃದ್ಧಿಯ ಫಲವನ್ನು ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರಿಗೆ ಹಂಚುವ ನಮ್ಮ ಪ್ರಯತ್ನವಾಗಿದೆ. ಅಭಿವೃದ್ಧಿಯ ಸಾಹಿತ್ಯದಲ್ಲಿ ಆರ್ಥಿಕ ಪ್ರಗತಿಯ ಫಲಗಳು ಬಡವರಿಗೆ ಸಹಜವಾಗಿ ಹರಿದುಬರುತ್ತದೆ (trickle down theory) ಎಂಬ ನಂಬಿಕೆ ಹುಸಿಯಾದ ಸಂದರ್ಭದಲ್ಲಿ ಬಡವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಬೇಷರತ್ತಾಗಿ ನಗದು ವರ್ಗಾವಣೆ ಮಾಡುವುದು ಮಹಿಳಾ ಸಬಲೀಕರಣ ಹಾಗೂ ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಿಸುವ ಪರಿಣಾಮಕಾರಿ ಮಾರ್ಗವೆಂಬುದು ಸಾಬೀತಾಗಿದೆ.
* ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳು ಕೇಂದ್ರ ಸರ್ಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸುವ ಕುಟುಂಬಗಳಿಗೆ ತುಸು ನಿರಾಳತೆ ತಂದುಕೊಡುತ್ತವೆ. ಮಹಿಳೆಯರ ಓಡಾಟಕ್ಕೆ ಬೆಂಬಲ ನೀಡುವ ಶಕ್ತಿ ಯೋಜನೆಯು ಅವರಿಗೆ ಹಣ ಉಳಿತಾಯ ಮಾಡುವುದರೊಂದಿಗೆ ಮನೆಯಿಂದ ದೂರದ ಸ್ಥಳಗಳಲ್ಲಿಯೂ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ. ಅನ್ನಭಾಗ್ಯವು ಯಾರೂ ಹಸಿದುಕೊಂಡಿರಬಾರದೆಂಬುದನ್ನು ಖಾತರಿ ಪಡಿಸಿದರೆ, ಯುವನಿಧಿ, ಉದ್ಯೋಗಾಕಾಂಕ್ಷಿ ಯುವ ಜನರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ.
* ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ (Universal basic income) ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.
* ಬಡವರ ಕೈಗೆ ಹೆಚ್ಚಿನ ಹಣ ನೀಡುವುದರ ಹಿಂದಿರುವ ಪ್ರಬಲ ಆರ್ಥಿಕ ತರ್ಕವನ್ನು ಸದನದ ಗೌರವಾನ್ವಿತ ಸದಸ್ಯರು ಗಮನಿಸಬಹುದಾಗಿದೆ. ಜಿ.ಎಸ್.ಟಿ. ಯ ಬಹುಪಾಲು ಮೊತ್ತವು ಸಮಾಜದ ತಳಹಂತದ ಶೇ.60 ರಷ್ಟು ಜನರಿಂದ ಸಂಗ್ರಹವಾಗುತ್ತಿದ್ದರೂ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಮಟ್ಟದ ಶೇ.10 ರಷ್ಟು ಜನರಿಗೆ ತಲುಪುತ್ತಿದೆ. ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಜನಪರ ಸರ್ಕಾರಗಳು ಅನುಸರಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತವೆ.
ʻನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿʼ ಎಂಬ ಬಸವಣ್ಣನವರ ವಚನದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದೇವೆ.
ನಾನು 2023-24ನೇ ಸಾಲಿನ ಆಯವ್ಯಯವನ್ನು ಈ ಸದನದ ಮುಂದೆ ಮಂಡಿಸುತ್ತಿದ್ದೇನೆ.
ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಈ ದೇಶದಲ್ಲಿ ಶತಶತಮಾನಗಳಿಂದ ಯಾವುದಾದರೊಂದು ನಾಡು ಶ್ರಮಿಸಿದ್ದರೆ ಅದು ಕರ್ನಾಟಕ ಎಂದು ಹೇಳಲು ನನಗೆ ಹೆಮ್ಮೆಯಿದೆ. ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್ರವರೆಗೆ ಈ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆಜೊತೆಗೇ ಎಳೆಯಲಾಗಿದೆ. ಈ ಘನ ಪರಂಪರೆಯನ್ನು ನಾನು ಎಂದಿನಂತೆ ಈ ಬಾರಿಯೂ ಮುಂದುವರೆಸಲು ಶ್ರಮಿಸಿದ್ದೇನೆ.
ಇದು ನಾನು ಮಂಡಿಸುತ್ತಿರುವ ಹದಿನಾಲ್ಕನೆಯ ಆಯವ್ಯಯ ಪತ್ರ. ಮುಖ್ಯಮಂತ್ರಿಯಾಗಿ, ವಿತ್ತೀಯ ಹೊಣೆಯನ್ನು ಹೊತ್ತು ಮಂಡಿಸುತ್ತಿರುವ ಏಳನೆಯ ಬಜೆಟ್. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ. ನನ್ನ ಇಷ್ಟೂ ಆಯವ್ಯಯ ಪತ್ರಗಳ ಹಿಂದೆ ಯಾವ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ನಾಡಿನ ಶ್ರೇಷ್ಠ ಮನಸ್ಸುಗಳು ಬಯಸಿದ್ದವೋ ಅದನ್ನು ಈಡೇರಿಸಲೇಬೇಕೆನ್ನುವ ಉದ್ದೇಶ, ಬದ್ಧತೆಗಳು ಸ್ಪಷ್ಟವಾಗಿವೆ. ನಮ್ಮ ಪಕ್ಷದ ಧ್ಯೇಯೋದ್ದೇಶವೂ ಸಹ ಇದುವೇ ಆಗಿದೆ.
ನನ್ನ ಹಿಂದಿನ ಎಲ್ಲ ಆಯವ್ಯಯಗಳಲ್ಲಿ ʻಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಮೂಲಮಂತ್ರದ, ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನವಿದೆ.
ʻಯಾವ ಕಾಲದ ಶಾಸ್ತ್ರವೇನು ಹೇಳಿದರೇನು,
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?ʼ ರಾಷ್ಟ್ರಕವಿ ಕುವೆಂಪು ಅವರ ಈ ಮಾತಿನಂತೆ
ಈ ಬಾರಿ ಕರ್ನಾಟಕದ ಜನತೆ ತಮ್ಮ ಮನದಿಂಗಿತವನ್ನು ಗಟ್ಟಿಯಾಗಿ, ಸಂತೋಷದಿಂದ, ಪ್ರಾಮಾಣಿಕವಾಗಿ ಹೇಳಿದ್ದಾರೆ. ಈ ನಾಡಿನ ಜನತೆ ಗಟ್ಟಿ ದನಿಯಲ್ಲಿ ಮಹತ್ವಪೂರ್ಣ ಸಂದೇಶವನ್ನು ಇಡೀ ದೇಶಕ್ಕೆ ಸ್ಪಷ್ಟವಾಗಿ ನೀಡಿದ್ದಾರೆ. ದುಡಿಮೆಯ ಗೌರವ ಎತ್ತಿ ಹಿಡಿಯುವ ತುಡಿತ, ಎಲ್ಲರ ಒಳಿತಿಗೆ ದುಡಿಯುವ ಕನಸು, ಮುಕ್ತ ವಾತಾವರಣದಲ್ಲಿ ಬದುಕುವ ಭರವಸೆ, ಸಾಮಾಜಿಕ ನ್ಯಾಯ ಹಾಗೂ ಸಮತೆ, ಸಮಾನತೆಯ ಮೇಲಿನ ಹಕ್ಕಿನ ಪ್ರತಿಪಾದನೆಯು ಕನ್ನಡಿಗರ ಅಪೇಕ್ಷೆಗಳ ಅಭಿವ್ಯಕ್ತಿಯಾಗಿದೆ. ಕುಟುಂಬ ಪೋಷಣೆ, ಸಾಮಾಜಿಕ ಸಾಮರಸ್ಯ ಹಾಗೂ ಆರ್ಥಿಕ ಸಮೃದ್ಧಿಯ ಆಶಯದೊಂದಿಗೆ ಸಮಾಜ ನಿರ್ಮಾಣ ಸಾಮಾನ್ಯ ಕನ್ನಡಿಗರ ಬದುಕಿನ ಹಾದಿಯಾಗಿದೆ.
ಕರ್ನಾಟಕದ ಜನತೆಯ ಮುಂದೆ 2023-24ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಈ ಸಂದರ್ಭದಲ್ಲಿ ಸರ್ಕಾರದ ಮೂಲ ಧ್ಯೇಯೋದ್ದೇಶಗಳನ್ನು ಜನರ ಮುಂದೆ ಪ್ರಸ್ತಾಪಿಸಲು ಬಯಸುತ್ತೇನೆ. ರಾಜ್ಯದ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳ ಅತ್ಯುತ್ತಮ ನಿರ್ವಹಣೆ ಮತ್ತು ಆ ಮೂಲಕ ದಕ್ಷ ಆಡಳಿತ ಹಾಗೂ ಹಣಕಾಸಿನ ಸ್ಥಿರತೆಯನ್ನು ಸಾಧಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾಮಾಜಿಕ ಸೇವೆ, ಮೂಲಸೌಕರ್ಯ ಒದಗಿಸುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಮತ್ತು ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಆದ್ಯತೆಯಾಗಿರುತ್ತದೆ.
ಈ ಸಂದರ್ಭದಲ್ಲಿ ಗಿರೀಶ್ ಕಾರ್ನಾಡರ ಯಯಾತಿ ನಾಟಕದ ಈ ಸಾಲುಗಳು ನನಗೆ ನೆನಪಾಗುತ್ತವೆ: ʻಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?ʼ ಉತ್ತಮ ಆಡಳಿತ ಇಲ್ಲವಾದರೆ ನ್ಯಾಯವಿರದು; ದೂರದೃಷ್ಟಿಯಿರದು; ಗುರಿಯಿರದು; ಕರ್ನಾಟಕದ ಜನತೆಗಾಗಿ ಕನಸುಗಳೇ ಇರಲಾರವು.
ಹೌದು, ರಾಜ್ಯವು ಅಂಧಕಾರ, ಅನ್ಯಾಯದಿಂದ ತತ್ತರಿಸಿತ್ತು. ಒಂದೆಡೆ ಪಟ್ಟಭದ್ರ ಹಿತಾಸಕ್ತಿಯಿಂದ ಕೂಡಿದ ಬಂಡವಾಳಶಾಹಿಗಳು ಮೆರೆದರೆ, ಇನ್ನೊಂದೆಡೆ ಜನಸಾಮಾನ್ಯರು ಮೂಕವೇದನೆ ಅನುಭವಿಸುತ್ತಿದ್ದರು. ಮಾರಕ ಸಾಂಕ್ರಾಮಿಕ ನಮ್ಮನ್ನು ಕಾಡಿದಾಗ, ದುರಾಡಳಿತ ಹಾಗೂ ಭ್ರಷ್ಟಾಚಾರ ಸಾರ್ವಜನಿಕರಿಗೆ ಎರವಾಯಿತು. ಈ ಕತ್ತಲು ಇದೀಗ ಅಂತ್ಯ ಕಂಡಿದೆ. ರಾಜ್ಯದ ಮಹಾಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅವರ ದೃಢಸಂಕಲ್ಪ ಮತ್ತು ಪ್ರಜ್ಞಾವಂತಿಕೆ ಪ್ರದರ್ಶಿಸಿದ್ದಾರೆ. ರಾಜ್ಯದ ಏಳು ಕೋಟಿ ಕನ್ನಡಿಗರ ಈ ಅಪಾರ ನಂಬಿಕೆಯನ್ನು ಎತ್ತಿಹಿಡಿಯಲು, ಉಜ್ವಲ ಭವಿಷ್ಯವನ್ನು ನಿರ್ಮಿಸಲು, ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸಲಿದೆ.
ನಾನು ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ದೃಢ ವಿಶ್ವಾಸ ಹೊಂದಿದ್ದೇನೆ. ನಮ್ಮ ಸರ್ಕಾರವು ಸಂವಿಧಾನದ ಆಶಯಗಳಂತೆ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿ ಕೆಲಸ ಮಾಡಲಿದೆ. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದು ಪುನರುಚ್ಛರಿಸಲು ಇಚ್ಛಿಸುತ್ತೇನೆ.
11. ನಮ್ಮ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯವನ್ನು ಪ್ರಜ್ಞಾಪೂರ್ವಕವಾಗಿಯೇ ʻಸರ್ವಜನಾಂಗದ ಶಾಂತಿಯ ತೋಟʼ ಎಂದು ಉಲ್ಲೇಖಿಸಿದ್ದೇವೆ. ಏಕೆಂದರೆ ನಮಗೆ ವೈವಿಧ್ಯತೆ, ಎಲ್ಲರ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರಿ ಮನೋಭಾವದಲ್ಲಲ್ಲ. ನಾವು ವಿಭಿನ್ನ ಚಿಂತನೆಗಳ ಒಗ್ಗೂಡಿಸುವಿಕೆ, ಭಯಮುಕ್ತ ವಾತಾವರಣದಲ್ಲಿ ಬದುಕುವುದು ಮತ್ತು ಪರಸ್ಪರ ಅವಲಂಬನೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಪರಿಣಾಮ ಬೀರುವ ತೀರ್ಮಾನಗಳನ್ನು ನ್ಯಾಯಯುತವಾಗಿ ಕೈಗೊಳ್ಳಲು ಬದ್ಧರಾಗಿದ್ದೇವೆ. ಭೇದ-ಭಾವ ತೋರುವುದು ಅಥವಾ ಧ್ರುವೀಕರಣ ಅಥವಾ ಸಮಾಜವನ್ನು ಒಡೆಯುವುದು ನ್ಯಾಯವಲ್ಲ. ನ್ಯಾಯವೆಂದರೆ ನಿಷ್ಪಕ್ಷಪಾತ, ನ್ಯಾಯವೆಂದರೆ ಸಹಾನುಭೂತಿ, ನ್ಯಾಯವೆಂದರೆ ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು.
ನಮ್ಮ ಸರ್ಕಾರವು ಬಡವರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಎಲ್ಲರ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸಲು ಬದ್ಧವಾಗಿದೆ. ನಾವು ಒಪ್ಪಂದ ಹಾಗೂ ಅನುಕೂಲಸಿಂಧು ರಾಜಕಾರಣವನ್ನು ಧಿಕ್ಕರಿಸಿ, ಸಂಪೂರ್ಣ ಬಹುಮತವನ್ನು ನೀಡಿರುವ ಶ್ರೀಸಾಮಾನ್ಯರ ತೀರ್ಮಾನವನ್ನು ತಲೆಬಾಗಿಸಿ ಸ್ವೀಕರಿಸುತ್ತೇವೆ. ಹಿಂದಿನ ಸರ್ಕಾರ ಗಣನೀಯವಾಗಿ ನೀಡಿರುವ ಕೊಡುಗೆಯಾದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ನಮ್ಮ ಸರ್ಕಾರ ಶ್ರಮಿಸಲಿದೆ.
ಆಯವ್ಯಯವೆನ್ನುವುದು ಹಣಕಾಸಿನ ನಿರ್ವಹಣೆಯ ಕಸರತ್ತು ಮಾತ್ರವೇ ಅಲ್ಲ. ನಮ್ಮ ಆದ್ಯತೆಗಳನ್ನು, ಗುರಿಗಳನ್ನು ನಿಚ್ಚಳವಾಗಿಸಿಕೊಳ್ಳುವ, ಸಾಕಾರಗೊಳಿಸಿಕೊಳ್ಳುವ ಸಾಧನ.
2023-24 ರ ಆಯವ್ಯಯವನ್ನು ರೂಪಿಸುವಾಗ ರಾಜ್ಯ ಸರ್ಕಾರವು ಬೇಡಿಕೆಗಳನ್ನು ವಾಸ್ತವಗಳೊಂದಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವ ಮೂಲಕ ವಸ್ತುಸ್ಥಿತಿ ಆಧಾರಿತ, ಫಲಿತಾಂಶ ಕೇಂದ್ರಿತ, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಿದೆ.
ಕಳೆದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್ ಸಾಂಕ್ರಾಮಿಕತೆ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ನಾವು ರಾಜ್ಯದ ಜನತೆಯನ್ನು ಈ ಸಂಕಷ್ಟಗಳ ಸುಳಿಯಿಂದ ಹೊರಗೆ ತರಲು, ಅವರ ಮೇಲಿನ ಹೊರೆಗಳನ್ನು ಇಳಿಸಲು ಮೊದಲಿಗೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ನಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಿದ್ದೇವೆ.
ʻನಡೆಯದ ಹಾದಿಯಲ್ಲಿ ಎಡವಿದೆನೆಂದರೆ ಒಪ್ಪುವುದೆ ಅಯ್ಯಾ?
ಕಾಣದ ಮುಖದ ಕುಂದನೆಣಿಸಿದರೆ ಒಪ್ಪುವುದೆ ಅಯ್ಯಾ?
ಉಣ್ಣದ ಅಡಿಗೆಯ ರುಚಿಯ ಟೀಕಿಸಿದರೆ ಒಪ್ಪುವುದೆ ಅಯ್ಯಾ?
ನೋಡದುದನ್ನು ನೋಡಿದಂತೆ ವರ್ಣಿಸಿದರೆ ಒಪ್ಪುವುದೆ ಅಯ್ಯಾ?ʼ ಎಂಬ ಸಿದ್ದಯ್ಯ ಪುರಾಣಿಕ ಅವರ ಮಾತುಗಳನ್ನು ಸಿಎಂ ಉಲ್ಲೇಖಿಸಿದ್ದಾರೆ.
ಮಾನ್ಯರೇ, ನಾನು ನನ್ನ ಆಯವ್ಯಯ ಪ್ರಸ್ತಾವನೆ ಪ್ರಾರಂಭಿಸುವ ಮೊದಲು ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ. ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ; ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು; ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ.
ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿ ಜಾರಿಗೆ ಮುಂದಾಗಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದ್ದೇವೆ. ಗೃಹಜ್ಯೋತಿಯನ್ನು ಜುಲೈನಲ್ಲಿ ಜಾರಿ ಮಾಡಿದ್ದೇವೆ. ಆಗಸ್ಟ್ನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡುತ್ತೇವೆ.
– ಬಸವಣ್ಣನಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ವರೆಗೂ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯ ಜತೆಯಾಗಿ ನಡೆದಿದೆ. ಅದು ಈ ಬಾರಿಯೂ ಮುಂದುವರಿಯಲಿದೆ...
– ಕಲ್ಯಾಣ ರಾಜ್ಯದ ಕನಸು ನನ್ನ ಬಜೆಟ್ನಲ್ಲಿ ಹಿಂದಿನಂತೆಯೇ ಮುಂದುವರಿದಿದೆ
– ಕುವೆಂಪು ಅವರ ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಸಾಲುಗಳ ಉಲ್ಲೇಖಿಸಿದ ಸಿದ್ದರಾಮಯ್ಯ
– ಗಿರೀಶ್ ಕಾರ್ನಾಡ್ ಯಯಾತಿ ನಾಟಕದ ಸಾಲು –ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?
ಬಡವರು, ರೈತರು ಸೇರಿದಂತೆ ಎಲ್ಲರ ಕಲ್ಯಾಣದ ಉದ್ದೇಶದಿಂದ ಬಜೆಟ್ ಮಂಡನೆ. ರಾಜ್ಯದ ಜನರಿಗೆ ಉಜ್ವಲ ಭವಿಷ್ಯ ನಿರ್ಮಿಸಲು ನಮ್ಮ ಸರ್ಕಾರ ಶ್ರಮಿಸಲಿದೆ. ಸಾಮಾಜಿಕ ನ್ಯಾಯ, ಸಂವಿಧಾನ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ತತ್ವದ ಮೇಲೆ ನಮಗೆ ನಂಬಿಕೆ ಇದೆ. ಸರ್ವಾಧಿಕಾರದಲ್ಲಲ್ಲ– ಸಿದ್ದರಾಮಯ್ಯ
ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ, ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ ಹದಿನಾಲ್ಕನೇ ಬಜೆಟ್ ಮಂಡಿಸಲಿದ್ದೇನೆ. ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನ ಮಾಡುತ್ತೇನೆ. ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ನುಡಿದಂತೆಯೇ ನಡೆದಿದ್ದೇನೆ, ಮುಂದೆಯೂ ನಡೆಯುತ್ತೇನೆ. ನಿಮ್ಮ ನಂಬಿಕೆ-ವಿಶ್ವಾಸಗಳನ್ನು ಹುಸಿಗೊಳಿಸುವುದಿಲ್ಲ. ಇದು ನಾನು ನೀಡುವ ಅತ್ಯುನ್ನತ ಗ್ಯಾರಂಟಿ.
ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
Karnataka Budget 2023 | ಬೆಳಗಾವಿ: ಹೊಸ ಸರ್ಕಾರದ ಮುಂದೆ ಹಳೆಯ ನಿರೀಕ್ಷೆಗಳು
Karnataka Budget 2023: ರಾಮನಗರ ಅಭಿವೃದ್ದಿಗೆ ಸಿಗುವುದೇ ವೇಗ?
Karnataka Budget 2023 | ರಾಯಚೂರು ಜಿಲ್ಲೆಯ ಜನರ ಹಲವು ನಿರೀಕ್ಷೆ
Karnataka Budget 2023 | ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಾಂದಿಯಾಗಲಿ
Karnataka Budget 2023 | ತುಮಕೂರು ಜಿಲ್ಲೆ– ನಿರೀಕ್ಷೆ ಹಲವು; ಸಿಗುವುದು ಕೆಲವು
Karnataka Budget 2023: ಮಂಡ್ಯ ಜಿಲ್ಲೆಗೆ ಬೇಕು ಕೃಷಿಯಾಧಾರಿತ ಕೈಗಾರಿಕೆ
ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಬಸವರಾಜ ಬೊಮ್ಮಾಯಿ, ಜುಲೈ ಅಂತ್ಯದವರೆಗೆ ಬೇಕಾದ ವೆಚ್ಚಕ್ಕೆ ಸೀಮಿತವಾಗಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆದಿದ್ದರು. ಮುಂದಿನ ಎಂಟು ತಿಂಗಳ ಆದಾಯ ಮತ್ತು ಖರ್ಚನ್ನು ಆಧರಿಸಿ ಸಿದ್ದರಾಮಯ್ಯ, ಹೊಸ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ ₹3.30 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಜಗತ್ತಿನ ಅನೇಕ ದೇಶಗಳು ಜನಕೇಂದ್ರಿತ ಆರ್ಥಿಕತೆ ಪ್ರತಿಪಾದಿಸುತ್ತಿದ್ದು, ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆ ಪ್ರಬಲಗೊಳ್ಳುತ್ತಿದೆ. ಉಳ್ಳವರು ಮತ್ತು ಇಲ್ಲದವರ ಮಧ್ಯದ ಅಂತರವನ್ನು ತುಸು ಕಡಿಮೆ ಮಾಡುವ ಆಶಯವನ್ನು ಇದು ಹೊಂದಿದೆ. ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತಗೊಳ್ಳುವುದನ್ನು ತೊಡೆದು ಹಾಕುವ ಆರ್ಥಿಕ ನೀತಿ ಇದಾಗಿದೆ. ಹೊಸ ಅಭಿವೃದ್ಧಿ ಮಾದರಿ ಪರಿಚಯಿಸುವ ಈ ನೀತಿಯನ್ನು ರಾಜ್ಯದಲ್ಲೂ ಅನುಷ್ಠಾನ ಮಾಡಲು ಅಗತ್ಯವಾದ ನೀತಿಗಳನ್ನು ಬಜೆಟ್ನಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳಿಗೆ ಮುಂದಿನ ಎಂಟು ತಿಂಗಳಿನಲ್ಲಿ ಸುಮಾರು ₹40 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ ಸಂಪನ್ಮೂಲ ಹೊಂದಿಸಲು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ದಾರಿಯನ್ನು ಹುಡುಕಲಾಗಿದೆ. ಯಾರನ್ನೋ ಒಲೈಸಲು ಬೊಕ್ಕಸದ ಹಣವನ್ನು ಬೇಕಾಬಿಟ್ಟಿ ಹಂಚಿಕೆ ಮಾಡುತ್ತಿದ್ದ ನೀತಿಯನ್ನು ಕೈಬಿಟ್ಟು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಾದ ರಾಜ್ಯ ನಿರ್ದೇಶಕ ತತ್ವಗಳು ಜನರ ಹಕ್ಕುಗಳಾಗಬೇಕು ಎಂಬ ಸಂಕಲ್ಪ ಬಜೆಟ್ನ ಹೂರಣವಾಗಿರಲಿದೆ ಎಂದು ತಿಳಿಸಿವೆ.
ಆದಾಯ ಹೆಚ್ಚಿಸಿಕೊಳ್ಳಲು ಸೋರಿಕೆ ತಡೆಗೆ ಕಠಿಣ ಕ್ರಮಗಳನ್ನು ಬಜೆಟ್ನಲ್ಲಿ ಪ್ರಸ್ತಾಪಿಸಲಾಗುತ್ತದೆ. ಜತೆಗೆ, ಮೋಟಾರು ವಾಹನ ಶುಲ್ಕ, ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸುವ ಸಂಭವ ಇದೆ. ಮದ್ಯದ ಮೇಲಿನ ಸುಂಕ ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿದ್ದು, ಅದನ್ನು ಮುಟ್ಟುವ ಗೋಜಿಗೆ ಹೋಗುವ ಸಂಭವ ಕಡಿಮೆ ಎಂದೂ ಮೂಲಗಳು ಹೇಳಿವೆ.
ಹೆಚ್ಚು ಘೋಷಣೆಗಳಿಲ್ಲದೇ ಇದ್ದರೂ, 2013–18ರ ಅವಧಿಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತೆ ಅನುಷ್ಠಾನ ಮಾಡುವುದಾಗಿ ಬಜೆಟ್ನಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ಗೊತ್ತಾಗಿದೆ.
ಬಜೆಟ್ ಮಂಡನೆಯಲ್ಲಿ ತಮ್ಮದೇ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮುರಿದಿದ್ದು, 14ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.