ರಾಜ್ಯದಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಪಾಲಿಗೆ ಈ ಬಾರಿಯ ರಾಜ್ಯದ ಬಜೆಟ್ ಆಶಾದಾಯಕವಾಗಿದೆ.
ಆರೋಗ್ಯ ಕೇಂದ್ರಗಳ ಕೊರತೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಮರೀಚಿಕೆಯಾಗಿದ್ದ ಸಂದರ್ಭದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಘೋಷಿಸಿರುವುದು ಸಮಂಜಸವಾಗಿದೆ. ಈ ಭಾಗದಲ್ಲಿ ಹತ್ತಾರು ನದಿಗಳಿದ್ದರೂ ರೈತರ ಜಮೀನುಗಳಿಗೆ ನೀರು ಒದಗಿಸುವ ಕೆಲಸವಾಗಿರಲಿಲ್ಲ. ಹತ್ತಕ್ಕಿಂತ ಹೆಚ್ಚು ಕೆರೆ ತುಂಬಿಸುವುದು, ನವಲಿ ಸಮತೋಲನ ಜಲಾಶಯ ನಿರ್ಮಾಣದಂತಹ ಬೃಹತ್ ಯೋಜನೆ ಮತ್ತು ನಾಲ್ಕೈದು ಬ್ಯಾರೇಜ್ ನಿರ್ಮಾಣ ಮಾಡಲು ಮುಂದಾಗಿರುವುದು ರೈತರಲ್ಲಿ ಚೈತನ್ಯ ಮೂಡಿಸುವಂತಿದೆ.
ಡಾಂಬರು ಕಾಣದ ರಸ್ತೆಗಳೇ ಕಣ್ಣಿಗೆ ಕಾಣುವಂತಹ ಸ್ಥಿತಿಯಲ್ಲಿ ‘ಕಲ್ಯಾಣ ಪಥ’ ಎನ್ನುವ ಯೋಜನೆಯೊಂದಿಗೆ 1,150 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಮಾಡುತ್ತಿರುವುದು ಗ್ರಾಮೀಣ ಸಂಪರ್ಕದ ಚಿತ್ರಣವೇ ಬದಲಾಗಬಹುದು.
2011ರ ಜನಗಣತಿಯಲ್ಲಿ ಶೇ 63.71ರಷ್ಟು ಸಾಕ್ಷರತೆ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಪ್ರಮಾಣ ಕೇವಲ ಶೇ 14 ಮಾತ್ರ ಇದೆ. ಒಂದೂವರೆ ದಶಕದಿಂದ ಹೊಸದಾಗಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡದಿರುವ ಸಂದರ್ಭದಲ್ಲಿ ಈ ಬಜೆಟ್‍ನಲ್ಲಿ ಅದಕ್ಕೂ ಅವಕಾಶ ನೀಡಿರುವುದು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಲಿದೆ.
ಬಳ್ಳಾರಿ ಜೀನ್ಸ್ ಅಪ್ಪಾರೆಲ್ ಪಾರ್ಕ್, ರಾಯಚೂರು ಜವಳಿ ಪಾರ್ಕ್, ಕಲಬುರಗಿ ಮೆಗಾ ಜವಳಿ ಪಾರ್ಕ್ ಸ್ಥಾಪನೆ ಮಾಡುತ್ತಿರುವುದು ಈ ಭಾಗದ ಯುವಕರ ಬದುಕಿಗೆ ಆಸರೆಯಾಗಲಿದೆ.
ಸರ್ಕಾರ ಈ ಬಜೆಟ್ ಅನ್ನು ಪರಿಪೂರ್ಣವಾಗಿ ಅನುಷ್ಠಾನ ಮಾಡಿದರೆ ಕಲ್ಯಾಣ ಕರ್ನಾಟಕ ಬೆಳವಣಿಗೆ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ.
– ರಝಾಕ್ ಉಸ್ತಾದ್, ಉಪಾಧ್ಯಕ್ಷ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.