ADVERTISEMENT

Karnataka Budget 2024 | ಗುಣಗಾನವೇ ಸಾಂಸ್ಕೃತಿಕ ಕ್ಷೇತ್ರಕ್ಕೆ ‘ಭೂಷಣ’

ಕನ್ನಡ ಮತ್ತು ಸಾಂಸ್ಕೃತಿಕ ಕ್ಷೇತ್ರ: ಜಾರಿಯಲ್ಲಿರುವ ಕಾರ್ಯಕ್ರಮ, ಘೋಷಣೆಗಳ ಪುನರುಚ್ಚಾರ

ವರುಣ ಹೆಗಡೆ
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಬಸವಣ್ಣ
ಬಸವಣ್ಣ   

ಬೆಂಗಳೂರು: ಬಸವಾದಿ ಶಿವಶರಣರ ಗುಣಗಾನವೇ ಕನ್ನಡ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ‘ಭೂಷಣ’ವಾಗಿದ್ದು, ಈಗಾಗಲೇ ಜಾರಿಯಲ್ಲಿರುವ ಕಾರ್ಯಕ್ರಮಗಳು ಹಾಗೂ ಘೋಷಣೆಗಳನ್ನೇ ಪುನರುಚ್ಚರಿಸಲಾಗಿದೆ. 

ಬಜೆಟ್ ಭಾಷಣದಲ್ಲಿ ‘ಇವನಾರವ ಇವನಾರವ ಎಂದೆನಿಸದಿರಯ್ಯ...’ ಎಂಬ ಬಸವಣ್ಣ ಅವರ ವಚನವನ್ನು ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವಾದಿ ಶಿವಶರಣರಿಗೇ ಎರಡು ಪುಟಗಳನ್ನು ಮೀಸಲಿಟ್ಟಿದ್ದರು. ಆದರೆ, ಇಲ್ಲಿ ಗುಣಗಾನವೇ ಹೆಚ್ಚಾಗಿದ್ದು, ಮಹತ್ವದ ಘೋಷಣೆ ಇಲ್ಲವಾಗಿದೆ. ರಂಗಭೂಮಿ, ಸಂಗೀತ‌, ನೃತ್ಯ, ಕಲೆ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಿಗೆ ಈ ಬಾರಿ ಆದ್ಯತೆ ದೊರೆತಿಲ್ಲ.

ರಂಗಾಯಣಗಳಿಗೆ ಅನುದಾನ ಹೆಚ್ಚಿಸುವ ಪ್ರಸ್ತಾಪವಿದ್ದರೂ ನಿರ್ದಿಷ್ಟವಾಗಿ ಅನುದಾನದ ಉಲ್ಲೇಖವಿಲ್ಲ. ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 30 ಕೋಟಿ ಅನುದಾನ ಕುರಿತ ಕನ್ನಡ ಸಾಹಿತ್ಯ ಪರಿಷತ್ತಿನ ನಿರೀಕ್ಷೆಯೂ ಹುಸಿಯಾಗಿದೆ. 

ADVERTISEMENT

ಬಸವಣ್ಣ ಅವರನ್ನು ರಾಜ್ಯ ಸರ್ಕಾರ ಇತ್ತೀಚೆಗೆ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿತ್ತು. ಅದರ ಮುಂದುವರಿದ ಭಾಗವಾಗಿ ಸರ್ಕಾರಿ ಕಚೇರಿಗಳಲ್ಲಿನ ಬಸವಣ್ಣ ಅವರ ಭಾವಚಿತ್ರದಲ್ಲಿ ‘ವಿಶ್ವಗುರು ಬಸವಣ್ಣ-ಸಾಂಸ್ಕೃತಿಕ ನಾಯಕ’ನೆಂದು ಮುದ್ರಿಸಲಾಗುವುದೆಂದು ತಿಳಿಸಲಾಗಿದೆ. ಶರಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯದ ಕುರಿತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ಹೇಳಲಾಗಿದೆ. ಬಸವಣ್ಣನವರ ಬದುಕು, ಸಂದೇಶ ಹಾಗೂ ಚಿಂತನೆಗಳನ್ನು ಪ್ರಚುರಪಡಿಸಲು ಬಸವ ಜಯಂತಿಯಂದು ‘ಸರ್ವ ಧರ್ಮ ಸಂಸತ್ತು’ ಆಯೋಜಿಸಲಾಗುವುದು ಎನ್ನಲಾಗಿದೆ.

ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ‘ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ’ ರಚಿಸಲಾಗುತ್ತದೆ. ವಚನಗಳನ್ನು ವಿಶ್ವಕ್ಕೆ ಪರಿಚಯಿಸಲು ವಚನ ಸಂಗ್ರಹಾಲಯ ಅಥವಾ ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ. ಆದರೆ, ಇವುಗಳಿಗೆ ಅನುದಾನ ಪ್ರಸ್ತಾಪಿಸಿಲ್ಲ. 

ವಾಣಿಜ್ಯ ಮಳಿಗೆಗಳು, ಕಚೇರಿಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಅಳವಡಿಕೆಗೆ ಕ್ರಮವಹಿಸಲಾಗುವುದೆಂದು ಪ್ರಸ್ತಾಪಿಸಲಾಗಿದೆ. 

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರ ಕಲೆ ಮತ್ತು ಸಂಸ್ಕೃತಿಯನ್ನು ಗುರುತಿಸಿ, ಪ್ರೋತ್ಸಾಹಿಸಲು ಅಲೆಮಾರಿ ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗುವುದು. ಸಾಮಾಜಿಕ ಮತ್ತು ರಾಜಕೀಯ ಚಿಂತಕರಾದ ನಾರಾಯಣ ಗುರು, ಜ್ಯೋತಿಬಾ ಫುಲೆ, ಪೆರಿಯಾರ್ ರಾಮಸ್ವಾಮಿ, ರಾಮ ಮನೋಹರ ಲೋಹಿಯಾ ಹಾಗೂ ಬಾಬು ಜಗಜೀವನರಾಮ್ ಅವರ ಬರಹಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಲಾಗುವುದು ಎನ್ನಲಾಗಿದೆ. 

ವಚನ ಮಂಟಪ ಸ್ಥಾಪನೆ 

* ‘ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸುವ ಘೋಷಣೆ

* ಕಲಬುರಗಿಯಲ್ಲಿ ವಚನ ಸಂಗ್ರಹಾಲಯ ಅಥವಾ ವಚನ ಮಂಟಪ ಸ್ಥಾಪನೆ

* ಅಲೆಮಾರಿಗಳ ಸಂಸ್ಕೃತಿ ಉತ್ಸವ ಆಯೋಜಿಸಲು ಕ್ರಮ

* ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಅಳವಡಿಸಲು ಕ್ರಮ

* ನಾರಾಯಣ ಗುರು, ಜ್ಯೋತಿಬಾ ಫುಲೆ ಸೇರಿ ಪ್ರಮುಖರ ಬರಹಗಳ ಅನುವಾದಕ್ಕೆ ಆದ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.