ಲೋಕಸಭೆ ಚುನಾವಣೆ ಎದುರುಗೊಳ್ಳುವ ಹೊತ್ತಿನೊಳಗೆ, ಮತದಾರರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಹೊಸ ಜನಪ್ರಿಯ ಘೋಷಣೆ, ಚುನಾವಣೆ ಕಾರಣಕ್ಕೆ ಹೊಸ ತೆರಿಗೆಯ ಭಾರ ಹಾಕದಿರುವ ಬಜೆಟ್ ಇದಾಗಿರಲಿದೆ. ಜುಲೈನಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಪರಿಷ್ಕೃತ ಬಜೆಟ್‌ನ ಮೊತ್ತ ₹3.27 ಲಕ್ಷ ಕೋಟಿಯಾಗಿತ್ತು. ಈ ಬಾರಿ ಬಜೆಟ್ ಮೊತ್ತ ₹3.50 ಲಕ್ಷ ಕೋಟಿ ಅಥವಾ ₹3.80 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬರೆಯ ಮಧ್ಯೆ ವಿತ್ತೀಯ ಶಿಸ್ತಿನ ಪರಿಮಿತಿಯಲ್ಲಿ ವೆಚ್ಚ, ಸಂಪನ್ಮೂಲ ಕ್ರೋಡೀಕರಣದ ‘ಲೆಕ್ಕಾಚಾರ’ಗಳು ಈ ಬಜೆಟ್ ಮೇಲಿನ ಕುತೂಹಲ ಹೆಚ್ಚಿಸಿವೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಆರ್ಥಿಕ ಭಾರ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು, ಸಹಾಯಾನುದಾನ ಕೊರತೆಯ ಮಧ್ಯೆಯೇ ಜನಪ್ರಿಯ ಬಜೆಟ್ ಮಂಡಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಗ್ಯಾರಂಟಿಗಳಿಗಾಗಿಯೇ ₹58 ಸಾವಿರ ಕೋಟಿ ತೆಗೆದಿಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ರೈತ ಸಮುದಾಯ, ಕೈಗಾರಿಕಾ ವಲಯ, ಕಾರ್ಮಿಕ ಸಂಘಟನೆಗಳು ನಾನಾ ಬೇಡಿಕೆಗಳನ್ನು ಮುಂದಿಟ್ಟಿವೆ. ತೀವ್ರ ಬರದಿಂದ ರೈತ ವರ್ಗ ಸಂಕಷ್ಟದಲ್ಲಿದೆ. ಕೇಂದ್ರದಿಂದ ಇನ್ನೂ ಬಿಡುಗಡೆಯಾಗದ ಬರ ಪರಿಹಾರ ಮುಖ್ಯಮಂತ್ರಿ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಬರ ಇರುವ ಕಾರಣಕ್ಕೆ ಈ ಬಾರಿ ರೈತರ ಸಾಲವನ್ನು ಸಂಪೂರ್ಣವಾಗಿ ಒಮ್ಮೆ ಮನ್ನಾ ಮಾಡಲಿ ಎನ್ನುವುದು ರೈತ ಸಮುದಾಯದ ನಿರೀಕ್ಷೆಯಾಗಿದೆ.
ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಸೂರು ಹೊಂದುವ ದಶಕಗಳ ಕನಸು ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕರು ನಗರದಲ್ಲಿ ಸ್ವಂತ ಸೂರು ಕಾಣುವುದು ಕನಸಾಗಿಯೇ ಉಳಿದಿದೆ. ವಿಶೇಷ ವಸತಿ ಯೋಜನೆಗಳನ್ನು ರೂಪಿಸಿ, ಪ್ರತಿಯೊಬ್ಬರಿಗೂ ಸೂರು (ಮನೆ) ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಇದೆ. ಇದಕ್ಕೆ ಎಷ್ಟರಮಟ್ಟಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆ ಎಂಬ ಕುತೂಹಲವಂತೂ ಇದೆ.
* ಕರ್ನಾಟಕ ರಾಜ್ಯ ಉದಯವಾಗಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ಹಲವು ಹೊಸ ಯೋಜನೆಗಳು
* ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಜಾರಿ ಕುರಿತು ಪ್ರಸ್ತಾವ ಮತ್ತು ಅನುದಾನ ನೀಡಿಕೆ
* ಹೊಸ ಜಿಲ್ಲೆಗಳಾಗಿ ಚಿಕ್ಕೋಡಿ, ಗೋಕಾಕ, ಮಧುಗಿರಿ
* ಮಹಿಳೆಯರಿಗಾಗಿ ವಿಶೇಷ ಯೋಜನೆಗಳು
* ರಾಮಮಂದಿರಗಳ ಪುನುರುತ್ಥಾನಕ್ಕೆ ₹100 ಕೋಟಿ ಅನುದಾನ
* ಮೇಕೆದಾಟು ಯೋಜನೆಗೆ ಅನುದಾನ
* ಬೆಂಗಳೂರು ಅಥವಾ ಕಲಬುರಗಿಯಲ್ಲಿ ವಚನ ಮಂಟಪ ಮತ್ತು ವಚನ ವಿಶ್ವವಿದ್ಯಾಲಯ
* ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬ್ರ್ಯಾಂಡ್ ಬೆಂಗಳೂರಿಗೆ ಆದ್ಯತೆ
* ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ
* ಬಂಜಾರ, ವಾಲ್ಮೀಕಿ, ಬೋವಿ, ಮಾದಿಗರ ಜತೆಗೆ ಹಿಂದುಳಿದ ವಿವಿಧ ಜಾತಿಗಳಿಗೆ ಆರ್ಥಿಕ ನೆರವು
ಭಾರತ ಸ್ವಾತಂತ್ರ್ಯ ಪಡೆದು 75ನೇ ವಸಂತ ತುಂಬಿರುವ ಈ ಸುಸಂದರ್ಭದಲ್ಲಿ ನಾನು 15ನೇ ಬಜೆಟ್ ಮಂಡಿಸುತ್ತಿರುವುದು ಸಂತಸ ಮೂಡಿಸಿದೆ.–ಸಿದ್ದರಾಮಯ್ಯ, ಮುಖ್ಯಮಂತ್ರಿ
ರಾಜ್ಯ ಸರ್ಕಾರದಿಂದಲೇ ಶೇ 6ರಷ್ಟು ಬಡ್ಡಿ ಸಹಾಯಧನ
ಪ್ರತಿ ಹೋಟೆಲ್‌ಗೆ ₹7.5 ಕೋಟಿ ಮೀಸಲು
ಶಿಕ್ಷಣ ಕ್ಷೇತ್ರಕ್ಕೆ ₹44,422 ಕೋಟಿ ಮೀಸಲು
ಇಂಧನ ಇಲಾಖೆಗೆ ₹23,159 ಕೋಟಿ ಮೀಸಲು
ಗ್ರಾಮೀಣಾಭಿವೃದ್ಧಿ ಇಲಾಖೆಗೆ ₹21,160 ಕೋಟಿ ಮೀಸಲು
ಗೃಹ ಮತ್ತು ಸಾರಿಗೆ ಇಲಾಖೆಗೆ ₹19,777 ಕೋಟಿ ಮೀಸಲು
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹34,406 ಕೋಟಿ ಮೀಸಲು
ಕಂದಾಯ ಇಲಾಖೆಗೆ ₹16,170 ಕೋಟಿ ಮೀಸಲು
ಆರೋಗ್ಯ ಇಲಾಖೆಗೆ ₹15,145 ಕೋಟಿ ಮೀಸಲು
ಸಮಾಜ ಕಲ್ಯಾಣ ಇಲಾಖೆಗೆ ₹39,121 ಕೋಟಿ ಮೀಸಲು
ಕಚೇರಿ, ಬೋರ್ಡ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯ
‘ನಮ್ಮ ಮಿಲೆಟ್’ ಹೆಸರಿನಲ್ಲಿ ಹೊಸ ಯೋಜನೆ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ₹130 ಕೋಟಿ ಅನುದಾನ
* 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧಾರ
* 100 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ನಿರ್ಧಾರ
* 100 ಹೊಸ ಮೌಲಾನಾ ಆಜಾದ್ ಶಾಲೆಗಳನ್ನು ತೆರೆಯಲಾಗುವುದು.
* ಸ್ವಂತ ಕಟ್ಟಡವನ್ನು ಹೊಂದಿರುವ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭ
* ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ₹200 ಕೋಟಿ ಅನುದಾನ
* ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಲು ಅನುದಾನ
* ಸಿಖ್ಖ್ ಲಿಗಾರ್ ಸಮುದಾಯದವರ ಸಬಲೀಕರಣಕ್ಕಾಗಿ ₹2 ಕೋಟಿ ಅನುದಾನ
* ಬೀದರ್‌ನಲ್ಲಿರುವ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗೆ ₹1 ಕೋಟಿ ಅನುದಾನ
* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2024-25ನೇ ವರ್ಷದಲ್ಲಿ ಒಟ್ಟಾರೆಯಾಗಿ ₹393 ಕೋಟಿ ವೆಚ್ಚದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ
* 2023-2024ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುತ್ತಿದೆ.
* 2024-25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ.
* ಕೊಳಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 1,18,359 ಮನೆಗಳ ನಿರ್ಮಾಣ.
* ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಕೊಳೆಗೇರಿ ಸೆಸ್ ದರ ಪರಿಷ್ಕರಣೆ.
* ಪ್ರಗತಿ ಪಥ ಯೋಜನೆ ಅಡಿಯಲ್ಲಿ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 50 ಕಿ.ಮೀ. ಉದ್ದದ ರಸ್ತೆಗಳಂತೆ, ಒಟ್ಟಾರೆಯಾಗಿ 9,450 ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲವನ್ನು ₹5,200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.
* ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಒಟ್ಟು 1,150 ಕಿ.ಮೀ. ರಸ್ತೆಗಳನ್ನು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.
* ನಮ್ಮ ರಾಜ್ಯ ಎಂದಿನಂತೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. 2024-25ನೇ ಸಾಲಿನಲ್ಲಿ 16 ಕೋಟಿ ಮಾನವ-ದಿನಗಳನ್ನು ಸೃಜಿಸಿ, ಸುಮಾರು 30 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ.
* ಅರಿವು ಕೇಂದ್ರಗಳನ್ನು ಬಲಪಡಿಸುವ ದೃಷ್ಠಿಯಿಂದ ₹132 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮತ್ತು ಪುಸ್ತಕಗಳು, ಡಿಜಿಟಲ್ ಉಪಕರಣಗಳು ಹಾಗೂ ವಿಕಲಚೇತನ ಸ್ನೇಹಿ ಉಪಕರಣಗಳನ್ನು ಖರೀದಿ.
* ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದು.
* ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ಗ್ರಾಮ ಪಂಚಾಯಿತಿ ಸ್ವತ್ತುಗಳ Asset Monetisation ನೀತಿಯನ್ನು ಜಾರಿಗೆ ತರಲಾಗುವುದು.
*ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಅನ್ನು ಪ್ರಾರಂಭ.
* ಸೇವಾ ಸಿಂಧು ಪೋರ್ಟಲ್ ಮೂಲಕ ಒದಗಿಸಲಾಗುತ್ತಿರುವ ಎಲ್ಲಾ ಸೇವೆಗಳನ್ನು ಈ ವರ್ಷದಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಪ್ರಾರಂಭಿಸಲಾಗುವುದು.
* ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಗದಿತ ಶುಲ್ಕ ಪಾವತಿಯೊಂದಿಗೆ ವ್ಯವಹಾರ ಪರವಾನಗಿಗಳ ಸ್ವಯಂಚಾಲಿತ ನವೀಕರಣಕ್ಕೆ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು.
* ಗ್ರಾಮ ಪಂಚಾಯಿತಿಗಳ ಸಭೆಗಳು ಮತ್ತು ಗ್ರಾಮ ಸಭೆಗಳ ಕಾರ್ಯಕಲಾಪಗಳ ನೇರ ಪ್ರಸಾರ ಮಾಡಲಾಗುವುದು.
* ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್ ಬಳಕೆಯ ಮೇಲೆ ನಿಗಾವಹಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು ಕ್ರಮ.
* 50 ಗ್ರಾಮ ಪಂಚಾಯಿತಿಗಳಲ್ಲಿ ಹೊಂಬೆಳಕು ಕಾರ್ಯಕ್ರಮದಡಿ ₹25 ಕೋಟಿ ವೆಚ್ಚದಲ್ಲಿ ಸೋಲಾರ್ ದೀಪಗಳನ್ನು ಅಳವಡಿಕೆ.
* ಪ್ರಸಕ್ತ ಸಾಲಿನಿಂದ ಆಯ್ದ 100 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆಯನ್ನು ನಿರ್ವಹಿಸಲು ಆರೈಕೆ–ಉಪಶಮನ (Palliative Care) ಕೇಂದ್ರಗಳ ಪ್ರಾರಂಭ.
* 100 ಸಂಖ್ಯಾಬಲದ ಮೆಟ್ರಿಕ್ ನಂತರದ 75 ಬಾಲಕರ ಮತ್ತು 75 ಬಾಲಕಿಯರ ವಸತಿನಿಲಯಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭ.
* ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 100 ಸಂಖ್ಯಾಬಲದ 150 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹಾಗೂ 174 ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಗೆ ₹200 ಕೋಟಿ ಅನುದಾನ
* ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ವಿದ್ಯಾರ್ಥಿನಿಲಯಗಳಿಗೆ ₹4 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.
*ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಲಾಖೆಯ ವಸತಿ ನಿಲಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳನ್ನು ಡಿ.ದೇವರಾಜು ಅರಸು ವಸತಿ ಶಾಲೆಗಳೆಂದು ಮರುನಾಮಕರಣ ಮಾಡಲಾಗುವುದು.
* ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ CLAT, MAT ಮತ್ತು Chartered Accountant ಫೌಂಡೇಷನ್ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.
* ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಪ್ರಸಕ್ತ ಸಾಲಿನಲ್ಲಿ 500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಎರಡು ವರ್ಷಗಳ JEE/NEET ಉಚಿತ ತರಬೇತಿ.
* ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ʻಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗʼ ರಚನೆ.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಂದ 2024-25ನೇ ವರ್ಷದಲ್ಲಿ ಒಟ್ಟಾರೆಯಾಗಿ ₹1,600 ಕೋಟಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು.
* 2024-25ನೇ ಸಾಲಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಅನುದಾನ.
ಈ ಯೋಜನೆಯಡಿ 1.33 ಕೋಟಿ ಮಹಿಳೆಯರನ್ನು ಅರ್ಹ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜನವರಿ ಅಂತ್ಯದವರೆಗೆ 1.17 ಕೋಟಿ ಮಹಿಳೆಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈವರೆಗೆ 11,726 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ.
* ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ₹10 ಕೋಟಿ ಅನುದಾನ.
* ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ₹90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್‌ಗಳನ್ನು ಒದಗಿಸಲಾಗುವುದು.
* ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
* ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತುಗಳನ್ನು ನೀಡಲಾಗುವುದು.
* Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು ₹1,000 ಪ್ರೋತ್ಸಾಹಧನ.
* ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆ ಮತ್ತು ಸಂರಕ್ಷಣೆಗಾಗಿ 4 ಅನುಪಾಲನಾ ಗೃಹಗಳನ್ನು ₹2 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
* 2024-25ನೇ ಸಾಲಿನಲ್ಲಿ 1,500 ವಿಶೇಷಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ.
* ಮೈತ್ರಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಮಾಸಾಶನವನ್ನು ₹800ರಿಂದ ₹1,200ಕ್ಕೆ ಹೆಚ್ಚಳ
* ಮಾಜಿ ದೇವದಾಸಿಯರಿಗೆ ನೀಡುತ್ತಿರುವ ಮಾಸಾಶನವನ್ನು ₹1500ರಿಂದ ₹2000ಕ್ಕೆ ಹೆಚ್ಚಳ
• ನಿವೇಶನ ಹೊಂದಿರುವ ವಸತಿರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುವುದು.
* 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ ₹86,423 ಕೋಟಿ ಅನುದಾನ
* 2024-25ನೇ ಸಾಲಿನಲ್ಲಿ ಮಕ್ಕಳ ಉದ್ದೇಶಿತ ಯೋಜನೆಗಳಿಗೆ ₹54,617 ಕೋಟಿ ಅನುದಾನ
* ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಪಡಿಸಲು ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆ ಜಾರಿ
* ಬಿಬಿಎಂಪಿಯಲ್ಲಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಕ್ರೊಢೀಕರಿಸಲು ಹಲವು ಕ್ರಮಗಳ ಜಾರಿ
* 2023-24ನೇ ಸಾಲಿನಲ್ಲಿ ₹ 4,300 ಕೋಟಿ ತೆರಿಗೆ ಸಂಗ್ರಹ ಮಾಡುವ ಮುಖಾಂತರ ದಾಖಲೆಯ ತೆರಿಗೆ ಸಂಗ್ರಹ ಮಾಡುವತ್ತ ಮುನ್ನಡೆದಿದೆ. ಇದು 2022-23ನೇ ಸಾಲಿಗಿಂತ ₹1,000 ಕೋಟಿಗಳಷ್ಟು ಹೆಚ್ಚಾಗಿದೆ. 2024-25ರಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ಮೂಲಕ ₹6,000 ಕೋಟಿಗಳಷ್ಟು ತೆರಿಗೆ ಸಂಗ್ರಹದ ನಿರೀಕ್ಷೆ.
* ಪ್ರಸಕ್ತ ಸಾಲಿನಿಂದ ಪರಿಷ್ಕೃತ ಜಾಹೀರಾತು ನೀತಿ ಮತ್ತು Premium FAR ನೀತಿಯನ್ನು ಜಾರಿಗೆ ತರುವ ಮೂಲಕ ಹೆಚ್ಚುವರಿಯಾಗಿ ₹2,000 ಕೋಟಿಗಳಷ್ಟು ತೆರಿಗೆಯೇತರ ಸಂಪನ್ಮೂಲ ಸಂಗ್ರಹಿಸುವ ಗುರಿ ಹೊಂದಲಾಗಿದೆ.
* ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 20 ಲಕ್ಷ ಆಸ್ತಿಗಳ ಆಸ್ತಿ ತೆರಿಗೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ 2024-25ನೇ ಸಾಲಿನಿಂದ ಮಾಲೀಕರಿಗೆ ಡಿಜಿಟಲ್ ಇ-ಖಾತಾ ಮತ್ತು ಆಸ್ತಿ ತೆರಿಗೆ ಪಾವತಿ ವಿವರಗಳನ್ನು ದೊರಕಿಸಲಾಗುವುದು.
* ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಯನ್ನು ನಿವಾರಿಸಲು ಹಲವು ಕ್ರಮಗಳ ಜಾರಿ...
* ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಗರದ ಪ್ರಮುಖ ರಸ್ತೆಗಳಲ್ಲಿ 147 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿಗಳನ್ನು ₹1,700 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಮಂಜೂರಾತಿ ನೀಡಲಾಗಿದೆ. ಈ ಕಾಮಗಾರಿಗಳನ್ನು ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸಲಾಗುವುದು.
* ಸಂಚಾರ ದಟ್ಟಣೆ ನಿವಾರಿಸಲು ಹೆಬ್ಬಾಳ ಜಂಕ್ಷನ್‌ನಲ್ಲಿ ಟನೆಲ್ ನಿರ್ಮಿಸಲಾಗುವುದು.
*ಭೂಮಿಯ ಅಲಭ್ಯತೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕುಗಳ ಕಾರಣ ಅಸ್ತಿತ್ವದಲ್ಲಿರುವ ರಸ್ತೆಗಳ ವಿಸ್ತರಣೆಯು ಅತ್ಯಂತ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸುರಂಗ ಮಾರ್ಗ (Tunnel) ನಿರ್ಮಿಸುವ ಮೂಲಕ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಬಗೆಹರಿಸಲು ನಿರ್ಧರಿಸಿದೆ.
* ಸುಗಮ ಸಂಚಾರ-ಬ್ರಾಂಡ್ ಬೆಂಗಳೂರು ಯೋಜನೆಯಡಿ ಅಂತರಾರಾಷ್ಟ್ರೀಯ ಮಟ್ಟದ ತಜ್ಞ ಸಂಸ್ಥೆಯನ್ನು ನೇಮಿಸಿಕೊಳ್ಳಲಾಗಿದೆ. ಈ ಸಂಸ್ಥೆಯು ನೀಡುವ ವರದಿಯನ್ನು ಆಧರಿಸಿ, ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು.
* ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಬೆಂಗಳೂರಿನ ಆರ್ಥಿಕ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ವೃದ್ಧಿಸಲು ಸಹಕಾರಿಯಾಗುವಂತೆ ಪೆರಿಫೆರಲ್ ರಿಂಗ್ ರೋಡ್ ಅನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯಡಿ 73 ಕಿ.ಮೀ. ಉದ್ದದ ರಸ್ತೆಯನ್ನು 27,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಆರ್‌ಎಫ್‌ಪಿ ಕರೆಯಲಾಗಿದೆ. ಈ ಯೋಜನೆಯನ್ನು ಇದೇ ಸಾಲಿನಲ್ಲಿ ಪ್ರಾರಂಭ ಮಾಡಲು ಉದ್ದೇಶಿಸಿದೆ.
* ಬೆಂಗಳೂರು ನಗರದಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ (Sky-Deck) ನಿರ್ಮಾಣ.
* ನಗರಾಭಿವೃದ್ಧಿ ಇಲಾಖೆಯ ಅಂಗಸಂಸ್ಥೆಗಳಾದ BBMP, BMRCL, BWSSB, BDAಗಳ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಯ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್ ಪಾರ್ಕ್ ಸ್ಥಾಪನೆ.
ದೇಶದ ಅತ್ಯುತ್ತಮ ಮೆಟ್ರೊ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ‘ನಮ್ಮ ಮೆಟ್ರೊ’ ರೈಲು ಯೋಜನೆಯು ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿದೆ. 8 ಲಕ್ಷಕ್ಕೂ ಹೆಚ್ಚಿನ ಜನರು ಪ್ರತಿನಿತ್ಯ ಮೆಟ್ರೊ ಸೇವೆಯನ್ನು ಬಳಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 74 ಕಿ.ಮೀ. ಮಾರ್ಗದೊಂದಿಗೆ 2025ರ ಮಾರ್ಚ್ ವೇಳೆಗೆ ಹೊಸದಾಗಿ 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ.
* ಮೆಟ್ರೊ ಯೋಜನೆ ಹಂತ-2 ಮತ್ತು 2ಎ ಯೋಜನೆಯಡಿ ಹೊರವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಮೆಟ್ರೊ ಸೇವೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿ ಕಾರ್ಯಾಚರಣೆಯು ಲಾಭದಾಯಕವಾಗಿ ಪರಿಣಮಿಸಿರುವುದು ಹೆಮ್ಮೆಯ ಸಂಕೇತವಾಗಿದೆ.
* ನಮ್ಮ ಮೆಟ್ರೋ ಹಂತ-3 ರಡಿ ಅಂದಾಜು ₹15,611 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿದೆ.
* ನಮ್ಮ ಮೆಟ್ರೊ ಹಂತ-3ಎ ರಡಿಯಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ ಮೂಲಕ ಹೆಬ್ಬಾಳವನ್ನು ಸಂಪರ್ಕಿಸುವ ಮಾರ್ಗ ನಿರ್ಮಾಣ ಕುರಿತು ಡಿ.ಪಿ.ಆರ್. ಕರಡು ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು.
* ಬೆಂಗಳೂರು ಉಪನಗರ ರೈಲು ಯೋಜನೆಯಡಿ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಕಾರಿಡಾರ್-2ರ ಸಿವಿಲ್ ಕಾಮಗಾರಿಗಳನ್ನು ವೇಗವಾಗಿ ಅನುಷ್ಠಾನಗೊಳಿಸಲು ಕ್ರಮ.
* ಬಿಎಂಟಿಸಿಗೆ 1,334 ಹೊಸ ಎಲೆಕ್ಟ್ರಿಕ್ ಬಸ್‌ಗಳು ಮತ್ತು 820 ಬಿಎಸ್-6 ಡೀಸೆಲ್ ಬಸ್‌ಗಳ ಸೇರ್ಪಡೆ.
* ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ₹5,550 ಕೋಟಿ ವೆಚ್ಚದಲ್ಲಿ 775 ಎಂಎಲ್‌ಡಿ ಸಾಮರ್ಥ್ಯದ ಕಾವೇರಿ ಹಂತ-5 ಯೋಜನೆಯನ್ನು ಕಾರ್ಯಾರಂಭ. ಇದರಿಂದ 12 ಲಕ್ಷ ಜನರಿಗೆ ಪ್ರತಿದಿನ 110 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು.
* ಕಾವೇರಿ ಹಂತ-5ರಡಿಯಲ್ಲಿ ಒಳಚರಂಡಿ ಕಾಮಗಾರಿಗಳನ್ನು ಡಿಸೆಂಬರ್ 2024ರಲ್ಲಿ ಪೂರ್ಣಗೊಳಿಸಲಾಗುವುದು.
* 7 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ₹441 ಕೋಟಿ ವೆಚ್ಚದಲ್ಲಿ ಉನ್ನತೀಕರಣ.
* ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ₹200 ಕೋಟಿ ಅನುದಾನ.
* ಬಿಬಿಎಂಪಿಯ ಅರಣ್ಯ, ಕೆರೆ ಮತ್ತು ತೋಟಗಾರಿಕಾ ವಿಭಾಗವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣಾ ವಿಭಾಗ ಎಂದು ಮರುನಾಮಕರಣ ಮಾಡಿ, ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
* ಬಿಬಿಎಂಪಿ ಸಹಯೋಗದೊಂದಿಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ವಜ್ಞ ಉದ್ಯಾನವನದ ಅಭಿವೃದ್ಧಿ
* ಬೆಂಗಳೂರು ನಗರ ಸೇರಿದಂತೆ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಿದೆ.
ಪೌರಾಡಳಿತ
* ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನ
* ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೆಜಿಎಫ್, ತುಮಕೂರಿನ ವಸಂತನರಸಾಪುರ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಳ ಅಭಿವೃದ್ಧಿ.
* ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ (Satellite Townships) ಅಭಿವೃದ್ಧಿ.
* ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ (ಬಿಐಇಸಿ) ತುಮಕೂರುವರೆಗೆ ಮತ್ತು ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೊ ರೈಲು ಯೋಜನೆಗಳನ್ನು ಪ್ರಾರಂಭಿಸಲು ಕಾರ್ಯಸಾಧ್ಯತಾ ವರದಿ ತಯಾರಿಕೆ.
* ಮೈಸೂರು ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಕೆ.
* ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು ₹4,615 ಕೋಟಿಯಾಗಿದೆ. ಕಳೆದ ವರ್ಷ ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ₹320 ಕೋಟಿ ಅನುದಾನ ಒದಗಿಸಿದ್ದು, ಈ ವರ್ಷ ₹200 ಕೋಟಿ ಒದಗಿಸಿ, 7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದೇವೆ.
* ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ದ್ರವ ಹಾಗೂ ಘನ ತ್ಯಾಜ್ಯ ಸಂಸ್ಕರಣೆಗೆ ಕೇಂದ್ರ ಸರ್ಕಾರದ ಪಾಲು ₹2,185 ಕೋಟಿ ಒಳಗೊಂಡಂತೆ #5,072 ಕೋಟಿ ವೆಚ್ಚ ಮಾಡಲಾಗುತ್ತಿದೆ.
* ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು, ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆ ರಾಜ್ಯದಾದ್ಯಂತ ಜಾರಿ.
* ಆಸ್ತಿ ತೆರಿಗೆ ಮತ್ತು ಇನ್ನಿತರೆ ಶುಲ್ಕಗಳನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟಲು 3ಡಿ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್ ಮತ್ತು ಮರು ಮೌಲ್ಯಮಾಪನ ಮಾಡುವುದು.
* ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಸಮರ್ಪಕವಾಗಿ ವಸೂಲು ಮಾಡಲು, ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯಲಾಗುವುದು.
* ನೇರಪಾವತಿಯಡಿ ಕೆಲಸ ನಿರ್ವಹಿಸುತ್ತಿರುವ 24,005 ಪೌರಕಾರ್ಮಿಕರನ್ನು ಈಗಾಗಲೇ ಖಾಯಂಗೊಳಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ನೇರಪಾವತಿಯಡಿಯಲ್ಲಿ ಬಾಕಿ ಉಳಿದಿರುವ ಪೌರಕಾರ್ಮಿಕರಿಗೂ ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮ.
* ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರಕ್ಕೆ ಕ್ರಮ.
* ಮೈಸೂರಿನ ಪ್ರಖ್ಯಾತ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ಧಿಪಡಿಸಲು ಕ್ರಮ.
* 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು ₹5,000 ಕೋಟಿ ವೆಚ್ಚದ ಯೋಜನೆಗಳ ಅನುಷ್ಠಾನ.
* ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ನು 2002ರಲ್ಲಿ ಸಲ್ಲಿಸಲಾಗಿದ್ದು, ಕಳೆದ 22 ವರ್ಷಗಳಲ್ಲಿ ಈ ವರದಿಯ ಆಧಾರದ ಮೇಲೆ ಹಿಂದುಳಿದ ಪ್ರದೇಶಗಳಲ್ಲಿ ಅಸಮತೋಲನೆಯನ್ನು ನಿವಾರಿಸಲು ಬಹಳಷ್ಟು ಯೋಜನೆಗಳನ್ನು ಮತ್ತು ಬಂಡವಾಳ ಹೂಡಿಕೆಯನ್ನು ಮಾಡಲಾಗಿದೆ. ಇದರಿಂದ ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಒಂದು ಉನ್ನತಾಧಿಕಾರಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯ ಮೂಲಕ ಪ್ರಸ್ತುತ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲಾಗುವುದು.
* ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ (SITK) ಮೂಲ ಉದ್ದೇಶಗಳನ್ನು ಮತ್ತು ಕಾರ್ಯವನ್ನು ಸೂಕ್ತವಾಗಿ ಬಿಂಬಿಸುವ ನಿಟ್ಟಿನಲ್ಲಿ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವೆಂದು (KSPPC) ಪುನರ್ ರಚಿಸಲಾಗುವುದು.
* ಕರ್ನಾಟಕ ಸರ್ಕಾರವು 2023-24ನೇ ಸಾಲಿನಲ್ಲಿ ಸುಮಾರು 88,150 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಿದೆ. Electronic System Design and Manufacturing (ESDM), ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ, ತಯಾರಿಕಾ ವಲಯ, ಆಟೊಮೊಬೈಲ್, ಡೇಟಾ ಸೆಂಟರ್ ಮತ್ತಿತರ ವಲಯಗಳಲ್ಲಿ ಈ ಹೂಡಿಕೆಗಳನ್ನು ಮಾಡಲಾಗುತ್ತಿದೆ.
* ಬೆಂಗಳೂರು ಸಮೀಪ ಸುಮಾರು 2000 ಎಕರೆ ಪ್ರದೇಶದಲ್ಲಿ Knowledge Health Care, Innovation and Research City (KHIR) ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಈ ಯೋಜನೆಯಿಂದ ಅಂದಾಜು ₹40,000 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 80,000 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ.
* ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿ ಜಾರಿ.
* ರಾಜ್ಯಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು 2025ರ ಫೆಬ್ರುವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ (Global Investor’s Meet) ಆಯೋಜನೆ.
* ಗ್ರಾಮೀಣ ಜನರಲ್ಲಿ ಆರ್ಥಿಕ ಶಿಸ್ತು ಮತ್ತು ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಎಂಎಸ್‌ಐಎಲ್ ವತಿಯಿಂದ ಚಿಟ್‌ಫಂಡ್ ಅನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು.
* ಯಶವಂತಪುರದಲ್ಲಿ ಕೆಎಸ್‌ಡಿಎಲ್ ವತಿಯಿಂದ ಜಮೀನಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಚೇರಿ ಸಂಕೀರ್ಣ ನಿರ್ಮಾಣ.
* ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕೈಗಾರಿಕಾ ವಸಾಹತುಗಳನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ₹39 ಕೋಟಿ ವೆಚ್ಚದಲ್ಲಿ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ನಿಗಮದ (KSSIDC) ಮೂಲಕ ಮೇಲ್ದರ್ಜೆಗೇರಿಸಲಾಗುವುದು.
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿ ಧಾರವಾಡ ಸಮೀಪ ಸುಮಾರು 6,000 ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸಲಾಗುವುದು.
* ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷ ಘಟಕ ಯೋಜನೆಯಡಿ ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಲ್ಲಿ (ಕೆಐಎಲ್‌ಟಿ) ಡಿಪ್ಲೊಮಾ ಇನ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಮಾಡಲು ಪ್ರೋತ್ಸಾಹಧನ.
* ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಬೆಲೆಯಲ್ಲಿ ಮರಳು ಲಭ್ಯಪಡಿಸಲು ಹೊಸ ಮರಳು ನೀತಿ 2020 ಅನ್ನು ಅನುಮೋದಿಸಲಾಗಿದೆ.
* ಮಂಡ್ಯದ ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಾಗುವುದು.
* ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು 2024-29ರ ಅವಧಿಗೆ ₹10,000 ಕೋಟಿ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿ ಜಾರಿ.
* ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆಯಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ ₹50 ಕೋಟಿ ಅನುದಾನ.
* ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭ.
* ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪಾರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು.
* ಜವಳಿ ಪಾರ್ಕ್‌ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿಯನ್ವಯ ಸಹಾಯಧನ.
* ಮಹಾತ್ಮಾ ಗಾಂಧೀಜಿಯವರು ಭೇಟಿ ನೀಡಿದ್ದ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಕ್ಕಾಗಿ ಕ್ರಮ.
* ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಿ, ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ನೋಡಿಕೊಳ್ಳಲು ‘ಭೂ ಸುರಕ್ಷಾ ಯೋಜನೆ’ ಜಾರಿ.
* ಆಕಾರ್‌ಬಂದ್ ಮತ್ತು ಆರ್‌ಟಿಸಿಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಹಿಡುವಳಿದಾರರಿಗೆ ತ್ವರಿತ ಸೇವೆ ಒದಗಿಸಲು ಆಕಾರ್‌ಬಂದ್‌ಗಳ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲಾಗುವುದು.
* ಬಾಕಿ ಉಳಿದಿರುವ ಗ್ರಾಮಗಳನ್ನು ಪೋಡಿ ಅಭಿಯಾನ 2.0ರಡಿ ಪೋಡಿ ಮುಕ್ತ ಮಾಡಲು ಆದ್ಯತೆ ಮೇರೆಗೆ ಕ್ರಮ.
* ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕ್ರಮ.
* ರಾಜ್ಯದಲ್ಲಿನ ಸುಮಾರು 30,700 ಗ್ರಾಮ ಠಾಣಾ ಪ್ರದೇಶಗಳನ್ನು ಹಂತ ಹಂತವಾಗಿ ಡ್ರೋನ್ ಮುಖಾಂತರ ಸರ್ವೆ ಮಾಡಿಸಿ ಆಸ್ತಿ ಮತ್ತು ಹಕ್ಕು ದಾಖಲಾತಿಗಳನ್ನು ಭೂ ಮಾಲೀಕರಿಗೆ ವಿತರಿಸುವ ಯೋಜನೆ ರಾಜ್ಯದಾದ್ಯಂತ ವಿಸ್ತರಣೆ.
* ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ನೋಟಿಸ್ ರಹಿತ ಮ್ಯುಟೇಷನ್‌ಗಳು ನಿಗದಿತ ತಂತ್ರಾಂಶದಲ್ಲಿ ಸ್ವಯಂ-ಚಾಲಿತವಾಗಿ ಅನುಮೋದನೆಯಾಗುವಂತೆ ಕ್ರಮ.
* ಡಿಜಿ ಕಂದಾಯ ಯೋಜನೆಯಡಿ ಕಂದಾಯ ಇಲಾಖೆಯು ನೀಡುವ ಎಲ್ಲಾ ಸೇವೆಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಡಿಜಿಟಲ್ ಪ್ಲಾಟ್ಫಾರಂ ಮೂಲಕ ಸಾರ್ವಜನಿಕರಿಗೆ ಒದಗಿಸಲು ಕ್ರಮ.
* ಸರ್ಕಾರವು ದಾಖಲೆ ರಹಿತ ಜನವಸತಿ ಪ್ರದೇಶಗಳಾದ ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳೆಂದು ಘೋಷಿಸಿದ್ದು, ಅಲ್ಲಿನ ಸುಮಾರು 2 ಲಕ್ಷ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ.
* ಭೂ-ಮಾಪನ ಇಲಾಖೆಗೆ ಸೇರಿದ 240 ಅಭಿಲೇಖಾಲಯ ಕೊಠಡಿಗಳನ್ನು ಆಧುನೀಕರಣಗೊಳಿಸುವ ಮೂಲಕ ಕಂದಾಯ ದಾಖಲೆಗಳನ್ನು ಪಾರದರ್ಶಕ ಹಾಗೂ ಆನ್‌ಲೈನ್ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ.
* ಭೂಮಿ ತಂತ್ರಾಂಶದಲ್ಲಿ ಫ್ಲಾಗ್ ಮಾಡಲಾಗಿರುವ ಸರ್ಕಾರಿ ಜಮೀನಿನ ಪಹಣಿಗಳನ್ನು ಲ್ಯಾಂಡ್ ಬೀಟ್ ಆಪ್ ಬಳಸಿ, ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರ ಸರ್ಕಾರಿ ಜಮೀನಿನ ಒತ್ತುವರಿ ಹಾಗೂ ಸಂರಕ್ಷಣೆ ಕುರಿತು ನಿಗಾ ವಹಿಸಲಾಗುವುದು.
* ಪ್ರಸಕ್ತ ಸಾಲಿನಲ್ಲಿ 42 ತಾಲ್ಲೂಕಾ ಆಡಳಿತ ಸೌಧದ ಕಾಮಗಾರಿಗಳಿಗೆ ₹80 ಕೋಟಿ ಹಾಗೂ 14 ಜಿಲ್ಲಾಡಳಿತ ಸೌಧದ ಕಾಮಗಾರಿಗಳಿಗೆ ₹50 ಕೋಟಿ ಅನುದಾನ.
* ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಡಳಿತ ಕಚೇರಿಗಳು ಹಾಗೂ ಅಗತ್ಯವಿರುವ ತಾಲ್ಲೂಕುಗಳಲ್ಲಿ ತಾಲ್ಲೂಕಾ ಆಡಳಿತ ಕಚೇರಿಗಳ ನಿರ್ಮಾಣ.
* 33.19 ಲಕ್ಷ ರೈತರಿಗೆ ತಲಾ ₹2,000ದಂತೆ ಇನ್‌ಪುಟ್ ಸಬ್ಸಿಡಿ ₹629 ಕೋಟಿ ಅನುದಾನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
* ಬರದ ತೀವ್ರತೆಯನ್ನು ತಗ್ಗಿಸಲು ₹20 ಕೋಟಿ ವೆಚ್ಚದಲ್ಲಿ ಮಿನಿ ಮೇವಿನ ಕಿಟ್ ವಿತರಿಸಲಾಗುತ್ತಿದೆ.
* ಅಂತರ್ಜಲ ಮಟ್ಟ ವೃದ್ಧಿಸಲು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ₹200 ಕೋಟಿ ಅನುದಾನ.
*ಸಣ್ಣ ನೀರಾವರಿ ಇಲಾಖೆಯ ಮೂಲಕ ₹100 ಕೋಟಿ ವೆಚ್ಚದ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
* ಪ್ರಸಕ್ತ ಸಾಲಿನಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಟ್ಟು ₹500 ಕೋಟಿ ವೆಚ್ಚದಲ್ಲಿ ವಿವಿಧ ಬರ ಉಪಶಮನ ಕ್ರಮಗಳನ್ನು ತೆಗೆದುಕೊಳ್ಳಲು ಕ್ರಮ.
* ಶಾಲಾ ಮಕ್ಕಳಿಗೆ ಹವಾಮಾನ ಬದಲಾವಣೆಯ ಪರಿಣಾಮದ ದೃಶ್ಯಗಳು ಮತ್ತು ಹವಾಮಾನ ಬದಲಾವಣೆ ಪರಿಹಾರಗಳ ಕುರಿತು ಅರಿವು ಮೂಡಿಸಲು ಹವಾಮಾನ ಬದಲಾವಣೆ ಅನುಭವ ಕೇಂದ್ರವನ್ನು ₹10 ಕೋಟಿ ವೆಚ್ಚದಲ್ಲಿ ಪ್ರಾರಂಭ.
* Anytime Anywhere Registration ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಕಾಯ್ದೆಗಳಿಗೆ ತಿದ್ದುಪಡಿ.
* ಸ್ಥಿರಾಸ್ತಿ ನೋಂದಣಿಗೆ ಸಂಬಂಧಿಸಿದ ಎಲ್ಲಾ ತಂತ್ರಾಂಶಗಳ ಏಕೀಕರಣ.
• ನಾಗರಿಕರ ಅನುಕೂಲಕ್ಕಾಗಿ ಭಾನುವಾರ ಸಹ ಆಯ್ದ ಉಪ ನೋಂದಣಾಧಿಕಾರಿ ಕಚೇರಿಯನ್ನು ತೆರೆಯಲಾಗುವುದು.
* ನಾಗರಿಕರು ದೃಢೀಕೃತ ಪ್ರತಿಗಳನ್ನು ಪಡೆಯುವಲ್ಲಿನ ವಿಳಂಬವನ್ನು ತಗ್ಗಿಸಲು ಕೇಂದ್ರೀಕೃತ ವರ್ಚುವಲ್ ವಿತರಣಾ ವ್ಯವಸ್ಥೆಯ ಮೂಲಕ ದಾಖಲೆಗಳ ವಿತರಣೆಯನ್ನು ಸ್ವಯಂಚಾಲಿತಗೊಳಿಸಲಾಗುವುದು.
* ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಣಾಸಿ ಮತ್ತು ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಾಣ.
* ತಿರುಮಲದಲ್ಲಿ ₹200 ಕೋಟಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಶ್ರೀಶೈಲದಲ್ಲಿ ₹85 ಕೋಟಿ ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ ₹11 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ವಾರಾಣಸಿಯಲ್ಲಿ ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
* ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ಅನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ₹158 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ.
* ಯಾವುದೇ ಆದಾಯವಿಲ್ಲದ 34,165 ʻಸಿʼ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ Vision Group ರಚನೆ.
* ಇನಾಂ, ಇನಾಂಯೇತರ ಜಮೀನು ಕಳೆದುಕೊಂಡಂತಹ 29,523 ʻಸಿʼ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್ ಮೊತ್ತವನ್ನು ಅರ್ಚಕರುಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
* ಆಡಳಿತ ಸುಧಾರಣಾ ಆಯೋಗ-2 ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಿ, ಅವುಗಳ ಅನುಷ್ಠಾನದ ಕುರಿತು ಪರಿಶೀಲಿಸಲು ಸರ್ಕಾರ ಆಡಳಿತ ಸುಧಾರಣಾ ಆಯೋಗವನ್ನು ರಚಿಸಿದೆ. ಈ ಆಯೋಗವು ಆಡಳಿತ ಸುಧಾರಣಾ ಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡಲಿದೆ.
* ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುವುದು.
* ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ವಿವಿಧ ಕಾನೂನಿನಡಿಯಲ್ಲಿ 7,214 ಸಂಸ್ಥೆಗಳ ಶಾಸನಬದ್ಧ ಲೆಕ್ಕಪರಿಶೋಧಕರಾಗಿರುತ್ತದೆ. ಈ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಏಕರೂಪತೆಯನ್ನು ತರಲು ಲೆಕ್ಕಪರಿಶೋಧನಾ ಕಾಯ್ದೆಯನ್ನು ಜಾರಿಗೆ ತರಲಾಗುವುದು.
* ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲುಗಳಿಗೆ ನೇರ ಪರಿಹಾರ ಒದಗಿಸುವ ದೃಷ್ಟಿಯಿಂದ ಜನಸ್ಪಂದನ ಕಾರ್ಯಕ್ರಮವನ್ನು ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಆಯೋಜಿಸಲಾಗುತ್ತಿದೆ.
* ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವ ಕೊಡುಗೆಯನ್ನು ಸ್ಮರಿಸಲು ₹2 ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ. ಜತೆಗೆ, ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ್ದ ಸ್ಥಳಗಳಲ್ಲಿ ಸ್ಮರಣಾರ್ಥ ಫಲಕಗಳ ಅಳವಡಿಕೆಗೆ ಕ್ರಮ.
* ವಾರ್ತಾ ಇಲಾಖೆಯು ಪ್ರಕಟಿಸುತ್ತಿರುವ ವಾರ್ತಾ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸ ಪತ್ರಿಕೆಗಳನ್ನು ಡಿಜಿಟೈಸ್ ಮಾಡುವ ಮೂಲಕ ಇನ್ನೂ ಹೆಚ್ಚಿನ ಜನರಿಗೆ ತಲುಪಿಸಲು ಕ್ರಮ.
* ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಣೆ.
* ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮತ್ತಷ್ಟು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಮಾಡಲು, ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತರಲಾಗುವುದು.
* ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು ₹100 ಕೋಟಿ ಅನುದಾನ.
* ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು.
* ಸಾಹಸ ಪ್ರವಾಸೋದ್ಯವನ್ನು ಉತ್ತೇಜಿಸಲು ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ ಅಭಿವೃದ್ಧಿಪಡಿಸಲಾಗುವುದು.
* ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು.
* ರಾಜ್ಯದ 530 ಸಂರಕ್ಷಿತ ಸ್ಮಾರಕಗಳನ್ನು 3ಡಿ ಲೇಸರ್ ಸ್ಕ್ಯಾನಿಂಗ್ ಮೂಲಕ ಡಿಜಿಟಲ್ ದಾಖಲೀಕರಣ ಮಾಡಲಾಗಿದೆ.
* ಕೆಎಸ್‌ಟಿಡಿಸಿ ವತಿಯಿಂದ ಬಾಗಲಕೋಟೆಯ ಐಹೊಳೆಯಲ್ಲಿ ಸುಸಜ್ಜಿತವಾದ ಹೋಟೆಲ್ ನಿರ್ಮಿಸಲಾಗುವುದು ಹಾಗೂ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
* ಬೀದರ್ ಹಾಗೂ ವಿಜಯಪುರದಲ್ಲಿ ಕರೇಜ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ ₹15 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು.
* ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ ₹25 ಕೋಟಿ ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆಎಲ್‌ಆರ್ ಸಂಸ್ಥೆಯ ಮೂಲಕ ನಿರ್ಮಾಣ.
* ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.
* ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಬಂಗಾರದ ಮನುಷ್ಯ ಚಿತ್ರದ ಹಾಡು ಹೇಳಿದ ಸಿದ್ದರಾಮಯ್ಯ
‘ಆಗದು ಎಂದು ಕೈ ಕಟ್ಟಿ ಕುಳಿತರೆ’ ಹಾಡು ಪ್ರಸ್ತಾಪಿಸಿದ ಸಿಎಂ
ಹಾಡಿನ ಮೂಲಕ ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.