ADVERTISEMENT

Budget Opinion: ಬದಲಾಗಬೇಕಿದೆ ನಗರಾಭಿವೃದ್ಧಿ ಅನುಷ್ಠಾನದ ವಿಧಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 23:59 IST
Last Updated 16 ಫೆಬ್ರುವರಿ 2024, 23:59 IST
ಕೆ.ವಿ.ವಸಂತಕುಮಾರ್
ಕೆ.ವಿ.ವಸಂತಕುಮಾರ್   

ನಗರಾಭಿವೃದ್ಧಿಗೆ ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಆದರೆ, ನಗರಗಳ ಅಭಿವೃದ್ಧಿ ಅನುಷ್ಠಾನದ ವಿಧಾನಗಳನ್ನು ಬದಲಿಸಿಕೊಳ್ಳದಿದ್ದರೆ ಸಾವಿರಾರು ಕೋಟಿ ಮೊತ್ತದ ಯೋಜನೆಗಳು ವಿಫಲವಾಗುತ್ತವೆ. ಅದಕ್ಕೆ ಕೇಂದ್ರ ಸರ್ಕಾರದ ‘ಸ್ಮಾರ್ಟ್‌ಸಿಟಿ’ ಯೋಜನೆ ಅತ್ಯುತ್ತಮ ಉದಾಹರಣೆ.

‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಆಯ್ದ ನಗರಗಳ ಅಭಿವೃದ್ಧಿಗೆ ಕೇಂದ್ರದ ನೆರವೂ ಸೇರಿದಂತೆ ₹ 1 ಸಾವಿರ ಕೋಟಿಯವರೆಗೂ ಅನುದಾನ ದೊರಕಿತ್ತು. ಆದರೆ, ಬಂದ ಹಣದಲ್ಲಿ ಅರ್ಧದಷ್ಟೂ ವಿನಿಯೋಗಿಸದೆ ಕಳಪೆ ಕಾಮಗಾರಿ ನಡೆಸಲಾಗಿದೆ. ತೋರಿಸಿರುವುದು ಮಾತ್ರ ಪೂರ್ಣ ವೆಚ್ಚ. ಶಿವಮೊಗ್ಗ ನಗರದ ‘ಸ್ಮಾರ್ಟ್‌ ಸಿಟಿ’ ಕಾಮಗಾರಿಯ ವೈಫಲ್ಯಕ್ಕೆ ಈಚೆಗೆ ನಡೆದ ಒಂದು ಘಟನೆ ಸಾಕ್ಷಿಯಾಯಿತು. ವ್ಯಕ್ತಿಯೊಬ್ಬ ಚರಂಡಿಯ ಡೆಕ್‌ಸ್ಲ್ಯಾಬ್‌ ಮೇಲೆ ನಿಂತಿದ್ದಾಗ ಕುಸಿದು ಮೃತಪಟ್ಟ. ಇದು ನಮ್ಮ ನಗರಾಭಿವೃದ್ಧಿಗೆ ಹಿಡಿದ ಕನ್ನಡಿ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಮುಂದಾಗದೇ ಇದ್ದರೆ ಘೋಷಿಸಿದ ಯೋಜನೆಗಳ ಅನುಷ್ಠಾನ ವ್ಯರ್ಥವಾಗುತ್ತದೆ.

ಬಹುತೇಕ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಖಾಸಗಿ ಸಹಭಾಗಿತ್ವ ಭವಿಷ್ಯದಲ್ಲಿ ನಾಗರಿಕರಿಗೆ ದೊಡ್ಡ ತೊಡಕಾಗಿ ಪರಿಣಮಿಸಲಿದೆ. ಹಾಗಾಗಿ, ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವೇ ಹೂಡಿಕೆ ಮಾಡಬೇಕು. ರಾಜ್ಯದ ನಗರಗಳ ನಿರ್ವಹಣೆಯಲ್ಲಿ ವಿದ್ಯುತ್‌ ಶುಲ್ಕ ನಗರಾಡಳಿತಗಳಿಗೆ ಭಾರವಾಗಿದೆ. ಬಜೆಟ್‌ನಲ್ಲಿ ಸೋಲಾರ್ ಪಾರ್ಕ್‌ಗಳ ಸ್ಥಾಪನೆಗೆ ಒತ್ತು ನೀಡಿರುವುದು ಸ್ವಾಗತಾರ್ಹ. 

ADVERTISEMENT

2024–25ನೇ ಸಾಲಿನಲ್ಲಿ ಮೂರು ಲಕ್ಷ ಮನೆಗಳ ನಿರ್ಮಾಣದ ಘೋಷಣೆ ಮಾಡಲಾಗಿದೆ. ಆದರೆ, ಹತ್ತು ಹಲವು ವಸತಿ ಯೋಜನೆಗಳ ಮೂಲಕ ಅನುದಾನ ನೀಡಿದರೂ, ಫಲಾನುಭವಿಗಳ ಆಯ್ಕೆಯ ರಾಜಕೀಯದಿಂದಾಗಿ ನಿಜವಾದ ವಸತಿ ರಹಿತರಿಗೆ, ಬಡವರಿಗೆ ಸೂರು ಸಿಗುತ್ತಿಲ್ಲ. ಇಂದಿಗೂ ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಇಲ್ಲ. ಕೆಲ ವಸತಿ ಯೋಜನೆಗಳನ್ನು ಫಲಾನುಭವಿಗಳ ವಂತಿಗೆ, ಬ್ಯಾಂಕ್‌ ಸಾಲ ಸೌಲಭ್ಯಗಳಿಂದ ಅನುಷ್ಠಾನ ಮಾಡಲಾಗುತ್ತಿದೆ. ಅದರ ಬದಲು ಸರ್ಕಾರವೇ ಪೂರ್ಣ ಹಣ ಒದಗಿಸಬೇಕು. ಗುಣಮಟ್ಟದ ಮನೆಗಳನ್ನು ಕಟ್ಟಿಕೊಡಬೇಕು.

–ಕೆ.ವಿ.ವಸಂತಕುಮಾರ್, ಚಾರ್ಟರ್ಡ್‌ ಅಕೌಂಟೆಂಟ್‌, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.