ಬೆಂಗಳೂರು: ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಹೆಚ್ಚು ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದಕ್ಕಾಗಿ ನೀತಿಯನ್ನು ಪರಿಷ್ಕರಣೆ ಮಾಡಿ ಕೆಂಪು ಹಾಸು ಹಾಕಲು ಮುಂದಾಗಿದ್ದಾರೆ.
ಕೃಷಿ, ತೋಟಗಾರಿಕೆ, ಸಿರಿಧಾನ್ಯ ಮಾರುಕಟ್ಟೆ, ಉಗ್ರಾಣ ನಿರ್ಮಾಣ, ಪ್ರವಾಸೋದ್ಯಮ ತಾಣ ಅಭಿವೃದ್ಧಿ, ಸೋಲಾರ್ ಪಾರ್ಕ್ ನಿರ್ಮಾಣ, ಕ್ಯಾಥ್‌ಲ್ಯಾಬ್ ಸ್ಥಾಪನೆ, ರಸ್ತೆ ಅಭಿವೃದ್ಧಿ, ನಮ್ಮ ಮೆಟ್ರೊ ರೈಲು ವಿಸ್ತರಣೆ, ವಿದ್ಯುತ್ ಸಬ್‌ಸ್ಟೇಷನ್, ಜಲಸಾರಿಗೆ, ಬಂದರು ಅಭಿವೃದ್ಧಿ, ಹಡಗು ನಿರ್ಮಾಣ, ಜವಳಿ ಪಾರ್ಕ್, ಕ್ರೀಡಾಂಗಣ ಸೇರಿದಂತೆ ಕೇಬಲ್ ಕಾರ್, ರೋಪ್‌ವೇಗಳನ್ನು ಒದಗಿಸಲು ಖಾಸಗಿ ಸಹಭಾಗಿತ್ವವನ್ನೇ ಅವಲಂಬಿಸಲಾಗಿದೆ.
ಬಜೆಟ್ ಭಾಷಣದಲ್ಲಿ 37 ಅಂಶಗಳಲ್ಲಿ ನೂರಾರು ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಘೋಷಿಸಲಾಗಿದೆ. ಅಲ್ಲದೆ, ವಸತಿ ನಿಲಯಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಮೊರೆಹೋಗಲಾಗಿದೆ.
ಖಾಸಗಿ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ‘ಪಿಪಿಪಿ ನೀತಿ–2018’ಕ್ಕೆ ಮಧ್ಯಂತರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವ ಎಲ್ಲ ಯೋಜನೆಗಳ ಮಾಹಿತಿ ಸಂಗ್ರಹ, ಮೇಲ್ವಿಚಾರಣೆ, ಪರಿಶೀಲನೆಗೆ ತಂತ್ರಜ್ಞಾನ ಆಧಾರಿತ ಮಾಹಿತಿ ನಿರ್ವಹಣೆ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದು ಪ್ರಕಟಿಸಲಾಗಿದೆ.
ಸಿರಿಧಾನ್ಯಗಳನ್ನು ನಾಗರಿಕರಿಗೆ ತಲುಪಿಸುವ ‘ನಮ್ಮ ಮಿಲ್ಲೆಟ್’ ಮಾರುಕಟ್ಟೆಗೆ ಅಗ್ರಿ–ಟೆಕ್ ಕಂಪನಿಗಳನ್ನೇ ನಂಬಿಕೊಳ್ಳಲಾಗಿದೆ. ಕೃಷಿಯಲ್ಲಿ ತಾಂತ್ರಿಕತೆ ಅರಿವು ಮೂಡಿಸಲು ಜ್ಞಾನ ಕೇಂದ್ರ ನಿರ್ಮಾಣ, ಆಹಾರ ಪಾರ್ಕ್‌ಗಳ ನಿರ್ಮಾಣ, ತೋಟಗಾರಿಕೆ, ಪುಷ್ಪ ಬೆಳೆಗಳ ರಫ್ತಿಗೆ ಮಾರುಕಟ್ಟೆ– ಸಂಸ್ಕರಣಾ ಘಟಕಗಳ ಸ್ಥಾಪನೆ, ಶೀತಲಗೃಹ, ಸಾಂಬಾರು ಪದಾರ್ಥ ರಫ್ತು ಮಾಡಲು ಪಿಪಿಪಿ ಮಾದರಿಯನ್ನೇ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.