ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024–25ನೇ ಸಾಲಿನಲ್ಲಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಸಂಗ್ರಹಿಸಿಯೇ ನಗರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕಿದೆ.
2023–24ನೇ ಸಾಲಿನಲ್ಲಿ ₹4,300 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ತಲುಪುವುದಾಗಿ ಹೇಳಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ₹1 ಸಾವಿರ ಕೋಟಿ ಹೆಚ್ಚು. ಇದೇ ರೀತಿ ಮುಂದಿನ ಆರ್ಥಿಕ ವರ್ಷದಲ್ಲಿ ₹6 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಈ ಗುರಿ ನೀಡುವ ಮೂಲಕ ಆಸ್ತಿ ಮಾಲೀಕರ ಮೇಲೆ ಬಿಬಿಎಂಪಿ ಒತ್ತಡ ಹೆಚ್ಚಾಗಲಿದೆ.
ಜಾಹೀರಾತು ನೀತಿಯನ್ನು ಪರಿಷ್ಕರಿಸಿ, ಅಪಾರ್ಟ್‌ಮೆಂಟ್‌ಗಳ ‘ಪ್ರೀಮಿಯಂ ಎಫ್‌ಎಆರ್’ ನೀತಿಯನ್ನೂ ಜಾರಿಗೆ ತರುವ ಮೂಲಕ ಹೆಚ್ಚುವರಿಯಾಗಿ ₹2 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಬಿಬಿಎಂಪಿ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ನಿರೀಕ್ಷಿಸದೆ ತನ್ನದೇ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ತೆರಿಗೆ ಸಂಗ್ರಹವಲ್ಲದೆ ಇನ್ನಾವ ರೀತಿಯಲ್ಲೂ 2024–25ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಹಣ ನಿರೀಕ್ಷಿಸುವಂತಿಲ್ಲ. ಹೀಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೇ ಸಾವಿರಾರು ಕೋಟಿ ಹಣವನ್ನು ಪಾವತಿಸಬೇಕಿರುವ ಬಿಬಿಎಂಪಿಗೆ ಮುಂದಿನ ಹೊಸ ಯೋಜನೆ ರೂಪಿಸಲು ಆರ್ಥಿಕ ಹಿನ್ನಡೆಯಾಗಲಿದೆ.
‘ಸರ್ಕಾರದಿಂದ ಅನುದಾನ ನಿರೀಕ್ಷಿಸದೆ, ಬಿಬಿಎಂಪಿ ತನ್ನ ಯೋಜನೆಗಳಿಗೆ ತಾನೇ ಹಣ ಕ್ರೋಡೀಕರಿಸಿಕೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಾಗ್ಗೆ ಹೇಳುತ್ತಿದ್ದರು. ಅದು ರಾಜ್ಯ ಬಜೆಟ್‌ನಲ್ಲಿ ಪ್ರತಿಫಲನವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.