ADVERTISEMENT

Karnataka Budget 2024 | ಸರ್ವರಿಗೂ ಪಾಲು, ಪ್ರಗತಿಯೇ ಸವಾಲು

ಸುಬ್ರಹ್ಮಣ್ಯ ವಿ.ಎಸ್‌.
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
   

ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳ ಭಾರವನ್ನು ಹೊರಲು ಅಣಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವುಗಳಿಗೆ ಅಗತ್ಯ ಅನುದಾನ ಹೊಂದಿಸುವ ಜತೆಗೆ ಮಾನವ ಸಂಪನ್ಮೂಲದ ಬಲವರ್ಧನೆ, ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡುವ ಯತ್ನವನ್ನು ಬಜೆಟ್‌ನಲ್ಲಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಎದುರುಗೊಳ್ಳುವ ಹೊತ್ತಿನಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ‘ಮತ ಶಿಕಾರಿ’ಗೆ ಪೂರಕವಾದ ಜನಪ್ರಿಯ ಘೋಷಣೆಗಳನ್ನು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದನ್ನು ಹುಸಿಯಾಗಿಸಿದ ಮುಖ್ಯಮಂತ್ರಿ, ಗ್ಯಾರಂಟಿಗಳಿಗೇ ಸೀಮಿತಗೊಳಿಸಿದರು. ‘ಗ್ಯಾರಂಟಿ’ಗಳಿಂದಾಗಿ ರಾಜ್ಯದ ಅಭಿವೃದ್ಧಿ ಸ್ಥಗಿತವಾಗಿದೆ ಎಂಬ ಆರೋಪವನ್ನು ನಿರಾಕರಿಸುವುದಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನೂ
ಪ್ರಸ್ತಾಪಿಸಿದ್ದಾರೆ. ಭಾರಿ ನೀರಾವರಿ ಯೋಜನೆಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಿದ್ದರೂ ಹೆಚ್ಚಿನ ಅನುದಾನವನ್ನು ಒದಗಿಸಿಲ್ಲ. ಮೂಲಸೌಕರ್ಯ ಯೋಜನೆಗಳ ಪ್ರಸ್ತಾಪವಿದ್ದರೂ ಬಹುತೇಕ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಸಂವಿಧಾನದ ಆಶಯಗಳು ಮತ್ತು ಬಸವಾದಿ ಶರಣರ ವಚನಗಳಲ್ಲಿನ ದಾಸೋಹದ ತತ್ವಗಳನ್ನು ಉಲ್ಲೇಖಿಸುತ್ತಾ ವಿಧಾನಸಭೆಯಲ್ಲಿ ದಾಖಲೆಯ 15ನೇ ಬಜೆಟ್‌ ಅನ್ನು ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದರು. 2024–25ನೇ ಆರ್ಥಿಕ ವರ್ಷದ  ಬಜೆಟ್‌ ಗಾತ್ರ ₹3.71 ಲಕ್ಷ ಕೋಟಿಯಷ್ಟಿದ್ದು, ₹27,354 ಕೋಟಿಯಷ್ಟು ರಾಜಸ್ವ ಕೊರತೆಯೂ ಇದೆ. ಮುಂದಿನ ಆರ್ಥಿಕ ವರ್ಷದಲ್ಲಿ ₹1.05 ಲಕ್ಷ ಕೋಟಿಯಷ್ಟು ಸಾಲ ಪಡೆಯುವ ಪ್ರಸ್ತಾವವಿದ್ದು, ಅದರೊಂದಿಗೆ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹6.65 ಲಕ್ಷ ಕೋಟಿ ತಲುಪಲಿದೆ.

ADVERTISEMENT

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿದಂತೆ ತಳ ಸಮುದಾಯಗಳು ಹಾಗೂ ದುಡಿಯುವ ವರ್ಗದ ಜನರಿಗೆ ಸಾಮಾಜಿಕ ನ್ಯಾಯ, ಆದಾಯದ ಪಾಲನ್ನು ಹಂಚುವ ತಮ್ಮದೇ ಆರ್ಥಿಕ ವಿಧಾನವನ್ನು ಈ ಬಜೆಟ್‌ನಲ್ಲೂ ಮುಂದುವರಿಸಿದರು. ಈ ಸಮುದಾಯಗಳ ಏಳ್ಗೆಗೆ ಅನುದಾನ ನಿಗದಿಯಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ (ಟಿಎಸ್‌ಪಿ) ₹39,121 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಎರಡೂ ಉಪ ಯೋಜನೆಗಳಿಗೆ ಒಟ್ಟು ₹4,827 ಕೋಟಿಯಷ್ಟು ಹೆಚ್ಚಿನ ಅನುದಾನ ಒದಗಿಸಲಾಗಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನೇರವಾಗಿ ಆರ್ಥಿಕ ನೆರವು ನೀಡಿದ್ದ ಮುಖ್ಯಮಂತ್ರಿ, ಈ ಬಾರಿ ಅವುಗಳ ಜತೆಯಲ್ಲೇ ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಸೃಜನೆಯ ಹಲವು ಯೋಜನೆಗಳನ್ನು ಪ್ರಕಟಿಸಿದರು. ಯುವನಿಧಿಯ ನೆರವಿನ ಜತೆಯಲ್ಲೇ 25,000 ಮಂದಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಲ್ಪಿಸುವ ‘ಯುವನಿಧಿ ಪ್ಲಸ್‌’, ಹೆಚ್ಚುವರಿ ಡಿಪ್ಲೊಮಾ ಕೋರ್ಸ್‌ಗಳ ಆರಂಭ, 40 ಸಾವಿರ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮತ್ತು ಸಂವಹನ ಕೌಶಲ ತರಬೇತಿಯ ಕಾರ್ಯಕ್ರಮಗಳು ಬಜೆಟ್‌ನಲ್ಲಿವೆ. ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಮಹಿಳೆಯರಿಗೆ ಕೌಶಲಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ಕಲ್ಪಿಸುವ ಹಲವು ಯೋಜನೆಗಳನ್ನೂ ಪ್ರಕಟಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ 250ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳು ಮತ್ತು 170 ವಸತಿ ಶಾಲೆಗಳನ್ನು ಆರಂಭಿಸುವ ಘೋಷಣೆ ಬಜೆಟ್‌ನಲ್ಲಿದೆ. ಇದು, ಮುಖ್ಯಮಂತ್ರಿಯವರು ತಳ ಸಮುದಾಯಗಳ ಶಿಕ್ಷಣ ಮತ್ತು ಕೌಶಲಾಭಿವೃದ್ಧಿಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಬಜೆಟ್‌ ಸಿದ್ಧಪಡಿಸಿರುವುದರ ಸಂಕೇತದಂತಿದೆ.

ಐದು ಗ್ಯಾರಂಟಿ  ಯೋಜನೆಗಳಿಗಾಗಿ ₹52,000 ಕೋಟಿಯನ್ನು ಜನರ ಕೈಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬಜೆಟ್‌ನ ಆರಂಭದಲ್ಲೇ ಸಿದ್ದರಾಮಯ್ಯ ಪ್ರಕಟಿಸಿದರು. ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹಲವು ಬಾರಿ ಉಲ್ಲೇಖಿಸಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಲಾಗದ ಪರಿಸ್ಥಿತಿ ಇದೆ ಎಂಬುದನ್ನೂ ರಾಜ್ಯದ ಮುಂದಿಟ್ಟರು.

ದೊಡ್ಡ ಯೋಜನೆಗಳಿಗಿಲ್ಲ ಆದ್ಯತೆ:

ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಬೃಹತ್‌ ಗಾತ್ರದ ಯೋಜನೆಗೆ ಹೆಚ್ಚು ಆದ್ಯತೆ ನೀಡಿಲ್ಲ. ಜಲ ಸಂಪನ್ಮೂಲ ಇಲಾಖೆಗೆ ₹10,000 ಕೋಟಿಗೂ ಹೆಚ್ಚು ಅನುದಾನ ಒದಗಿಸಿದ್ದರೂ, ಹತ್ತಾರು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಘೋಷಣೆ ಇದೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ಲಭಿಸಿಲ್ಲ.

ವಿದ್ಯುತ್‌ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ, ಈ ಕ್ಷೇತ್ರಕ್ಕೆ ಖಾಸಗಿ ಹೂಡಿಕೆದಾರರನ್ನು ಸೆಳೆಯುವ ಯೋಜನೆಗಳನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 10,600 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ‘ಪ್ರಗತಿ ಪಥ’, ‘ಕಲ್ಯಾಣ ಪಥ’ ಸೇರಿದಂತೆ ಹಲವು ಹೊಸ ಯೋಜನೆಗಳು ಬಜೆಟ್‌ನಲ್ಲಿವೆ. ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಸುಧಾರಣೆ, ಪಾರದರ್ಶಕತೆ ತರುವ ಭರವಸೆಯೂ ಇದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವವನ್ನು (ಪಿಪಿಪಿ) ಆಶ್ರಯಿಸುವ ಹಲವು ಘೋಷಣೆಗಳೂ ಇವೆ.

ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಚಿಕಿತ್ಸೆ ಹಾಗೂ ತಪಾಸಣೆ ಸೌಲಭ್ಯವೂ ಸೇರಿದಂತೆ ದುಬಾರಿ ದರದ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ಜನರಿಗೆ ತಲುಪಿಸುವುದಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳು ಬಜೆಟ್‌ನಲ್ಲಿವೆ. ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ರ‌ಕ್ಷಿಸುವುದಕ್ಕೆ ಶಾಲಾ, ಕಾಲೇಜುಗಳಲ್ಲೇ ಸೌಹಾರ್ದ ಬಿತ್ತುವ ‘ನಾವು ಮನುಜರು’ ಯೋಜನೆ ಈ ಬಜೆಟ್‌ನ ವಿಶೇಷಗಳಲ್ಲಿ ಒಂದು.

ಮದ್ಯದ ದರ ಪರಿಷ್ಕರಣೆ

ನೆರೆಯ ರಾಜ್ಯಗಳಲ್ಲಿನ ಮದ್ಯದ ದರಗಳಿಗೆ ಅನುಗುಣವಾಗಿ ರಾಜ್ಯದಲ್ಲಿ ಭಾರತೀಯ ಮದ್ಯ ಮತ್ತು ಬಿಯರ್‌ ದರವನ್ನು ಪರಿಷ್ಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಮದ್ಯದ ದರ ಹೆಚ್ಚಳ ಮಾಡುತ್ತೇವೆ ಎಂದು ಹೇಳಿಲ್ಲ. ಪುನರ್‌ ಪರಿಶೀಲನೆ ಮಾಡುತ್ತೇವೆ. ದುಬಾರಿ ದರದ ಬ್ರ್ಯಾಂಡ್‌ಗಳ ಮದ್ಯದ ದರಗಳಲ್ಲಿ ಇಳಿಕೆ ಆಗಬಹುದು’ ಎಂದರು.

ಒಪಿಎಸ್ ಹೊರೆ

ಹಳೆಯ ಪಿಂಚಣಿ ಯೋಜನೆ ಜಾರಿಯು ಹೊರೆಯಾಗಲಿದೆ ಎಂದು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಮಧ್ಯಮಾವಧಿ ವಿತ್ತೀಯ ಯೋಜನೆ ಹೇಳಿದೆ.

ವೇತನ ಪರಿಷ್ಕರಿಸಿದರೆ ಮೊದಲ ವರ್ಷದಲ್ಲಿಯೇ ₹15 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿಯಷ್ಟು ಆರ್ಥಿಕ ಹೊರೆಯಾಗಲಿದ್ದು, ಜಾರಿ ಸವಾಲಾಗಲಿದೆ ಎಂದು ಉಲ್ಲೇಖಿಸಿದೆ.

‌ಹಳೆಯ ಪಿಂಚಣಿ ಯೋಜನೆಯನ್ನು ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಮುಂದುವರಿಸುವುದು ಕಷ್ಟಕರವಾಗಿರುವುದರಿಂದಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಹಲವು ರಾಜ್ಯಗಳು ಅಳವಡಿಸಿಕೊಂಡಿವೆ. ಒಪಿಎಸ್‌ಗೆ ಮರಳಿದರೆ ಈಗ ಎನ್‌ಪಿಎಸ್‌ಗೆ ಸರ್ಕಾರ ಭರಿಸುತ್ತಿರುವ ವೆಚ್ಚದ 4-5 ಪಟ್ಟು ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಒಪಿಎಸ್‌ ಜಾರಿಗೊಳಿಸಿದರೆ ಹಣಕಾಸಿನ ಮೇಲೆ ಭಾರಿ ಪೆಟ್ಟು ಬೀಳಲಿದೆ ಎಂದೂ ಹೇಳಿದೆ.

ಪ್ರಮುಖ ಅಂಶಗಳು

*ಬೆಂಗಳೂರು ಸೇರಿದಂತೆ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೂ ವ್ಯಾಪಾರ–ವಹಿವಾಟಿಗೆ ಅವಕಾಶ

*ಗ್ರಾಮೀಣ ಪ್ರದೇಶಗಳಲ್ಲಿ ಶುಚಿ–ರುಚಿ ಆಹಾರ ಒದಗಿಸುವ ಕೆಫೆ ಸಂಜೀವಿನಿ ಆರಂಭ

*ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಮಾಸಾಶನ ₹800ರಿಂದ ₹1200ಕ್ಕೆ ಹೆಚ್ಚಳ

*ಮಾಜಿ ದೇವದಾಸಿಯರ ಮಾಸಾಶನ ₹1,500 ದಿಂದ ₹2,000ಕ್ಕೆ ಏರಿಕೆ

*ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗ ರಚನೆ

*ಶಾಲಾ ಕಾಲೇಜುಗಳಲ್ಲಿ ಸೌಹಾರ್ದತೆ ಜಾಗೃತಿಗೆ ‘ನಾವು ಮನುಜರು’ ಸಂವಾದ ಕಾರ್ಯಕ್ರಮ

*ನಾರಾಯಣಗುರು, ಜ್ಯೋತಿಬಾ ಫುಲೆ, ಪೆರಿಯಾರ್, ಲೋಹಿಯಾ, ಬಾಬು ಜಗಜೀವನರಾಂ ಬರೆಹಗಳು ಕನ್ನಡಕ್ಕೆ

*ಎಲ್ಲ ಇಲಾಖೆಗಳ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇ 2ರಷ್ಟು ಉದ್ಯೋಗ ಮೀಸಲು

ಆಸ್ತಿ ನಗದೀಕರಣಕ್ಕೆ ಒಲವು

ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹೊಂದಿಸುವುದಕ್ಕೆ ಸರ್ಕಾರಿ ಆಸ್ತಿಗಳನ್ನು ನಗದೀಕರಣ ಮಾಡುವುದಕ್ಕೆ ಸರ್ಕಾರ ಒಲವು ತೋರಿದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿಯೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ವಸತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಆಸ್ತಿಗಳ ನಗದೀಕರಣದ ಪ್ರಸ್ತಾವ ಬಜೆಟ್‌ನಲ್ಲಿದೆ.

ಬರ ನಿರ್ವಹಣೆಗೆ ₹ 500 ಕೋಟಿ

ರಾಜ್ಯವನ್ನು ಕಾಡುತ್ತಿರುವ ಬರ ಪರಿಸ್ಥಿತಿಯ ನಿರ್ವಹಣೆಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್‌) ಅಡಿಯಲ್ಲಿ ₹ 500 ಕೋಟಿ ಮಾತ್ರ ಒದಗಿಸಲಾಗಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅನುದಾನ ನಿಗದಿಪಡಿಸುವ ಮಾನದಂಡಗಳ ಕುರಿತು ಬಜೆಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಮಾನದಂಡಗಳ ಬದಲಾವಣೆಗೆ ಕೇಂದ್ರ ಸರ್ಕಾರ ಮತ್ತು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಬಜೆಟ್ ಮುಖಪುಟದಲ್ಲೇ ಸಂವಿಧಾನ ಪ್ರಸ್ತಾವನೆ

ಸಿದ್ದರಾಮಯ್ಯ ಮಂಡಿಸಿದ ತಮ್ಮ 15ನೇ ಬಜೆಟ್‌ನ ಮುಖಪುಟವು ಭಾರತದ ಸಂವಿಧಾನದ ಪ್ರಸ್ತಾವನೆಯ ಚಿತ್ರ ಹೊಂದಿದೆ.

ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಕರ್ನಾಟಕದ ಭೂಪಟ ನೀಡಿ, ಅಭಿವೃದ್ಧಿ ಮತ್ತು ಆದ್ಯತೆಯ ಚಿತ್ರಗಳನ್ನು ಒಳಗೊಂಡಿರುವುದು ಸಾಮಾನ್ಯವಾಗಿರುತ್ತಿತ್ತು. ಕೆಲವೊಮ್ಮೆ ವಿಧಾನಸೌಧದ ಚಿತ್ರವೂ ಇದ್ದಿದ್ದುಂಟು. ಇದೇ ಮೊದಲ ಬಾರಿಗೆ, ಸಂವಿಧಾನ ಪ್ರಸ್ತಾವನೆಯನ್ನು ಮುದ್ರಿಸಲಾಗಿದೆ.

ಪ್ರತಿಪಕ್ಷ ಸಭಾತ್ಯಾಗ, ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಟೀಕಿಸಲೆಂದೇ ಬಜೆಟ್‌ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ, ಜೆಡಿಎಸ್ ಶಾಸಕರು ಶುಕ್ರವಾರ ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಬಜೆಟ್‌ ಮಂಡನೆ ಶುರುವಾದ ಕೆಲಹೊತ್ತಿನಲ್ಲೇ ಸಭಾತ್ಯಾಗ ಮಾಡಿ ಹೊರ ಬಂದ ಎರಡೂ ಪಕ್ಷಗಳ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ
ಎಚ್‌.ಡಿ.ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಆರ್‌.ಅಶೋಕ, ಶಾಸಕ ಬಸವರಾಜ ಬೊಮ್ಮಾಯಿ, ಬಿಜೆಪಿ ಪ್ರಧಾನಕಾರ್ಯದರ್ಶಿ ವಿ.ಸುನಿಲ್‌ಕುಮಾರ್‌, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇದ್ದರು.

****

ಆರ್ಥಿಕ ತಜ್ಞ ಎಂದು ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅಡ್ಡಕಸುಬಿ ಬಜೆಟ್‌’ ಮಂಡಿಸಿದ್ದು, ಇದರಲ್ಲಿ ಅರ್ಥಶಾಸ್ತ್ರ, ಅಭಿವೃದ್ಧಿ, ದೂರದೃಷ್ಟಿ ಯಾವುದೂ ಇಲ್ಲ

-ಆರ್‌.ಅಶೋಕ, ವಿರೋಧ ಪಕ್ಷದ ನಾಯಕ, ವಿಧಾನಸಭೆ

****

₹1.75 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದರು. ಆದರೆ, ₹1.61 ಲಕ್ಷ ಕೋಟಿ ಮಾತ್ರ ಸಂಗ್ರಹ ಆಗಿದೆ. ₹14 ಸಾವಿರ ಕೋಟಿ ತೆರಿಗೆ ಸಂಗ್ರಹ ಕಡಿಮೆ ಆಗಿದೆ

-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.