ADVERTISEMENT

ರಾಜ್ಯ ಬಜೆಟ್‌: ಬಸವ ಕಲ್ಯಾಣದಲ್ಲಿ ‘ಅನುಭವ ಮಂಟಪ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 19:45 IST
Last Updated 5 ಮಾರ್ಚ್ 2020, 19:45 IST
ದೆಹಲಿಯ ರಾಜಪಥದಲ್ಲಿ ಇದೇ 26ರಂದು ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಪರೇಡ್‌ನಲ್ಲಿ ‘ಅನುಭವ ಮಂಟಪ’ದ ಮಹತ್ವ ಸಾರುವ ಕರ್ನಾಟಕದ ಸ್ತಬ್ಧಚಿತ್ರ
ದೆಹಲಿಯ ರಾಜಪಥದಲ್ಲಿ ಇದೇ 26ರಂದು ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಪರೇಡ್‌ನಲ್ಲಿ ‘ಅನುಭವ ಮಂಟಪ’ದ ಮಹತ್ವ ಸಾರುವ ಕರ್ನಾಟಕದ ಸ್ತಬ್ಧಚಿತ್ರ   

ಬೆಂಗಳೂರು: ಬಜೆಟ್‌ನಲ್ಲಿಸಂತ–ಶರಣರ ಜನ್ಮಸ್ಥಳ ಅಭಿವೃದ್ಧಿ ಹಾಗೂ ಪುತ್ಥಳಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಬಸವಕಲ್ಯಾಣದಲ್ಲಿ ₹ 500 ಕೋಟಿ ವೆಚ್ಚದಲ್ಲಿ ‘ಅನುಭವ ಮಂಟಪ’ ನಿರ್ಮಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ₹ 100 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ‘ಜಗಜ್ಯೋತಿ ಬಸವೇಶ್ವರ’ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ₹ 20 ಕೋಟಿ ಅನುದಾನ, ಹಾವೇರಿಯಲ್ಲಿರುವ ಸಂತ ಶಿಶುನಾಳ ಶರೀಫರ ಸಮಾಧಿ ಅಭಿವೃದ್ಧಿಗೆ ₹ 5 ಕೋಟಿ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸ ಹಾಗೂ ಸಾಹಿತಿ ಎಸ್‌.ಎಲ್.ಭೈರಪ್ಪ ಅವರ ಹುಟ್ಟೂರಾದ ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಗೆ ತಲಾ ₹ 5 ಕೋಟಿ ಒದಗಿಸಲಾಗಿದೆ. ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವ ಅವರನ್ನು ನೆನಪಿಸುವ ಚಿತ್ರದುರ್ಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ಜ.1ಕ್ಕೆ ಸರ್ಕಾರದ ವತಿಯಿಂದಲೇ ‘ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ’ವನ್ನು ಆಚರಿಸಲಾಗುತ್ತದೆ. ಲಂಬಾಣಿ ಸಂಸ್ಕೃತಿ ಮತ್ತು ಭಾಷೆ ಉಳಿಸಲು ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೆ ₹ 50 ಲಕ್ಷ ನೀಡಲಾಗುತ್ತದೆ.ನಾಯಕತ್ವ ನಿರ್ಮಾಣ ಹಾಗೂ ನೀತಿ ನಿರೂಪಣಾ ಸಂಶೋಧನಾ ಸಂಸ್ಥೆ ಸ್ಥಾಪನೆಗೆಅನಂತಕುಮಾರ್ ಪ್ರತಿಷ್ಠಾನಕ್ಕೆ ₹20 ಕೋಟಿ ಅನುದಾನ ಘೋಷಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ₹ 10 ಕೋಟಿ ನೀಡಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.