ADVERTISEMENT

ಬಿಎಸ್‌ವೈ ಬಜೆಟ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣದ ಉನ್ನತಿಗೆ ಸಿಕ್ಕಿದ್ದೇನು?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 9:53 IST
Last Updated 5 ಮಾರ್ಚ್ 2020, 9:53 IST
ಶಾಲಾ ಮಕ್ಕಳಿಗೆ ಜೊತೆ ಸಂವಾದದಲ್ಲಿ ತೊಡಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ (ಸಾಂದರ್ಭಿಕ ಚಿತ್ರ)
ಶಾಲಾ ಮಕ್ಕಳಿಗೆ ಜೊತೆ ಸಂವಾದದಲ್ಲಿ ತೊಡಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಂಡಿಸಿದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಪ್ರಯತ್ನ ಮಾಡಿದ್ದಾರೆ. ಬಜೆಟ್‌ನ ಒಟ್ಟು ಗಾತ್ರದಲ್ಲಿ ಶೇ.11 ರಷ್ಟು (₹29768 ಕೋಟಿ) ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮೊರಾರ್ಜಿ ಶಾಲೆಗಳ ಉನ್ನತೀಕರಣ, ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ, ಅತಿವೃಷ್ಟಿಯಲ್ಲಿ ಹಾನಿಯಾಗಿರುವ ಶಾಲಾ ಕೊಠಡಿಗಳ ಪುನರ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮುಖಾಂಶಗಳು

ADVERTISEMENT

* ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ, ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಒಂದು ಲಕ್ಷ ರೂ. ನಗದು ಪ್ರಶಸ್ತಿ ನೀಡಲು ಕ್ರಮ. ₹60 ಲಕ್ಷಅನುದಾನ.

* ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿವರೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ₹100 ಕೋಟಿ ಅನುದಾನ.

* ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಕ್ರಮ.

* ನಬಾರ್ಡ್ ಸಹಯೋಗದಲ್ಲಿ ₹758 ಕೋಟಿ ವೆಚ್ಚದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6469 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮ.

* ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯ ತಲಾ ಮೂರು ಶಾಲೆಗಳ ದತ್ತು ಸ್ವೀಕಾರ ಮತ್ತು ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ.

* ಪ್ರತಿ ತಿಂಗಳಲ್ಲಿ ಎರಡು ಶನಿವಾರಗಳಂದು ಬ್ಯಾಗ್ ರಹಿತ ದಿನ, ‘ಸಂಭ್ರಮ ಶನಿವಾರ’ ಆಚರಣೆ.

* ದಾವಣಗೆರೆ, ಉಡುಪಿ ಮತ್ತು ದೊಡ್ಡಬಳ್ಳಾಪುರದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ ನಾಲ್ಕು ಕೋಟಿ ರೂ. ಅನುದಾನ

* ಶಿಕ್ಷಕರ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ಶಿಕ್ಷಕ ಮಿತ್ರ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿ.

* 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಒಂದು ಕೋಟಿ ರೂ. ಅನುದಾನ.

* ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು ಹಂಚಿಕೆಗೆ ಕ್ರಮ. ಈ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.