ADVERTISEMENT

ಬಾಟಲಿಯೂ ಹಳೆಯದು, ಮದ್ಯವೂ ಹಳೆಯದು ಎನ್ನುವಂತಿದೆ ಕೇಂದ್ರದ ಬಜೆಟ್‌: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2024, 13:26 IST
Last Updated 1 ಫೆಬ್ರುವರಿ 2024, 13:26 IST
   

ಬೆಂಗಳೂರು: ’ಬಿಜೆಪಿಯ ಉದ್ಯಮ ಗೆಳೆಯರ ಆದಾಯ ದುಪ್ಪಟ್ಟಾಗಿದ್ದನ್ನು ದೇಶದ ಜನರ ತಲಾದಾಯ ಹೆಚ್ಚಳ ಎನ್ನುತ್ತಿರುವ ಕೇಂದ್ರ ಸರ್ಕಾರದ ಬಜೆಟ್‌ ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಬಜೆಟ್ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌, ‘ಹೊಸ ಚಿಂತನೆಗಳು, ಹೊಸ ಯೋಜನೆಗಳಿಲ್ಲದ ಈ ಬಜೆಟ್‌ನಿಂದ ತಿಳಿದಿದ್ದೇನೆಂದರೆ ಬಿಜೆಪಿಗೆ ಭಾರತದ ಭವಿಷ್ಯದ ದೂರದೃಷ್ಟಿ, ಮಹಾತ್ವಾಕಾಂಕ್ಷೆ ಇಲ್ಲವೆಂದು. ಬಾಟಲಿಯೂ ಹಳೆಯದು, ವೈನೂ ಹಳೆಯದು ಎನ್ನುವಂತಿದೆ ಈ ಬಜೆಟ್’ ಎಂದಿದೆ.

‘ನೀರಾವರಿ ಯೋಜನೆಗಳಿಗೆ ಹಣವಿಲ್ಲ, ಅಭಿವೃದ್ಧಿ ಕಾರ್ಯಕ್ರಮಗಳ ಸುಳಿವಿಲ್ಲ, ಜನಕಲ್ಯಾಣ ಕಾರ್ಯಕ್ರಮಗಳಿಲ್ಲ, ರೈಲ್ವೆ, ರಸ್ತೆ ವಿಸ್ತರಣೆಯ ಪ್ರಸ್ತಾಪವಿಲ್ಲ. ಕರ್ನಾಟಕಕ್ಕೆ ಬಿಡಿಗಾಸೂ ದೊರೆತಿಲ್ಲ. ಉಪನಗರ ರೈಲಿನ ಬಗ್ಗೆ ಚಕಾರವೆತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದೆ.

ADVERTISEMENT

‘ಕರ್ನಾಟಕಕ್ಕೆ ಅನುದಾನ ವಂಚನೆಯಾದರೂ ಬಾಯಿ ಮುಚ್ಚಿಕೊಂಡು ಕುಳಿತ ಬಿಜೆಪಿಯ ಎ ಮತ್ತು ಬಿ ಟೀಮಿನ 27 ಸಂಸದರಿಂದ ರಾಜ್ಯಕ್ಕೆ ಮಹಾ ದ್ರೋಹವಾಗುತ್ತಿದೆ’ ಎಂದು ಕಿಡಿಕಾರಿದೆ.

‘ಬಜೆಟ್‌ನಲ್ಲಿ ಹೇಳಲು ಏನೂ ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿಬಿಟ್ಟರು’ ಎಂದು ವ್ಯಂಗ್ಯವಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.