ADVERTISEMENT

ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ಪಿಟಿಐ
Published 22 ಜುಲೈ 2024, 4:54 IST
Last Updated 22 ಜುಲೈ 2024, 4:54 IST
<div class="paragraphs"><p>ನಿರ್ಮಲಾ ಸೀತಾರಾಮನ್‌ (ಸಂಗ್ರಹ ಚಿತ್ರ)</p></div>

ನಿರ್ಮಲಾ ಸೀತಾರಾಮನ್‌ (ಸಂಗ್ರಹ ಚಿತ್ರ)

   

ಪಿಟಿಐ ಚಿತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಾಳೆ ( ಜುಲೈ 23) ಸತತ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. 

ADVERTISEMENT

2019ರಲ್ಲಿ ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಗೆದ್ದಾಗ ನಿರ್ಮಲಾ ಸೀತಾರಾಮನ್‌ ಅವರು ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. 

2024ರ ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್‌ ಸೇರಿ ನಿರ್ಮಲಾ ಅವರು ಈವರೆಗೆ ಆರು ಬಾರಿ ಬಜೆಟ್‌ ಮಂಡಿಸಿದ್ದಾರೆ. ಈಗ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪಕ್ಷ ಗೆದ್ದು ಸರ್ಕಾರ ರಚಿಸಿದ ಹಿನ್ನೆಲೆ ಪೂರ್ಣ ಪ್ರಮಾಣದ ಬಜೆಟ್‌ ಅನ್ನು ಮಂಡಿಸುತ್ತಿದ್ದಾರೆ.

ಮೊದಲ ಬಜೆಟ್‌: ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947 ನವೆಂಬರ್ 26 ರಂದು ರಾಷ್ಟ್ರದ ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು.

ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಟ್ಟು 10 ಬಾರಿ ಬಜೆಟ್‌ ಮಂಡಿಸಿದ್ದಾರೆ.

ಅವರ ಬಳಿಕ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ. ಇವರು 9 ಬಾರಿ ಬಜೆಟ್ ಮಂಡಿಸಿದ್ದಾರೆ.

ಪ್ರಣಬ್‌ ಮುಖರ್ಜಿ ಭಾರತದ ಹಣಕಾಸು ಸಚಿವರಾಗಿದ್ದಾಗಿ 8 ಬಾರಿ ಬಜೆಟ್ ಮಂಡಿಸಿದ್ದರು. ಅವರ ಬಳಿಕ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಐದು ಬಾರಿ ಬಜೆಟ್‌ ಮಂಡನೆ ಮಾಡಿದ್ದಾರೆ. ಸಿಂಗ್‌ ಅವರು 1991 ರಿಂದ 1995ರವರೆಗೆ ಪಿ.ವಿ ನರಸಿಂಹ ರಾವ್‌ ಅವರು ಪ್ರಧಾನಿಯಾಗಿದ್ದ ಹಣಕಾಸು ಸಚಿವರಾಗಿದ್ದರು.  

ಸುದೀರ್ಘ ಬಜೆಟ್‌ ಮಂಡನೆ: ಈವರೆಗಿನ ಬಜೆಟ್ ಭಾಷಣದಲ್ಲಿ 2020ರ ಫೆಬ್ರುವರಿ 1 ರಂದು ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಸುದೀರ್ಘ ಬಜೆಟ್‌ ಭಾಷಣ ಎನಿಸಿಕೊಂಡಿದೆ. ಅವರು 2 ಗಂಟೆ 40 ನಿಮಿಷಗಳ ಬಜೆಟ್‌ ಭಾಷಣ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಅತಿ ಚಿಕ್ಕ ಬಜೆಟ್‌: 1977ರಲ್ಲಿ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರು ಮಂಡಿಸಿದ ಮಧ್ಯಂತರ ಬಜೆಟ್‌ ಅತಿ ಚಿಕ್ಕ ಬಜೆಟ್ ಎನಿಸಿಕೊಂಡಿದೆ. ಅದು ಕೇವಲ 800 ಶಬ್ದಗಳಲ್ಲಿತ್ತು ಎಂದು ವರದಿಗಳು ತಿಳಿಸಿವೆ. ಆಗ ಮೊರಾರ್ಜಿ ದೇಸಾಯಿ ಅವರು ಪ್ರಧಾನ ಮಂತ್ರಿಯಾಗಿದ್ದರು.

ಬಜೆಟ್‌ ಮಂಡನೆ ಬೆಳಿಗ್ಗೆ 11 ಗಂಟೆಗೆ ಆಗುವುದೇಕೆ?

ಈ ಹಿಂದೆ ಫೆಬ್ರುವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಬಜೆಟ್‌ ಮಂಡನೆಯಾಗುತ್ತಿತ್ತು. ವಸಾಹತುಶಾಹಿಗಳ ಕಾಲದಲ್ಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲಾಗಿತ್ತು. ಭಾರತ ಮತ್ತು ಲಂಡನ್‌ ಎರಡೂ ದೇಶಗಳಲ್ಲೂ ಪ್ರಸಾರವಾಗುವಂತೆ ಮಾಡಲು ಸಂಜೆ 5 ಗಂಟೆಯನ್ನು ನಿಗದಿ ಮಾಡಲಾಗಿತ್ತು. ಏಕೆಂದರೆ ಭಾರತವು ಲಂಡನ್‌ ಬೇಸಿಗೆ ಸಮಯಕ್ಕಿಂತ 4 ಗಂಟೆ 30 ನಿಮಿಷಗಳು ಮುಂದಿದೆ. ಆದ್ದರಿಂದ ಭಾರತದಲ್ಲಿ ಸಂಜೆ 5 ಗಂಟೆಗೆ ಬಜೆಟ್ ಅನ್ನು ಪ್ರಸ್ತುತಪಡಿಸುವುದರಿಂದ ಲಂಡನ್‌ನಲ್ಲಿ ಹಗಲಾಗಿರುತ್ತಿತ್ತು.

1999ರಲ್ಲಿ ಈ ವ್ಯವಸ್ಥೆಯನ್ನು ಬದಲಾಯಿಸಲಾಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯಶವಂತ್‌ ಸಿಂಗ್‌ ಹಣಕಾಸು ಸಚಿವರಾಗಿದ್ದರು. ಇವರ ಕಾಲದಲ್ಲಿ ಬಜೆಟ್‌ ಭಾಷಣವನ್ನು ಭಾರತಕ್ಕೆ ಸೀಮಿತಗೊಳಿಸಿ, ಬೆಳಿಗ್ಗೆ 11 ಗಂಟೆಗೆ ನಿಗದಿ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಬೆಳಿಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭವಾಗುತ್ತದೆ. 

ಆದರೆ ಫೆಬ್ರುವರಿ ಕೊನೆಯಲ್ಲಿ ನಡೆಯುತ್ತಿದ್ದ ಬಜೆಟ್‌ ಅನ್ನು 2017ರಲ್ಲಿ ಫೆಬ್ರುವರಿ 1ಕ್ಕೆ ನಡೆಯುವಂತೆ ಬದಲಾಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.