ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಇಂದು (ಫೆಬ್ರವರಿ 01ರಂದು) ಮಂಡಿಸುತ್ತಿದ್ದಾರೆ. ಕೋವಿಡ್ ನಂತರದಲ್ಲಿ ಆರ್ಥಿಕತೆ ನಿಧಾನಗತಿಯಲ್ಲಿ ಚೇತರಿಕೆಯ ಹಾದಿಗೆ ಮರಳುತ್ತಿರುವ ಹೊತ್ತಿನಲ್ಲಿ ಮಂಡನೆಯಾಗುತ್ತಿರುವ ಬಜೆಟ್ ಮೇಲೆ ದೇಶದ ಚಿತ್ತ ನೆಟ್ಟಿದೆ.
ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಮಂಡನೆಯಾಗುತ್ತಿರುವ ಸತತ 11ನೇ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಈ ಬಜೆಟ್ ಮಂಡಿಸುತ್ತಿದ್ದಾರಾದರೂ, ಅದರ ತಯಾರಿಕೆಯಲ್ಲಿ ಹಲವು ಉನ್ನತಾಧಿಕಾರಿಗಳು ಹಾಗೂ ಸಲಹೆಗಾರರು ಪಾತ್ರ ವಹಿಸಿದ್ದಾರೆ. ಅಂತಹ ಕೆಲವು ಪ್ರಮುಖರ ಮಾಹಿತಿ ಇಲ್ಲಿದೆ.
* ಟಿ.ವಿ. ಸೋಮನಾಥನ್: ಹಣಕಾಸು ಕಾರ್ಯದರ್ಶಿ
ತಮಿಳುನಾಡು ಕೆಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಇವರು ಈ ಮೊದಲು ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು 2015–2017 ರ ಅವಧಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಜಂಟಿ ಕಾರ್ಯದರ್ಶಿಯಾಗಿದ್ದರು. ಈ ಹಿಂದೆ ವಿಶ್ವ ಬ್ಯಾಂಕ್‌ನ ಬಜೆಟ್ ಪಾಲಿಸಿ ಸಮಿತಿಯ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
* ಸಂಜಯ್ ಮಲ್ಹೋತ್ರಾ: ಕಂದಾಯ ಕಾರ್ಯದರ್ಶಿ
ರಾಜಸ್ಥಾನ ಕೆಡರ್‌ನ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸಂಜಯ್ ಮಲ್ಹೋತ್ರಾ, ಕಂದಾಯ ಇಲಾಖೆ ಕಾರ್ಯದರ್ಶಿಯಾಗಿ ನೇಮಕವಾಗುವುದಕ್ಕೂ ಮುನ್ನ ಗ್ರಾಮೀಣ ವಿದ್ಯುದೀಕರಣ ನಿಗಮದ (ಆರ್‌ಇಸಿ) ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಐಐಟಿ ಕಾನ್ಪುರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.
* ವಿ. ಅನಂತ ನಾಗೇಶ್ವರನ್: ಮುಖ್ಯ ಆರ್ಥಿಕ ಸಲಹೆಗಾರ
ವಿ. ಅನಂತ ನಾಗೇಶ್ವರನ್ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿ 2022ರ ಜನವರಿ 28ರಂದು ನೇಮಕವಾದರು. ಇವರು ಐಐಎಂ ಅಹಮದಾಬಾದ್ ಹಾಗೂ ಮೆಸ್ಸಾಚುಸೆಟ್ಸ್ ವಿವಿ ವಿದ್ಯಾರ್ಥಿಯಾಗಿದ್ದು, 2019–2021ರ ಅವಧಿಯಲ್ಲಿ ಪ್ರಧಾನಿ ಮೋದಿ ಅವರ ಆರ್ಥಿಕ ಸಲಹಾ ಸಮಿತಿಯ ಅರೆಕಾಲದ ಸದಸ್ಯರಾಗಿದ್ದರು.
* ಅಜಯ್ ಸೇಥ್: ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ
ಕರ್ನಾಟಕ ಕೆಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅಜಯ್ ಸೇಥ್, ಸಾರ್ವಜನಿಕ ಹಣಕಾಸು ವಲಯದಲ್ಲಿ 33 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ. ಬಜೆಟ್, ತೆರಿಗೆ ಮತ್ತು ವಿದೇಶಿ ಹೂಡಿಕೆಯಂತಹ ವಿಚಾರಗಳಲ್ಲಿ ನುರಿತ ಜ್ಞಾನ ಹೊಂದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಆಯುಕ್ತ ಸೇರಿದಂತೆ ಕರ್ನಾಟಕ ಸರ್ಕಾರದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸಾರ್ವಜನಿಕ ಆಡಳಿತದಲ್ಲಿನ ಅತ್ಯುತ್ತಮ ಸೇವೆಗಾಗಿ ನೀಡುವ ಪ್ರಧಾನ ಮಂತ್ರಿಗಳ ಪ್ರಶಸ್ತಿಯನ್ನು 2013ರಲ್ಲಿ ಪಡೆದಿರುವ ಸೇಥ್, ಏಷಿಯಾ ಅಭಿವೃದ್ಧಿ ಬ್ಯಾಂಕ್‌ನ ಸಲಹೆಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
* ತುಹಿನ್ ಕಾಂತ ಪಾಂಡೆ: ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ
ಎಲ್‌ಐಸಿ ಹಾಗೂ ಏರ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳಲ್ಲಿನ ಬಂಡವಾಳ ಹಿಂತೆಗೆದ ರೂವಾರಿಯಾಗಿರುವ ತುಹಿನ್ ಪಾಂಡೆ, ಒಡಿಶಾ ಕೆಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಕೈಗಾರಿಕಾ ಅಭಿವೃದ್ಧಿ, ಸಾರ್ವಜನಿಕ ಹಣಕಾಸು ಮತ್ತು ಆರ್ಥಿಕ ನಿರ್ವಹಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಯೋಜನಾ ಆಯೋಗಕ್ಕೆ ಐದು ವರ್ಷಗಳ ಅವಧಿಗೆ ಜಂಟಿ ಕಾರ್ಯದರ್ಶಿಯಾಗಿ 2009ರಲ್ಲಿ ನೇಮಕವಾದ ಇವರು, ನಂತರ ಸಂಸದೀಯ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ 2 ವರ್ಷಗಳ ಅವಧಿಗೆ ನೇಮಕಗೊಂಡಿದ್ದರು.
* ವಿವೇಕ್ ಜೋಶಿ: ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ
ಡಾ. ವಿವೇಸ್ ಜೋಶಿ ಅವರು 1989ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ, ಬ್ಯಾಂಕಿಂಗ್‌ಗೆ ಸಂಬಂಧಿಸಿದ ನೀತಿಗಳು, ಯೋಜನೆಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಂಡಳಿಯ ಸದಸ್ಯರೂ ಆಗಿರುವ ಜೋಶಿ, ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವಾಲಯದ ಮಹಾನೋಂದಣಿ ಅಧಿಕಾರಿ ಹಾಗೂ ಸೆನ್ಸಸ್ ಆಯುಕ್ತರಾಗಿದ್ದರು.
ಇವನ್ನೂ ಓದಿ
* Union Budget 2023 highlights: ಕೇಂದ್ರ ಬಜೆಟ್ ಮುಖ್ಯಾಂಶಗಳು
* nion Budget 2023 Live | ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.