ನವದೆಹಲಿ: ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಅನ್ನು ’ಕಾಪಿ ಕ್ಯಾಟ್ ಬಜೆಟ್’ ಎಂದು ಛೇಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಭಿವೃದ್ಧಿಗೆ ಪೂರಕವಲ್ಲದ ಮೋದಿ ಸರ್ಕಾರವನ್ನು ಉಳಿಸಿಕೊಳ್ಳಲು ಮಂಡಿಸಿರುವ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಮೋದಿ ಸರ್ಕಾರದ ‘ಕಾಪಿ ಕ್ಯಾಟ್ ಬಜೆಟ್’ಗೆ ಕಾಂಗ್ರೆಸ್‌ನ ನ್ಯಾಯಪತ್ರವನ್ನು ಸಂಪೂರ್ಣವಾಗಿ ಕಾಪಿ ಮಾಡಲೂ ಸಾಧ್ಯವಾಗಿಲ್ಲ. ತಮ್ಮ ಮಿತ್ರ ಪಕ್ಷಗಳಿಗೆ ಅರೆ ಮನಸ್ಸಿನಿಂದ ಉಚಿತ ಕೊಡುಗೆಗಗಳನ್ನು ನೀಡಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ’ಎಂದು ಟೀಕಿಸಿದ್ದಾರೆ.
ಇದು ದೇಶದ ಪ್ರಗತಿಗಾಗಿ ಮಂಡಿಸಿರುವ ಬಜೆಟ್ ಅಲ್ಲ, ಇದು ‘ಸೇವ್ ಮೋದಿ ಗೌರ್ನಮೆಂಟ್ ಬಜೆಟ್!’ಎಂದು ಕುಟುಕಿದ್ದಾರೆ.
ಕಳೆದ 10 ವರ್ಷಗಳಿಂದ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಘೋಷಣೆಗಳನ್ನು ಮಾತ್ರ ಕೇಳುತ್ತಾ ಹತಾಶೆಯಲ್ಲಿರುವ ಯುವ ಜನತೆಗೆ ಅತ್ಯಂತ ಕನಿಷ್ಠ ಘೋಷಣೆಗಳನ್ನು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
‘ರೈತರ ವಿಚಾರದಲ್ಲಿ ಹುರುಳಿಲ್ಲದ ಹೇಳಿಕೆಗಳನ್ನು ಮಾತ್ರ ನೀಡಲಾಗಿದೆ. ಒಂದೂವರೆ ಪಟ್ಟು ಎಂಎಸ್‌ಪಿ ಮತ್ತು ಆದಾಯ ದುಪ್ಪಟ್ಟು ಎಲ್ಲವೂ ಚುನಾವಣೆಯ ಮೋಸವಾಗಿವೆ. ಈ ಸರ್ಕಾರಕ್ಕೆ ಗ್ರಾಮೀಣ ವಲಯದ ಕೂಲಿ ಹೆಚ್ಚಳದ ಬಗ್ಗೆ ಆಸಕ್ತಿ ಇಲ್ಲ’ ಎಂದಿದ್ದಾರೆ.
‘ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಧ್ಯಮ ವರ್ಗ ಮತ್ತು ಗ್ರಾಮೀಣ ಭಾಗದ ಬಡವರಿಗೆ ಯಾವುದೇ ಕ್ರಾಂತಿಕಾರಕ ಯೋಜನೆಗಳಿಲ್ಲ. ಬಡವ ಎಂಬ ಪದವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಬಿಟ್ಟರೆ ಯಾವುದೇ ಅಭಿವೃದ್ಧಿಯ ಉದ್ದೇಶ ಇಲ್ಲ’ಎಂದು ಟೀಕಿಸಿದ್ದಾರೆ.
‘ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಏನನ್ನೂ ನೀಡಲಾಗಿಲ್ಲ. ಮೇಲಿಂದ ಮೇಲೆ ಹಣದುಬ್ಬರ ಏರುತ್ತಿದ್ದು, ಜನರು ಶ್ರಮಪಟ್ಟು ಗಳಿಸುವ ಹಣವನ್ನು ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಹಂಚುವ ಕಾರ್ಯದಲ್ಲಿ ಸರ್ಕಾರ ತೊಡಗಿದೆ’ಎಂದು ಟೀಕಿಸಿದ್ದಾರೆ.
‘ಕೃಷಿ, ಆರೋಗ್ಯ, ಶಿಕ್ಷಣ, ಸಾರ್ವಜನಿಕ ಕಲ್ಯಾಣ ಮತ್ತು ಆದಿವಾಸಿಗಳಿಗೆ ಕಡಿಮೆ ಹಣ ಖರ್ಚು ಮಾಡಲಾಗಿದೆ. ಇವೆಲ್ಲವೂ ಬಿಜೆಪಿಯ ಆದ್ಯತಾ ಕ್ಷೇತ್ರಗಳಲ್ಲ’ ಎಂದಿದ್ದಾರೆ.
ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ, ಉತ್ಪಾದನೆ, ಎಂಎಸ್‌ಎಂಇ, ಹೂಡಿಕೆ, ಇವಿ ಯೋಜನೆ ಎಲ್ಲವೂ ಭಾಷಣದಲ್ಲಿ ಉಳಿದಿವೆ. ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗಿಲ್ಲ ಎಂದಿದ್ದಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.