ADVERTISEMENT

’ಶ್ರೀಮಂತರ ಪರ, ಸಾಮಾನ್ಯರ ವಿರೋಧಿ ಬಜೆಟ್’

ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ವಾಗ್ದಾಳಿ * ಬಿಜೆಪಿ ಸಮರ್ಥನೆ

ಪಿಟಿಐ
Published 12 ಫೆಬ್ರುವರಿ 2021, 13:11 IST
Last Updated 12 ಫೆಬ್ರುವರಿ 2021, 13:11 IST
ಸಂಸತ್ತು
ಸಂಸತ್ತು   

ನವದೆಹಲಿ: ‘ಕೇಂದ್ರದ ನೂತನ ಬಜೆಟ್‌ನಲ್ಲಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ಏನೂ ಇಲ್ಲ. ಪೂರ್ಣವಾಗಿ ಬಂಡವಾಳಶಾಹಿಗಳು ಹಾಗೂ ಶ್ರೀಮಂತರಿಗಷ್ಟೇ ಸಹಾಯವಾಗಲಿದೆ’ ಎಂದು ವಿರೋಧಪಕ್ಷಗಳು ಶುಕ್ರವಾರ ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದವು.

ಆದರೆ, ಬಿಜೆಪಿ ಬಜೆಟ್‌ ಅನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದು, ಆರೋಗ್ಯ ಕ್ಷೇತ್ರ ಸೇರಿದಂತೆ ಬಜೆಟ್‌ನಲ್ಲಿ ಎಲ್ಲ ಕ್ಷೇತ್ರಗಳಿಗೂ ಹಣಕಾಸು ನಿಗದಿಪಡಿಸಲಾಗಿದೆ ಎಂದಿತು.

ಬಜೆಟ್‌ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್, ಎಎಪಿ ಮತ್ತು ಎಡಪಕ್ಷಗಳ ನಾಯಕರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರವು ದೊಡ್ಡ ಉದ್ಯಮಗಳಿಗೆ ಎಲ್ಲ ಸಾರ್ವಜನಿಕ ಉದ್ಯಮಗಳು ಸೇರಿದಂತೆ ದೇಶದ ಆಸ್ತಿಗಳನ್ನು ಮಾರಲು ಮುಂದಾಗಿದೆ ಎಂದು ಆರೋಪಿಸಿದರು.

ADVERTISEMENT

ಕಾಂಗ್ರೆಸ್ ನಾಯಕ ಶಕ್ತಿಸಿನ್ಹಾ ಗೋಹಿಲ್ ಅವರು, ಬಜೆಟ್‌ ಶ್ರೀಮಂತರು, ಬಂಡವಾಳಶಾಹಿಗಳಿಗೆ ನೆರವಾಗುತ್ತಿದೆ. ತುಳಿತಕ್ಕೊಳಗಾದವರು, ಕೆಳವರ್ಗದವರು ಆತ್ಮನಿರ್ಭರರಾಗಬೇಕಿದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಕೃಷಿ ಸುಧಾರಣೆ ಕುರಿತಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಶರದ್ ಪವಾರ್ ಅವರನ್ನು ಉಲ್ಲೇಖಿಸಿದ್ದಾರೆ. ಆದರೆ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೇ ಕನಿಷ್ಠ ಬೆಂಬಲ ಬೆಲೆ ನೀಡಲು ಕಾಯ್ದೆ ತರಬೇಕು ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.

ಬಿಜೆಪಿ ಸಮರ್ಥನೆ:ಬಿಜೆಪಿ ನಾಯಕ, ಸಚಿವ ಅನುರಾಗ್ ಠಾಕೂರ್ ಅವರು, ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ ಬಜೆಟ್ ಅನ್ನು ಸಮರ್ಥಿಸಿಕೊಂಡರು. ‘ರಾಜಕೀಯ ಲಾಭಕ್ಕೆ ರೈತರನ್ನು ಬಳಸಿಕೊಳ್ಳಬಾರದು. ಮೂರು ನೂತನ ಕೃಷಿ ಕಾಯ್ದೆಗಳು ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸಲು ನೆರವಾಗಲಿವೆ’ ಎಂದು ಪ್ರತಿಪಾದಿಸಿದರು.

ಮಂಡಿಗಳು ಮತ್ತು ಎಂಎಸ್‌ಪಿ ಅಸ್ತಿತ್ವ ಕಳೆದುಕೊಳ್ಳಲಿವೆ ಎಂಬುದನ್ನು ಹೊಸ ಕಾಯ್ದೆಯಲ್ಲಿ ಎಲ್ಲಿಯಾದರೂ ಉಲ್ಲೇಖಿಸಲಾಗಿದೆಯೇ ಎಂದು ತೋರಿಸಬೇಕು ಎಂದೂ ಪ್ರತಿಪಕ್ಷಗಳಿಗೆ ಸವಾಲೆಸೆದರು.

ಸಿಪಿಐ ಮುಖಂಡ ಬಿನಯ್ ಬಿಸ್ವಂ ಅವರು, ಆತ್ಮನಿರ್ಭರ ಹೆಸರಿನಲ್ಲಿ ಬಜೆಟ್ ಸ್ಪಷ್ಟವಾಗಿ ಬಂಡವಾಳ ಶಾಹಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಖಾಸಗೀಕರಣ ಒಳ್ಳೆಯದಲ್ಲ:ಮಾಜಿ ಪ್ರಧಾನಿ, ಜೆಡಿಎಸ್‌ನ ಎಚ್‌.ಡಿ.ದೇವೇಗೌಡ ಅವರು, ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಅನುವಾಗುವಂತೆ ಸರ್ವರಿಗೂ ಅಗತ್ಯವಿರುವುದನ್ನು ಹಣಕಾಸು ಸಚಿವೆ ಬಜೆಟ್‌ನಲ್ಲಿ ನೀಡಿದ್ದಾರೆ. ಆದರೆ, ಖಾಸಗೀಕರಣ ಎಲ್ಲ ಹಂತದಲ್ಲಿಯೂ ಒಳ್ಳೆಯದಲ್ಲ. ಕೆಲವೊಮ್ಮೆ ಇದು ಏಕಸ್ವಾಮ್ಯ ಸಾಧಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಿಎಸ್‌ಪಿಯ ಅಶೋಕ್ ಸಿದ್ಧಾರ್ಥ, ಚಂದ್ರ ಮಿಶ್ರಾ, ಎಎಪಿಯ ಸಂಜಯ್‌ ಸಿಂಗ್ ಅವರು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಬಜೆಟ್‌ ಸಾಮಾನ್ಯ ಜನರಿಗೆ ನೆರವಾಗುವಂತದ್ದಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.