ADVERTISEMENT

Union Budget 2024 | ವಿಶ್ಲೇಷಣೆ: ದೇಶಕ್ಕೆ ‘ಹಿತ’ ಜನರಿಗೆ ‘ಮಿತ’ ನೀಡಿದ ಬಜೆಟ್

ಪ್ರಮೋದ ಶ್ರೀಕಾಂತ ದೈತೋಟ
Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
ಪ್ರಮೋದ ಶ್ರೀಕಾಂತ ದೈತೋಟ
ಪ್ರಮೋದ ಶ್ರೀಕಾಂತ ದೈತೋಟ   

ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದ್ದರಿಂದ, ಜನ ಸಾಮಾನ್ಯರಿಗೆ ಅನ್ವಯವಾಗುವ ಆದಾಯ ತೆರಿಗೆ ವಿನಾಯಿತಿ ಮಿತಿಯ ಹೆಚ್ಚಳಕ್ಕೆ ಸಂಬಂಧಪಟ್ಟು ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಅದು ಸಣ್ಣ ಹಾಗೂ ಮಧ್ಯಮ ವರ್ಗದ ತೆರಿಗೆದಾರರ ದೃಷ್ಟಿಯಿಂದ ನಿರೀಕ್ಷೆಯು ನೂರಕ್ಕೆ ನೂರು ನಿಜವಾಗಲಿಲ್ಲ. ಅದೇ ರೀತಿ, ದೇಶದ ಷೇರು ಮಾರುಕಟ್ಟೆಯ ಪ್ರಮುಖ ಆಧಾರ ಸ್ತಂಭವಾಗಿರುವ ವೈಯಕ್ತಿಕ ಹೂಡಿಕೆದಾರರೂ ಸೇರಿದಂತೆ ಎಲ್ಲ ಹೂಡಿಕೆದಾರರ ಹಿತ ಕಾಪಾಡುವಲ್ಲಿ ಬಜೆಟ್ ವಿಫಲವಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಹೊಸ ತೆರಿಗೆ ಪದ್ದತಿಯಡಿ ಇರುವ ಗರಿಷ್ಠ ಆದಾಯ ವಿನಾಯಿತಿ ಮಿತಿಯಾದ ₹3 ಲಕ್ಷವನ್ನು ಹೆಚ್ಚಿಸಲಿಲ್ಲ ಎಂದಾದರೂ, ಅದರ ನಂತರದ ಹಂತದ ಆದಾಯ ತೆರಿಗೆ ಮಿತಿಯನ್ನು (ಸ್ಲ್ಯಾಬ್) ಎರಡು ಹಂತದ ವರ್ಗದಲ್ಲಿ ಒಂದೊಂದು ಲಕ್ಷ ಹೆಚ್ಚಿಸಲಾಗಿದೆ. ಉಳಿದ ಸ್ಲ್ಯಾಬ್ ಮೊತ್ತಗಳನ್ನು ಮೊದಲಿನಂತೆಯೇ ಕಾಯ್ದುಕೊಳ್ಳಲಾಗಿದೆ. ತೆರಿಗೆ ದರಗಳಲ್ಲಿ ಬದಲಾವಣೆ ಮಾಡದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಆದರೆ ಹೊಸ ತೆರಿಗೆ ಪದ್ದತಿ ಅನುಸರಿಸುವವರಿಗೆ ಈಗ ಸಿಗುತ್ತಿರುವ ₹ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ₹75 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಈ ಆಂತರಿಕ ಸ್ಲ್ಯಾಬ್ ಮಿತಿಗಳ ಬದಲಾವಣೆ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯ ಹೆಚ್ಚಳದ ಪರಿಣಾಮವಾಗಿ ₹17,500ರಷ್ಟು (ಸೆಸ್ ಹಾಗೂ ಸರ್ಚಾರ್ಜ್ ಲಾಭ ಪ್ರತ್ಯೇಕ) ತೆರಿಗೆ ಮುಂದಿನ ವರ್ಷದಲ್ಲಿ ಉಳಿತಾಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ಮೊತ್ತ, ಗರಿಷ್ಠ ತೆರಿಗೆ ಆದಾಯದ ಮಿತಿಯಾದ ₹15 ಲಕ್ಷಕ್ಕೂ ಮೀರಿದ ಆದಾಯ ಉಳ್ಳವರನ್ನು ಉದ್ದೇಶಿಸಿ ನಿರೂಪಿಸಲಾಗಿದೆ. ಹಂತ ಹಂತವಾಗಿ ಈ ಮಿತಿಗಿಂತ ಆದಾಯ ಕಡಿಮೆಯಾದಂತೆ, ತೆರಿಗೆ ಲಾಭದ ಮೊತ್ತವೂ ಆಯಾ ದರಕ್ಕೆ ಅನ್ವಯಿಸಿ ಪ್ರಮಾಣಾನುಗತವಾಗಿ ಕಡಿಮೆಯಾಗುತ್ತದೆ.

ADVERTISEMENT

ಬಜೆಟ್‌ನಲ್ಲಿ ಹಳೆಯ ತೆರಿಗೆ ಪದ್ದತಿಯಡಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹೀಗಾಗಿ ಈ ಪದ್ಧತಿ ನೇರವಾಗಿ ತೊಡೆದು ಹಾಕಿಲ್ಲವೆಂದಾದರೂ, ಬಹುತೇಕ ವರ್ಗದ ಜನರಿಗೆ ತೆರಿಗೆ ಉಳಿತಾಯದ ದೃಷ್ಟಿಯಿಂದ ಅದು ಅಷ್ಟೊಂದು ಪ್ರಾಯೋಗಿಕವಲ್ಲದ ಕಾರಣ ಸಹಜವಾಗಿ ಹೆಚ್ಚು ಹೆಚ್ಚು ತೆರಿಗೆದಾರರು ಪ್ರತಿ ವರ್ಷ ತಾವಾಗಿಯೇ ಹೊಸ ತೆರಿಗೆ ಯೋಜನೆಗೆ ಬರುವಂತೆ ಮಾಡುವುದು ಸರಕಾರದ ಉದ್ದೇಶ.

ಇನ್ನೂ ಒಂದು ಕಾರಣವೆಂದರೆ, ಹಳೆಯ ತೆರಿಗೆ ಪದ್ದತಿಯಡಿ, ಅನೇಕ ರೀತಿಯ ತೆರಿಗೆ ರಿಯಾಯಿತಿಗಳಿದ್ದು ತೆರಿಗೆದಾರರು ಅವುಗಳನ್ನು ಉದ್ದೇಶಪೂರ್ವಕವಾಗಿ ಅಥವಾ ಸರಿಯಾಗಿ ಅರ್ಥೈಸದೆ ಬಳಸಿಕೊಂಡು, ತೆರಿಗೆ ರಿಫಂಡ್ ಪಡೆಯುತ್ತಿರುವುದು ತೆರಿಗೆ ಇಲಾಖೆಗೆ ಬಹಳ ಸಮಸ್ಯೆಯಾಗುತ್ತಿದೆ. ಹೀಗಾಗಿ ಅಂತಹ ವಿನಾಯಿತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಗತ್ಯ ಹೊಸ ತೆರಿಗೆ ಪದ್ದತಿಗೆ ಜನ ವರ್ಗವಾದಾಗ ಬರುವುದಿಲ್ಲ ಹಾಗೂ ಈ ಬೆಳವಣಿಗೆಯಿಂದ ಸಾಕಷ್ಟು ತೆರಿಗೆ ಸಮಸ್ಯೆಗಳೂ ಕ್ರಮಾಗತವಾಗಿ ನಿವಾರಣೆಯಾಗಿ ನಮ್ಮ ತೆರಿಗೆ ವ್ಯವಸ್ಥೆ ಸರಳವಾಗುತ್ತಾ ಹೋಗುತ್ತದೆ ಎಂಬುದು ನಿರೀಕ್ಷೆ. ಈಗಾಗಲೇ ಮೂರನೇ ಎರಡರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ದತಿಗೆ ವರ್ಗವಾಗಿದ್ದಾರೆ. ಆದರೆ ಇನ್ನೂ ಮನೆ ಬಾಡಿಗೆ, ಮನೆ ಸಾಲದ ಬಡ್ಡಿ, ಹೂಡಿಕೆ, ಶಿಕ್ಷಣ ಸಾಲದ ಬಡ್ಡಿ, ದೇಣಿಗೆ ಸೇರಿದಂತೆ ಅನೇಕ ವಿಧದ ಪಾವತಿ ಮಾಡುವ ತೆರಿಗೆದಾರರಿಗೆ ಹಳೆಯ ತೆರಿಗೆ ಪದ್ದತಿಯೇ ಸೂಕ್ತವೆಂದು ಕಾಣುತ್ತದೆ.

ಕುಟುಂಬ ಪಿಂಚಣಿ ಪಡೆಯುವ ಮಂದಿಗೆ ಅನುಕೂಲವಾಗುವ ಮಟ್ಟದಲ್ಲಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ₹15 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಮೊತ್ತ ಚಿಕ್ಕದಾಗಿದ್ದರೂ ಆ ವರ್ಗದ ಜನ ಅಧಿಕ ಮಂದಿ ಇರುವುದನ್ನು ಸರ್ಕಾರ ಪರಿಗಣಿಸಿದೆ.  

ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ತೆರಿಗೆಯನ್ನು ಶೇ15 ರಿಂದ 6ಕ್ಕೆ ಇಳಿಸಿರುವುದರಿಂದ ಗೃಹ ಬಳಕೆಯ ಉಪಯೋಗಕ್ಕಿರುವ ಆಭರಣಗಳ ಬೆಲೆ ಕೊಂಚ ಇಳಿಕೆಯಾಗಲಿದೆ.

ವೈಯಕ್ತಿಕ ತೆರಿಗೆದಾರರಿಗೆ ಈ ಬಾರಿಯ ಬಜೆಟ್ ಹೆಚ್ಚುವರಿ ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ ತೆರಿಗೆ ದರಗಳಿಗೆ ಸಂಬಂಧಿಸಿ ‘ಹಿತ’ ಅನುಭವ ನೀಡಿದರೂ ಅದೇ ಮಂದಿ ಹೂಡಿಕೆದಾರರಾಗಿ ಯೋಚಿಸಿದಾಗ ಬಂಡವಾಳ ಲಾಭಕ್ಕೆ ಸಂಬಂಧಿಸಿ ಬಹಳಷ್ಟು ತೆರಿಗೆ ದರಗಳನ್ನು ಹೆಚ್ಚಿಸಿರುವುದು ಅವರ ಹೂಡಿಕೆಯ ಉತ್ಸಾಹವನ್ನು ‘ಮಿತ’ಗೊಳಿಸಲಿದೆ.

ಉದಾಹರಣೆಗೆ, ಕಂಪನಿಯ ಷೇರುಗಳನ್ನು ಷೇರುದಾರರಿಂದ ತಾವೇ ಖರೀದಿಸುವಾಗ ಸಿಗುವ ಸಂಪೂರ್ಣ ಮೊತ್ತ ಡಿವಿಡೆಂಡ್ ಎಂದು ಪರಿಗಣಿಸಿ ತೆರಿಗೆಗೊಳಪಡಿಸುವುದು ಹೆಚ್ಚಿನ ತೆರಿಗೆ ದರ ಅನ್ವಯವಾಗುವುದಕ್ಕೆ ಕಾರಣವಾಗಿದೆ. ಫ್ಯೂಚರ್ಸ್ ಮತ್ತು ಆಪ್ಷನ್ಸ್ ವ್ಯವಹಾರಗಳಿಗೆ ಸಂಬಂಧಿಸಿ ಸೆಕ್ಯುರಿಟಿ ವ್ಯವಹಾರಗಳ ತೆರಿಗೆಯನ್ನು ಕ್ರಮವಾಗಿ ಶೇ 0.02 ಹಾಗೂ 0.1 ಕ್ಕೆ ಹೆಚ್ಚಿಸುವುದು ಹಿಂದಿನ ದರಕ್ಕೆ ತುಲನೆ ಮಾಡಿದರೆ ಶೇ 160 ಹಾಗೂ ಶೇ 60ರಷ್ಟು ಹೆಚ್ಚಳವಾಗಿರುತ್ತದೆ.

ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಕೆಲವು ಅಲ್ಪಾವಧಿ ಹೂಡಿಕೆ ಲಾಭಕ್ಕೆ ಸಂಬಂಧಿಸಿ ಪ್ರಸ್ತುತ ಇರುವ ಶೇ15ರ ತೆರಿಗೆ ದರವನ್ನು ಶೇ20ಕ್ಕೆ ಹೆಚ್ಚಿಸಿರುವುದು ಬಂಡವಾಳ ಹೂಡಿಕೆ ಮಾರುಕಟ್ಟೆಯ ಮೇಲೆ ಮುಂದೆ ಸಾಕಷ್ಟು ಪರಿಣಾಮ ಬೀರಲಿದೆ. ಈ ಹಿಂದೆ ಶೇ10 ರ ದರದಲ್ಲಿ ತೆರಿಗೆಗೊಳಪಡುತ್ತಿದ್ದ ದೀರ್ಘಾವಧಿ ಹೂಡಿಕೆಗಳು ಮುಂದೆ ಶೇ 12.5ರ ದರದಲ್ಲಿ ತೆರಿಗೆಗೊಳಪಡಲಿದೆ. ಆದರೆ ಈ ವರ್ಗದ ಹೂಡಿಕೆಗಳಿಗೆ ಸಿಗುತ್ತಿದ್ದ ₹1 ಲಕ್ಷದ ವಿನಾಯಿತಿ ಮಿತಿಯನ್ನು ₹1.25 ಲಕ್ಷಕ್ಕೆ ಹೆಚ್ಚಿಸಿರುವುದು ಸಣ್ಣ ವರ್ಗದ ಹೂಡಿಕೆದಾರರಿಗೆ ತುಸು ಸಮಾಧಾನ ತಂದುಕೊಟ್ಟಿದೆ. ಇನ್ನೂ ಒಂದು ಗಮನಾರ್ಹ ಬದಲಾವಣೆ ಎಂದರೆ, ದೀರ್ಘಾವಧಿ ಬಂಡವಾಳ ಹೂಡಿಕೆಗೆ ಇದ್ದ ಶೇ 20ರ ದರವನ್ನು ಶೇ 12.5ಕ್ಕೆ ಇಳಿಕೆ ಮಾಡಿದ ಪರಿಣಾಮ ಹಣದುಬ್ಬರ ಪ್ರಮಾಣಕ್ಕೆ ತಕ್ಕ ಸೂಚ್ಯಂಕದ ಪ್ರಯೋಜನ ಮುಂದೆ ಸಿಗುವುದಿಲ್ಲ. ಇದರಿಂದ ಆಸ್ತಿ ಮಾರಾಟದಿಂದ ಬರುವ ಲಾಭದ ಮೇಲೆ ಸಾಕಷ್ಟು ತೆರಿಗೆ ಪರಿಣಾಮ ಬೀರಲಿದೆ.

ಮೇಲಿನ ಕೆಲವು ವಿಚಾರಗಳನ್ನು ಹೊರತುಪಡಿಸಿದರೆ, ಈ ಬಾರಿಯ ಬಜೆಟ್ ಒಟ್ಟಾರೆ ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ಅನೇಕ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಉತ್ತೇಜನ ನೀಡಲು ಹೆಚ್ಚಿನ ಮೊತ್ತದ ಸಾಲ ಯೋಜನೆಗಳು, ಹೊಸ ಉದ್ಯೋಗಾವಕಾಶಗಳನ್ನು ಸೃಜಿಸುವ ಕಂಪನಿಯ ಉದ್ಯೋಗಿಗಳ ಖಾತೆಗೆ ಸರ್ಕಾರದಿಂದಲೂ ಹೆಚ್ಚುವರಿ ಪಿಎಫ್ ದೇಣಿಗೆ, ಹೀಗೆ ಅನೇಕ ಯೋಜನೆಗಳು ಒಟ್ಟಾರೆಯಾಗಿ ಆರ್ಥಿಕತೆಯಲ್ಲಿ ಕ್ರಮೇಣ ಸಂಚಲನ ಮೂಡಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.