ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದರು.
ಕೇಂದ್ರ ಬಜೆಟ್ ಬಗ್ಗೆ ಹಲವರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ದುಡಿಯುವ ವರ್ಗಕ್ಕೆ ನಿರಾಸೆ: ಸುರ್ಜೆವಾಲ
ತಿಂಗಳ ಸಂಬಳ ಪಡೆಯುವ ದುಡಿಯುವ ವರ್ಗ ಮತ್ತು ಮಧ್ಯಮ ವರ್ಗವು ಈ ಸಾಂಕ್ರಾಮಿಕ ಅವಧಿಯಲ್ಲಿ ಪರಿಹಾರ ಕ್ರಮಗಳನ್ನು ನಿರೀಕ್ಷಿಸುತ್ತಿತ್ತು. ನೇರ ತೆರಿಗೆ ಕ್ರಮಗಳ ಮೂಲಕ ಮೋದಿ ಮತ್ತು ನಿರ್ಮಲಾ ಅವರು ಅವರನ್ನು ನಿರಾಶರನ್ನಾಗಿ ಮಾಡಿದ್ದಾರೆ. ಭಾರತದ ಡುಡಿಯುವ ವರ್ಗ ಮತ್ತು ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಭವಿಷ್ಯದ ‘ಆತ್ಮ ನಿರ್ಭರ ಭಾರತ’ ಬಜೆಟ್
ಭವಿಷ್ಯದ ‘ಆತ್ಮ ನಿರ್ಭರ ಭಾರತ’ ಬಜೆಟ್ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಈ ಬಜೆಟ್ ‘ಭಾರತದ ಅಮೃತ್ ಕಾಲ’ಕ್ಕೆ ನೀಲನಕ್ಷೆಯಂತಿದೆ. ಬಹು-ಮಾದರಿಯ ಮೂಲಸೌಕರ್ಯ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹೀಗಾಗಿ ಭಾರತವು ಉದಯೋನ್ಮುಖ ಜಾಗತಿಕ ಆರ್ಥಿಕತೆಯ ಕೇಂದ್ರವಾಗಿ ನಿಲ್ಲಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಪರಿಸರ ಸಂರಕ್ಷಣೆಗೆ ಆದ್ಯತೆ ಇಲ್ಲದ ಬಜೆಟ್: ಜಯರಾಮ್ ರಮೇಶ್
ಒಂದೆಡೆ, ಬಜೆಟ್ ಹವಾಮಾನ ಕ್ರಮ ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತದೆ. ಮತ್ತೊಂದೆಡೆ, ಇದು ಪರಿಸರ ವಿನಾಶಕಾರಿಯಾದ ನದಿ ಜೋಡಣೆ ಯೋಜನೆಗಳನ್ನು ಪ್ರಸ್ತಾಪಿಸುತ್ತದೆ. ವಾಕ್ಚಾತುರ್ಯವು ಈ ಬಜೆಟ್‌ನಲ್ಲಿ ಚೆನ್ನಾಗಿ ಧ್ವನಿಸುತ್ತಿದೆ. ಆದರೆ ಕ್ರಿಯೆಗಳು ಮುಖ್ಯ. ಆ ನಿಟ್ಟಿನಲ್ಲಿ ಮೋದಿ ಸರಕಾರ ವಿನಾಶಕಾರಿ ಹಾದಿಯಲ್ಲಿದೆ.
ಜಯರಾಮ್ ರಮೇಶ್, ರಾಜ್ಯಸಭೆ ಕಾಂಗ್ರೆಸ್ ಸದಸ್ಯ
ಯಾರಿಗೆ ಬಜೆಟ್? ಸೀತಾರಮ ಯಚೂರಿ ಪ್ರಶ್ನೆ
ದೇಶದ ಶೇ 10 ರಷ್ಟು ಶ್ರೀಮಂತರು ಶೇ 75ರಷ್ಟು ಸಂಪತ್ತನ್ನು ಹೊಂದಿದ್ದಾರೆ. ತಳಮಟ್ಟದಲ್ಲಿರುವ ಶೇ 60 ರಷ್ಟು ಮಂದಿ ಶೇ 5ಕ್ಕಿಂತಲೂ ಕಡಿಮೆ ಸಂಪತ್ತು ಹೊಂದಿದ್ದಾರೆ. ನಿರುದ್ಯೋಗ, ಬಡತನ ಮತ್ತು ಹಸಿವು ಹೆಚ್ಚುತ್ತಿರುವ ಮತ್ತು ಸಾಂಕ್ರಾಮಿದಈಸಮಯದಲ್ಲಿ ಶ್ರೀಮಂತರಿಗೆ ಏಕೆ ಹೆಚ್ಚು ತೆರಿಗೆ ವಿಧಿಸಿಲ್ಲ? ಎಂದು ಸಿಪಿಐ ನಾಯಕ ಸೀತಾರಾಮ ಯಚೂರಿ ಪ್ರಶ್ನೆ ಮಾಡಿದ್ದಾರೆ.
ಏನೂ ಇಲ್ಲಗಳ ನಡುವೆ ಕಳೆದುಹೋದ ಬಜೆಟ್: ಮಮತಾ
‘ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಸಾಮಾನ್ಯ ಜನರಿಗೆ ಬಜೆಟ್‌ನಿಂದ ಸಿಕ್ಕಿದ್ದು ಶೂನ್ಯ. ‘ಏನೂ ಇಲ್ಲಗಳ’ ನಡುವೆ ಬಜೆಟ್ ಕಳೆದು ಹೋಗಿದೆ - ಪೆಗಾಸಿಸ್ ಅನ್ನು ಮರೆಮಾಚುವ ಬಜೆಟ್’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೇಲಿ ಮಾಡಿದ್ದಾರೆ.
ಪ್ರಗತಿಗೆ ವೇಗವರ್ಧಕ: ಯಡಿಯೂರಪ್ಪ
ವಿತ್ತಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ಜೊತೆಗೆ ಪ್ರಗತಿಗೆ ವೇಗವರ್ಧಕವಾಗಿದೆ. ಸಾಂಕ್ರಾಮಿಕದ ಸವಾಲುಗಳನ್ನು ಹಿಮ್ಮೆಟ್ಟಿಸಿ, ಸ್ವಾವಲಂಬಿ ರಾಷ್ಟ್ರನಿರ್ಮಾಣಕ್ಕೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ಸಬ್ ಕಾ ವಿಕಾಸ್’ ಬದ್ಧತೆಗೆ ನಿದರ್ಶನವಾಗಿದೆ. ವಿಶೇಷವಾಗಿ ಕಾವೇರಿ ಸೇರಿದಂತೆ ನದಿಗಳ ಜೋಡಣೆ, ಉದ್ಯೋಗ ಸೃಷ್ಟಿ, 3.8 ಕೋಟಿ ಕುಟುಂಬಗಳಿಗೆ ನಲ್ಲಿನೀರು ಸಂಪರ್ಕ ಕಲ್ಪಿಸಲು 60,000 ಕೋಟಿ ರೂ, ಕೃಷಿ, ಪಿಎಂ ಗತಿಶಕ್ತಿ, ಆರೋಗ್ಯ ಸೇವೆ, ಹೂಡಿಕೆ ಉತ್ತೇಜನ ವಲಯಗಳಿಗೆ ಆದ್ಯತೆ ನೀಡಿರುವುದು ರಾಜ್ಯದ ಬೆಳವಣಿಗೆಗೆ ಗಣನೀಯ ನೆರವು ನೀಡಲಿದೆ ಎಂದು ಶಾಸಕ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ನದಿ ಜೋಡಣೆ ಐತಿಹಾಸಿಕ: ಕಾರಜೋಳ
ನದಿಗಳ ಜೋಡಣೆಗೆ ಪ್ರಸ್ತಾಪ ಐತಿಹಾಸಿಕ. ಇದರಿಂದ ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಅಂದರೆ, 25 ಲಕ್ಷ ಎಕರೆಗೆ ನೀರಾವರಿ ಒದಗಿಸಲು ಸಾಧ್ಯವಾಗುತ್ತದೆ. ಕೃಷಿ ಮಾತ್ರವಲ್ಲದೆ, ಕುಡಿಯುವ ನೀರಿನ ಸಮಸ್ಯೆಯೂ ಬಗೆ ಹರಿಯಲಿದೆ.ಈ ಯೋಜನೆ ಚಾಲನೆಗೆ ಸಹಕರಿಸಲಿದೆ– ಜಲಸಂಪನ್ಮೂಲ ಸಚಿವ , ಗೋವಿಂದ ಕಾರಜೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.