ಬೆಂಗಳೂರು: ‘ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಯ ಮೇಲೆ ₹88,000 ಕೋಟಿ ಹೊರೆ ಹೊರಿಸಿದೆ. ಗ್ಯಾರಂಟಿ ಯೋಜನೆ ಜಾರಿಗಾಗಿ ಜನಸಾಮಾನ್ಯರು ಈ ಹೊರೆ ಹೊರಲೇಬೇಕಾಗಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
‘ನಮ್ಮ ಅವಧಿಯಲ್ಲಿ ₹77,000 ಕೋಟಿ ಸಾಲ ಇತ್ತು. ಕೋವಿಡ್, ಲಾಕ್‌ಡೌನ್ ಕಾರಣಕ್ಕಾಗಿ ಸಾಲ ಮಾಡಬೇಕಾಗಿತ್ತು. ಆ ಬಳಿಕ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಆದರೆ, ಇವರು ಗ್ಯಾರಂಟಿಗಾಗಿ ಸಾಲ ಮಾಡಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಬಜೆಟ್ ಗಾತ್ರ ₹3.27 ಲಕ್ಷ ಕೋಟಿ ಮಾಡಿದ್ದಾರೆ. ನಮ್ಮ ಕಾಲದಲ್ಲಿ ಮಿಗತೆ ಬಜೆಟ್ ಮಾಡಿದ್ದೆವು. ಇವರು ಕೊರತೆ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ,ಕೃಷಿ, ಲೋಕೋಪಯೋಗಿ, ಯೋಜನೆಗಳಿಗೆ ಅನುದಾನ ಪ್ರಮಾಣ ಕಡಿಮೆ ಮಾಡಿದ್ದಾರೆ. ಅನುದಾನ ನೀಡದೆ ಅಭಿವೃದ್ಧಿ ಹೇಗೆ ಆಗುತ್ತದೆ’ ಎಂದು ಪ್ರಶ್ನಿಸಿದರು.
‘ರಾಜ್ಯ ಅಭಿವೃದ್ಧಿಗೆ ಏನು ಮಾಡುತ್ತೇವೆ ಎಂದು ಹೇಳುವುದಕ್ಕಿಂತ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಬಜೆಟ್‌ನಲ್ಲಿ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹೆಚ್ಚು ತೆರಿಗೆ ಸಂಗ್ರಹ ಮಾಡಿದ್ದೇವೆ. ಕೇಂದ್ರ ಎಷ್ಟು ಅನುದಾನ ನೀಡಿದೆ ಎನ್ನುವುದಕ್ಕೆ ದಾಖಲೆ ಇದೆ. ಕೇಂದ್ರ ಎರಡು ರೀತಿಯಲ್ಲಿ ಅನುದಾನ ನೀಡುತ್ತದೆ ಕೆಲವು ಯೋಜನೆಗಳಲ್ಲಿ ನೇರವಾಗಿ ಫಲಾನುಭವಿಗಳಿಗೆ ಅನುದಾನ ನೀಡುತ್ತದೆ. ಸಿದ್ದರಾಮಯ್ಯ ವಾಸ್ತವ ಮರೆ ಮಾಚುವ ಕೆಲಸ ಮಾಡಿದ್ದಾರೆ’ ಎಂದರು.
‘ಸಿದ್ದರಾಮಯ್ಯ ನಮ್ಮ ಯೋಜನೆಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ನಾವು ಎಲ್ಲರಿಗೂ ಉಚಿತ ಶಿಕ್ಷಣದ ಪ್ರಸ್ತಾಪ ಮಾಡಿದ್ದೆವು. ಸ್ತ್ರೀಸಾಮರ್ಥ್ಯ, ಯುವ ನಿಧಿ ಯೋಜನೆ ಮಾಡಿದ್ದೆವು. ಅವುಗಳ ಬಗ್ಗೆ ಪ್ರಸ್ತಾಪವಿಲ್ಲ. ಇದೊಂದು ಜನ ವಿರೋಧಿ, ಅಭಿವೃದ್ಧಿ ಮಾರಕ ಬಜೆಟ್’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.