ADVERTISEMENT

ಆದ್ಯತಾ ವಲಯವೇ ಗುರುತಿಸಿಲ್ಲ, ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 10:45 IST
Last Updated 5 ಮಾರ್ಚ್ 2020, 10:45 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಇದು ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಹಿಂದುಳಿದವರ ವಿರೋಧಿ ಬಜೆಟ್. ಆರು ವಲಯಗಳನ್ನಾಗಿ ವಿಂಗಡಿಸಿ ಬಜೆಟ್ ಮಂಡಿಸಿದ್ದಷ್ಟೇ ಬದಲಾವಣೆ. ಯಾವುದೇ ಆದ್ಯತಾ ವಲಯವನ್ನೂ ಗುರುತಿಸಿಲ್ಲ. ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್ ಇದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಕೇಂದ್ರದ ಜಿಡಿಪಿ ಶೇ 4.6 ಇದೆ. ನಮ್ಮ ಲೆಕ್ಕದಲ್ಲಿ ಇದು ಶೇ 4 ಇದೆ. ರಾಜ್ಯದಲ್ಲಿ 2019–20ರ ಸಾಲಿನಲ್ಲಿ ಜಿಡಿಪಿಯು ನಿರೀಕ್ಷೆಗಿಂತ ಶೇ 1ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡುಬರುತ್ತಿಲ್ಲ. ಕೃಷಿಗೆ ಬಜೆಟ್‌ನಲ್ಲಿ ಹೇಳಿಕೊಳ್ಳುವಂಥ ಕೊಡುಗೆಗಳೇನೂ ಇಲ್ಲ. ನೀರಾವರಿಗೆ ₹ 21 ಸಾವಿರ ಕೋಟಿ ನೀಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಯೋಜನೆಗಳೂ ಸೇರಿದಂತೆ ಮಹದಾಯಿಗೆ ₹ 500 ಕೋಟಿ, ಎತ್ತಿನಹೊಳೆಗೆ ₹ 1500 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆಗೆ ₹ 40 ಸಾವಿರ ಕೋಟಿ ಬೇಕು. ಹಸಿರು ಶಾಲು ಹಾಕಿದರೆ ರೈತರು ಉದ್ದಾರ ಆಗುತ್ತಾರಾ? ಯಡಿಯೂರಪ್ಪ ವ್ಯವಸಾಯ ಮಾಡಿದ್ದಾರೊ ಗೊತ್ತಿಲ್ಲ. ಏಕೆಂದ್ರೆ ಅವರು ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ನಾನೂ ಮೂರು ವರ್ಷ ಹಸಿರು ಶಾಲು ಹಾಕಿಕೊಂಡಿದ್ದೆ. ಅವರು ಯಾವುದಾದರೂ ಶಾಲು ಹಾಕಿಕೊಳ್ಳಲಿ. ಬಜೆಟ್‌ನಲ್ಲಿ ಸುಳ್ಳು ಹೇಳುವುದೇಕೆ? ನೀರಾವರಿ ಮತ್ತು ಕೃಷಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಮಹದಾಯಿ ಯೋಜನೆ ಕುರಿತು ಬಿಜೆಪಿಯವರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಹೋರಾಟ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನಿದೆ. ಗೋವಾ ಸಿಎಂ ಜೊತೆ ಮಾತನಾಡಲು ಇವರಿಗೆ ಆಗಲಿಲ್ಲ. ಮಹದಾಯಿ ಯೋಜನೆಯನ್ನು ಕನಿಷ್ಟ 2 ವರ್ಷದಲ್ಲಿ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆ ಮಾತ್ರ ಹೇಳಿದ್ದಾರೆ. ಆಹಾರ ಇಲಾಖೆಗೆ ಶೇ 1% ಅನುದಾನ ಕಡಿಮೆ ಮಾಡಿದ್ದಾರೆ ಯಾವ ಯೋಜನೆಗೆ ತಡೆ ನೀಡುತ್ತಾರೊ ಗೊತ್ತಿಲ್ಲ ಎಂದರು.

‌ಎಸ್‌ಸಿಪಿಟಿಎಸ್‌ಪಿಯಲ್ಲಿ ₹30,150 ಕೋಟಿ ಇತ್ತು. ಈಗ ₹26131 ಕೋಟಿ ಇದೆ. ಸುಮಾರು 4 ಸಾವಿರ ಕೋಟಿ ಹೆಚ್ಚಳವಾಗಬೇಕಿತ್ತು. ಬಜೆಟ್ ಗಾತ್ರ ಹೆಚ್ಚಾದಂತೆ ಆ ಯೋಜನೆಗೂ ಹೆಚ್ಚಿನ ಅನುದಾನ ನೀಡಬೇಕಿತ್ತು. ಮೂಗಿಗೆ ತುಪ್ಪ ಹಚ್ಚಲು ಘೋಷಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ರೈತರ ಸಾಲ ಮನ್ನಾ ಯೋಜನೆ ಏನಾಯಿತು ಎಂದು ಹೇಳಬೇಕಿತ್ತು. ಆದರೆ, ಆದರ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಲ್ಯಾಂಡ್ ಬ್ಯಾಂಕ್‌ಗಳ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದರು. ಅದನ್ನೂ ಪ್ರಸ್ತಾಪಿಸಿಲ್ಲ. ಇದು ರೈತ ವಿರೋಧಿ ಬಜೆಟ್ ಎಂದು ಟೀಕಿಸಿದರು.

ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಅಂತ ಹೇಳುತ್ತಿದ್ದಾರೆ. ಆದರೆ, ಅಲ್ಪ ಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರಿಗೆ ಯಾವುದೆ ವಿಶೇಷ ಯೋಜನೆ ಘೋಷಣೆ ಮಾಡಿಲ್ಲ ಎಂದರು.

ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಕಟ ಎಂದು ಘೋಷಣೆ ಮಾಡಿದ್ದರು. ನಾವು ಎಷ್ಟು ಹಣ ಇಟ್ಟಿದ್ದೇವು ಅಷ್ಟೆ ಹಣ ಇಟ್ಟಿದ್ದಾರೆ. ಎಲ್ಲ ಪಕ್ಷದವರು ಸೇರಿ ₹2500 ಕೋಟಿ ನೀಡುವಂತೆ ಮನವಿ ಮಾಡಿದ್ದರು. 371(ಜೆ) ಗೆ ವಿರೋಧ ಮಾಡಿದವರು ಬಿಜೆಪಿಯವರು ಇದೀಗ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಬೇಕಲ್ಲವೆ ಎಂದು ಪ್ರಶ್ನಿಸಿದರು.

ನಾವು ಬೆಂಗಳೂರು ಅಭಿವೃದ್ಧಿಗೆ ₹10 ಸಾವಿರ ಕೋಟಿ ಮೀಸಲಿಟ್ಟಿದ್ದೇವು. ಇವರು (ಬಿಜೆಪಿಯವರು) ₹8 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಜೊತೆಗೆ, ಮೆಟ್ರೊ ಪೆರಿಪೆರೆಲ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪವಿಲ್ಲ. ಬೆಂಗಳೂರು ಚಿತ್ರವನ್ನು ಆರು ತಿಂಗಳಲ್ಲಿ ಬದಲಾವಣೆ ಮಾಡುವುದಾಗಿ ಸಿಎಂ ಹೇಳಿದ್ದರು. ಉಪನಗರ ರೈಲ್ವೆ ಬಗ್ಗೆ ಮೂರು ವರ್ಷದಿಂದ ಹೇಳುತ್ತಿದ್ದಾರೆ. ಕೇಂದ್ರದವರು ₹ 1 ಕೋಟಿ ಇಟ್ಟಿದ್ದಾರೆ. ಇವರು ₹500 ಕೋಟಿ ಮೀಸಲಿಟ್ಟಿದ್ದಾರೆ. ಇದು ಟೇಕ್‌ ಆಪ್‌ ಆಗುವುದಿಲ್ಲ ಎಂದರು.

ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೆಸರು ಬದಲಾಯಿಸಿದಷ್ಟೆ ಬದಲಾವಣೆ. ಈ ಬಜೆಟ್‌ನಲ್ಲಿ ಯಾವುದೇ ಮುನ್ನೋಟವಿಲ್ಲ. ಪೆಟ್ರೋಲ್, ಡೀಸೆಲ್, ಮದ್ಯದ ಮೇಲೆ ತೆರಿಗೆ ಹೆಚ್ಚಳ ಮಾಡುವ ಮೂಲಕ ಜನರಿಗೆ ದ್ರೋಹ ಮಾಡಲು ಹೊರಟಿದ್ದಾರೆ. ಕೇಂದ್ರದಲ್ಲಿ ಇವರದೇ ಸರ್ಕಾರ ಇದೆ. ರಾಮರಾಜ್ಯ ಮಾಡುವುದಾಗಿ ಹೇಳಿದ್ದರು. ಅಲ್ಲಿಂದಲೂ ಯಾವುದೇ ಹಣ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದರು.

‘ಜನ ವಿರೋಧಿ ಬಜೆಟ್‌’
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದ್ದು ರಾಜ್ಯದ ಜನರಲ್ಲಿ ಭ್ರಮನಿರಸನ ಮೂಡಿಸಿದೆ. ಹಣದುಬ್ಬರ ಮತ್ತು ಆದಾಯ ಕೊರತೆಯಿಂದ ರಾಜ್ಯದ ಜನರು ಕಂಗಾಲಾಗಿದ್ದಾರೆ. ಯಡಿಯೂರಪ್ಪ ರಾಜ್ಯದ ಜನರಿಗೆ ಆಗಿರುವ ಗಾಯದ ಮೇಲೆ ಉಪ್ಪು ಸುರಿಯುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ #ಜನವಿರೋಧಿಬಜೆಟ್ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.