ಬೆಂಗಳೂರು: ಸದ್ಯವೇ ಮಂಡಿಸಲಿರುವ ರಾಜ್ಯ ಬಜೆಟ್‌ನ ಗಾತ್ರ ಅಂದಾಜು ₹3.35 ಲಕ್ಷ ಕೋಟಿ ತಲುಪಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದರು.
ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದ ಸದಸ್ಯರಿಗೆ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
2023–24ನೇ ಸಾಲಿನ ಬಜೆಟ್ ಗಾತ್ರ ₹3.09 ಲಕ್ಷ ಕೋಟಿ ಇದೆ. ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚುವರಿಯಾಗಿ ₹50 ಸಾವಿರ ಕೋಟಿ ಬೇಕಾಗುತ್ತದೆ. ಹಾಗಾಗಿ, ಪೂರಕ ಬಜೆಟ್ ಗಾತ್ರ ಹೆಚ್ಚಲಿದೆ. ರಾಜ್ಯದ ಮೊದಲ ಬಜೆಟ್ ₹21.3 ಕೋಟಿ ಇತ್ತು ಎಂದರು.
ಆದಾಯದ ವೃದ್ಧಿಗೆ ಸಾಮಾನ್ಯ ಜನರಿಗೆ ಹೊರೆಯಾಗದಂತೆ ಹೇಗೆ ತೆರಿಗೆ ವಿಧಿಸಬೇಕು ಎನ್ನುವುದನ್ನು ಮಹಾಭಾರತದ ಭೀಷ್ಮ, ಯುಧಿಷ್ಠರನಿಗೆ ಬೋಧಿಸಿದ್ದಾರೆ. ರಾಜ್ಯ ಸರ್ಕಾರವೂ ತೆರಿಗೆ ಭರಿಸುವ ಶಕ್ತಿ ಇರುವವರಿಂದ ತೆರಿಗೆ ಸಂಗ್ರಹಿಸಲು ಆದ್ಯತೆ ನೀಡಲಿದೆ. ಬಸವಣ್ಣನವರು ಹೇಳಿದಂತೆ ಕಾಯಕ ಮತ್ತು ದಾಸೋಹ ಬಜೆಟ್‌ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ ಎಂದು ವಿಶ್ಲೇಷಿಸಿದರು.
1994ರಲ್ಲಿ ಮೊದಲ ಬಾರಿ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸುವಾಗ ಪತ್ರಿಕೆಯೊಂದು ಲೇವಡಿ ಮಾಡಿತ್ತು. 100 ಕುರಿ ಎಣಿಸಲು ಬಾರದವರು ಬಜೆಟ್ ಮಂಡಿಸಲಿದ್ದಾರೆ ಎಂಬ ಟೀಕೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಆರ್ಥಿಕ ತಜ್ಞರು, ಚಿಂತಕರ ಸಲಹೆ, ಸಹಕಾರ ಪಡೆದು ರಾಜ್ಯದ ಆರ್ಥಿಕತೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇನ್ನೊಂದು ಪತ್ರಿಕೆ ಅತ್ಯುತ್ತಮ ಬಜೆಟ್ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.