ಬೆಂಗಳೂರು: ಕೋವಿಡ್, ಲಾಕ್‌ಡೌನ್, ಆರ್ಥಿಕ ಹಿಂಜರಿತ ಮತ್ತು ಜಿಎಸ್‌ಟಿ ಪರಿಹಾರ ಸಿಗದ ಕಾರಣ ಇತರ ರಾಜ್ಯಗಳಿಗಿಂತ ಕರ್ನಾಟಕವೇ ಅತಿ ಹೆಚ್ಚು ಸಾಲದ ಹೊರೆಯನ್ನು ಹೊತ್ತಿದೆ.
ಕೇಂದ್ರದ ಬಜೆಟ್‌ನಲ್ಲಿ ಈ ಅಂಶ ವ್ಯಕ್ತವಾಗಿದೆ. ಲಾಕ್‌ಡೌನ್ ಮತ್ತು ಆದಾಯ ಇಲ್ಲದೇ ತತ್ತರಿಸಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ₹30,515.91 ಕೋಟಿ ಸಾಲ ನೀಡಿದೆ. ಇದು ಜಿಎಸ್‌ಟಿ ಪರಿಹಾರದ ಶೇ 11 ರಷ್ಟು ಮೊತ್ತ. ಕರ್ನಾಟಕದ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
ಕೋವಿಡ್‌ನಿಂದಾಗಿ ಜಿಎಸ್‌ಟಿ ಸಂಗ್ರಹ ತೀವ್ರವಾಗಿ ಕುಸಿತವಾಗಿತ್ತು. ಇದರಿಂದಾಗಿ 2020–21 ಮತ್ತು 2021–22 ನೇ ಸಾಲಿಗೆ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಸಾಧ್ಯವಾಗದ ಕಾರಣ ಸಾಲ ನೀಡಲು ಕೇಂದ್ರ ಸರ್ಕಾರ ಮುಂದಾಯಿತು. ಆರ್ಥಿಕ ಸಂಕಷ್ಟದಲ್ಲಿದ್ದ ರಾಜ್ಯಗಳು ವಿಶೇಷ ಸಾಲ ಪಡೆಯುವ ಮೂಲಕ ಹಣಕಾಸಿನ ವೆಚ್ಚ ಭರಿಸಿಕೊಳ್ಳಲು ಕೇಂದ್ರ ಸಲಹೆ ನೀಡಿತ್ತು.
ಇದರ ಪರಿಣಾಮ ರಾಜ್ಯ ಸರ್ಕಾರ ಮೂರು ಬಾರಿ ಸಾಲ ಪಡೆಯಿತು. ₹15,489.32 ಕೋಟಿ ಮೊತ್ತದ ಒಂದು ಸಾಲ, ನಂತರ ಎರಡು ಬಾರಿ ತಲಾ ₹6,203.5 ಕೋಟಿ ಮತ್ತು ಇನ್ನೊಂದು ಬಾರಿ ₹2,619.59 ಕೋಟಿ. ಹೀಗೆ 2020–21 ಮತ್ತು 2021–22 ನೇ ಸಾಲಿಗೆ ಒಟ್ಟು ₹30,151.91 ಕೋಟಿ ಸಾಲವನ್ನು ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.