ADVERTISEMENT

ಮಾರ್ದನಿಸಿದ ತಿರುವಳ್ಳುವರ್ ಕವಿತೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 20:15 IST
Last Updated 1 ಫೆಬ್ರುವರಿ 2020, 20:15 IST
   

ಚೆನ್ನೈ: ಆರು ವರ್ಷಗಳ ಬಳಿಕ, ತಮಿಳಿನ ದಾರ್ಶನಿಕ ಕವಿಗಳ ಕೃತಿಗಳು ಬಜೆಟ್‌ ಭಾಷಣದಲ್ಲಿ ಮಾರ್ದನಿಸಿದವು. ತಿರುವಳ್ಳುವರ್ ಹಾಗೂ ಅವ್ವೈಯಾರ್‌ ಅವರ ಕವಿತೆಗಳ ಸಾಲುಗಳನ್ನು ತಮ್ಮ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ಕ್ಷೇತ್ರದ ಪುನಶ್ಚೇತನಕ್ಕೆ ಸರ್ಕಾರದ ಪ್ರಯತ್ನಗಳನ್ನು ಈ ಸಾಲುಗಳ ಮೂಲಕ ದೇಶಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡಿದರು.

ಹನ್ನೊಂದು ಬಾರಿ ಬಜೆಟ್‌ ಮಂಡನೆ ಮಾಡಿದ ಖ್ಯಾತಿ ಹೊಂದಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು 1996ರಲ್ಲಿ ಬಜೆಟ್‌ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ತಿರುಕ್ಕುರುಳ್‌ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ತಿರುವಳ್ಳುವರ್‌ ಕವಿತೆಗಳನ್ನು ಉದ್ಧರಿಸದೇ ಅವರ ಬಜೆಟ್‌ ಭಾಷಣ ಪೂರ್ಣಗೊಳ್ಳುತ್ತಿರಲಿಲ್ಲ.

‘ಅನಾರೋಗ್ಯದಿಂದ ಮುಕ್ತಿ, ಸಂಪತ್ತು ಸೃಷ್ಟಿ, ಉತ್ಪಾದನೆ, ನೆಮ್ಮದಿ ಹಾಗೂ ರಕ್ಷಣೆ ಎಂಬ ಈ ಐದು ವಿಷಯಗಳು ಸುಭಿಕ್ಷ ರಾಜ್ಯವೊಂದರ ಆಭರಣಗಳಿದ್ದಂತೆ’ ಎಂಬರ್ಥ ಇರುವ, ತಿರುವಳ್ಳುವರ್‌ ಅವರ ಕವಿತೆಯ ಸಾಲುಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪಿಸಿದರು.

ADVERTISEMENT

‘ತಿರುವಳ್ಳುವರ್‌ ತಮ್ಮ ಕವಿತೆಯಲ್ಲಿ ಹೇಳಿರುವ ಈ ಐದು ಆಭರಣಗಳತ್ತ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗಮನ ನೀಡಿದೆ. ಆಯುಷ್ಮಾನ್‌ ಭಾರತ್‌ ಯೋಜನೆ, ಸಂಪತ್ತು ಸೃಷ್ಟಿಸುವವರಿಗೆ ವಿಶೇಷ ಆದ್ಯತೆ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಸುಲಲಿತ ಜೀವನೋಪಾಯ ಹಾಗೂ ರಾಷ್ಟ್ರೀಯ ಭದ್ರತೆಗೆ ವಿಶೇಷ ಆದ್ಯತೆ ಇವೇ ಆ ಐದು ಆಭರಣಗಳು’ ಎಂದೂ ವಿವರಿಸಿದರು.

ತಮಿಳುನಾಡಿನ ತಿರುಚಿರಾಪಳ್ಳಿ ಮೂಲದವರಾದ ನಿರ್ಮಲಾ, ಕೇಂದ್ರ ಬಜೆಟ್‌ ಮಂಡಿಸಿದ ತಮಿಳು ಮೂಲದ ಆರು ಜನರ ಪೈಕಿ ಒಬ್ಬರಾಗಿದ್ದಾರೆ. ಈ ಮೊದಲು ಆರ್‌.ಕೆ.ಷಣ್ಮುಖಂ ಚೆಟ್ಟಿ (1947), ಟಿ.ಟಿ.ಕೃಷ್ಣಮಾಚಾರಿ (1957, 1963, 1965), ಸಿ.ಸುಬ್ರಮಣ್ಯಂ (1975), ಆರ್‌.ವೆಂಕಟರಾಮನ್‌ (1980) ಹಾಗೂ ಪಿ.ಚಿದಂಬರಂ ತಮಿಳುನಾಡಿನವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.