ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಭದ್ರತೆಗೆ ಆಗ್ರಹಿಸಿ ರೈತರು ದೆಹಲಿ ಗಡಿಯಲ್ಲಿ ಆರಂಭಿಸಿದ ಪ್ರತಿಭಟನೆ 200 ದಿನಕ್ಕೆ ಕಾಲಿಡುತ್ತಿದೆ. ಇನ್ನೊಂದೆಡೆ ರಾಜ್ಯವೂ ಸೇರಿ ದೇಶದಾದ್ಯಂತ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಇದೆ. ಇವೆಲ್ಲವನ್ನೂ ಸರಿಪಡಿಸುವ ಯತ್ನವನ್ನು ಸರ್ಕಾರವು ಬಜೆಟ್‌ನಲ್ಲಿ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪಾಠ ಕಲಿತಿಲ್ಲ ಎಂದೇ ಹೇಳಬೇಕಾಗುತ್ತದೆ
ದೇಶದಲ್ಲಿ ರೈತರ ಈಗಿನ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಈ ಬಜೆಟ್‌ನ ಮೇಲೆ ಕೆಲವು ನಿರೀಕ್ಷೆಗಳು ಇದ್ದವು. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನಡೆಗೆ ರೈತರ ಆಕ್ರೋಶವೂ ಒಂದು ಪ್ರಮುಖ ಕಾರಣ. ರೈತರನ್ನು ಅಸಡ್ಡೆ ಮಾಡಿದ್ದು ಮತ್ತು ರೈತರಿಂದ ವಿಮುಖರಾಗಿದ್ದರಿಂದಲೇ ಕೇಂದ್ರ ಸರ್ಕಾರವು ರೈತವರ್ಗದ ಆಕ್ರೋಶಕ್ಕೆ ಗುರಿಯಾಯಿತು ಎಂಬುದು ನಿಚ್ಚಳ. ಇವುಗಳಿಂದ ಕೇಂದ್ರ ಸರ್ಕಾರವು ಪಾಠ ಕಲಿತಿದೆ ಎಂದುಕೊಳ್ಳಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಪಾಠ ಕಲಿತಿದ್ದರೆ ಬಜೆಟ್‌ನ ಘೋಷಣೆಗಳು ರೈತ ಕೇಂದ್ರಿತವಾಗಿರುತ್ತಿದ್ದವು. ಆದರೆ ಯಥಾಪ್ರಕಾರ ಈ ಬಜೆಟ್, ಕೃಷಿಯನ್ನು ಒಂದು ಉದ್ದಿಮೆ ವಲಯವನ್ನಾಗಿ ನೋಡುವುದಕ್ಕೇ ಒತ್ತು ನೀಡಿದೆ.
ರೈತರನ್ನು ಮನುಷ್ಯರು ಎಂದು ಪರಿಗಣಿಸುವ ನೀತಿ ರೂಪಿಸುವುದಕ್ಕೂ, ಕೃಷಿಯನ್ನು ಒಂದು ಉತ್ಪಾದಕ ವಲಯ ಎಂದು ಪರಿಗಣಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಉತ್ಪಾದಕತೆಗೆ ಒತ್ತು ನೀಡುವುದು ಸ್ವಾಗತಾರ್ಹವೇ. ಆದರೆ ಉತ್ಪಾದನೆ ಹೆಚ್ಚಿಸದರಷ್ಟೇ ಸಾಲದು. ಉತ್ಪಾದನೆಯ ನಂತರ ಏನು ಎಂಬುದರತ್ತ ಗಮನ ಹರಿಸಬೇಕಿತ್ತು. ಉತ್ಪಾದಿಸಿದ ರೈತರಿಗೆ ಬೆಲೆ ಸಿಗುವಂತೆ ಮಾಡಬೇಕಿತ್ತು. ದೇಶದಲ್ಲಿ ಈಗ ಉತ್ಪಾದಕತೆಗೆ ಹೆಚ್ಚು ನೀಡಬೇಕಿರುವುದು ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳಿಗೆ ಮಾತ್ರ. ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆ ಮತ್ತು ಮಾರುಕಟ್ಟೆ ಸುಧಾರಣೆಗೆ ಬಜೆಟ್‌ನಲ್ಲಿ ಒತ್ತು ನೀಡಬೇಕಿತ್ತು. ಡಿಜಿಟಲ್–ಸಹಕಾರಿ ಮಾರುಕಟ್ಟೆ ರೂಪಿಸುವ ಮೂಲಕ ರೈತರಿಗೆ ಹೆಚ್ಚಿನ ಬೆಲೆ ಸಿಗುವಂತೆ ಮಾಡಬೇಕಿತ್ತು. ಆದರೆ ಇವುಗಳನ್ನು ಸಾಧಿಸುವ ಅಂಶಗಳು ಬಜೆಟ್‌ನಲ್ಲಿ ಇಲ್ಲ.
ಕೃಷಿ ಪುನರುಜ್ಜೀವನ, ಉತ್ಪಾದಕತೆ, ನೈಸರ್ಗಿಕ ಕೃಷಿ, ಹವಾಮಾನ ಬದಲಾವಣೆ ಸುಸ್ಥಿರ ಕೃಷಿ ಎಂಬ ಬಣ್ಣ–ಬಣ್ಣದ ಮಾತುಗಳನ್ನು ಬಜೆಟ್ ಭಾಷಣದಲ್ಲಿ ಆಡಲಾಗಿದೆ. ಇವೆಲ್ಲವೂ ಒಳ್ಳೆಯ ವಿಚಾರಗಳೇ. ಇವುಗಳಿಗೆ ಬಜೆಟ್‌ನಲ್ಲಿ ದುಡ್ಡು ಕೊಟ್ಟರಷ್ಟೇ ಸಾಲದು. ಇವುಗಳನ್ನು ಸಾಧಿಸಲು ವಿಸ್ತೃತವಾದ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕೆಲಸಗಳು ಆಗಬೇಕಿದೆ. ಈಗ ದೇಶದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನಾ ಪದ್ಧತಿಯು ರಾಸಾಯನಿಕ ಕೃಷಿ ಮತ್ತು ಆಧುನಿಕ ಕೃಷಿಯನ್ನೇ ಕೇಂದ್ರೀಕರಿಸಿವೆ. ಸರ್ಕಾರವೇ, ಒಂದೆಡೆ ನೈಸರ್ಗಿಕ ಕೃಷಿ ಎನ್ನುತ್ತಾ ಮತ್ತೊಂದೆಡೆ ರಸಗೊಬ್ಬರದ ಸಹಾಯಧನ ಹೆಚ್ಚಿಸಿದೆ. ಬಜೆಟ್‌ನಲ್ಲಿ ಘೋಷಿಸಿದ ತಕ್ಷಣ ಇವು ಬದಲಾಗುವುದಿಲ್ಲ. ಈ ಘೋಷಣೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಬಳಿ ನೀಲನಕ್ಷೆ ಇದ್ದಂತಿಲ್ಲ.
ಎಷ್ಟೋ ಕೋಟಿ ರೈತರಿಗೆ ನೈಸರ್ಗಿಕ ಕೃಷಿಯಲ್ಲಿ ತರಬೇತಿ ನೀಡುತ್ತವೆ ಎಂದು ಘೋಷಿಸಿದ್ದಾರೆ. ನೈಸರ್ಗಿಕ ಕೃಷಿ ಎಂದಕೂಡಲೇ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬದಿಗೆ ಇಡಬೇಕಾಗುತ್ತದೆ. ಆದರೆ ಅವುಗಳಿಗೆ ಪರ್ಯಾಯವಾದ ಜೈವಿಕ ಗೊಬ್ಬರವು ದೇಶದ ಎಲ್ಲಾ ರೈತರಿಗೂ ಸಾಲುವಷ್ಟು ನಮ್ಮಲ್ಲಿ ಇದೆಯೇ? ಅದರ ವೆಚ್ಚ ಎಷ್ಟಾಗುತ್ತದೆ? ಕೀಟನಾಶಕಗಳಿಗೆ ಪರ್ಯಾಯವೇನು? ನೈಸರ್ಗಿಕ ಕೃಷಿಗೆ ಬದಲಾಗುವ ಉದ್ದೇಶದ ಸಂಶೋಧನೆಗಳು, ಪರಿಕರ ಸಿದ್ಧತೆಗಳು ಇಲ್ಲದೆಯೇ ಕೋಟ್ಯಂತರ ರೈತರಿಗೆ ತರಬೇತಿ ಹೇಗೆ ಕೊಡುತ್ತೀರಿ? ಇವ್ಯಾವುವೂ ಇಲ್ಲದ ಘೋಷಣೆ ಕಾರ್ಯಸಾಧುವಲ್ಲ.
‘ಭೂ–ಆಧಾರ್’ ಜಾರಿಗೆ ತರುತ್ತೇವೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ‘ಭೂ–ಆಧಾರ್’ನಿಂದ ರೈತರ ಜಮೀನಿನ ಎಲ್ಲಾ ದಾಖಲೆಗಳು ಜಗ್ಗಾಜಾಹೀರಾಗುತ್ತದೆ. ಇದು ಹಲವು ಅಕ್ರಮಗಳಿಗೂ ಕಾರಣವಾಗಬಹುದು. ಹೀಗಾಗಿ ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನರೇಗಾ ಮತ್ತು ಕೃಷಿಯನ್ನು ಪರಸ್ಪರ ಪೂರಕವಾಗಿ ಇರುವಂತಹ ನೀತಿಗಳ ಅವಶ್ಯಕತೆ ಇತ್ತು. ಆದರೆ ಅಂತಹ ಪರಿಹಾರಗಳು ಬಜೆಟ್‌ನಲ್ಲಿ ಇಲ್ಲ. ಬಹಳ ಸಮಸ್ಯೆ ಇರುವುದರಿಂದಲೇ ರೈತರು ಬೀದಿಗೆ ಇಳಿದಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವುಗಳನ್ನು ಪರಿಹರಿಸಲು ಬಜೆಟ್‌ನಲ್ಲಿ ಬಣ್ಣ–ಬಣ್ಣದ ಘೋಷಣೆಗಳನ್ನು ಮಾಡಲಾಗಿದೆ. ಆದರೆ ಅವುಗಳನ್ನು ಸಾಧಿಸಲು ನೀಲನಕ್ಷೆ ಇಲ್ಲ. ಬಜೆಟ್‌ನಲ್ಲಿ ರೈತರನ್ನು ನಿರ್ಲಕ್ಷ್ಯಿಸಲಾಗಿದೆ ಎಂದೇ ಹೇಳಬೇಕಾಗುತ್ತದೆ.
ನಿರೂಪಣೆ: ಜಯಸಿಂಹ ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.