ನವದೆಹಲಿ: ಕೇಂದ್ರ ಬಜೆಟ್ ಪ್ರತಿ ಮುದ್ರಿಸುವ ಸಂಪ್ರದಾಯವನ್ನು ಗುರುತಿಸುವ 'ಹಲ್ವಾ ಸಮಾರಂಭ'ವನ್ನು ಹಣಕಾಸು ಸಚಿವಾಲಯವು ಇಂದು (ಶನಿವಾರ) ಆಯೋಜಿಸುತ್ತಿದೆ.
ಬಹುನಿರೀಕ್ಷಿತ ಕೇಂದ್ರ ಬಜೆಟ್ 2021 ಅನ್ನು ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ವರ್ಷಂಪ್ರತಿ ಕೇಂದ್ರ ಬಜೆಟ್ ಮಂಡನೆಯಾಗುವುದಕ್ಕಿಂತಲೂ ಕೆಲವು ದಿನಗಳ ಮೊದಲು ಹಣಕಾಸು ಇಲಾಖೆಯಿಂದ ಹಲ್ವಾ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಕೇಂದ್ರ ಬಜೆಟ್‌ಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.
ಉತ್ತರ ಬ್ಲಾಕ್‌ನಲ್ಲಿ ನಡೆಯಲಿರುವ ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ಮತ್ತು ವಿತ್ತ ಸಚಿವಾಲಯದ ಇತರೆ ಕಾರ್ಯದರ್ಶಿಗಳು ಉಪಸ್ಥಿತರಿರುತ್ತಾರೆ.
ಹಲ್ವಾ ಸಮಾರಂಭದ ಬಳಿಕ ಬಜೆಟ್ ಪ್ರತಿ ಮುದ್ರಣಾ ತಯಾರಿಕೆ ಪ್ರಕ್ರಿಯೆಯ ಭಾಗವಾಗಿರುವ ನೌಕರರು, ಸುಮಾರು 10 ದಿನಗಳ ಕಾಲ ನಾರ್ತ್ ಬ್ಲಾಕ್‌ನ ತಳ ಅಂತಸ್ಥಿನ ಕಚೇರಿಗೆ ತೆರಳುತ್ತಾರೆ. ಅವರೆಲ್ಲರೂ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳುತ್ತಿದ್ದು, ಬಾಹ್ಯ ಜಗತ್ತಿನ ಸಂಪರ್ಕ ಕಡಿತಗೊಳ್ಳುತ್ತದೆ.
ವಿತ್ತ ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಬಳಿಕವಷ್ಟೇ ಅವರೆಲ್ಲರು ಹೊರಗೆ ಬರುತ್ತಾರೆ. ವಾರ್ಷಿಕ ಬಜೆಟ್ ಕುರಿತು ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮತ್ತು ವಿವರಗಳು ಸೋರಿಕೆಯಾಗುವುದನ್ನು ತಡೆಗಟ್ಟಲು ಈ ರೀತಿ ಮಾಡಲಾಗುತ್ತದೆ.
ಈ ಸಮಾರಂಭದಲ್ಲಿ ಬಜೆಟ್ ಮುದ್ರಣ ತಯಾರಿಕೆ ಪ್ರಕ್ರಿಯೆಯ ಭಾಗವಾಗಿರುವ ಪ್ರತಿಯೊಬ್ಬ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ಶ್ಲಾಘಿಸಲಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ಪ್ರತಿ ಮುದ್ರಣವಾಗುವುದಿಲ್ಲ. ಜನವರಿ 29ರಂದು ಸಂಸತ್ತಿನಲ್ಲಿ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯ ಮುದ್ರಣವೂ ಇರುವುದಿಲ್ಲ.
ಇದನ್ನೂ ಓದಿ:ಕೇಂದ್ರ ಬಜೆಟ್: ಸೇವಾ ವಲಯಕ್ಕೆ ಆದ್ಯತೆ?
ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 29ರಿಂದ ಆರಂಭವಾಗಿ ಫೆಬ್ರವರಿ 15ರ ವರೆಗೆ ನಡೆಯಲಿದೆ. ಎರಡನೇ ಅಧಿವೇಶನ ಮಾರ್ಚ್ 8ರಿಂದ ಎಪ್ರಿಲ್ 8ರ ವರೆಗೆ ಸಾಗಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸದರು ಕೋವಿಡ್-19 ಆರ್‌ಟಿ-ಪಿಸಿಆರ್ ವೈದ್ಯಕೀಯ ಪರೀಕ್ಷೆಗೆ ಒಳಪಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.