ನವದೆಹಲಿ:ಹಳೆಯ ವಾಹನಗಳ ವಿಲೇವಾರಿಗೆ ಬಜೆಟ್‌ನಲ್ಲಿ ಹೊಸ ನೀತಿ ಘೋಷಿಸಲಾಗಿದೆ.
ಹಳೆಯ ವಾಹನಗಳ ಸ್ವಯಂಪ್ರೇರಿತ ‘ಸ್ಕ್ರ್ಯಾಪಿಂಗ್ ಪಾಲಿಸಿ (ಹಳೆಯ ವಾಹನಗಳನ್ನು ಗುಜರಿಗೆ ನೀಡಲು ನೀತಿ)’ ಘೋಷಿಸಲಾಗಿದೆ. ಇದರನ್ವಯ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಕ್ಷಮತಾ ಪರೀಕ್ಷೆ ನಡೆಸಲಾಗುತ್ತದೆ.
ಮಾಲಿನ್ಯ ಕಡಿಮೆ ಮಾಡುವ, ತೈಲ ಆಮದು ಹೊರೆ ತಗ್ಗಿಸುವ ನಿಟ್ಟಿನಲ್ಲಿ ಹಾಗೂ ಪರಿಸರಸ್ನೇಹಿ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
‘ಸ್ಕ್ರ್ಯಾಪಿಂಗ್ ಪಾಲಿಸಿ’ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪ್ರತ್ಯೇಕವಾಗಿ ಸಚಿವಾಲಯವು ಹಂಚಿಕೊಳ್ಳಲಿದೆ ಎಂದೂ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳ ಬಳಿ ಇರುವ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ನೀಡುವ ನೀತಿ ರೂಪಿಸುವ ಬಗ್ಗೆ ಕಳೆದ ವಾರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದರು. ಹೊಸ ನೀತಿ 2022ರ ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದರು.
ಹೊಸ ನೀತಿಗೆ ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತಿದೆ. ಈ ಕುರಿತು ಸಚಿವಾಲಯವು ಪ್ರಕಟಣೆಯನ್ನೂ ಹೊರಡಿಸಿತ್ತು.
15 ವರ್ಷಕ್ಕಿಂತ ಹಳೆಯ ವಾಹನಗಳ ‘ಸ್ಕ್ರ್ಯಾಪಿಂಗ್’ಗೆ ಸಂಬಂಧಿಸಿ 2019ರ ಜುಲೈ 26ರಂದು ಸರ್ಕಾರವು ‘ಮೋಟಾರು ವಾಹನ ನಿಯಮ’ಗಳಿಗೆ ತಿದ್ದುಪಡಿ ತಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.