ನವದೆಹಲಿ: ದೇಶದ ಮೊದಲ ಕಾಗದರಹಿತ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿತ್ತೀಯ ಶಿಸ್ತಿನ ನಿರ್ಬಂಧದ ನಡುವೆಯೂ ರಾಜಕೀಯವಾಗಿಹೆಚ್ಚು ಮುಖ್ಯವಾದ ವರ್ಗಗಳು ಮತ್ತು ರಾಜ್ಯಗಳನ್ನು ತಲುಪುವ ಯತ್ನ ಮಾಡಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆ ಸಿಕ್ಕಿದೆ. ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಮೀಣ ಭಾರತಕ್ಕೆ ಸಂದೇಶ ನೀಡುವ ಪ್ರಯತ್ನವೂ ಇದೆ.
ಜನರ ನಿರೀಕ್ಷೆಗಳು, ಎಲ್ಲರ ಒಳಗೊಳ್ಳುವಿಕೆ ಮತ್ತು ‘ಆತ್ಮ ನಿರ್ಭರ ಭಾರತ’ ಆಶಯಕ್ಕೆ ಅನುಗುಣವಾಗಿ ಸಿದ್ಧಪಡಿಸಲಾದ ಬಜೆಟ್ ಎಂದು ಬಿಜೆಪಿ ಹೇಳಿದೆ. ಆದರೆ, ವಿರೋಧ ಪಕ್ಷಗಳಿಗೆ ಬಜೆಟ್ ಪಥ್ಯವಾಗಿಲ್ಲ. ಇದು ‘ಶೇಕಡ ನೂರರಷ್ಟು ಮುನ್ನೋಟರಹಿತ’ ಎಂದು ವಿರೋಧ ಪಕ್ಷಗಳು ಹೇಳಿವೆ.
ಕೃಷಿ ಕ್ಷೇತ್ರವನ್ನು ಬಲಪಡಿಸುವ, ರೈತರ ಆದಾಯವನ್ನು ವೃದ್ಧಿಸುವ ಮತ್ತು ಗ್ರಾಮಗಳು ಹಾಗೂ ರೈತರನ್ನು ಹೃದಯದಲ್ಲಿ ಇರಿಸಿಕೊಂಡಿರುವ ಬಜೆಟ್ ಇದು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಆದರೆ, ಇಡೀ ದೇಶವನ್ನು ತಮ್ಮ ನೆಚ್ಚಿನ ಬಂಡವಾಳಶಾಹಿಗಳಿಗೆ ಕೊಡುವ ಹುನ್ನಾರ ಈ ಬಜೆಟ್‌ನಲ್ಲಿ ಇದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಜೆಟ್ ಶ್ರೀಮಂತರ ಪರ. ರೈತರು ಮತ್ತು ಶೋಷಿತ ವರ್ಗವನ್ನು ನಿರ್ಲಕ್ಷಿಸಲಾಗಿದೆ ಎಂದು ಬಿಎಸ್‌ಪಿ ಹೇಳಿದೆ. ರೈತರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಈ ಬಜೆಟ್ ಇನ್ನಷ್ಟು ಹೆಚ್ಚಿಸಲಿದೆ ಎಂದು ಎಸ್‌ಪಿ ಹೇಳಿದೆ.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚಹಾ ತೋಟದ ಕಾರ್ಮಿಕರಿಗಾಗಿ ₹1,000 ಕೋಟಿಯ ವಿಶೇಷ ಯೋಜನೆ ಘೋಷಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಕಟಿಸಲಾಗಿದೆ. ಇದಕ್ಕೆ ತಗಲುವ ವೆಚ್ಚ ₹1.03 ಲಕ್ಷ ಕೋಟಿ. ಕೇರಳ ರಾಜ್ಯಕ್ಕೆ ₹65 ಸಾವಿರ ಕೋಟಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಇವೆ. ಪಶ್ಚಿಮ ಬಂಗಾಳಕ್ಕೆ ₹25 ಸಾವಿರ ಕೋಟಿ ವೆಚ್ಚದಲ್ಲಿ 675 ಕಿ.ಮೀ. ಹೆದ್ದಾರಿಯ ಯೋಜನೆಯನ್ನು ಪ್ರಕಟಿಸಲಾಗಿದೆ. ಅಸ್ಸಾಂನಲ್ಲಿ ₹34 ಸಾವಿರ ಕೋಟಿ ಮೊತ್ತದಲ್ಲಿ 1300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಆಗಲಿದೆ. ಈ ಎಲ್ಲ ರಾಜ್ಯಗಳಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬುದು ಈ ಯೋಜನೆಗಳ ಹಿನ್ನೆಲೆಯನ್ನು ಬಹಿರಂಗಪಡಿಸುತ್ತದೆ.
ಅಸ್ಸಾಂನಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 18 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. 2014ರ ಚುನಾವಣೆಗಿಂತ ತನ್ನ ನೆಲೆಯನ್ನು ಈ ಮಟ್ಟಕ್ಕೆ ವಿಸ್ತರಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿತ್ತು. ತಮಿಳು ನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ. ಹಿಂದುತ್ವದ ಪ್ರತಿಪಾದನೆ ಮತ್ತು ಮೈತ್ರಿ ಮೂಲಕ ಈ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಪಡೆಯುವ ಕಾರ್ಯತಂತ್ರವನ್ನು ಬಿಜೆಪಿ ಹಾಕಿಕೊಂಡಿದೆ.
ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಐದು ಪ್ರಮುಖ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಗಣನೀಯ ಪ್ರಮಾಣದ ಮೊತ್ತವನ್ನು ತೆಗೆದಿರಿಸಲಾಗಿದೆ.
ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರು ಭಾನುವಾರವಷ್ಟೇ ಹೇಳಿದ್ದರು. ಮರುದಿನ ಮಂಡನೆಯಾದ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಘೋಷಿಸಲಾಗಿದೆ. ಕೃಷಿ ಉತ್ಪನ್ನ ಹೆಚ್ಚಳ, ಸಂಗ್ರಹ ಮತ್ತು ಸಂಸ್ಕರಣೆಗೆ ಕೃಷಿ ಮೂಲಸೌಕರ್ಯ ಹೆಚ್ಚಳದ ಅಗತ್ಯ ಇದೆ ಎಂಬುದಕ್ಕೆ ನಿರ್ಮಲಾ ಅವರು ಒತ್ತು ನೀಡಿದ್ದಾರೆ.
‘ನಮ್ಮ ಸರ್ಕಾರವು ರೈತರ ಅಭಿವೃದ್ಧಿಗೆ ಬದ್ಧ’ ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ₹40 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ಇದು ₹30 ಸಾವಿರ ಕೋಟಿ ಇತ್ತು.
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.