ಉದ್ಯೋಗ ಖಾತರಿ ಮತ್ತು ಆಹಾರ ಬೆಂಬಲ ಕಾರ್ಯಕ್ರಮಗಳಿಗೆ ಕೇಂದ್ರ ಬಜೆಟ್ ಆದ್ಯತೆ ನೀಡಿದಂತೆ ಕಾಣುತ್ತದೆ. ಆದರೆ, ಅನೇಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆಯನ್ನು ಕಡಿತ ಮಾಡಿದೆ. ಇದು ಒಳ್ಳೆಯ ಸಂಕೇತವಲ್ಲ.
ಕೋವಿಡ್–19ರ ಸಾಂಕ್ರಾಮಿಕ ಮತ್ತು ಆರ್ಥಿಕತೆ ಮೇಲೆ ಅದರ ಪರಿಣಾಮವು ಭಾರತದಲ್ಲಿ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಸಮರ್ಪಕವಾಗಿಲ್ಲ ಎಂಬುದರ ದ್ಯೋತಕ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಿದೆಯೇ? ಹೌದಾದರೆ, ಅದನ್ನು ಸಾಧಿಸಲು ಏನು ಮಾಡಿದೆ? ಅದರ ಫಲಿತಾಂಶಗಳು ಎಷ್ಟು ವಾಸ್ತವಿಕವಾಗಿವೆ?
ಸಾಮಾಜಿಕ ಭದ್ರತೆಯು ನಾಗರಿಕರ ಬಡತನ ಮತ್ತು ದುರ್ಬಲತೆಯನ್ನು ಕಡಿಮೆ ಮಾಡುವ ಕ್ರಮ. ವಿಶಿಷ್ಟವಾಗಿ ಇದು ಉದ್ಯೋಗ ಖಾತರಿ, ಆಹಾರ ಬೆಂಬಲ, ನಗದು ನೆರವು, ವಿಮೆ, ಪಿಂಚಣಿ ಸೌಲಭ್ಯ ಇತ್ಯಾದಿ ಕಾರ್ಯಗಳನ್ನು ಒಳಗೊಂಡಿರುತ್ತದೆ.
ಕೇಂದ್ರ ಬಜೆಟ್ 2021-22ರಲ್ಲಿ ನರೇಗಾ ಯೋಜನೆಗೆ ಅಂದಾಜು ಶೇ 16ರಷ್ಟು ಅನುದಾನವನ್ನು ಹೆಚ್ಚಿಸಲಾಗಿದೆ (ಆದರೆ, ಅದು 2020–21ರ ಪರಿಷ್ಕೃತ ಅಂದಾಜಿಗಿಂತ ಶೇ 35ರಷ್ಟು ಕಡಿಮೆ). ಆಹಾರ ಸಬ್ಸಿಡಿ ಹಂಚಿಕೆ ಶೇ 52ರಷ್ಟು ಹೆಚ್ಚಾಗಿದೆ (ಅದು ಕಳೆದ ಸಾಲಿನ ಪರಿಷ್ಕೃತ ಅಂದಾಜಿಗಿಂತ ಶೇ 43ರಷ್ಟು ಕಡಿಮೆ). ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಅನುದಾನ ಹಂಚಿಕೆ ಹೆಚ್ಚಿಸಲಾಗಿದೆ. ಆದರೆ ಅದರ ವಿನಿಯೋಗವನ್ನು ಸ್ವಲ್ಪಮಟ್ಟಿಗೆ ಕುಗ್ಗಿಸಲಾಗಿದೆ. (2020-21ರ ಪರಿಷ್ಕೃತಕ್ಕಿಂತ ಶೇ 11 ರಷ್ಟು ಕಡಿಮೆ).
ಈಗಾಗಲೇ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಯೋಜನೆಯಡಿ ಒಂದೇ ಸೂರಿನಡಿ ತರಲಾಗಿದೆ. ಇದಕ್ಕೆ ಬಜೆಟ್ ಹಂಚಿಕೆಯನ್ನು ಕಳೆದ ಸಾಲಿಗಿಂತ ಕಡಿಮೆ ಮಾಡಲಾಗಿದೆ. ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ₹ 6400 ಕೋಟಿ ನಿಗದಿ ಮಾಡಲಾಗಿದೆ. ಇದು 15ನೇ ಹಣಕಾಸು ಆಯೋಗದ ಅಂದಾಜಿಗಿಂತ ಶೇ 77ರಷ್ಟು ಕಡಿಮೆ.
ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳಿಗೆ (ವಿವಿಧ ಪಿಂಚಣಿಗಳನ್ನು ಸೇರಿಸಿ) ಒಟ್ಟು ಬಜೆಟ್ ವಿನಿಯೋಗದಲ್ಲಿ ಬದಲಾವಣೆಗಳಾಗಿಲ್ಲ. ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ ₹6000 ಆರ್ಥಿಕ ನೆರವು ನೀಡಲಾಗುತ್ತದೆ. ಅದಕ್ಕೂ ಹಂಚಿಕೆಯಲ್ಲಿ ಶೇ 15 ರಷ್ಟು ಕಡಿತವಾಗಿದೆ.
ಭಾಷಣದಲ್ಲಿ ಹಣಕಾಸು ಸಚಿವರು, ‘ಪ್ಲಾಟ್‌ಫಾರಂ’ ಮತ್ತು ‘ಗಿಗ್’ (ಅಸಂಘಟಿತ) ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ವಿಸ್ತರಿಸುವುದಾಗಿ ಉಲ್ಲೇಖಿಸಿದ್ದಾರೆ. ಇದು ಶ್ಲಾಘನೀಯ. ಆದರೆ ಅದನ್ನು ಹೇಗೆ ಜಾರಿಗೆ ತರಲು ಸರ್ಕಾರ ಯೋಜಿಸಿದೆ ಎಂಬುದು ಸ್ಪಷ್ಟವಾಗಿಲ್ಲ.
ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವ ಹೆಚ್ಚಿನ ಯೋಜನೆಗಳಿಗೆ ಬಜೆಟ್ ವಿನಿಯೋಗದಲ್ಲಿ ಕಡಿತ ಕಂಡುಬಂದಿದೆ. ವಿವಿಧ ಕಾರ್ಯಕ್ರಮಗಳಿಗೆ ಎಷ್ಟು ಅನುದಾನ ನಿಗದಿ ಮಾಡಲಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ. ಪೂರ್ಣ ಮಾಹಿತಿ ದೊರೆತ ನಂತರವಷ್ಟೇ ಬಜೆಟ್‌ನ ಪರಿಣಾಮದ ಬಗ್ಗೆ ವಿಶ್ಲೇಷಿಸಲು ಸಾಧ್ಯ.
ಸಾಂಕ್ರಾಮಿಕ ರೋಗ ಇನ್ನೂ ಇದೆ, ಅದರ ಪ್ರಭಾವ ಶೀಘ್ರದಲ್ಲೇ ಕ್ಷೀಣಿಸುವ ಸಾಧ್ಯತೆಗಳಿಲ್ಲ. ಉದ್ಯೋಗ ಮತ್ತು ಆದಾಯದ ಸನ್ನಿವೇಶಗಳು ತಕ್ಷಣ ಬದಲಾಗುತ್ತದೆ ಎಂದೂ ನಿರೀಕ್ಷಿಸಲಾಗದು. ಆರ್ಥಿಕತೆಯನ್ನು ಮತ್ತೆ ಸರಿಯಾದ ಪಥಕ್ಕೆ ತರುವಲ್ಲಿ ಸಾಮಾಜಿಕ ಭದ್ರತಾ ಸುರಕ್ಷತೆಗಳು ನೆರವಾಗುತ್ತವೆ.
ದುರದೃಷ್ಟವಶಾತ್ 2021–22ರ ಕೇಂದ್ರದ ಬಜೆಟ್ ಈ ಪ್ರಮುಖ ವಿಷಯಗಳ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಿಲ್ಲ.
(ಲೇಖಕರು– ದಿ ತಕ್ಷಶಿಲಾ ಸಂಸ್ಥೆಯಲ್ಲಿ ಅಸೋಸಿಯೇಟ್ ಫೆಲೊ)
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.