ADVERTISEMENT

Union Budget 2022: ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳು –ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 17:06 IST
Last Updated 1 ಫೆಬ್ರುವರಿ 2022, 17:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸದಾಗಿ 400 ‘ವಂದೇ ಭಾರತ್ ರೈಲು’ಗಳನ್ನು ಪರಿಚಯಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.ಇಂಧನ ದಕ್ಷತೆ ಮತ್ತು ಪ್ರಯಾಣಿಕ ಸ್ನೇಹಿ ತಂತ್ರಜ್ಞಾನದೊಂದಿಗೆ ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.

ರೈಲಿನ ತೂಕವನ್ನು ಸುಮಾರು 50 ಟನ್ ಕಡಿಮೆ ಮಾಡಲಾಗಿದ್ದು,ಹಗುರ ತೂಕದ ಅಲ್ಯುಮಿನಿಯಂ ಅನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತದೆ. ಇದರಿಂದ ಇಂಧನದ ಉಳಿತಾಯವಾಗುತ್ತದೆ. ಪಿಎಂ ಗತಿಶಕ್ತಿ ಯೋಜನೆಯಡಿ 100 ಸರಕು ಟರ್ಮಿನಲ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಸಣ್ಣ ರೈತರು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸರಕುಗಳನ್ನು ಸಾಗಿಸಲು ದಕ್ಷ ಸರಕು ಸಾಗಣೆ ಸೇವೆಗಳನ್ನು ರೈಲ್ವೆ ಅಭಿವೃದ್ಧಿಪಡಿಸಲಿದೆ. ಜೊತೆಗೆ ಪಾರ್ಸೆಲ್‌ಗಳ ತಡೆರಹಿತ ಸಂಚಾರಕ್ಕೆ ಅನುಕೂಲವಾಗುವಂತೆ ಅಂಚೆ ಮತ್ತು ರೈಲ್ವೆ ನಡುವೆ ಸಂಪರ್ಕ ಸಾಧಿಸಲು ರೈಲ್ವೆ ಮುಂದಾಳತ್ವ ವಹಿಸಲಿದೆ.

ADVERTISEMENT

* ಜನರು ಮತ್ತು ಸರಕುಗಳ ವೇಗದ ಸಂಚಾರಕ್ಕೆ ಅನುಕೂಲವಾಗುವಂತೆ 2022-23ರಲ್ಲಿ ಎಕ್ಸ್‌ಪ್ರೆಸ್‌ ಹೆದ್ದಾರಿಗಳಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು

* ಸ್ಥಳೀಯ ವ್ಯಾಪಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ‘ಒಂದು ನಿಲ್ದಾಣ-ಒಂದು ಉತ್ಪನ್ನ’ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲಾಗುತ್ತದೆ

* ಆತ್ಮನಿರ್ಭರ ಭಾರತ್‌ ಭಾಗವಾಗಿ 2022-23ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿ.ಮೀ. ಜಾಲವನ್ನು ‘ಕವಚ್’ ಅಡಿಯಲ್ಲಿ ತರಲಾಗುವುದು

* ನಗರಗಳ ಸಮೂಹ ಸಾರಿಗೆ ಮತ್ತು ರೈಲು ನಿಲ್ದಾಣಗಳ ನಡುವೆ ಬಹು ಮಾದರಿ ಸಂಪರ್ಕವನ್ನು ಆದ್ಯತೆಯ ಮೇಲೆ ಸುಗಮಗೊಳಿಸಲಾಗುವುದು

ಬಜೆಟ್ ಕುರಿತ ಸಮಗ್ರ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:ಬಜೆಟ್ 2022

ಮೂಲಸೌಕರ್ಯಕ್ಕೆ ‘ಗತಿಶಕ್ತಿ’ಯ ಬಲ
ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್’ನಡಿಯಲ್ಲಿ ತಡೆರಹಿತ, ಬಹುಮಾಧ್ಯಮ ಸಂಪರ್ಕ ಹಾಗೂ ದಕ್ಷ ಸಾರಿಗೆಯನ್ನು ಒಳಗೊಳ್ಳುವ ಏಳು ಎಂಜಿನ್‌ಗಳು ಕೆಲಸ ಮಾಡಲಿವೆ.ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಸಾರಿಗೆ ಮೂಲಸೌಕರ್ಯ ಸಾರಿಗೆ ಮೂಲಸೌಕರ್ಯ ವಲಯಗಳು ಇಲ್ಲಿ ಆದ್ಯತೆ ಪಡೆಯಲಿವೆ.

ಇದು ವಿಭಿನ್ನ ವಿಧಾನಗಳ ಮೂಲಕ ಸರಕುಗಳ ಸರಾಗ ಸಂಚಾರ ಸಾಧ್ಯವಾಗಿಸುತ್ತದೆ. ಸಾಗಣೆ ವೆಚ್ಚ ಮತ್ತು ಸಮಯ ಕಡಿಮೆ ಮಾಡುತ್ತದೆ.ಯುವಜನರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಇದು ತೆರೆಯಲಿದೆ ಎಂದು ಸರ್ಕಾರ ತಿಳಿಸಿದೆ.

2022-23ರಲ್ಲಿ ಖಾಸಗಿ–ಸಾರ್ವಜನಿಕ ಸಹಭಾಗಿತ್ವದಡಿ ನಾಲ್ಕು ಸ್ಥಳಗಳಲ್ಲಿ ಬಹುವಿಧದ ‘ಲಾಜಿಸ್ಟಿಕ್ಸ್ ಪಾರ್ಕ್‌’ ಅನುಷ್ಠಾನಕ್ಕೆ ಗುತ್ತಿಗೆ ನೀಡಲಾಗುತ್ತದೆ.

ರಕ್ಷಣಾ ಉತ್ಪಾದನೆ: ಸ್ವಾವಲಂಬನೆ ಮಂತ್ರ
ದೇಶದ ರಕ್ಷಣಾ ಬಜೆಟ್‌ನ ಗಾತ್ರವನ್ನು ಹೆಚ್ಚಿಸಲಾಗಿದೆ. 2022–23ನೇ ಸಾಲಿನಲ್ಲಿ ರಕ್ಷಣಾ ವಲಯಕ್ಕೆ ₹5.25 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ₹4.78 ಕೋಟಿ ನೀಡಲಾಗಿತ್ತು. ಸೇನಾ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಖಾತ್ರಿಪಡಿಸುವುದನ್ನು ಈ ಬಾರಿಯ ಬಜೆಟ್ ಒತ್ತಿ ಹೇಳಿದೆ. ಆಮದುಗಳನ್ನು ಕಡಿಮೆ ಮಾಡಲು ಮತ್ತು ಸಶಸ್ತ್ರ ಪಡೆಗಳಿಗೆ ಉಪಕರಣಗಳನ್ನು ಉತ್ಪಾದಿಸುವಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ.

ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಯುದ್ಧೋಪಕರಣಗಳ ಖರೀದಿ ಒಳಗೊಂಡಂತೆ ಬಂಡವಾಳ ವೆಚ್ಚಕ್ಕಾಗಿ ಒಟ್ಟು ₹1,52,369 ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ ಬಂಡವಾಳ ವೆಚ್ಚಕ್ಕಾಗಿ ₹1.34 ಲಕ್ಷ ಕೋಟಿ ನೀಡಲಾಗಿತ್ತು. ವೇತನ ಪಾವತಿ ಮತ್ತು ಸಂಸ್ಥೆಗಳ ನಿರ್ವಹಣೆ ವೆಚ್ಚಗಳನ್ನು ಒಳಗೊಂಡ ವೆಚ್ಚಕ್ಕಾಗಿ ₹2,33,000 ಕೋಟಿ ತೆಗೆದಿರಿಸಲು ನಿರ್ಧರಿಸಲಾಗಿದೆ.ರಕ್ಷಣಾ ಪಿಂಚಣಿಗಾಗಿ ₹1,19,696 ಕೋಟಿ, ರಕ್ಷಣಾ ಸಚಿವಾಲಯಕ್ಕೆ (ನಾಗರಿಕ) ₹20,100 ಕೋಟಿ ಮೀಸಲು ಇಡಲಾಗಿದೆ.

ರಾಜನಾಥ್ ಸ್ವಾಗತ: ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶವನ್ನು ಕೇಂದ್ರ ಇಟ್ಟುಕೊಂಡಿದೆ. ಈ ದಿಸೆಯಲ್ಲಿ ರಕ್ಷಣಾ ವಲಯದಲ್ಲಿ ಬಂಡವಾಳ ಸಂಗ್ರಹದ ಶೇ 68ರಷ್ಟನ್ನು ದೇಶೀಯ ಕೈಗಾರಿಕೆಗಳಿಗೆ ಮೀಸಲಿಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.ಇದು ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದ್ದು,ದೇಶೀಯ ರಕ್ಷಣಾ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ ಎಂದುಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ನವೋದ್ಯಮ ಮತ್ತು ಖಾಸಗಿ ಸಂಸ್ಥೆಗಳ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (ಆರ್ & ಡಿ) ಬಜೆಟ್‌ನ ಶೇಕಡಾ 25ರಷ್ಟು ಮೀಸಲಿಡುವ ಪ್ರಸ್ತಾಪವವನ್ನೂ ಅವರು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.