ADVERTISEMENT

Union Budget-2022: 200 ಟಿ.ವಿ ಚಾನೆಲ್‌, ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 18:58 IST
Last Updated 1 ಫೆಬ್ರುವರಿ 2022, 18:58 IST
ಸಾಂದರ್ಭಿಕ ಚಿತ್ರ (ಐಸ್ಟಾಕ್)
ಸಾಂದರ್ಭಿಕ ಚಿತ್ರ (ಐಸ್ಟಾಕ್)   

ನವದೆಹಲಿ: ‘ಒನ್‌ ಕ್ಲಾಸ್‌– ಒನ್‌ ಟಿವಿ ಚಾನೆಲ್‌’ ಕಾರ್ಯಕ್ರಮದಡಿ 200 ಚಾನೆಲ್‌ಗಳು, ಕೌಶಲ ವೃದ್ಧಿಗೆ ವರ್ಚುವಲ್‌ ಲ್ಯಾಬ್‌ ಮತ್ತು ಇ–ಲ್ಯಾಬ್‌ಗಳ ನಿರ್ಮಾಣ, ಗುಣಮಟ್ಟದ ‘ಇ– ಕಂಟೆಂಟ್‌’ ಸಿದ್ಧಪಡಿಸುವಿಕೆ, ‘ಡಿಜಿಟಲ್‌ ವಿಶ್ವವಿದ್ಯಾಲಯ’ ಸ್ಥಾಪನೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಹಲವು ಹೊಸ ಕಾರ್ಯಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಪ್ರಕಟಿಸಿದರು.

ಕೋವಿಡ್‌ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ದೇಶದಾದ್ಯಂತ ಶಾಲೆಗಳು ಮುಚ್ಚಿದ್ದರಿಂದ ಮಕ್ಕಳುವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು, ಪರಿಶಿಷ್ಟ ಸಮುದಾಯ ಹಾಗೂ ಇತರ ದುರ್ಬಲ ವರ್ಗಗಳ ಮಕ್ಕಳು ಎರಡು ವರ್ಷಗಳ ಕಾಲಔಪಚಾರಿಕ ಶಿಕ್ಷಣದಿಂದ ದೂರ ಉಳಿದಿದ್ದರು.ಇವರಲ್ಲಿ ಬಹುತೇಕರು ಸರ್ಕಾರಿ ಶಾಲಾ ಮಕ್ಕಳು ಎಂಬುದು ಗಮನಾರ್ಹ.

ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ‘ಪಿಎಂ ಇ–ವಿದ್ಯಾ’ ಯೋಜನೆಯಡಿ ‘ಒಂದು ಕ್ಲಾಸ್‌– ಒನ್‌ ಟಿವಿ ಚಾನೆಲ್‌’ ಕಾರ್ಯಕ್ರಮವನ್ನು 12ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುತ್ತದೆ. ಇದು ಎಲ್ಲ ರಾಜ್ಯಗಳ 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣ ಒದಗಿಸಲಿದೆ ಎಂದು ಸಚಿವರು ಹೇಳಿದರು.

ADVERTISEMENT

ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಕೌಶಲ ಉತ್ತೇಜಿಸಲು ಹಾಗೂ ಸೃಜನಶೀಲತೆಗೆ ಬೆಳೆಸಲು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ 750 ‘ವರ್ಚುವಲ್‌ ಲ್ಯಾಬ್‌’ಗಳು ಹಾಗೂ 75 ‘ಇ–ಲ್ಯಾಬ್‌’ಗಳನ್ನು ಸ್ಥಾಪಿಸಲಾಗುವುದು.

ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ‘ಇ–ಕಂಟೆಂಟ್‌’ ಅಭಿವೃದ್ಧಿಪಡಿಸಲಾಗುತ್ತದೆ. ಅದನ್ನು ಇಂಟರ್‌ನೆಟ್‌, ಮೊಬೈಲ್‌, ಟಿ.ವಿ ಹಾಗೂ ರೇಡಿಯೊ ಮೂಲಕ ವಿದ್ಯಾರ್ಥಿಗಳಿಗೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು.ಗುಣಮಟ್ಟದ ‘ಇ–ಕಂಟೆಂಟ್‌’ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಕರನ್ನು ಸಶಕ್ತಗೊಳಿಸಿ, ಡಿಜಿಟಲ್‌ ಉಪಕರಣಗಳೊಂದಿಗೆ ಸಜ್ಜುಗೊಳಿಸಲಾಗುತ್ತದೆ.

ಡಿಜಿಟಲ್ ವಿಶ್ವವಿದ್ಯಾಲಯ: ದೇಶದ ಎಲ್ಲ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಲು ಜಾಗತಿಕ ಮಟ್ಟದ ಡಿಜಿಟಲ್‌ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಮನೆ ಬಾಗಿಲಿನಲ್ಲಿಯೇ ಕಲಿಕೆಯ ಅನುಭವ ನೀಡಲಿದೆ. ದೇಶದ ವಿವಿಧ ಭಾಷೆಗಳ ಮೂಲಕ ಇದರಲ್ಲಿ ಶಿಕ್ಷಣ ದೊರೆಯಲಿದೆ. ದೇಶದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕರಿಸಲಿವೆ ಎಂದು ಸಚಿವರು ತಿಳಿಸಿದರು.

ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಈ ಕ್ಷೇತ್ರದಲ್ಲಿ ಪ್ರಮಾಣೀಕೃತ ತರಬೇತಿ ನೀಡಲಾಗುತ್ತದೆ. ಅಲ್ಲದೆ ಇದಕ್ಕಾಗಿ ದೇಶದ ವಿವಿಧೆಡೆ ಐದು ಶೈಕ್ಷಣಿಕ ಸಂಸ್ಥೆಗಳನ್ನು ಪರಿಣಿತಿ ಕೇಂದ್ರಗಳನ್ನಾಗಿ ಗುರುತಿಸಲಾಗುತ್ತದೆ.

ಈ ಕೇಂದ್ರಗಳಿಗೆ ತಲಾ ₹ 250 ಕೋಟಿ ದತ್ತಿ ನಿಧಿಯನ್ನು ಒದಗಿಸಲಾಗುತ್ತದೆ. ಜೊತೆಗೆ, ಇತರ ಸಂಸ್ಥೆಗಳಲ್ಲಿ ನಗರ ಯೋಜನೆ ಕೋರ್ಸ್‌ಗಳ ಪಠ್ಯಕ್ರಮ, ಗುಣಮಟ್ಟ ಮತ್ತು ಪ್ರವೇಶವನ್ನು ಸುಧಾರಿಸಲು ಎಐಸಿಟಿಇ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದರು.

ಬಜೆಟ್ ಕುರಿತ ಸಮಗ್ರ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:ಬಜೆಟ್ 2022

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.