ADVERTISEMENT

Union Budget 2024 | ಉದ್ಯೋಗಕ್ಕೆ ಒತ್ತು: ಮಿತ್ರರಿಗಷ್ಟೇ ಸವಲತ್ತು

ಮಂಜುನಾಥ್ ಹೆಬ್ಬಾರ್‌
Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
<div class="paragraphs"><p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್</p></div>

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

   

ಎಐ ಚಿತ್ರ: ಕಣಕಾಲಮಠ

ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿ ಪಾತಾಳಕ್ಕೆ ಕುಸಿದಿರುವುದನ್ನು ಮೊದಲ ಬಾರಿಗೆ ಪರೋಕ್ಷವಾಗಿ ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ, ಉದ್ಯೋಗ ಸೃಷ್ಟಿ, ಕೌಶಲ ಅಭಿವೃದ್ಧಿ ಹಾಗೂ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ತುಸು ಮಾರ್ಪಾಡುಗಳನ್ನು ಮಾಡುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ಜನರಲ್ಲಿ ಹಿತಾನುಭವ ಮೂಡಿಸಲು ಯತ್ನಿಸಿದ್ದಾರೆ.

ADVERTISEMENT

ನಿರ್ಮಲಾ ಅವರು ಸತತ ಏಳನೇ ಬಾರಿ ಬಜೆಟ್‌ ಮಂಡಿಸುವ ಮೂಲಕ ಸಿ.ಡಿ.ದೇಶಮುಖ್‌ ಅವರ ಮೈಲಿಗಲ್ಲನ್ನು ಸರಿಗಟ್ಟಿದರು. 1951ರಿಂದ 1956ರ ನಡುವೆ ದೇಶಮುಖ್‌ ಅವರು ಸತತ ಏಳು ಬಜೆಟ್‌ ಮಂಡಿಸಿದ್ದರು.

ಮೈತ್ರಿ ಸರ್ಕಾರಕ್ಕೆ ಊರುಗೋಲು ಆಗಿರುವ ಮಿತ್ರ ಪಕ್ಷಗಳ ಓಲೈಕೆಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪರ ಬಲವಾಗಿ ನಿಂತ ಆಂಧ್ರ ಪ್ರದೇಶ, ಬಿಹಾರ ಹಾಗೂ ಒಡಿಶಾ ರಾಜ್ಯಗಳಿಗೆ ಹಾಗೂ ಬಿಜೆಪಿಯ ಸಾಂಪ್ರದಾಯಿಕ ನೆಲೆಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶದಂತಹ ರಾಜ್ಯಗಳಿಗೆ ದೊಡ್ಡ ಇಡುಗಂಟುಗಳನ್ನು ನೀಡಲಾಗಿದೆ. ಆಂಧ್ರ ಪ್ರದೇಶ ಹೊರತುಪಡಿಸಿ ದಕ್ಷಿಣದ ರಾಜ್ಯಗಳತ್ತ ಮತ್ತೆ ತಾತ್ಸಾರ ಭಾವ ಎದ್ದು ಕಂಡಿದೆ. ‘ಈ ಬಜೆಟ್‌ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನ ಭಾಗ. ಕಾಂಗ್ರೆಸ್‌ನ ಪ್ರಣಾಳಿಕೆ ‘ನ್ಯಾಯಪತ್ರ’ದ ನಕಲು’ ಎಂದು ‘ಕೈ’ ನಾಯಕರು ಲೇವಡಿ ಮಾಡಿದ್ದಾರೆ.

ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು 2014ರ ಪೂರ್ವದಲ್ಲಿ ಮೋದಿ ಅವರು ಮತದಾರರಿಗೆ ವಾಗ್ದಾನ ನೀಡಿದ್ದರು. ಹೊಸ ತಲೆಮಾರಿನ ಮತದಾರರಿಗೆ ಈ ಘೋಷಣೆ ಆಪ್ಯಾಯಮಾನವಾಗಿ ಕಂಡಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ನಿರುದ್ಯೋಗ ಸ್ಥಿತಿ ಉಂಟಾಗಿದೆ ಎಂಬ ಕಠೋರ ಸತ್ಯವನ್ನು ಸರ್ಕಾರದ ಅಂಕಿ–ಅಂಶಗಳೇ ಬಹಿರಂಗಗೊಳಿಸಿದ್ದವು. ನಿರುದ್ಯೋಗ ಸಮಸ್ಯೆಯನ್ನು ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ವಿಪಕ್ಷಗಳು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದವು. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಬಳಿಕ ‘ಡ್ಯಾಮೇಜ್‌ ಕಂಟ್ರೋಲ್‌’ಗೆ ಬಜೆಟ್‌ನಲ್ಲಿ ಕಸರತ್ತು ನಡೆಸಲಾಗಿದೆ. ಉದ್ಯೋಗ ಸೃಷ್ಟಿಗೆ ಹಲವು ಉಪಕ್ರಮಗಳನ್ನು ಪ್ರಕಟಿಸಲಾಗಿದೆ.

ದೇಶವನ್ನು 2047ರ ಹೊತ್ತಿಗೆ ‘ವಿಕಸಿತ ಭಾರತ’ವನ್ನಾಗಿ ಮಾಡಲು ಬಡವರು, ಮಹಿಳೆಯರು, ಯುವಜನರು ಮತ್ತು ರೈತರಿಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ಸಚಿವರು ಪುನರುಚ್ಚರಿಸಿದರು. ಉದ್ಯೋಗ ಮತ್ತು ಕೌಶಲವನ್ನು ಒದಗಿಸುವ ಗುರಿ ಹೊಂದಿರುವ ಐದು ಯೋಜನೆಗಳನ್ನು ಘೋಷಿಸಿದರು. ಇದಕ್ಕಾಗಿ ₹2 ಲಕ್ಷ ಕೋಟಿ ಮೀಸಲಿಡಲಾಗಿದೆ.

‘ಈ ಬಜೆಟ್‌ನಲ್ಲಿ ವಿಶೇಷವಾಗಿ ಉದ್ಯೋಗ, ಕೌಶಲ ವರ್ಧನೆ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಮಧ್ಯಮ ವರ್ಗಗಳ ಮೇಲೆ ಗಮನ ಹರಿಸುತ್ತೇವೆ. ಪಂಚ ಯೋಜನೆಗಳ ಮೂಲಕ 5 ವರ್ಷಗಳಲ್ಲಿ 4.1 ಕೋಟಿ ಜನರಿಗೆ ಉದ್ಯೋಗ, ಕೌಶಲ ಮತ್ತು ಇತರ ಅವಕಾಶಗಳನ್ನು ಒದಗಿಸಲಾಗುತ್ತದೆ’ ಎಂದು ಸಚಿವರು ಪ್ರತಿಪಾದಿಸಿದರು. ಶಿಕ್ಷಣ, ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರಗಳಿಗೆ ₹1.48 ಲಕ್ಷ ಕೋಟಿ ಮೀಸಲಿಡುವುದಾಗಿ ಸಚಿವರು ಪ್ರಸ್ತಾಪಿಸಿದರು. ಮಹಾರಾಷ್ಟ್ರ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ದೆಹಲಿ ವಿಧಾನಸಭೆಗಳ ಚುನಾವಣೆ ಎದುರುಗೊಳ್ಳುವ ಹೊತ್ತಿನಲ್ಲಿ ಮತ್ತೆ ಯುವಜನರ ಮನ ಗೆಲ್ಲುವ ಪ್ರಯತ್ನ ಇದಾಗಿದೆ.

ಕೆಲವು ವರ್ಷಗಳಿಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ನಿರಂತರವಾಗಿ ಅನುದಾನ ಕಡಿತ ಮಾಡಲಾಗಿತ್ತು. ಈ ಬಾರಿ ಅನುದಾನ ಹೆಚ್ಚಿಸಲಾಗಿದೆ. ಈ ಕ್ಷೇತ್ರಕ್ಕೆ ₹86,000 ಕೋಟಿ ಕಾಯ್ದಿರಿಸಲಾಗಿದೆ. ಭುಗಿಲೆದ್ದಿರುವ ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಏನೂ ಮಾಡಿಲ್ಲವೆಂಬ ಕಟು ಟೀಕೆಯನ್ನೂ ಮೋದಿ ಸರ್ಕಾರ ಈ ಹಿಂದೆ ಎದುರಿಸಿತ್ತು. ಈ ಕಳಂಕದಿಂದ ಮುಕ್ತವಾಗಲು ಈ ಸಲ ಕೃಷಿ ಕ್ಷೇತ್ರಕ್ಕೆ ₹1.52 ಲಕ್ಷ ಕೋಟಿ ಮೀಸಲಿಡಲಾಗಿದೆ. ಬಿಜೆಪಿಯೇತರ ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳನ್ನು ‘ಬಿಟ್ಟಿ ಯೋಜನೆ’ಗಳೆಂದು ಹೀಗಳೆದಿದ್ದ ಬಿಜೆಪಿ ಇದೀಗ ಕಲ್ಯಾಣ ಕಾರ್ಯಕ್ರಮ ಹಾಗೂ ‘ಗ್ಯಾರಂಟಿ’ ಯೋಜನೆಗಳತ್ತ  ಚಿತ್ತ ಹರಿಸಿದೆ. ಈ ಮೂಲಕ ಮತ ಬುಟ್ಟಿಯನ್ನು ಪುನಃ ಭದ್ರಗೊಳಿಸುವ ಪ್ರಯತ್ನ ನಡೆಸಿದೆ.

ಬಜೆಟ್‌ ಮಂಡನೆಯುದ್ದಕ್ಕೂ ಮೋದಿ ಅವರು ಮೌನ ಮೂರ್ತಿಯಂತೆ ಕುಳಿತಿದ್ದರು. ಬಜೆಟ್‌ ಘೋಷಣೆಗಳನ್ನು ಸಚಿವರು ಓದುತ್ತಿದ್ದಂತೆಯೇ ಮೇಜು ಗುದ್ದಿ ಸ್ವಾಗತಿಸಿದರು. ಆದರೆ, ಎಂದಿನ ಉತ್ಸಾಹ ಹಾಗೂ ಆವೇಶ ಕಾಣಲಿಲ್ಲ. ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಯೋಜನೆಗಳನ್ನು ಪ್ರಕಟಿಸಿದಾಗ ಸಚಿವರು ಹಾಗೂ ಆಡಳಿತ ಪಕ್ಷದ ಸದಸ್ಯರು ಸಂಭ್ರಮಿಸಿದರು. ಕೊನೆ ಕೊನೆಗೆ ಅವರ ಹುಮ್ಮಸ್ಸು ಮಾಯವಾಗಿತ್ತು.

ಬೆಳಿಗ್ಗೆಯಿಂದ ಏರುಮುಖದ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ ನಿರ್ಮಲಾ ಅವರ ಭಾಷಣ ಮುಗಿಯುವ ಹೊತ್ತಿಗೆ ಪಾತಾಳಕ್ಕೆ ಕುಸಿಯಿತು. ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಸಚಿವರು ಪ್ರಕಟಿಸಿದ ಕೂಡಲೇ ಷೇರು ಮಾರುಕಟ್ಟೆ ಪತರಗುಟ್ಟಿತು. ವಹಿವಾಟಿನ ವೇಳೆ ಮುಂಬೈ ಷೇರುಪೇಟೆ ಸೂಚ್ಯಂಕ 1,277 ಅಂಶ ಇಳಿಯಿತು. ಬಳಿಕ ನಿಧಾನವಾಗಿ ಚೇತರಿಸಿಕೊಂಡಿತು.

ಪರಮಾಣು ವಲಯದಲ್ಲಿ ಖಾಸಗಿ ಕಂಪನಿಗಳಿಗೆ ರತ್ನಗಂಬಳಿ ಹಾಸಲು ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಖಾಸಗಿ ಕಂಪನಿಗಳಿಗೆ ಸಣ್ಣ ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಸಣ್ಣ, ಮಾಡ್ಯುಲರ್‌ ಪರಮಾಣು ರಿಯಾಕ್ಟರ್‌ಗಳ ಕುರಿತು ಸಂಶೋಧನೆ ನಡೆಸಲು ಅವಕಾಶ ಕಲ್ಪಿಸುವುದಾಗಿ ನಿರ್ಮಲಾ ಪ್ರಕಟಿಸಿದ್ದಾರೆ.

ಚಿನ್ನ, ಬೆಳ್ಳಿ ಕಸ್ಟಮ್ಸ್‌ ಸುಂಕ ಕಡಿತ

ಚಿನ್ನ ಮತ್ತು ಬೆಳ್ಳಿ ಮೇಲೆ ವಿಧಿಸುತ್ತಿದ್ದ ಕಸ್ಟಮ್ಸ್‌ ಸುಂಕವನ್ನು ಶೇ 15ರಿಂದ ಶೇ 6ಕ್ಕೆ ಇಳಿಸಲಾಗಿದೆ. ಪ್ಲಾಟಿನಂ ಮೇಲಿನ ಸುಂಕವನ್ನು ಶೇ 15.4ರಿಂದ ಶೇ 6.4ಕ್ಕೆ ಕಡಿತಗೊಳಿಸಲಾಗಿದೆ. 

ಸರ್ಕಾರದ ಈ ನಿರ್ಧಾರವು ಚಿನ್ನ ಮತ್ತು ಬೆಳ್ಳಿ ಉದ್ಯಮಕ್ಕೆ ವರದಾನವಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.

ಅಲ್ಲದೆ, ಒರಟು ವಜ್ರಗಳ ಮಾರಾಟದ ಮೇಲೆ ಶೇ 2ರಷ್ಟು ಏಕರೂಪ ತೆರಿಗೆ ವಿಧಿಸಲಾಗುತ್ತಿದೆ. ವಜ್ರ ವ್ಯಾಪಾರ ವಲಯವನ್ನು ಈ ತೆರಿಗೆಯಿಂದ ಹೊರಗಿಡಲು ನಿರ್ಧರಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತವು ಕತ್ತರಿಸಿದ ಮತ್ತು ಪಾಲಿಷ್‌ ಮಾಡಿದ ವಜ್ರಗಳ ತಯಾರಿಕೆಯಲ್ಲಿ ಮುಂಚೂಣಿ ಸ್ಥಾನಕ್ಕೇರಲು ನೆರವಾಗಲಿದೆ ಎಂದು ಹೇಳಿದೆ.

ಭಾರತವನ್ನು ಈ ಬಜೆಟ್‌ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲಿದೆ. ದೂರದೃಷ್ಟಿಯ ಈ ಬಜೆಟ್‌ ಸಮಾಜದ ಎಲ್ಲ ವರ್ಗಗಳನ್ನು ಬಲಪಡಿಸುತ್ತದೆ. ಉದ್ಯೋಗಾವಕಾಶಗಳಿಗೆ ಭಾರಿ ಉತ್ತೇಜನ ನೀಡುತ್ತದೆ. ಇದು ಮಹಿಳಾ ಮತ್ತು ಅಭಿವೃದ್ಧಿ ಕೇಂದ್ರಿತ ಬಜೆಟ್‌.
-ನರೇಂದ್ರ ಮೋದಿ, ಪ್ರಧಾನಮಂತ್ರಿ
ಇದು ಕೇಂದ್ರ ಸರ್ಕಾರದ ‘ಕುರ್ಚಿ ಬಚಾವೊ ಬಜೆಟ್‌’. ಇತರ ರಾಜ್ಯಗಳ ವೆಚ್ಚದಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷಗಳಿಗೆ ‘ಪೊಳ್ಳು ಭರವಸೆ’ಗಳನ್ನು ನೀಡಿದೆ. ಅಲ್ಲದೆ ಈ ಬಜೆಟ್‌, ನಮ್ಮ ಕಾಂಗ್ರೆಸ್‌ ಪಕ್ಷದ 2024ರ ಚುನಾವಣಾ ಪ್ರಣಾಳಿಕೆಯ ‘ಕಾಪಿ ಪೇಸ್ಟ್‌’ ಆಗಿದೆ.
–ರಾಹುಲ್‌ ಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ
ಧರ್ಮ, ಜಾತಿ ಮತ್ತು ಪಂಥವನ್ನು ಲೆಕ್ಕಿಸದೆ ಎಲ್ಲ ಭಾರತೀಯರ ಜೀವನದ ಗುರಿ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಗಣನೀಯ ಪ್ರಗತಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ‘ವಿಕಸಿತ ಭಾರತ’ಕ್ಕೆ ಸಂಬಂಧಿಸಿದಂತೆ ಮಧ್ಯಂತರ ಬಜೆಟ್‌ನಲ್ಲಿ ರೂಪಿಸಲಾದ ಕಾರ್ಯತಂತ್ರಕ್ಕೆ ಅನುಗುಣವಾಗಿ, ಈ ಬಜೆಟ್‌ನಲ್ಲಿ ಎಲ್ಲರಿಗೂ ಹಲವು ಅವಕಾಶಗಳನ್ನು ಒದಗಿಸಿದ್ದೇವೆ.
-ನಿರ್ಮಲಾ ಸೀತಾರಾಮನ್‌, ಹಣಕಾಸು ಸಚಿವೆ
ರಾಜ್ಯದ ಅಗತ್ಯಗಳೇನು ಎಂಬುದನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ಕೇಂದ್ರ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ಈ ಉದ್ದೇಶಪೂರ್ವ ನಿರ್ಲಕ್ಷ್ಯ ಮತ್ತು ತಾರತಮ್ಯವನ್ನು ಖಂಡಿಸುತ್ತೇವೆ. ಪ್ರತಿಭಟನಾರ್ಥಕವಾಗಿ ಇದೇ 27ರಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುತ್ತೇವ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.