ಯುವ ಸಮುದಾಯ, ಮಹಿಳೆಯರ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಬಜೆಟ್ ಮಂಡನೆ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅವರ ಮಾತು–ಆಶಯಗಳಿಗೆ ಪೂರಕ ಎಂಬಂತೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 6ನೇ ಬಜೆಟ್‌ನಲ್ಲಿ, ಮಹಿಳೆ ಮತ್ತು ಯುವ ಜನತೆಯ ಕಲ್ಯಾಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯಾವದೇ ಜಾತಿ, ಸಮುದಾಯ ಅಥವಾ ಧರ್ಮಕ್ಕೆ ಸೇರಿರುವ ಯುವ ಜನತೆ ಹಾಗೂ ಮಹಿಳೆಯರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಪ್ರಧಾನಿ ಹೇಳಿದ್ದರು. ಹೀಗಾಗಿ, ಹೆಚ್ಚು ಒಳಗೊಳ್ಳುವ ಉದ್ದೇಶವನ್ನು ಹಾಗೂ ಯುವ ಜನತೆ ಮತ್ತು ಮಹಿಳೆಯರ ಸಾಮರ್ಥ್ಯಕ್ಕೆ ಇಂಬು ನೀಡುವ ಮೂಲಕ ದೇಶದ ಭವಿಷ್ಯವನ್ನು ಭದ್ರಗೊಳಿಸುವ ಆಶಯವನ್ನೂ ಬಜೆಟ್‌ನಲ್ಲಿ ವ್ಯಕ್ತಪಡಿಸಲಾಗಿದೆ.
2011ರ ಜನಸಂಖ್ಯೆ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 48.6. ಅದೇ ರೀತಿ ಯುವ ಜನತೆಯ ಪ್ರಮಾಣ ಶೇ 68ರಷ್ಟಿದ್ದು, ವಿಶ್ವದಲ್ಲಿಯೇ ಹೆಚ್ಚು ಯುವ ಸಮುದಾಯ ಹೊಂದಿದ ಹೆಗ್ಗಳಿಕೆ ಭಾರತದ್ದು.
ದೇಶದ ಅಭಿವೃದ್ಧಿಗೆ ಯುವ ಜನತೆ ಮತ್ತು ಮಹಿಳೆಯರು ಸಹ ಗಮನಾರ್ಹ ಕೊಡುಗೆ ನೀಡುವಂತಾಗಬೇಕು ಎಂದರೆ, ಅವರಿಗೆ ವಿಪುಲ ಉದ್ಯೋಗಾವಕಾಶ ಒದಗಿಸುವ ವ್ಯವಸ್ಥೆಯಾಗಬೇಕು. ಇದಕ್ಕೆ ಬಂಡವಾಳ ಹೂಡುವುದು ಮುಖ್ಯವಾಗುತ್ತದೆ.
ಉದ್ಯೋಗ ಸೃಜನೆಗಾಗಿ ನೂತನ ಶಿಕ್ಷಣ ನೀತಿ, ‘ಪ್ರಧಾನ ಮಂತ್ರಿ ಶ್ರೀ’(ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಉಪಕ್ರಮಗಳಿಗೆ ಬಜೆಟ್‌ನಲ್ಲಿ ಅಪಾರ ಶ್ಲಾಘನೆ ವ್ಯಕ್ತವಾಗಿದೆ. ಇದು ಮಧ್ಯಂತರ ಬಜೆಟ್. ಹೀಗಾಗಿ, ಉದ್ಯೋಗ ಸೃಷ್ಟಿ ವಿಷಯದಲ್ಲಿ ಲೋಕಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬರುವ ಹೊಸ ಸರ್ಕಾರದ ಹಾದಿಯನ್ನು ಸುಗಮಗೊಳಿಸುವ ಸಂಬಂದ ಸರ್ಕಾರ ಪ್ರಜ್ಞಾಪೂರ್ವಕ ಹೆಜ್ಜೆಗಳನ್ನು ಇಟ್ಟಿರುವುದನ್ನು ಇದು ತೋರಿಸುತ್ತದೆ.
2023–24ನೇ ಸಾಲಿನಲ್ಲಿ ‘ಪಿಎಂ ಶ್ರೀ‘ ಯೋಜನೆಗೆ ನಿಗದಿ ಮಾಡಲಾಗಿದ್ದ ಬಜೆಟ್ ಅಂದಾಜನ್ನು ₹ 4 ಸಾವಿರ ಕೋಟಿಯಿಂದ ₹ 6,050 ಕೋಟಿಗೆ ಹೆಚ್ಚಳ ಮಾಡಲಾಗಿತ್ತು. ಆದರೆ, ಅದೇ ಹಣಕಾಸು ವರ್ಷದ ಪರಿಷ್ಕೃತ ಅಂದಾಜಿನಲ್ಲಿ ಈ ಮೊತ್ತವನ್ನು ₹ 4 ಸಾವಿರ ಕೋಟಿಯಿಂದ ₹2,800 ಕೋಟಿಗೆ ಇಳಿಸಲಾಗಿತ್ತು ಎಂಬುದು ಗಮನಾರ್ಹ.
ಈ ಬಾರಿಯ ಬಜೆಟ್‌ನ ಮತ್ತೊಂದು ಪ್ರಮುಖ ಅಂಶವೆಂದರೆ, ರಾಷ್ಟ್ರೀಯ ಅಪ್ರೆಂಟ್‌ಷಿಪ್ ತರಬೇತಿ ಯೋಜನೆಗೆ (ಎನ್‌ಎಟಿಎಸ್) ಹಂಚಿಕೆಯನ್ನು ಗಮನಾರ್ಹವಾಗಿ ಹೆಚ್ಚಳ ಮಾಡಿರುವುದು. 2023–24ನೇ ವಿತ್ತೀಯ ವರ್ಷದಲ್ಲಿ ಈ ಯೋಜನೆಗೆ ₹ 440 ಕೋಟಿ ಹಂಚಿಕೆ ಮಾಡಲಾಗಿತ್ತು. 2024–25ನೇ ಬಜೆಟ್‌ನಲ್ಲಿ ಈ ಮೊತ್ತವನ್ನು ₹600 ಕೋಟಿಗೆ ಹೆಚ್ಚಿಸಲಾಗಿದೆ. ಯುವ ಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ಇದು ಖಾತ್ರಿಪಡಿಸುತ್ತದೆ.
7 ಐಐಟಿ, 16 ಐಐಐಟಿ, 7ಐಐಎಂ, 15 ಎಐಐಎಂಎಸ್ ಹಾಗೂ 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿರುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಉದ್ಹೋಗ ಸೃಷ್ಟಿ ಹೆಚ್ಚಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದ್ದಾರೆ. ಆದರೆ, ಈ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹಲವು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲಾಗಿದೆಯೇ ಹೊರತು, ಕಳೆದ ಒಂದೇ ವರ್ಷದಲ್ಲಿ ಅಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಹೀಗಾಗಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿನ ಈ ಅಂಶಗಳನ್ನು, ಯುವ ಜನರ ಸಬಲೀಕರಣಕ್ಕೆ ಸಂಬಂಧಿಸಿ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುವ ‘ಪ್ರೊಗ್ರೆಸ್ ಕಾರ್ಡ್’ ಎಂದೇ ಪರಿಗಣಿಸಬೇಕಾಗುತ್ತದೆ.
ಪಿಎಂ ಮುದ್ರಾ ಯೋಜನೆ, ಫಂಡ್ ಆಫ್ ಫಂಡ್ಸ್, ಸ್ಟಾರ್ಟ್‌ಅಪ್ ಇಂಡಿಯಾ, ಸ್ಟಾರ್ಟ್‌ಅಪ್ ಕ್ರೆಡಿಟ್ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಇದೇ ಮಾತನ್ನು ಹೇಳಬಹುದು.
ಮಹಿಳೆಯರ ಅಭಿವೃದ್ದಿಗಾಗಿ ಬಜೆಟ್‌ನಲ್ಲಿ ವಿಶೇಷವಾಗಿ ಪ್ರಸ್ತಾಪಿಸಿರುವಾಗ, ‘ನಾರಿಶಕ್ತಿ’ ಯೋಜನೆ ಗಮನ ಸೆಳೆಯುತ್ತದೆ. ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವಿಮೆ ಸೌಲಭ್ಯ ವಿಸ್ತರಿಸಲಾಗಿದೆ.
ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಹಾಕಿಸಿಕೊಳ್ಳುವಂತೆ 9–14 ವರ್ಷ ವಯೋಮಾನದ ಬಾಲಕಿಯರಿಗೆ ಉತ್ತೇಜನ ನೀಡುವುದನ್ನು ಸಹ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಇಂದ್ರಧನುಷ್‌ಗಾಗಿ ‘ಯು–ವಿನ್’ ಪೋರ್ಟಲ್‌ಗೆ ಚಾಲನೆ ಬಗ್ಗೆಯೂ ಹೇಳಲಾಗಿದೆ.
‘ಲಾಖ್‌ಪತಿ ದೀದಿ‘ ಯೋಜನೆಯಡಿ, ಪ್ರಯೋಜನ ಪಡೆಯುವ ಮಹಿಳೆಯರ ಸಂಖ್ಯೆಯನ್ನು 3 ಕೋಟಿಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಆದರೆ, ಈ ಉದ್ದೇಶಕ್ಕಾಗಿ ರೂಪಿಸಲಾಗಿರುವ ವಿವಿಧ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಿರುವುದು ಬಜೆಟ್‌ನಲ್ಲಿ ಕಂಡುಬರುವುದಿಲ್ಲ.
ದೇಶದ ಅಭಿವೃದ್ಧಿಯಲ್ಲಿ ಎರಡು ಪ್ರಬಲ ಆಧಾರಸ್ತಂಭಗಳಿದ್ದಂತೆ ಎಂಬುದಾಗಿ ಯುವ ಸಮುದಾಯ ಹಾಗೂ ಮಹಿಳೆಯರನ್ನು ಕೇಂದ್ರ ಸರ್ಕಾರ ಬಣ್ಣಿಸುತ್ತದೆ. ಇದು ಈ ಮಧ್ಯಂತರ ಬಜೆಟ್‌ನಲ್ಲಿಯೂ ವ್ಯಕ್ತವಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಒಂದೆಡೆ ಮಹತ್ವಾಕಾಂಕ್ಷೆ, ಇನ್ನೊಂದೆಡೆ ಕಾರ್ಯಸಾಧನೆಗಾಗಿ ಸಾಗಬೇಕಾದ ಹಾದಿ ಕಠಿಣವಾಗಿದೆ.
–ಡಾ.ಮಾಲಿನಿ ಎಲ್.ತಂತ್ರಿ ಹಾಗೂ ಡಾ.ಸಿ.ನಳಿನ್‌ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.