ನವದೆಹಲಿ: ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ದ್ವಿಪಥ ಹಾಗೂ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಮಧ್ಯಂತರ ಬಜೆಟ್‌ನಲ್ಲಿ ₹7,524 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯಕ್ಕೆ ರೈಲ್ವೆ ಅನುದಾನ ₹37 ಕೋಟಿ ಕಡಿಮೆಯಾಗಿದೆ. ಬೆಂಗಳೂರಿನ ಉಪನಗರ ರೈಲು ಹಾಗೂ ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗಳಿಗೂ ಈ ಸಲ ಯಾವುದೇ ಅನುದಾನ ಮೀಸಲಿಟ್ಟಿಲ್ಲ.
ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ನೀಡಲಾಗುವುದು ಎಂದು ಕಳೆದ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಕೇಂದ್ರ ಅನುದಾನ ನೀಡಿರಲಿಲ್ಲ. ಈ ವರ್ಷದ ಬಜೆಟ್‌ನಲ್ಲಾದರೂ ಅನುದಾನ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು. ಆದರೆ, ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ರಾಜ್ಯದ ಬೇಡಿಕೆಗೆ ಕೇಂದ್ರ ಮನ್ನಣೆ ನೀಡಿಲ್ಲ.
ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ‘2009-14ರ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ವಾರ್ಷಿಕ ₹835 ಕೋಟಿ ಅನುದಾನ ನೀಡಲಾಗುತ್ತಿತ್ತು. ಈಗ ಅನುದಾನ ಬಿಡುಗಡೆ ಪ್ರಮಾಣ ಒಂಬತ್ತು ಪಟ್ಟು ಹೆಚ್ಚಾಗಿದೆ’ ಎಂದರು.
ರಾಜ್ಯದಲ್ಲಿ 31 ರೈಲ್ವೆ ಯೋಜನೆಗಳು ಅನುಷ್ಠಾನವಾಗುತ್ತಿದ್ದು, ಇವುಗಳ ಉದ್ದ 3,866 ಕಿ.ಮೀ. ಈ ಯೋಜನೆಗಳ ಒಟ್ಟು ಮೊತ್ತ ₹47,346 ಕೋಟಿ ಎಂದು ಅವರು ಮಾಹಿತಿ ನೀಡಿದರು.
ಯುಪಿಎ ಅವಧಿಯಲ್ಲಿ ವರ್ಷಕ್ಕೆ 114 ಕಿ.ಮೀ. ಹೊಸ ಮಾರ್ಗಗಳ ನಿರ್ಮಾಣ ಮಾಡಲಾಗುತ್ತಿತ್ತು. ಎನ್‌ಡಿಎ ಅವಧಿಯಲ್ಲಿ 166 ಕಿ.ಮೀ.ಗೆ ಏರಿದೆ. ವಿದ್ಯುದ್ದೀಕರಣ ವರ್ಷಕ್ಕೆ 18 ಕಿ.ಮೀ.ಯಿಂದ 369 ಕಿ.ಮೀ.ಗೆ ಹೆಚ್ಚಿದೆ. ರಾಜ್ಯದ ಶೇ 97 ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿವೆ ಎಂದು ಅವರು ತಿಳಿಸಿದರು.
‘ರಾಜ್ಯದ 59 ನಿಲ್ದಾಣಗಳನ್ನು ಅಮೃತ ನಿಲ್ದಾಣಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. 2014ರಿಂದ 595 ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. 77 ನಿಲ್ದಾಣಗಳಲ್ಲಿ ‘ಒಂದು ನಿಲ್ದಾಣ–ಒಂದು ಉತ್ಪನ್ನ’ ಮಳಿಗೆಗಳನ್ನು ಆರಂಭಿಸಲಾಗಿದೆ’ ಎಂದರು.
ಉಪನಗರಕ್ಕಿಲ್ಲ ಹಣ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ರೂಪಿಸಲಾಗಿರುವ ಉಪನಗರ ರೈಲು ಯೋಜನೆಗೆ ಈ ಸಲ ಅನುದಾನ ಮೀಸಲಿಟ್ಟಿಲ್ಲ.
147 ಕಿ.ಮೀ. ಉದ್ದದ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ 2020ರಲ್ಲಿ ಅನುಮೋದನೆ ನೀಡಿತ್ತು. ₹15,767 ಕೋಟಿಯ ಈ ಯೋಜನೆಗೆ ಕೇಂದ್ರ ಶೇ 20 ಹಾಗೂ ರಾಜ್ಯ ಶೇ 20ರಷ್ಟು ಹಣ ಭರಿಸಬೇಕಿದೆ. ಶೇ 60 ಮೊತ್ತವನ್ನು ಸಾಲವಾಗಿ ಪಡೆಯಲಾಗುತ್ತದೆ. ಈ ಯೋಜನೆಗೆ ಎರಡು ಸರ್ಕಾರಗಳಿಂದ ಈವರೆಗೆ ₹1,100 ಕೋಟಿ ಬಂದಿದೆ.
‘ಈ ಯೋಜನೆಗೆ ಅನುದಾನ ಹಂಚಿಕೆ ಮಾಡದಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರ ಈವರೆಗೆ ₹500 ಕೋಟಿ ಕೊಟ್ಟಿದ್ದರೆ, ರಾಜ್ಯ ಬಿಡುಗಡೆ ಮಾಡಿರುವುದು ₹600 ಕೋಟಿ. ಇದು ಯಾವುದಕ್ಕೂ ಸಾಲದು. ಬೆಂಗಳೂರಿನ ಹೆಚ್ಚು ಅಗತ್ಯವಾಗಿರುವ ಹಾಗೂ ಸವಾಲಿನ ಯೋಜನೆ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಅಧಿಕ ಅನುದಾನ ಹಂಚಿಕೆ ಮಾಡಬೇಕು’ ಎಂದು ‘ಸಿಟಿಜನ್ಸ್ ಫಾರ್ ಸಿಟಿಜನ್ಸ್’ ಸಂಸ್ಥೆಯ ಸಂಸ್ಥಾಪಕ ರಾಜ್ ಕುಮಾರ್ ದುಗರ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.