ನವದೆಹಲಿ: ಪಳೆಯುಳಿಕೆ ಇಂಧನ ಬಳಕೆಯನ್ನು ತಗ್ಗಿಸಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಹಲವು ಉಪಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಭಾರತದ ‘ಇಂಧನ ಪರಿವರ್ತನಾ ಯೋಜನೆ’ಯು ಸಣ್ಣ ಮಾಡ್ಯುಲರ್ ಅಣು ವಿದ್ಯುತ್ ಸ್ಥಾವರಗಳು (ಎಸ್‌ಎಂಆರ್), ‘ಪಂಪ್ಡ್ ಸ್ಟೋರೇಜ್’ ಯೋಜನೆಗಳು ಮತ್ತು ಅಧಿಕ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕೃತವಾಗಿರಲಿದೆ ಎಂದು ಸರ್ಕಾರ ಪ್ರಕಟಿಸಿದೆ.
ಭಾರತದಲ್ಲಿ ಅಣು ವಿದ್ಯುತ್ ಬಳಕೆಯ ಪಾಲನ್ನು ಹೆಚ್ಚಿಸುವುದಕ್ಕಾಗಿ ಸುಧಾರಿತ ತಂತ್ರಜ್ಞಾನಗಳ ಕುರಿತು ಸಂಶೋಧನೆ ನಡೆಸಲು ಸರ್ಕಾರವು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸಲಿದೆ.
‘ಹಡಗು, ವಿಮಾನಯಾನ, ಕಬ್ಬಿಣ ಮತ್ತು ಉಕ್ಕು ಹಾಗೂ ರಾಸಾಯನಿಕಗಳನ್ನು ತಯಾರಿಸುವ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಹೊರಸೂಸುತ್ತಿದ್ದು, ಆ ಪ್ರಮಾಣವನ್ನು ತಗ್ಗಿಸಲು ಅಗತ್ಯ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುವುದು’ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
‘ವಿಕಸಿತ ಭಾರತ’ದ ಆಶಯದ ಈಡೇರಿಕೆಗೆ ಇಂಧನ ಪರಿವರ್ತನೆಯ ಅಗತ್ಯವಿದ್ದು, ಈ ಹಾದಿಯಲ್ಲಿ ಅಣು ಶಕ್ತಿಯು ಪ್ರಮುಖ ಪಾತ್ರವನ್ನು ವಹಿಸಲಿದೆ. ಭಾರತ್ ಹೆಸರಿನಲ್ಲಿ ಸಣ್ಣ ಸ್ಥಾವರಗಳನ್ನು ಸ್ಥಾಪಿಸಲು, ಭಾರತ್ ಮಾಡ್ಯುಲರ್ ಸ್ಥಾವರಗಳ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಪರಮಾಣು ಶಕ್ತಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಸರ್ಕಾರವು ಖಾಸಗಿ ಸಂಸ್ಥೆಗಳ ಜತೆ ಕೈಜೋಡಿಸಲಿದೆ’ ಎಂದು ಮಾಹಿತಿ ನೀಡಿದರು.
ಎಸ್‌ಎಂಆರ್‌ಗಳು ಗಾತ್ರದಲ್ಲಿ ಸಣ್ಣದಾಗಿರಲಿದ್ದು, 300 ಮೆಗಾವಾಟ್ ಅಥವಾ ಅದಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದಿಸುತ್ತದೆ. ಅವುಗಳನ್ನು ಅಣು ವಿದ್ಯುತ್ ಸ್ಥಾವರಗಳಿಗೆ ಟ್ರಕ್ ಅಥವಾ ರೈಲಿನಲ್ಲಿ ಸಾಗಿಸಬಹುದು.
ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಸುವ ಉದ್ದೇಶದಿಂದ ‘ಪಂಪ್ಡ್ ಸ್ಟೋರೇಜ್’ ಯೋಜನೆ ಜಾರಿಗೊಳಿಸುವುದನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಪಂಪ್ಡ್-ಸ್ಟೋರೇಜ್ ಯೋಜನೆಯಲ್ಲಿ ನೀರನ್ನು ಎರಡು ಕಡೆ ಸಂಗ್ರಹಿಸಿಡಲಾಗುತ್ತದೆ. ಒಂದು ಸಂಗ್ರಹಾಗಾರ ಬೆಟ್ಟದ ಮೇಲೆ ಮತ್ತು ಇನ್ನೊಂದು ಕೆಳಭಾಗದಲ್ಲಿ ಇರಲಿದೆ. ಬೆಟ್ಟದ ಮೇಲಿರುವ ಸಂಗ್ರಹಾಗಾರಕ್ಕೆ ನೀರನ್ನು ಪಂಪ್ ಮಾಡಲು ಹೆಚ್ಚುವರಿ ವಿದ್ಯುತ್ಅನ್ನು ಬಳಸಲಾಗುತ್ತದೆ. ವಿದ್ಯುತ್‌ನ ಬೇಡಿಕೆ ಹೆಚ್ಚಾದಾಗ, ನೀರನ್ನು ಟರ್ಬೈನ್ ಮೂಲಕ ಬೆಟ್ಟದ ಕೆಳಗಿರುವ ಸಂಗ್ರಹಾಗಾರಕ್ಕೆ ಹರಿಸುವ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಸೌರ ಮತ್ತು ಪವನ ಶಕ್ತಿಯಿಂದ ನಿರಂತರ ವಿದ್ಯುತ್ ಉತ್ಪಾದನೆ ಅಸಾಧ್ಯವಾಗಿರುವ ಕಾರಣ ‘ಪಂಪ್ಡ್ ಸ್ಟೋರೇಜ್’ ವ್ಯವಸ್ಥೆಯು ಮಹತ್ವ ಪಡೆದುಕೊಂಡಿದೆ.
ಫೆಬ್ರುವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಮಾಡಿದ ಘೋಷಣೆಯಂತೆ ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ದೇಶದ 1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ಅನ್ನು ಪಡೆಯಲು ಸಾಧ್ಯವಾಗುವಂತೆ ಮನೆಗಳ ಚಾವಣಿ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಈ ಯೋಜನೆಯಡಿ ಸ್ಥಾಪಿಸಲಾಗುತ್ತದೆ. ಈ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಈಗಾಗಲೇ 1.28 ಕೋಟಿ ಮಂದಿ ಹೆಸರು ನೋಂದಾಯಿಸಿದ್ದು, 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಅತ್ಯಾಧುನಿಕ ಉಷ್ಣ ವಿದ್ಯುತ್ ಸ್ಥಾವರ (ಎಯುಎಸ್‌ಸಿ) ಸ್ಥಾಪನೆಗೆ ಬೇಕಾದಂತಹ ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಾರ್ಯ ಪೂರ್ಣಗೊಂಡಿದೆ.
ಎನ್‌ಟಿಪಿಸಿ ಮತ್ತ ಬಿಎಚ್‌ಇಎಲ್ ನಡುವಿನ ಜಂಟಿ ಉದ್ಯಮವು ಎಯುಎಸ್‌ಸಿ ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ಣ ಪ್ರಮಾಣದ 800 ಎಮ್‌ಡಬ್ಲು ವಾಣಿಜ್ಯ ಸ್ಥಾವರಗಳನ್ನು ಸ್ಥಾಪಿಸುತ್ತದೆ. ಸರ್ಕಾರವೂ ಅಗತ್ಯ ಹಣಕಾಸಿನ ನೆರವು ನೀಡಲಿದೆ. ಈ ಸ್ಥಾವರಗಳಿಗೆ ಉನ್ನತ ದರ್ಜೆಯ ಉಕ್ಕು ಮತ್ತು ಇತರ ಸುಧಾರಿತ ಲೋಹ ಉತ್ಪಾದನೆಗೆ ಸ್ವದೇಶಿ ಸಾಮರ್ಥ್ಯದ ಅಭಿವೃದ್ಧಿಯು ಮುಂದುವರೆಯುತ್ತದೆ. ಇದು ಅರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.