ADVERTISEMENT

Union Budget 2024 | ಮೂಲಸೌಕರ್ಯ ಅಭಿವೃದ್ಧಿಗೆ ₹11,11,111 ಕೋಟಿ

ಭೀಮಸೇನ ಚಳಗೇರಿ
Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಈ ಹಿಂದಿನ ಅವಧಿಯಲ್ಲಿ ಕೇಂದ್ರ ಸರ್ಕಾರ, ರಸ್ತೆಗಳು, ಸೇತುವೆಗಳು ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಗಮನಾರ್ಹ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಂಗಳವಾರ ಮಂಡನೆಯಾಗಿರುವ ಬಜೆಟ್‌ನಲ್ಲಿ ಕೂಡ ಕೇಂದ್ರವು ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ಗಮನಾರ್ಹ ಪ್ರಮಾಣದ ಹಂಚಿಕೆ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₹ 11,11,111 ಕೋಟಿ ಹಂಚಿಕೆ ಮಾಡಲಾಗಿದ್ದು, ಇದು ಒಟ್ಟು ಜಿಡಿಪಿಯ ಶೇ 3.4ರಷ್ಟಾಗಲಿದೆ ಎಂದು ಬಜೆಟ್‌ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ADVERTISEMENT

ಮೂಲಸೌಕರ್ಯ ಕ್ಷೇತ್ರದಲ್ಲಿ ರಾಜ್ಯಗಳ ಜೊತೆಗೆ ಖಾಸಗಿಯವರೂ ಹೂಡಿಕೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ.

ರಾಜ್ಯಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವು ನೀಡುವುದನ್ನು ಕೇಂದ್ರ ಉತ್ತೇಜಿಸುತ್ತದೆ. ಈ ಉದ್ದೇಶಕ್ಕಾಗಿ ರಾಜ್ಯಗಳಿಗೆ ದೀರ್ಘಾವಧಿಯ ಬಡ್ಡಿರಹಿತ ಸಾಲ ನೀಡುವುದಕ್ಕಾಗಿ ಈ ವರ್ಷ ₹1.5 ಲಕ್ಷ ಕೋಟಿ ತೆಗೆದಿರಿಸಲಾಗುವುದು ಎಂದು ಹೇಳಿದ್ದಾರೆ.

ಹೂಡಿಕೆ– ಖಾಸಗಿ ವಲಯಕ್ಕೂ ಪ್ರಾಶಸ್ತ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲದೇ, ಖಾಸಗಿ ವಲಯ ಕೂಡ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದಕ್ಕೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. 

ಇದಕ್ಕೆ ಪೂರಕವಾಗಿ, ನೀತಿ ಮತ್ತು ನಿಯಮಗಳ ನಿರೂಪಣೆ, ಹಣಕಾಸು ಒದಗಿಸುವುದಕ್ಕಾಗಿ ಮಾರುಕಟ್ಟೆ ಆಧಾರಿತ ನೀತಿಯೊಂದನ್ನು ರೂಪಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಪ್ರಮುಖ ಅಂಶಗಳು 

* ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ (ಪಿಎಂಜಿಎಸ್‌ವೈ) 4ನೇ ಹಂತವನ್ನು ಜಾರಿಗೊಳಿಸಲಾಗುವುದು. ಈ ಯೋಜನೆ ಮೂಲಕ, ಗ್ರಾಮೀಣ ಭಾಗದ 25 ಸಾವಿರ ವಸತಿ ಪ್ರದೇಶಗಳಿಗೆ ಸರ್ವ ಋತು ಸಂಪರ್ಕ ಒದಗಿಸಲಾಗುವುದು

* ಬ್ಯಾರೇಜುಗಳು, ನದಿಗಳ ಮಾಲಿನ್ಯ ತಡೆ ಹಾಗೂ ನೀರಾವರಿ ಯೋಜನೆಗಳಿಗೆ ವೇಗ ನೀಡಲಾಗುವುದು

* ಪ್ರವಾಸೋದ್ಯಮಕ್ಕೆ ನೀಡುವ ಉತ್ತೇಜನದಿಂದ ಉದ್ಯೋಗಗಳ ಸೃಷ್ಟಿ ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯ

ಪ್ರವಾಹ ನಿಯಂತ್ರಣಕ್ಕೆ ಕ್ರಮ

ಈ ವರ್ಷ ಬಿಹಾರ ಅಸ್ಸಾಂ ಹಿಮಾಚಲ ಪ್ರದೇಶ ಉತ್ತರಾಖಂಡ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ರಾಜ್ಯಗಳು ಈ ಹಿಂದೆಯೂ ಪ್ರವಾಹದಿಂದಾಗಿ ಸಂಕಷ್ಟ ಎದುರಿಸಿವೆ. ಅದರಲ್ಲೂ ನೇಪಾಳ ಸೇರಿದಂತೆ ನೆರೆ ದೇಶಗಳಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಕಂಡುಬಂದಿರುವುದು ಹೆಚ್ಚು. ಪ್ರವಾಹ ನಿಯಂತ್ರಣಕ್ಕಾಗಿ ಕೆಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನೇಪಾಳದಲ್ಲಿ ಕೈಗೊಂಡಿರುವ ಇಂತಹ ಕಾಮಗಾರಿ ಇನ್ಣೂ ಪೂರ್ಣಗೊಂಡಿಲ್ಲ. ‘ತ್ವರಿತಗತಿ ನೀರಾವರಿ ಪ್ರಯೋಜನ ಕಾರ್ಯಕ್ರಮ’ ಹಾಗೂ ಇತರ ಸಂಪನ್ಮೂಲಗಳ ಮೂಲಕ ‘ಪ್ರವಾಹ ನಿಯಂತ್ರಣ ರಚನೆ’ ಯೋಜನೆಗಳಿಗೆ ಅಂದಾಜು ₹11500 ಕೋಟಿ ನೆರವು ಒದಗಿಸಲಾಗುವುದು’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಬಿಹಾರದಲ್ಲಿ ಕೋಸಿ ನದಿಯ ಪ್ರವಾಹವನ್ನು ತಡೆಗಟ್ಟುವುದು ಹಾಗೂ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿ ಸಮೀಕ್ಷೆ ಕೈಗೆತ್ತಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಪ್ರವಾಹ ನಿರ್ವಹಣೆ ಮತ್ತು ಸಂಬಂಧಿಸಿದ ಪ್ರಾಜೆಕ್ಟ್‌ಗಳಿಗಾಗಿ ಬಿಹಾರ ಅಸ್ಸಾಂ ಹಿಮಾಚಲ ಪ್ರದೇಶ ಉತ್ತರಾಖಂಡ ಸಿಕ್ಕಿಂಗೆ ಹಣಕಾಸು ನೆರವು ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ನಳಂದ ವಿಶ್ವವಿದ್ಯಾಲಯ

ಪ್ರವಾಸೋದ್ಯಮಕ್ಕೆ ಉತ್ತೇಜನ

ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದಿರುವ ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿರುವ ಕ್ರಮಗಳ ಜೊತೆಗೆ ಹೊಸ ಯೋಜನೆಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.  

ಪ್ರಮುಖ ಅಂಶಗಳು

* ಗಯಾದಲ್ಲಿನ ವಿಷ್ಣುಪಾದ ದೇಗುಲ ಕಾರಿಡಾರ್‌ ಬೋಧ ಗಯಾದಲ್ಲಿರುವ ಮಹಾಬೋಧಿ ದೇಗುಲ ಕಾರಿಡಾರ್ ಯೋಜನೆಗೆ ನೆರವು. ಕಾಶಿ ವಿಶ್ವನಾಥ ದೇವಾಲಯ ಕಾರಿಡಾರ್‌ ಮಾದರಿಯಲ್ಲಿ ಇವುಗಳ ಅಭಿವೃದ್ಧಿ

* ಬಿಹಾರದ ರಾಜಗಿರ್‌ನಲ್ಲಿರುವ ಜೈನ ಮುನಿ 20ನೇ ತೀರ್ಥಂಕರ ಮುನಿಸುವ್ರತ ಬಸದಿ ಹಾಗೂ ಬ್ರಹ್ಮಕುಂಡದ ಸಮಗ್ರ ಅಭಿವೃದ್ಧಿ.

* ನಳಂದಾ ವಿಶ್ವವಿದ್ಯಾಲಯದ ಪುನರುತ್ಥಾನದ ಜೊತೆಗೆ ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗುವುದು

* ದೇವಾಲಯಗಳು ಸ್ಮಾರಕಗಳು ಕರಕುಶಲ ಕಲೆ ವನ್ಯಜೀವಿಧಾಮಗಳು ಸಾಗರ ತೀರಗಳು ಒಡಿಶಾ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಒದಗಿಸುತ್ತವೆ. ಈ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಒಡಿಶಾಕ್ಕೆ ನೆರವು ನೀಡಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.