ADVERTISEMENT

Union Budget 2024: ಎಂಎಸ್‌ಎಂಇ ವಲಯಕ್ಕೆ ಒಂದಿಷ್ಟು ಟಾನಿಕ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ದೇಶದ ಅರ್ಥ ವ್ಯವಸ್ಥೆಯ ಪಾಲಿನ ಅತ್ಯಂತ ಮಹತ್ವದ ಸ್ತಂಭ ಎಂದೇ ಪರಿಗಣಿತವಾಗಿರುವ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳ ಹಿತ ಕಾಯಲು ಬಜೆಟ್‌ನಲ್ಲಿ ಕೆಲವು ಕ್ರಮಗಳನ್ನು ಪ್ರಕಟಿಸಲಾಗಿದೆ.

* ಎಂಎಸ್‌ಎಂಇ ಉದ್ದಿಮೆಗಳಿಗೆ ಯಂತ್ರೋಪಕರಣ ಹಾಗೂ ಸಲಕರಣೆಗಳ ಖರೀದಿಗೆ ಅಡಮಾನ ರಹಿತವಾಗಿ ಅವಧಿ ಸಾಲ ಒದಗಿಸಲು, ಸಾಲ ಖಾತರಿ ಯೋಜನೆಯನ್ನು ಆರಂಭಿಸಲಾಗುತ್ತದೆ. ₹100 ಕೋಟಿವರೆಗಿನ ಸಾಲಗಳಿಗೆ ಇದು ಖಾತರಿಯನ್ನು ಒದಗಿಸುತ್ತದೆ.

ADVERTISEMENT

* ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಎಷ್ಟರಮಟ್ಟಿಗೆ ಸಾಲವನ್ನು ಒದಗಿಸಬಹುದು ಎಂಬುದನ್ನು ಪರಿಶೀಲಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮದೇ ಆದ ವ್ಯವಸ್ಥೆಯೊಂದನ್ನು ರೂಪಿಸಲಿವೆ. 

* ಎಂಎಸ್‌ಎಂಇ ವಲಯದ ಉದ್ದಿಮೆಗಳು ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ ಸಂದರ್ಭಗಳಲ್ಲಿಯೂ ಅವುಗಳಗೆ ಬ್ಯಾಂಕ್ ಸಾಲ ಸಿಗುವಂತೆ ಆಗಲು ಹೊಸ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತದೆ. 

* ಮುದ್ರಾ ಯೋಜನೆಯ ಅಡಿ ನೀಡುವ ಸಾಲದ ಮೊತ್ತವನ್ನು ಈಗಿನ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ. ‘ತರುಣ್’ ವರ್ಗದ ಅಡಿಯಲ್ಲಿ ಹಿಂದೆ ಸಾಲ ಪಡೆದು, ಅದನ್ನು ಸರಿಯಾಗಿ ಹಿಂದಿರುಗಿಸಿದವರಿಗೆ ಈ ಸೌಲಭ್ಯ ಸಿಗಲಿದೆ.

* ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಸಿಡ್ಬಿ ಮೂರು ವರ್ಷಗಳೊಳಗೆ ಹೊಸ ಶಾಖೆಗಳನ್ನು ತೆರೆಯಲಿದೆ, ಉದ್ದಿಮೆಗಳಿಗೆ ಸಾಲ ಒದಗಿಸಲಿದೆ. ಈ ವರ್ಷದಲ್ಲಿ 24 ಶಾಖೆಗಳು ಆರಂಭವಾಗಲಿವೆ.

* ಎಂಎಸ್‌ಎಂಇ ವಲಯದ ಉದ್ದಿಮೆಗಳು ಹಾಗೂ ಸಾಂಪ್ರದಾಯಿಕ ಶಿಲ್ಪಿಗಳು ತಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತೆ ಆಗಲು, ಪಿಪಿಪಿ ಮಾದರಿಯಲ್ಲಿ ಇ–ವಾಣಿಜ್ಯ ರಫ್ತು ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. 

* ಐದು ವರ್ಷಗಳಲ್ಲಿ ಒಟ್ಟು ಒಂದು ಕೋಟಿ ಯುವಕರಿಗೆ ಮುಂಚೂಣಿ 500 ಕಂಪನಿಗಳಲ್ಲಿ ತರಬೇತಿ (ಇಂಟರ್ನ್‌ಶಿಪ್‌) ಪಡೆಯಲು ನೆರವಾಗುವ ಯೋಜನೆ ಆರಂಭಿಸಲಾಗುತ್ತದೆ. ಈ ಯುವಕರಿಗೆ ತರಬೇತಿ ಭತ್ಯೆ ರೂಪದಲ್ಲಿ ತಿಂಗಳಿಗೆ ₹5,000 ಹಾಗೂ ಒಂದು ಬಾರಿಯ ನೆರವಿನ ರೂಪದಲ್ಲಿ ₹6,000 ನೀಡಲಾಗುತ್ತದೆ.

* ಹೂಡಿಕೆ ಆಕರ್ಷಿಸಲು ಸನ್ನದ್ಧವಾಗಿರುವ ಕೈಗಾರಿಕಾ ಪಾರ್ಕ್‌ಗಳನ್ನು ಸರಿಸುಮಾರು 100 ನಗರಗಳಲ್ಲಿ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ವಲಯದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ.

* ಮಹತ್ವದ ಖನಿಜಗಳ ದೇಶಿ ಉತ್ಪಾದನೆ, ಪುನರ್ಬಳಕೆಗೆ ಹಾಗೂ ವಿದೇಶಗಳಲ್ಲಿ ಮಹತ್ವದ ಖನಿಜಗಳ ಆಸ್ತಿ ಸ್ವಾಧೀನಕ್ಕೆ ಪ್ರತ್ಯೇಕ ಮಿಷನ್ ಆರಂಭಿಸಲಾಗುತ್ತದೆ. 

* ದಿವಾಳಿ ಸಂಹಿತೆಯ ಅಡಿಯಲ್ಲಿ ಪ್ರಕ್ರಿಯೆಗಳಿಗೆ ವೇಗ ನೀಡಲು ದಿವಾಳಿ ಸಂಹಿತೆಗೆ ಸೂಕ್ತ ತಿದ್ದುಪಡಿ ತರಲಾಗುತ್ತದೆ, ನ್ಯಾಯಮಂಡಳಿಗಳಲ್ಲಿ ಸುಧಾರಣೆ ತರಲಾಗುತ್ತದೆ, ಅವುಗಳನ್ನು ಬಲಪಡಿಸಲಾಗುತ್ತದೆ. ಹೆಚ್ಚುವರಿಯಾಗಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುತ್ತದೆ.

* ಸಾಲ ವಸೂಲಾತಿ ನ್ಯಾಯಮಂಡಳಿಗಳ ಸುಧಾರಣೆಗೆ ಹಾಗೂ ಅವುಗಳನ್ನು ಇನ್ನಷ್ಟು ಬಲಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಾಲ ವಸೂಲಾತಿಗೆ ವೇಗ ನೀಡಲು ಹೆಚ್ಚುವರಿಯಾಗಿ ನ್ಯಾಯಮಂಡಳಿಗಳನ್ನು ಆರಂಭಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.