ADVERTISEMENT

Union Budget 2024: ನಗರಗಳ ಬಹುಮುಖಿ ಪ್ರಗತಿ ದಾರಿಗಳು ಹತ್ತು ಹಲವು

ಎಸ್‌.ಸುಕೃತ
Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ನಗರಾಭಿವೃದ್ಧಿ ಕ್ಷೇತ್ರವನ್ನು ಈ ಬಾರಿ ಕೇಂದ್ರ ಸರ್ಕಾರ ತನ್ನ ಪ್ರಮುಖ ಆದ್ಯತೆಯನ್ನಾಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಹಲವು ಘೋಷಣೆಗಳನ್ನೂ ಮಾಡಿದೆ. ‘ನಗರಗಳನ್ನು ಬೆಳವಣಿಗೆಯ ಕೇಂದ್ರ’ವನ್ನಾಗಿಸುವ ಗುರಿಯನ್ನು ಸರ್ಕಾರ ‌ಹಾಕಿಕೊಂಡಿದೆ.

ಬೆಳವಣಿಗೆ ಕೇಂದ್ರಗಳೆಂದರೆ ಏನು ಎಂಬುದನ್ನೂ ಬಜೆಟ್‌ನಲ್ಲಿ ವಿವರಿಸಲಾಗಿದೆ. ನಗರದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವುದು. ಜೊತೆಗೆ, ನಗರಗಳ ಬಹುಮುಖ್ಯ ಸಮಸ್ಯೆಯಾದ ವಾಹನ ದಟ್ಟಣೆ ಸಂಬಂಧ ಯೋಜನೆ ರೂಪಿಸುವುದು ಮತ್ತು ಉತ್ತಮ ರಸ್ತೆಗಳ ನಿರ್ಮಾಣವೂ ಸೇರಿಕೊಂಡಿದೆ. ನಗರ ಯೋಜನೆಗಳನ್ನು ಬಳಸಿಕೊಂಡು ನಗರಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಅಭಿವೃದ್ಧಿ‌ಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಹೇಳಿದೆ.

ADVERTISEMENT

ನಗರಗಳಲ್ಲಿ ಪಾಳು ಬಿದ್ದ ಪ್ರದೇಶಗಳನ್ನು ಸೃಜನಾತ್ಮಕವಾಗಿ ಮರು ಅಭಿವೃದ್ಧಿ ಮಾಡಲಾಗುವುದು. ನಗರದ ಯಾವುದೋ ಒಂದು ಪ್ರದೇಶದಲ್ಲಿ ಈ ಹಿಂದೆ ಕಾರ್ಖಾನೆಗಳು ಇದ್ದಿರಬಹುದು ಅಥವಾ ಯಾವುದೋ ಕಚೇರಿಗಳ ಕಟ್ಟಡ ಇದ್ದಿರಬಹುದು. ಇಂಥ ಪ್ರದೇಶಗಳನ್ನು ಮರು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತದೆ.

ನಗರಗಳಲ್ಲಿ ವಾಸಿಸುವ ಬಡವರಿಗಾಗಿ ಮನೆ ನಿರ್ಮಾಣ ಮಾಡುವ ಸಂಬಂಧ ಅನುದಾನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಇದನ್ನು ‘ಪ್ರಧಾನಮಂತ್ರಿ ಆವಾಸ್‌ ಯೋಜನೆ– ನಗರ 2.0’ ಯೋಜನೆಯಡಿ ಕಾರ್ಯಗತಗೊಳಿಸಲಾಗುವುದು.

ದೇಶದಾದ್ಯಂತ ನಗರಗಳಲ್ಲಿ ವಾಸಿಸುತ್ತಿರುವ ಸುಮಾರು 1 ಕೋಟಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣ ಮಾಡಿಕೊಡುವ ಸಂಬಂಧ ₹10 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಜೊತೆಗೆ, ಕೈಗೆಟಕುವ ದರಗಳಲ್ಲಿ ಮನೆ ನಿರ್ಮಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅನುಕೂಲ ಮಾಡಿಕೊಡಲಾಗುವುದು ಎಂದೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ರಸ್ತೆಬದಿ ಫುಡ್‌ ಹಬ್‌ ನಿರ್ಮಾಣ: ನಗರ ಪ್ರದೇಶಗಳಲ್ಲಿ ರಸ್ತೆ ಬದಿ ತಿಂಡಿ ತಿನ್ನುವವರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕಾಗಿ ರಸ್ತೆಬದಿ ತಿಂಡಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು, ಒಂದು ವಾರವಿಡೀ ನಡೆಯುವ ಫುಡ್‌ ಹಬ್‌ (ಆಹಾರೋತ್ಸವ) ನಡೆಸಲಾಗುವುದು ಎಂದು ಕೇಂದ್ರ ಹೇಳಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತೀ ವರ್ಷವೂ ಆಯ್ದ ಕೆಲವು ನಗರಗಳಲ್ಲಿ 100 ಫುಡ್‌ ಹಬ್‌ಗಳನ್ನು ಹಮ್ಮಿಕೊಳ್ಳಲಾಗುವುದು. ಇದನ್ನು ‘ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ ಅಡಿಯಲ್ಲಿ ಕಾರ್ಯಗತಗೊಳಿಸಲಾಗುವುದು ಎಂದೂ ಹೇಳಿದೆ.

ನೀರು ಪೂರೈಕೆ ಮತ್ತು ಸ್ವಚ್ಛತೆ

ನಗರಗಳ‌ಲ್ಲಿನ ಸಮಸ್ಯೆಗಳಲ್ಲಿ ನೀರು ಸರಬರಾಜು ಹಾಗೂ ಸ್ವಚ್ಛತೆಯು ಬಹುಮುಖ್ಯವಾದುದು. ಇದಕ್ಕಾಗಿ ರಾಜ್ಯ ಸರ್ಕಾರ ಮತ್ತು ಅಂತರರಾಷ್ಟ್ರೀಯ ಬ್ಯಾಂಕುಗಳ ಪಾಲುದಾರಿಕೆಯೊಂದಿಗೆ ಹಲವು ಯೋಜನೆಗಳನ್ನು ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ.

ಚರಂಡಿ ನೀರು ಸಂಸ್ಕರಣೆ, ಘನ ತ್ಯಾಜ್ಯ ನಿರ್ವಹಣೆ ಹಾಗೂ ನೀರು ಪೂರೈಕೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುವುದು. ಈ ಯೋಜನೆಗಳು 100 ದೊಡ್ಡ ನಗರಗಳಲ್ಲಿ ಅನುಷ್ಠಾನಗೊಳ್ಳಲಿದೆ. ಶುದ್ಧೀಕರಿಸಿದ ನೀರನ್ನು ಕುಡಿಯಲು ಬಳಸುವ ಹಾಗೂ ಕೃಷಿಗೆ ಬಳಸುವ ಸಂಬಂಧವೂ ಯೋಜನೆ ರೂಪಿಸಲಾಗುತ್ತದೆ.

ಮಹಿಳೆಯರಿಗೆ ಕಡಿಮೆ ಮುದ್ರಾಂಕ ಶುಲ್ಕ

ಅತಿ ಹೆಚ್ಚು ಮುದ್ರಾಂಕ ಶುಲ್ಕ ವಿಧಿಸುತ್ತಿರುವ ರಾಜ್ಯಗಳು ಕಡಿಮೆ ಮುದ್ರಾಂಕ ಶುಲ್ಕ ವಿಧಿಸುವುದಕ್ಕೆ ಉತ್ತೇಜನ ನೀಡಲಾಗುವುದು. ಜೊತೆಗೆ, ಮಹಿಳೆಯರು ಖರೀದಿಸುವ ಆಸ್ತಿಗಳಿಗೆ ಕಡಿಮೆ ಮುದ್ರಾಂಕ ಶುಲ್ಕ ‌ವಿಧಿಸುವ ರಾಜ್ಯಗಳಿಗೂ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. 

ಬಜೆಟ್‌ನಲ್ಲಿ ಘೋಷಿಸಿದ್ದು...

* 30 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 14 ನಗರಗಳಲ್ಲಿ ಸಾರಿಗೆ ಸಂಬಂಧಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಇದರ ಜಾರಿ ಹಾಗೂ ಇದಕ್ಕಾಗಿ ಹಣಕಾಸಿನ ಯೋಜನೆಯನ್ನೂ ರೂಪಿಸಲಾಗುವುದು

* ಬಾಡಿಗೆ ಮನೆಯನ್ನು ಪಡೆದುಕೊಳ್ಳಲು ಸಶಕ್ತವಾದ ಹಾಗೂ ಪಾರದರ್ಶಕವಾದ ಮಾರುಕಟ್ಟೆ ವ್ಯವಸ್ಥೆ ರೂಪಿಸಲು ನೀತಿ ಹಾಗೂ ನಿಯಮಗಳನ್ನು ರೂಪಿಸಲಾಗುವುದು

* ನಗರ ಪ್ರದೇಶಗಳಲ್ಲಿನ ಭೂ ದಾಖಲೆಗಳನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಡಿಜಿಟಲೀಕರಣ ಮಾಡಲಾಗುವುದು. ಭೂ ದಾಖಲೆಗಳ ನಿರ್ವಹಣೆ, ಅಪ್‌ಡೇಟ್‌ ಹಾಗೂ ತೆರಿಗೆ ನಿರ್ವಹಣೆಗಾಗಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.