ADVERTISEMENT

Union Budget 2024 | ಕೌಶಲ್ಯಾಭಿವೃದ್ಧಿ, ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು?

ಪಿಟಿಐ
Published 23 ಜುಲೈ 2024, 12:44 IST
Last Updated 23 ಜುಲೈ 2024, 12:44 IST
<div class="paragraphs"><p>ಬಜೆಟ್‌ ಪ್ರತಿ ಇರುವ ಟ್ಯಾಬ್‌ನೊಂದಿಗೆ ಸಂಸತ್‌ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್</p></div>

ಬಜೆಟ್‌ ಪ್ರತಿ ಇರುವ ಟ್ಯಾಬ್‌ನೊಂದಿಗೆ ಸಂಸತ್‌ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

   

ರಾಯಿಟರ್ಸ್‌ 

ನವದೆಹಲಿ: ಉದ್ಯೋಗ, ಕೌಶಲ ಮತ್ತು ಇತರ ಅವಕಾಶಗಳಿಗೆ ಬಹುದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಮಾರು 4.1 ಕೋಟಿ ಯುವಕರಿಗೆ ಪ್ರಯೋಜನ ಕಲ್ಪಿಸುವ ಐದು ಯೋಜನೆಗಳ ಪ್ಯಾಕೇಜ್‌ಗೆ ₹2 ಲಕ್ಷ ಕೋಟಿ ಅನುದಾನವನ್ನು ಈ ಸಾಲಿನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. 

ADVERTISEMENT

‘ಎಲ್ಲರಿಗೂ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲು’ ಸರ್ಕಾರ ನೀಡಿರುವ ಒಂಬತ್ತು ಪ್ರಮುಖ ಆದ್ಯತೆಗಳಲ್ಲಿ ‘ಉದ್ಯೋಗ ಮತ್ತು ಕೌಶಲ’ ಕೂಡ ಒಂದೆನಿಸಿದೆ. ಇದು ಉದ್ಯೋಗಿಗಳು ಮತ್ತು ಉದ್ಯೋಗದಾತರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿಯವರ ‘ಐದು ಯೋಜನೆಗಳು ಮತ್ತು ಉಪಕ್ರಮಗಳ ಪ್ಯಾಕೇಜ್’ನಡಿ ಐದು ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ ಮತ್ತು ಇತರ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ. 

ಪ್ರಧಾನ ಮಂತ್ರಿಗಳ ಪ್ಯಾಕೇಜ್‌ನ ಭಾಗವಾಗಿ ‘ಉದ್ಯೋಗ ಲಿಂಕ್ಡ್ ಇನ್ಸೆಂಟಿವ್‌’ಗಾಗಿ ಸರ್ಕಾರವು ಮೂರು ಯೋಜನೆಗಳನ್ನು ಜಾರಿಗೆ ತರಲಿದೆ. ಇವುಗಳು ಇಪಿಎಫ್‌ಒ​​ನಲ್ಲಿ ದಾಖಲಾತಿಯನ್ನು ಆಧರಿಸಿವೆ. ಮೊದಲ ಬಾರಿಗೆ ಉದ್ಯೋಗಿಗಳ ಗುರುತಿಸುವಿಕೆ ಮತ್ತು ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಬೆಂಬಲ ನೀಡುವುದು ಇವುಗಳ ಆದ್ಯತೆಯಾಗಿದೆ.

ಹೊಸ ಯೋಜನೆಗಳು...

ನವ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ

* ಮೊದಲ ಬಾರಿಗೆ, ಎಲ್ಲಾ ಔಪಚಾರಿಕ ವಲಯಗಳಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರುವ ಎಲ್ಲರಿಗೂ ಒಂದು ತಿಂಗಳ ವೇತನವನ್ನು ಇದರಲ್ಲಿ ನೀಡಲಾಗುತ್ತದೆ

* ಇಪಿಎಫ್ಒನಲ್ಲಿ ನೋಂದಾಯಿಸಿದಂತೆ, ಮೊದಲ ಬಾರಿಯ ಉದ್ಯೋಗಿಗಳಿಗೆ ಮೂರು ಕಂತುಗಳಲ್ಲಿ ಒಂದು ತಿಂಗಳ ವೇತನ ಅರ್ಹ ಮಿತಿಗೆ ಒಳಪಟ್ಟ ₹15,000 ಅನ್ನು ನೇರ ಲಾಭವಾಗಿ ವರ್ಗಾಯಿಸಲಾಗುತ್ತದೆ. ಇದು ತಿಂಗಳಿಗೆ ₹1 ಲಕ್ಷದೊಳಗೆ ವೇತನ ಪಡೆಯುವ ಎಲ್ಲ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.   

* ಈ ಯೋಜನೆಯು 2.10 ಕೋಟಿ ಯುವಕರಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ

‘ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ’ ಯೋಜನೆ

ಎರಡನೆಯ ಈ ಹೊಸ ಯೋಜನೆಯಡಿ ಮೊದಲ ಬಾರಿಯ ಉದ್ಯೋಗಿಗಳ ಉದ್ಯೋಗಕ್ಕೆ ಸಂಬಂಧಿಸಿ ಉತ್ಪಾದನಾ ವಲಯದಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಸರ್ಕಾರ ಉತ್ತೇಜನ ನೀಡಲಿದೆ.  

* ಉದ್ಯೋಗ ಆರಂಭಿಸಿದ ಮೊದಲ ನಾಲ್ಕು ವರ್ಷಗಳಲ್ಲಿ ಅವರ ಇಪಿಎಫ್ಒ ಕೊಡುಗೆಗೆ ಸಂಬಂಧಿಸಿದಂತೆ ಉದ್ಯೋಗಿ ಮತ್ತು ಉದ್ಯೋಗದಾತರಿಗೆ ನೇರವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ.

* ಈ ಯೋಜನೆಯು ಉದ್ಯೋಗಕ್ಕೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಮತ್ತು ಅವರ ಉದ್ಯೋಗದಾತರಿಗೆ ಪ್ರಯೋಜನ ಕಲ್ಪಿಸಲಿದೆ.

‘ಉದ್ಯೋಗದಾತರಿಗೆ ಬೆಂಬಲ’

ಮೂರನೇ ಯೋಜನೆ ಎನಿಸಿದ, ಉದ್ಯೋಗದಾತ ಕೇಂದ್ರಿತವಾದ ಈ ಯೋಜನೆಯು ಎಲ್ಲ ವಲಯಗಳಲ್ಲಿ ಸೃಷ್ಟಿಸುವ ಹೆಚ್ಚುವರಿ ಉದ್ಯೋಗಗಳನ್ನು ಒಳಗೊಂಡಿರಲಿದೆ. ತಿಂಗಳಿಗೆ ₹1 ಲಕ್ಷ ಸಂಬಳದೊಳಗಿನ ಎಲ್ಲ ಹೆಚ್ಚುವರಿ ಉದ್ಯೋಗಗಳು ಈ ಯೋಜನೆ ವ್ಯಾಪ್ತಿಗೆ ಸೇರಲಿವೆ.

* ಪ್ರತಿ ಹೆಚ್ಚುವರಿ ಉದ್ಯೋಗಿಗೆ ಅವರ ಇಪಿಎಫ್‌ಒ ಕೊಡುಗೆಗಾಗಿ ಸರ್ಕಾರವು ಉದ್ಯೋಗದಾತರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ ₹ 3,000ರವರೆಗೆ ಮರುಪಾವತಿಸಲಿದೆ.

* ಈ ಯೋಜನೆಯು 50 ಲಕ್ಷ ಜನರಿಗೆ ಹೆಚ್ಚುವರಿ ಉದ್ಯೋಗ ಉತ್ತೇಜಿಸುವ ನಿರೀಕ್ಷೆಯಿದೆ.

ಕೌಶಲ ಹೆಚ್ಚಿಸುವ ಯೋಜನೆ

ನಾಲ್ಕನೇ ಯೋಜನೆಯಾಗಿ, ರಾಜ್ಯ ಸರ್ಕಾರಗಳು ಮತ್ತು ಉದ್ಯಮಗಳ ಸಹಯೋಗದೊಂದಿಗೆ ಕೌಶಲ ಹೆಚ್ಚಿಸುವ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುತ್ತಿದೆ

5 ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರು ಕೌಶಲ ಹೊಂದಲಿದ್ದಾರೆ. ಇದಕ್ಕಾಗಿ 1,000 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಮೇಲ್ದರ್ಜೆಗೇರಿಸಲಾಗುತ್ತಿದೆ. 

ಮಾದರಿ ಕೌಶಲ ಸಾಲ ಯೋಜನೆ

* ‘ಮಾದರಿ ಕೌಶಲ ಸಾಲ ಯೋಜನೆ’ಯಡಿ ಸರ್ಕಾರದ ಪ್ರಚಾರ ನಿಧಿಯಿಂದ ಖಾತರಿಯೊಂದಿಗೆ ₹7.5 ಲಕ್ಷ ವರೆಗೆ ಸಾಲ ಒದಗಿಸಲಾಗುವುದು. ಈ ಕ್ರಮವು ಪ್ರತಿ ವರ್ಷ 25,000 ವಿದ್ಯಾರ್ಥಿಗಳಿಗೆ ನೆರವಾಗುವ ನಿರೀಕ್ಷೆ ಇದೆ

ಮಹಿಳೆಯರ ಪಾಲ್ಗೊಳ್ಳುವಿಕೆಗೆ ಕ್ರಮ

* ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕ್ರಮವಾಗಿ ಉದ್ಯಮಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಲಯಗಳ ಸಹಯೋಗದಲ್ಲಿ ದುಡಿಯುವ ಮಹಿಳೆಯರಿಗಾಗಿ ‘ವರ್ಕಿಂಗ್‌ ವುಮೆನ್‌ ಹಾಸ್ಟೆಲ್‌’ಗಳನ್ನು ತೆರೆಯಲಾಗುವುದು

* ಮಹಿಳಾ ಸ್ವ-ಸಹಾಯ ಗುಂಪುಗಳು ನಡೆಸುವ ಉದ್ದಿಮೆಗಳಿಗೆ ಮಾರುಕಟ್ಟೆ ಪ್ರವೇಶ ಉತ್ತೇಜನಕ್ಕೆ ಮತ್ತು ಮಹಿಳೆಯರಿಗಾಗಿ ನಿರ್ದಿಷ್ಟ ಕೌಶಲ ಕಾರ್ಯಕ್ರಮಗಳನ್ನು ಉದ್ಯಮಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದೆ

ಶಿಕ್ಷಣ ಸಾಲಗಳು

* ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅರ್ಹರಿಗೆ ₹10 ಲಕ್ಷದವರೆಗೆ ಸಾಲ ಒದಗಿಸಿ, ಆರ್ಥಿಕ ಬೆಂಬಲ ನೀಡಲಾಗುವುದು. ಈ ಉದ್ದೇಶಕ್ಕಾಗಿ, ಇ-ವೋಚರ್‌ಗಳನ್ನು ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ನೇರವಾಗಿ, ಸಾಲದ ಮೊತ್ತದ ಶೇ 3 ರಷ್ಟು ವಾರ್ಷಿಕ ಬಡ್ಡಿ ರಿಯಾಯಿತಿಗಾಗಿ ನೀಡಲಾಗುತ್ತದೆ. ಸರ್ಕಾರದ ಯೋಜನೆಗಳು ಮತ್ತು ನೀತಿಗಳ ಅಡಿಯಲ್ಲಿ ಯಾವುದೇ ಪ್ರಯೋಜನ ಪಡೆಯದ ಯುವಜನರಿಗೆ ಈ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.