ನವದೆಹಲಿ: ಸಂಸತ್ತಿನಲ್ಲಿ ಇಂದಿನಿಂದ ಆರಂಭವಾಗಲಿರುವ (ಜ.31) ಬಜೆಟ್ ಅಧಿವೇಶನದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಜನರ ಸ್ವಾವಲಂಬನೆಯ ಬಗ್ಗೆ ಅರ್ಥಪೂರ್ಣ ಚರ್ಚೆಗಳಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಧಿವೇಶನ ಆರಂಭವಾಗುವುದಕ್ಕೂ ಮೊದಲು ಮಾತನಾಡಿದ ಅವರು,‘ಲೋಕಸಭೆಯ ಎರಡೂ ಸದನಗಳಲ್ಲಿ ದೇಶದ ಆರ್ಥಿಕತೆಯ ಬಗ್ಗೆ ಗಂಭೀರ ಚರ್ಚೆಗಳಾಗಬೇಕು. ವಿಶ್ವದ ಇಂದಿನ ಆರ್ಥಿಕ ಸ್ಥಿತಿಗತಿಯನ್ನು ಭಾರತ ಹೇಗೆ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಚರ್ಚೆಯಾಗಬೇಕಿದೆ’ ಎಂದು ತಿಳಿಸಿದರು.
ಇದು 2020ರ ಮೊದಲ ಅಧಿವೇಶನ. ಅಷ್ಟೇ ಅಲ್ಲ ಹೊಸ ದಶಕದ ಮೊದಲ ಅಧಿವೇಶನವೂ ಹೌದು. ದಶಕದ ಸುಭದ್ರ ಅಡಿಪಾಯಕ್ಕೆ ಈ ಅಧಿವೇಶನವನ್ನು ಸದಸ್ಯರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
‘ದಲಿತರು, ಮಹಿಳೆಯರು ಮತ್ತು ಶೋಷಿತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಈ ಕೆಲಸಗಳನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಸಂಸತ್ತಿನ ಒಂದು ಭಾಗದಲ್ಲಿ ಪ್ರಧಾನಿ ಮಾತನಾಡುತ್ತಿದ್ದರೆ ಮತ್ತೊಂದು ಭಾಗದಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಸದಸ್ಯರು ಪೌರತ್ವ ತಿದ್ದುಪಡಿ, ಎನ್‌ಆರ್‌ಸಿ ವಿರೋಧಿಸಿಪ್ರತಿಭಟನೆ ನಡೆಸುತ್ತಿದ್ದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ಕಪ್ಪುಪಟ್ಟಿ ಧರಿಸಿ, ಸಂವಿಧಾನ ಉಳಿಸಿ, ಭಾರತ ಉಳಿಸಿ ಎಂಬ ಭಿತ್ತಪತ್ರಗಳನ್ನು ಪ್ರದರ್ಶಿಸಿದರು.
ಸಂಸತ್ತಿನಲ್ಲಿ ನಾಳೆ (ಫೆ.1)ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ದೇಶ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಜೆಟ್ ವ್ಯಾಪಕ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಬಜೆಟ್ ಮಾಹಿತಿಗೆ:www.prajavani.net/budget-2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.