ಆರ್ಥಿಕ ಬೆಳವಣಿಗೆ ಉತ್ತೇಜನದ ವಿಚಾರದಲ್ಲಿ ಈ ಬಾರಿಯ ಬಜೆಟ್ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್‌ನಲ್ಲಿ ಅವರು ಹೆಚ್ಚಿನ ಆದ್ಯತೆ ನೀಡಬಹುದು ಎಂದು ನಿರೀಕ್ಷಿಸಲಾಗಿರುವ ಕ್ಷೇತ್ರಗಳು ಯಾವುವು?
ಆರೋಗ್ಯ ಕ್ಷೇತ್ರದ ಖರ್ಚು
ಆರೋಗ್ಯ ಕ್ಷೇತ್ರದಲ್ಲಿನ ವೆಚ್ಚವನ್ನು ಮುಂದಿನ ಹಣಕಾಸು ವರ್ಷದಲ್ಲಿ ದ್ವಿಗುಣಗೊಳಿಸುವ ಸಾಧ್ಯತೆ ಇದೆ. ಮುಂಬರುವ ನಾಲ್ಕು ವರ್ಷಗಳಲ್ಲಿ ಈ ವಲಯದಲ್ಲಿನ ವೆಚ್ಚವನ್ನು ಒಟ್ಟು ದೇಶೀಯ ಉತ್ಪಾದನೆಯ ಶೇ 4ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಸರ್ಕಾರವು ಈ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಹೊಸ ಯೋಜನೆಗಳಿಗೆ ಅನುದಾನ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.
ಖಾಸಗೀಕರಣ
ಸರ್ಕಾರವು ಇಂಧನ, ಗಣಿಗಾರಿಕೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣ ಮತ್ತು ಎಲ್‌ಐಸಿಯಂತಹ ಬೃಹತ್ ಕಂಪನಿಗಳ ಅಲ್ಪ ಪ್ರಮಾಣದ ಪಾಲು ಮಾರಾಟ ಮಾಡುವ ಮೂಲಕ 4,000 ಕೋಟಿ ಡಾಲರ್ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಬಹುದು ಎನ್ನಲಾಗಿದೆ.
ಮೂಲಸೌಕರ್ಯ ಯೋಜನೆಗಳ ಅನುದಾನಕ್ಕೆ ಸಂಸ್ಥೆ
ದೇಶದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ನಿರ್ಮಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಆದಾಯ ಕೊರತೆ ಹಾಗೂ ಬ್ಯಾಂಕ್ ಸಾಲಗಳ ಹೊರೆಯಿಂದಾಗಿ ಈ ಯೋಜನೆಗಳಿಗೆ ಅನುದಾನ ಒದಗಿಸುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಹೀಗಾಗಿ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಒದಿಗಿಸುವುದಕ್ಕೆಂದೇ ಅಭಿವೃದ್ಧಿ ಹಣಕಾಸು ಸಂಸ್ಥೆಯೊಂದನ್ನು ಘೋಷಿಸುವ ನಿರೀಕ್ಷೆ ಇದೆ.
ಆಮದು ತೆರಿಗೆ ಹೆಚ್ಚಳ
ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಶೇ 5ರಿಂದ 10ರಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರವು ಚಿಂತನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ ಅಭಿಯಾನವನ್ನು ಸಾಕಾರಗೊಳಿಸಲು ಮತ್ತು ದೇಶೀಯ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಆಮದು ಸುಂಕ ಹೆಚ್ಚಳದಿಂದ ಸುಮಾರು ₹270–280 ಕೋಟಿ ಹೆಚ್ಚುವರಿ ಆದಾಯ ಗಳಿಸುವುದನ್ನು ಸರ್ಕಾರ ಎದುರುನೋಡುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಆರ್ಥಿಕತೆ ಕುಂಠಿತಗೊಂಡಿರುವ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಮೂಲಗಳು ಇತ್ತೀಚೆಗೆ ತಿಳಿಸಿದ್ದವು. ಕಳೆದ ವರ್ಷ ಪಾದರಕ್ಷೆ, ಪೀಠೋಪಕರಣ, ಆಟಿಕೆಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ತೆರಿಗೆಯನ್ನು ಶೇ 20ರ ವರೆಗೆ ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.