ADVERTISEMENT

ಪೆಟ್ರೋಲ್, ಡೀಸೆಲ್ ಮೇಲೆ ಸೆಸ್: ಗ್ರಾಹಕರಿಗೆ ಹೊರೆ ಇಲ್ಲ..ಹೇಗೆ? ಇಲ್ಲಿದೆ ಮಾಹಿತಿ

ಏಜೆನ್ಸೀಸ್
Published 1 ಫೆಬ್ರುವರಿ 2021, 13:53 IST
Last Updated 1 ಫೆಬ್ರುವರಿ 2021, 13:53 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಸೆಸ್ ವಿಧಿಸಿದ್ದಾರೆ. ಡೀಸೆಲ್ ಮೇಲೆ ₹4 ಮತ್ತು ಪೆಟ್ರೋಲ್ ಮೇಲೆ ₹ 2.5 ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಿದ್ದಾರೆ.

ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹೇರಿದ್ರೂ ಸಹ ಇತರೆ ತೆರಿಗೆ ಮತ್ತು ಸೆಸ್ ಅನ್ನು ಪರಿಷ್ಕರಿಸಿರುವುದರಿಂದ ಗ್ರಾಹಕರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಹೇಳಿದ್ಧಾರೆ.

"ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಹೇರುವ ಮುನ್ನ, ಮೂಲ ಅಬಕಾರಿ ಸುಂಕ ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ದರವನ್ನು ಕಡಿಮೆ ಮಾಡಲಾಗಿದೆ’, ಹಾಗಾಗಿ, ಗ್ರಾಹಕರ ಮೇಲೆ ಸೆಸ್ ಭಾರ ಬೀಳುವುದಿಲ್ಲ ಎಂದು ಅವರು ಹೇಳಿದ್ಧಾರೆ.

ADVERTISEMENT

ಅದು ಹೇಗೆ?: ಈ ಹಿಂದೆ ಅನ್‌ಬ್ರಾಂಡೆಡ್ ಪೆಟ್ರೋಲ್ ಪ್ರತಿ ಲೀಟರ್‌ ಮೇಲೆ ₹ 2.98 ಗಳ ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ₹ 12 ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಸಿ) ಇತ್ತು. ಈಗ ಅದನ್ನು ಕ್ರಮವಾಗಿ ₹ 1.4 ಮತ್ತು ₹ 11ಗಳಿಗೆ ಇಳಿಸಲಾಗಿದೆ.

ಅದೇ ರೀತಿ, ಅನ್‌ಬ್ರಾಂಡೆಡ್ ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕ (ಬಿಇಡಿ)ವನ್ನು 4.83 ರೂ.ನಿಂದ 1.8 ರೂ. ಗೆ ಮತ್ತು ಎಸ್ಎಇಸಿನ್ನು ಪ್ರತಿ ಲೀಟರ್‌ಗೆ ₹ 9 ನಿಂದ ₹8ಕ್ಕೆ ಇಳಿಸಲಾಗಿದೆ. ಆದ್ದರಿಂದ, ಈ ಹಿಂದೆ 14.98 ರೂ.ಗಳಾಗಿದ್ದ ಪೆಟ್ರೋಲ್ ಮೇಲಿನ ಒಟ್ಟಾರೆ ಅಬಕಾರಿ ಸುಂಕದ ಪ್ರಮಾಣ (ಬಿಇಡಿ + ಎಸ್‌ಎಇಸಿ + ಎಐಡಿಸಿ) ಇದೀಗ, ಲೀಟರ್‌ಗೆ 14.9 ರೂ. ಆಗಿದೆ. ಡೀಸೆಲ್‌ನಲ್ಲಿ ಈ ಪ್ರಮಾಣ ₹ 13.8 (ಹಿಂದೆ ₹ 13.83 ಇತ್ತು) ರಷ್ಟಾಗಿದೆ.

ಹಾಗಾಗಿ, ಸೆಸ್ ವಿಧಿಸಿದರೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವುದಿಲ್ಲ.

ಮದ್ಯದ ಮೇಲೂ ಇದೇ ರೀತಿಯ ಲೆಕ್ಕಾಚಾರ ಅನ್ವಯವಾಗಲಿದೆ. ಪ್ರಸ್ತುತ ಶೇ. 150 ಮೂಲ ಕಸ್ಟಮ್ಸ್ ಸುಂಕವಿರುವ ಮದ್ಯದ ಮೇಲೂ ಇದೇ ರೀತಿಯ ಮರು ಹೊಂದಾಣಿಕೆ ಮಾಡಲಾಗಿದೆ. ಆ ಮೂಲ ಆಮದು ಸುಂಕವನ್ನು ಈಗ ಶೇಕಡಾ 50 ಕ್ಕೆ ಕಡಿತಗೊಳಿಸಲಾಗಿದೆ, ಬಜೆಟ್‌ನಲ್ಲಿ ಶೇ. 100 ರಷ್ಟು ಎಐಡಿಸಿಯನ್ನು ಪ್ರಸ್ತಾಪಿಸಲಾಗಿದೆ. ಹಾಗಾಗಿ, ಬೆಲೆ ಹೆಚ್ಚಾಗುವುದಿಲ್ಲ. ಗ್ರಾಹಕರು ಇರುವ ಬೆಲೆಗಿಂತ ಹೆಚ್ಚು ಪಾವತಿಸಬೇಕಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.