ಮುಗಿಲಿನ ದೂರಕೆ ಹಾರಿ, ವಿದೇಶಗಳ ಸುಂದರ ನಗರಗಳನ್ನು ವಾಸ್ತು ವೈಭವನ್ನು ಕಣ್ತುಂಬಿಕೊಳ್ಳಬೇಕು, ಸ್ವಚ್ಛ ಕಡಲ ತೀರದಲ್ಲಿ ವಿಹರಿಸಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸದ ಅನುಭವವನ್ನು ಪಡೆದುಕೊಳ್ಳಬೇಕೆನ್ನುವುದು ಶ್ರೀಸಾಮಾನ್ಯನ ಹೆಬ್ಬಯಕೆ. ಹೀಗೆ ವಿದೇಶ ಪ್ರವಾಸ ಮಾಡುವ ಹಾದಿಯಲ್ಲಿ ನೀವು ನಿಮ್ಮ ಕುಟುಂಬದ ಸುರಕ್ಷತೆಯನ್ನು ಟ್ರಾವೆಲ್ ಇನ್ಶೂರೆನ್ಸ್ ಮೂಲಕ ಖಾತರಿಪಡಿಸಿಕೊಳ್ಳುವುದು ಬಹಳ ಮುಖ್ಯ.
ಟ್ರಾವೆಲ್ ಇನ್ಶೂರೆನ್ಸ್‌ನ ಮಹತ್ವ: ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಪ್ರಯಾಣಕ್ಕೆ ವಿಮೆ ಭದ್ರತೆ ಖಾತರಿಪಡಿಸುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪ್ರಯಾಣ ಸ೦ಬ೦ಧಿತ ಅಪಘಾತಗಳು, ಪ್ರಯಾಣದ ಅವಧಿಯಲ್ಲಿನ ಅನಿರೀಕ್ಷಿತ ವೈದ್ಯಕೀಯ ವೆಚ್ಚ, ಬ್ಯಾಗೇಜ್ ಕಳೆದುಹೋಗುವುದು, ಪಾಸ್ ಪೋರ್ಟ್ ಕಳೆದು ಹೋಗುವುದು, ವಿಮಾನ ಹಾರಾಟದಲ್ಲಿ ತಡೆ/ ವಿಳಂಬ ಅಥವಾ ಬ್ಯಾಗೇಜ್ ತಡವಾಗಿ ಬರುವುದು ಮುಂತಾದವುಗಳ ವಿರುದ್ಧ ಸುರಕ್ಷತೆ ಒದಗಿಸುತ್ತದೆ.
ಪ್ರಯಾಣಿಕ ತನ್ನ ಅನುಕೂಲಕ್ಕೆ ತಕ್ಕಂತೆ ದೇಶದೊಳಗಿನ ಪ್ರಯಾಣಕ್ಕೆ ಅಥವಾ ವಿದೇಶ ಪ್ರಯಾಣಕ್ಕೆ ಅಥವಾ ಎರಡೂ ಪ್ರಯಾಣಗಳಿಗೆ ಅನುಕೂಲವಾಗುವಂತೆ ವಿಮಾ ಸುರಕ್ಷತೆ ಪಡೆದುಕೊಳ್ಳಬಹುದಾಗಿದೆ.
ಟ್ರಾವೆಲ್ ಇನ್ಶೂರೆನ್ಸ್‌ನ ಅವಧಿ: ಅಗತ್ಯಕ್ಕೆ ಅನುಗುಣವಾಗಿ ಒಂದು ಬಾರಿಯ ಪ್ರಯಾಣಕ್ಕೆ, ನಿರ್ದಿಷ್ಟ ಅವಧಿಯ ಪ್ರಯಾಣಕ್ಕೆ ಅಥವಾ ವಾರ್ಷಿಕ ಅವಧಿಯ ಪ್ರಯಾಣಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ನೀಡಲಾಗುತ್ತದೆ.
ಇನ್ಶೂರೆನ್ಸ್ ಖರೀದಿಸುವ ಸಂದರ್ಭದಲ್ಲಿ ಪ್ರಯಾಣದ ಅವಧಿ ಆಯ್ಕೆ ಮಾಡುವಾಗ ಅನಿವಾರ್ಯ ಕಾರಣಗಳಿಂದ ಆಗುವ ಸಂಭಾವ್ಯ ವಿಳಂಬವನ್ನು ಪರಿಗಣಿಸುವುದೂ ಸೂಕ್ತ. ಇದರಿಂದ ಪ್ರಯಾಣದ ಅವಧಿಯಲ್ಲಿ ಒಂದೆರಡು ದಿನ ವ್ಯತ್ಯಾಸವಾದರೂ ನಿಮಗೆ ವಿಮೆ ಸುರಕ್ಷತೆ ಲಭ್ಯವಿರುತ್ತದೆ.
ವಿಮೆ ಮೊತ್ತಕ್ಕೆ ಅನುಗುಣವಾಗಿ ಪ್ರೀಮಿಯಂ ದರದಲ್ಲೂ ವ್ಯತ್ಯಾಸವಿರುತ್ತದೆ. ಇದು ವಯಸ್ಸು, ಪ್ರಯಾಣದ ಅವಧಿ ಮುಂತಾದ ಇತರ ಅಂಶಗಳಲ್ಲದೆ ಪ್ರಯಾಣಿಸುತ್ತಿರುವ ದೇಶವನ್ನು ಅವಲಂಬಿಸಿರುತ್ತದೆ. ಶೇ 90 ಕ್ಕಿಂತ ಹೆಚ್ಚು ಪರಿಹಾರ ಅನುಪಾತ ಹೊಂದಿರುವ ಕಂಪನಿಗಳಿಂದ ಇನ್ಶೂರೆನ್ಸ್ ಕೊಳ್ಳುವುದು ಸೂಕ್ತ.
ಪರಿಗಣಿಸುವ ಸಂಗತಿಗಳು: ಪ್ರಯಾಣ ಸಂದರ್ಭದ ವೈದ್ಯಕೀಯ ವೆಚ್ಚ. ಪ್ರಯಾಣ ಸಂದರ್ಭದ ವೈಯಕ್ತಿಕ ಅಪಘಾತ. ಬ್ಯಾಗೇಜ್ ಕಳೆದು ಹೋಗುವುದು/ತಡವಾಗಿ ಬರುವುದು. ಪ್ರಯಾಣದ ಅವಧಿಯಲ್ಲಿ ಪಾಸ್‌ಪೋರ್ಟ್ ಕಳೆದುಹೋಗುವುದು. ಪ್ರಯಾಣದಲ್ಲಿ ವಿಳಂಬವಾಗುವುದು. ಸಂಕಷ್ಟದ ಸಂದರ್ಭದಲ್ಲಿ ತಾಯ್ನಾಡಿಗೆ ಹಿಂದಿರುಗುವುದು (ರಿಪ್ಯಾಟ್ರಿಯೇಶನ್). ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಪಾರ್ಥಿವ ಶರೀರ ರವಾನೆ ವೆಚ್ಚ ಇತ್ಯಾದಿ.
ಪರಿಗಣಿಸದ ಸಂಗತಿಗಳು: ಪ್ರಯಾಣಿಸುವ ವ್ಯಕ್ತಿಗೆ ಮೊದಲೇ ಇರುವ ಕಾಯಿಲೆಗಳು. ಪ್ರಯಾಣದ ಅವಧಿಯಲ್ಲಿ ಯುದ್ಧದ ಅಪಾಯಗಳು. ಪ್ರಯಾಣದ ಅವಧಿಯಲ್ಲಿ ಆತ್ಮಹತ್ಯೆ ಮತ್ತು ಬುದ್ಧಿ ಭ್ರಮಣೆ. ಪ್ರಯಾಣದ ಅವಧಿಯಲ್ಲಿ ಅಪಾಯಕಾರಿ ಕ್ರೀಡೆ.
ಖರೀದಿಸುವುದು ಹೇಗೆ: ವಿಮಾನ ಟಿಕೆಟ್ ಮುಂಗಡ ಕಾದಿರಿಸುವ ಅಂತರ್ಜಾಲ ತಾಣಗಳು (ಬುಕ್ಕಿಂಗ್ ಪೋರ್ಟಲ್) ಟಿಕೆಟ್ ಜತೆ ವಿಮೆ ಖರೀದಿ ಸೌಲಭ್ಯವನ್ನು ಹೆಚ್ಚುವರಿಯಾಗಿ ನೀಡುತ್ತವೆ. ಇನ್ಶೂರೆನ್ಸ್ ಕಂಪನಿಯ ವೆಬ್ ಸೈಟ್ ಅಥವಾ ಇನ್ಶೂರೆನ್ಸ್ ಬ್ರೋಕಿಂಗ್ ವೆಬ್ ಸೈಟ್‌ಗಳಲ್ಲಿ ನೀವು ಅಗತ್ಯಕ್ಕೆ ಅನುಗುಣವಾಗಿ ಟ್ರಾವೆಲ್ ಇನ್ಶೂರೆನ್ಸ್ ಪಡೆದುಕೊಳ್ಳಬಹುದು.
ಇನ್ಶೂರೆನ್ಸ್ ಕ್ಲೇಮ್: ವಿಮೆ ಪರಿಹಾರ ಪಡೆಯುವ ಬಗ್ಗೆ (ಇನ್ಶೂರೆನ್ಸ್ ಕ್ಲೇಮ್) ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು. ಪೂರಕ ದಾಖಲೆಗಳನ್ನು ಒದಗಿಸಿ ಅರ್ಜಿಯನ್ನು ಭರ್ತಿ ಮಾಡಿ ಕ್ಲೇಮ್ ಪ್ರಕ್ರಿಯೆ ಜಾರಿಗೊಳಿಸಬೇಕು.
ಅಂದಾಜಿಗೆ ನಿಲುಕದ ಪೇಟೆಯ ಓಟ
ಎಲ್ಲ ಲೆಕ್ಕಾಚಾರಗಳನ್ನು ಮೀರಿ ಷೇರುಪೇಟೆ ಸೂಚ್ಯಂಕಗಳು ಸಕಾರಾತ್ಮಕ ಹಾದಿಯಲ್ಲಿ ಮುನ್ನುಗ್ಗುತ್ತಿವೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಹಿಂಜರಿಕೆ ಮತ್ತು ದೇಶದಾದ್ಯಂತ ನಡೆಯುತ್ತಿರುವ ಮತದಾನದ ಪ್ರಕ್ರಿಯೆಯ ನಡುವೆಯೂ ಪೇಟೆಯಲ್ಲಿನ ವಹಿವಾಟು ಆಶಾದಾಯಕವಾಗಿದೆ.
ಮುಂಗಾರು ಮಳೆ ವಾಡಿಕೆಯಂತೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ ಪರಿಣಾಮ ಏಪ್ರಿಲ್ 16 ರಂದು ಸೆನ್ಸೆಕ್ಸ್ 370 ಅಂಶ ಜಿಗಿತದೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟವಾದ 39,275 ಅಂಶಗಳಿಗೆ ತಲುಪಿತ್ತು. ಇದರಿಂದಾಗಿ ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 0.96 ರಷ್ಟು (39,140) ಪ್ರಗತಿ ಸಾಧಿಸಿದ್ದರೆ, ನಿಫ್ಟಿ ಶೇ 0.94 ರಷ್ಟು(11,752) ಮುನ್ನಡೆದಿದೆ.
ಪೇಟೆಯ ಏರಿಳಿತದಲ್ಲಿ ತ್ರೈಮಾಸಿಕ ಫಲಿತಾಂಶಗಳ ಪಾತ್ರ ಪ್ರಮುಖವಾಗಿದೆ. ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಗಳು ವಿಶ್ಲೇಷಕರ ನಿರೀಕ್ಷೆಯಂತೆ ಉತ್ತಮ ಸಾಧನೆ ತೋರಿರುವುದು ಮಾರುಕಟ್ಟೆಗೆ ಪೂರಕ ಅಂಶವಾಗಿದೆ. ಆದರೆ, ಷೇರುಗಳ ಬೆಲೆ ಈಗ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹೂಡಿಕೆದಾರರು ಲಾಭ ಗಳಿಕೆಯತ್ತಲೂ ಚಿತ್ತಹರಿಸಿದ್ದಾರೆ. ಇದರಿಂದಾಗಿ ಸೂಚ್ಯಂಕಗಳ ಅನಿರೀಕ್ಷಿತ ಏರಿಳಿತ ಮುಂದುವರಿಯಲಿದೆ. ಮತದಾನ ಪ್ರಕ್ರಿಯೆ ದೇಶಾದ್ಯಂತ ಪೂರ್ಣಗೊಳ್ಳುವವರೆಗೂ ಮಾರುಕಟ್ಟೆಯ ಪರಿಸ್ಥಿತಿ ಲೆಕ್ಕಾಚಾರಗಳಿಗೆ ನಿಲುಕದ್ದಾಗಿದೆ.
ಏರಿಕೆ: ನಿಫ್ಟಿ (500) ನಲ್ಲಿ ಪಿಸಿ ಜ್ಯುವೆಲರ್ (ಶೇ 29.7), ಅದಾನಿ ಗ್ರೀನ್ ಎನರ್ಜಿ ( ಶೇ 21.6), ಶಿಲ್ಪಾ ಮೆಡಿಕೇರ್ (ಶೇ 18.1), ದೀಪಕ್ ಫರ್ಟಿಲೈಸರ್ಸ್ (ಶೇ 16.2), ಮಿಂಡಾ ಇಂಡಸ್ಟ್ರೀಸ್ (ಶೇ 14.6) ರಷ್ಟು ಏರಿಕೆ ದಾಖಲಿಸಿವೆ.
ಇಳಿಕೆ: ಬಿಕ್ಕಟ್ಟಿನ ಪರಿಣಾಮವಾಗಿ ನಿಫ್ಟಿ (500) ನಲ್ಲಿ ಜೆಟ್ ಏರ್ ವೇಸ್ ಶೇ 36.8 ಕುಸಿತ ಕಂಡಿದೆ. ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಪವರ್, ರಿಲಯನ್ಸ್ ಕಮ್ಯೂನಿಕೇಷನ್ ಶೇ 11 ರಿಂದ ಶೇ 17.7 ರಷ್ಟು ಕುಸಿದಿವೆ.
ಮುನ್ನೋಟ: ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಟಾಟಾ ಸ್ಟೀಲ್, ಯೆಸ್ ಬ್ಯಾಂಕ್, ಮಾರುತಿ ಸುಜುಕಿ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಅಲ್ಟ್ರಾ ಟೆಕ್ ಸಿಮೆಂಟ್, ಹೀರೊ ಮೋಟೊ ಕಾರ್ಪ್, ಭಾರ್ತಿ ಇನ್ಫ್ರಾಟೆಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ತ್ರೈಮಾಸಿಕ ಫಲಿತಾಂಶಗಳ ಪ್ರಭಾವ ಮಾರುಕಟ್ಟೆಯ ಮೇಲಾಗಲಿದೆ.
(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.