ಒಂದಲ್ಲ ಒಂದು ಉದ್ದೇಶಕ್ಕೆ ಸಾಲ ಎಲ್ಲರಿಗೂ ಅನಿವಾರ್ಯ. ಆದರೆ, ಯಾವುದಕ್ಕೆ ಎಷ್ಟು ಸಾಲ ಮಾಡಬೇಕು ಎನ್ನುವುದೇ ದೊಡ್ಡ ಪ್ರಶ್ನೆ. ಎಷ್ಟೋ ಮಂದಿ ತಮ್ಮ ಆದಾಯ ಮೀರಿ ಮೂರ್ನಾಲ್ಕು ರೀತಿಯ ಸಾಲ ಮಾಡಿಕೊಂಡು ಸಾಲ ಕಟ್ಟಲಾಗದೆ ಪರಿತಪಿಸುತ್ತಾರೆ.
‘ಸಾಲವನ್ನು ಕೊಂಬಾಗ ಹಾಲೋಗರ ಉಂಡಂತೆ, ಸಾಲಿಗನು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂಬ ಸರ್ವಜ್ಞನ ಮಾತು ಇಲ್ಲಿ ಪ್ರಸ್ತುತ. ಸಾಲ ಮಾಡುವುದು ತಪ್ಪಲ್ಲ. ಆದರೆ, ಅಂದಾಜಿಲ್ಲದೆ ಸಾಲ ಮಾಡಿದರೆ, ಅದು ನಿಮ್ಮನ್ನು ಶೂಲವಾಗಿ ಕಾಡುತ್ತದೆ. ಈ ನಿಟ್ಟಿನಲ್ಲಿ ಸಾಲದ ನಿಮ್ಮ ಲೆಕ್ಕಾಚಾರ ಹೇಗಿರಬೇಕು ಎನ್ನುವ ವಿವರಣೆ ಇಲ್ಲಿದೆ.
ಹಾಸಿಗೆ ಇರುವುದಕ್ಕಿಂತ ಕಡಿಮೆ ಕಾಲು ಚಾಚಿ: ಎಲ್ಲದಕ್ಕೂ ನಿಮಗೆ ಸುಲಭದಲ್ಲಿ ಸಾಲ ಕೊಡುವ ಕಾಲವಿದು. ಆದರೆ, ಸಾಲ ಸಿಗುತ್ತದೆ ಅಂತ ಎಲ್ಲವನ್ನೂ ಸಾಲದಲ್ಲೇ ಖರೀದಿ ಮಾಡುವ ಗೋಜಿಗೆ ಹೋಗಬೇಡಿ.
ನೀವು ಮಾಡುವ ಸಾಲದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಉತ್ತಮಗೊಳ್ಳುವಂತಿದ್ದರೆ ಸಾಲ ಮಾಡಿದರೆ ತೊಂದರೆ ಇಲ್ಲ. ಆದರೆ ಮದುವೆ, ವಿದೇಶ ಪ್ರವಾಸದಂತಹ ಉದ್ದೇಶಗಳಿಗೆ ಅನುತ್ಪಾದಕ ಸಾಲ ಮಾಡಿದರೆ ಅದು ನಿಮ್ಮನ್ನು ಕಾಡದೆ ಇರದು. ಸಾಲದ ವಿಚಾರಕ್ಕೆ ಬಂದರೆ 'ಹಾಸಿಗೆ ಇರುವುದಕ್ಕಿಂದ ಕಡಿಮೆ ಕಾಲು ಚಾಚಬೇಕು'. ನಿಮ್ಮ ಒಟ್ಟಾರೆ ಸಾಲದ ಪ್ರಮಾಣ ನಿಮ್ಮ ಮಾಸಿಕ ನಿವ್ವಳ ಆದಾಯದ ಶೇ 50 ಕ್ಕಿಂತ ಹೆಚ್ಚಿಗೆ ಇರಬಾರದು.
ನಿಮ್ಮ ಮಾಸಿಕ ಆದಾಯ ಮತ್ತು ಸಾಲದ ಅನುಪಾತ ಎಷ್ಟು ? ಈ ಸೂತ್ರ ಬಳಸಿ ಲೆಕ್ಕ ಮಾಡಿ.
ಮಾಸಿಕ ಆದಾಯ ಮತ್ತು ಸಾಲದ ಅನುಪಾತ = ಒಟ್ಟು ಮಾಸಿಕ ಕಂತುಗಳು / ನಿವ್ವಳ ಮಾಸಿಕ ಆದಾಯ 100
*ಶೇ20 ರಿಂದ ಶೇ25 ರಷ್ಟು-ಯಾವುದೇ ಸಮಸ್ಯೆಯಿಲ್ಲ
* ಶೇ25 ರಿಂದ ಶೇ40-ಎಚ್ಚರಿಕೆಯ ನಡೆಯಿರಲಿ
* ಶೇ 40 ರಿಂದ ಶೇ 50-ಸ್ವಲ್ಪ ಒತ್ತಡದಲ್ಲಿದ್ದೀರಿ
* ಶೇ 50 ರ ಮೇಲ್ಪಟ್ಟು-ಭಾರೀ ಒತ್ತಡದಲ್ಲಿ ಇದ್ದೀರಿ
ಮನೆ ಸಾಲಕ್ಕೆ ಸೂತ್ರ: ಮಾಸಿಕ ಆದಾಯದ ಶೇ 30 ರಿಂದ ಶೇ 35 ರಷ್ಟು ಹಣ ಮಾತ್ರ ನಿಮ್ಮ ಗೃಹ ಸಾಲದ ಮಾಸಿಕ ಕಂತು (ಇಎಂಐ) ಆಗಿರಬೇಕು.
ನೀವು ಸಾಲ ಮಾಡಿ ಖರೀದಿಸುತ್ತಿರುವ ಸೈಟ್ ಅಥವಾ ಮನೆಯ ಮೌಲ್ಯ ನಿಮ್ಮ ವಾರ್ಷಿಕ ಆದಾಯದ 5 ಪಟ್ಟಿಗಿಂತ ಜಾಸ್ತಿ ಇರಬಾರದು. 10 ರಿಂದ 15 ವರ್ಷಗಳ ಅವಧಿಗೆ ಸಾಲ ಪಡೆದರೆ ಬಡ್ಡಿ ಹೊರೆ ಕಡಿಮೆ. ಗೃಹ ನಿರ್ಮಾಣ ಅಥವಾ ಮನೆ ಖರೀದಿಸಲು ಸಾಲ ಮಾಡುವಾಗ ಶೇ 25 ರಷ್ಟು ಡೌನ್ ಪೇಮೆಂಟ್‌ಗೆ ಹೋಗುವುದು ಒಳಿತು.
ವೈಯಕ್ತಿಕ ಸಾಲಕ್ಕೆ ಸೂತ್ರ: ವೈಯಕ್ತಿಕ ಸಾಲದ ಮಾಸಿಕ ಕಂತು (ಇಎಂಐ) ನಿಮ್ಮ ಮಾಸಿಕ ನಿವ್ವಳ ಆದಾಯದ ಶೇ 10 ಕ್ಕಿಂತ ಹೆಚ್ಚಿಗೆ ಇರಬಾರದು.
ವೈಯಕ್ತಿಕ ಸಾಲಕ್ಕೆ ಗರಿಷ್ಠ ಬಡ್ಡಿ ದರ ವಿಧಿಸಲಾಗುವುದು. ಇದರ ಬಡ್ಡಿ ದರ ಶೇ 11 ರಿಂದ ಶೇ 20 ಕ್ಕಿಂತಲೂ ಹೆಚ್ಚಿರುತ್ತದೆ. ತುರ್ತು ಅಗತ್ಯಗಳಿಗೆ ಮಾತ್ರ ಇದನ್ನು ಪರಿಗಣಿಸಬೇಕು.
ಕಾರ್ ಖರೀದಿ ಸಾಲಕ್ಕೆ ಸೂತ್ರ : ಕಾರ್ ಖರೀದಿ ಸಾಲದ ಮಾಸಿಕ ಕಂತು ನಿಮ್ಮ ನಿವ್ವಳ ಮಾಸಿಕ ಆದಾಯದ ಶೇ 10 ಅಥವಾ ಶೇ 15 ಕ್ಕಿಂತ ಜಾಸ್ತಿ ಇರಬಾರದು. ಕನಿಷ್ಠ ಶೇ 20 ರಷ್ಟು ಡೌನ್ ಪೇಮೆಂಟ್ ಮಾಡಿ, ಗರಿಷ್ಠ 4 ವರ್ಷಕ್ಕೆ ಕಾರ್ ಸಾಲ ಪಡೆಯುವುದು ಸೂಕ್ತ.
ತಿಳಿಯಾದ ಸಂಘರ್ಷ, ಪೇಟೆ ಚೇತರಿಕೆ
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಿಳಿಯಾಗಿ ಉಭಯ ದೇಶಗಳು ಸಂಭವನೀಯ ಯುದ್ಧದಿಂದ ಹಿಂದೆ ಸರಿದ ಪರಿಣಾಮ ಭಾರತೀಯ ಷೇರು ಪೇಟೆ ಸೂಚ್ಯಂಕಗಳು ಸಕಾರಾತ್ಮಕ ಹಾದಿಗೆ ಮರಳಿವೆ. ತೈಲ ಬೆಲೆ ನಿಯಂತ್ರಣಕ್ಕೆ ಬರಲಿದೆ ಎನ್ನುವ ಸಂದೇಶ ಪೇಟೆಗೆ ರವಾನೆಯಾಗಿರುವುದರಿಂದ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿದೆ. ವಾರಾಂತ್ಯಕ್ಕೆ 41,599 ರಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ಶೇ 0.36 ರಷ್ಚು ಏರಿಕೆ ಕಂಡಿದೆ. 12,256 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಪಿ 0.33 ರಷ್ಟು ಜಿಗಿದಿದೆ.
ವಲಯವಾರು ಪ್ರಗತಿಯಲ್ಲಿ ‘ನಿಫ್ಟಿ’ ರಿಯಲ್ ಎಸ್ಟೇಟ್ ಶೇ 3.5 ರಷ್ಟು ಸುಧಾರಿಸಿದೆ. ನಿಫ್ಟಿ ಎಫ್‌ಎಂಸಿಜಿ ಶೇ 0.9, ನಿಫ್ಟಿ ವಾಹನ ಉತ್ಪಾದನೆ ಶೇ 0.7 ರಷ್ಡು ಜಿಗಿದಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.5, ಫಾರ್ಮಾ ವಲಯ ಶೇ 0.7 ಮತ್ತು ಲೋಹ ವಲಯ ಶೇ 0.3 ರಷ್ಟು ತಗ್ಗಿವೆ.
ಏರಿಕೆ –ಇಳಿಕೆ: ಅಲ್ಟ್ರಾಟೆಕ್ ಸಿಮೆಂಟ್ ಶೇ 6.92, ವೇದಾಂತ ಶೇ 6.24, ಟಾಟಾ ಮೋಟರ್ಸ್ ಶೇ 5.76, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 5.17, ಏಷಿಯನ್ ಪೇಂಟ್ಸ್ ಶೇ 5, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 4.21, ಎಸ್‌ಬಿಐ ಶೇ 4.15, ಮಾರುತಿ ಶೇ 4.09 ರಷ್ಟು ಜಿಗಿತ ಕಂಡಿವೆ.
ಮಧ್ಯಮ ಶ್ರೇಣಿ ಸೂಚ್ಯಂಕದಲ್ಲಿ ಸ್ಪಾರ್ಕ್, ಸನ್ ಟಿವಿ, ಆಲ್ಕಮ್ ಲ್ಯಾಬ್ಸ್, ರಾಮ್ಕೊ ಸಿಮೆಂಟ್ಸ್, ಟಾಟಾ ಗ್ಲೋಬಲ್ ಮತ್ತು ಬಾಲಕೃಷ್ಣ ಇಂಡಸ್ಟ್ರೀಸ್ ಶೇ 7 ರಿಂದ ಶೇ 12 ರಷ್ಟು ಗಳಿಸಿವೆ.
ಐಷರ್ ಶೇ 2.05, ಒಎನ್‌ಜಿಸಿ ಶೇ 1.66, ಬ್ರಿಟಾನಿಯಾ ಶೇ 1.07, ಯೆಸ್ ಬ್ಯಾಂಕ್ ಶೇ 0.89 ಮತ್ತು ಪವರ್ ಗ್ರಿಡ್ ಶೇ 0.49 ರಷ್ಟು ಕುಸಿದಿವೆ. ಮಧ್ಯಮ ಶ್ರೇಣಿ ಸೂಚ್ಯಂಕದಲ್ಲಿ ರಿಲಯನ್ಸ್ ಇನ್ಫ್ರಾ, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಪವರ್ ಶೇ 20 ರಷ್ಟು ಕುಸಿದಿವೆ.
ಎಡಲ್ವೈಸ್ ಫೈನಾನ್ಶಿಯಲ್ ಸರ್ವೀಸಸ್, ಮ್ಯಾಕ್ಸ್ ಫೈನಾನ್ಶಿಯಲ್ ಸರ್ವೀಸಸ್, ಇಂಡಿಯಾ ಬುಲ್ಸ್ ವೆಂಚರ್ಸ್, ಎಂಜಿಎಲ್ ಶೇ 5 ರಿಂದ ಶೇ 11 ರಷ್ಚು ತಗ್ಗಿವೆ.
ಮುನ್ನೋಟ: ಸಗಟು ದರ ಸೂಚ್ಯಂಕ , ಗ್ರಾಹಕ ದರ ಸೂಚ್ಯಂಕ, ಆಮದು ಮತ್ತು ರಫ್ತು ದತ್ತಾಂಶ, ಆಮದು ರಫ್ತುಗಳ ಮೌಲ್ಯಾಂತರ ದತ್ತಾಂಶ ಸೇರಿ ಇನ್ನು ಕೆಲ ಪ್ರಮುಖ ಅಂಕಿ-ಅಂಶಗಳು ಈ ವಾರ ಹೊರಬೀಳಲಿವೆ. ಕಂಪನಿಗಳ ಮೂರನೇ ತ್ರೈಮಾಸಿಕ ಫಲಿತಾಂಶಗಳ ಅವಧಿ ಆರಂಭವಾಗಿದ್ದು, ಅದು ಕೂಡ ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿದೆ.
ವಿಪ್ರೊ, ಇಂಡಸ್ ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿ ಪ್ರಮುಖ ಕಂಪನಿಗಳು ಈ ವಾರದಲ್ಲಿ ತ್ರೈಮಾಸಿಕ ಸಾಧನೆ ದತ್ತಾಂಶ ಪ್ರಕಟಿಸಲಿವೆ. ಈ ಎಲ್ಲ ಬೆಳವಣಿಗೆಗಳ ಜತೆಗೆ ಅಮೆರಿಕ ಮತ್ತು ಇರಾನ್ ನಡುವಣ ಬಿಕ್ಕಟ್ಟು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಸಹ ಸೂಚ್ಯಂಕಗಳ ದಿಕ್ಕು ನಿರ್ಧರಿಸಲಿದೆ.
(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಉಪಾಧ್ಯಕ್ಷ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.