ADVERTISEMENT

ಬಂಡವಾಳ ಮಾರುಕಟ್ಟೆ | ಉಳಿತಾಯದ ಸರಳ ಸೂತ್ರಗಳು

ಕಾವ್ಯ ಡಿ.
Published 21 ಅಕ್ಟೋಬರ್ 2024, 0:01 IST
Last Updated 21 ಅಕ್ಟೋಬರ್ 2024, 0:01 IST
   

ಬಹುತೇಕರು ಸಂಬಳ ಬಂದ ತಕ್ಷಣ ತಮ್ಮಿಷ್ಟದ ವಸ್ತುಗಳ ಖರೀದಿಗೆ ಮುಗಿಬೀಳುತ್ತಾರೆ. ದುಬಾರಿ ಮೊಬೈಲ್‌ ಖರೀದಿಸುವುದು, ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡೋದು, ಬ್ರಾಂಡೆಡ್ ಬಟ್ಟೆ ತೆಗೆದುಕೊಳ್ಳೋದು. ಹೀಗೆ ಕೊಳ್ಳುಬಾಕತನದ ಸರಣಿ ಮುಂದುವರಿಯುತ್ತದೆ.

ಕೊನೆಗೆ ತಿಂಗಳ ಅಂತ್ಯದಲ್ಲಿ ಸಣ್ಣಪುಟ್ಟ ಖರ್ಚಿಗೂ ಕಾಸಿಲ್ಲದೆ ಸಾಲ ಮಾಡಿಕೊಂಡು ಮತ್ತೊಂದು ತಿಂಗಳ ಸಂಬಳವನ್ನು ಎದುರು ನೋಡುತ್ತಾರೆ. ಇದೇ ರೀತಿ ಸಂಬಳ - ಸಿಕ್ಕಾಪಟ್ಟೆ ಖರೀದಿ ಮತ್ತು ತಿಂಗಳಾಂತ್ಯದ ವೇಳೆಗೆ ಸಾಲ ಮಾಡುವ ಚಕ್ರ ಅನೇಕರ ಬದುಕಲ್ಲಿ ಅನಿರ್ದಿಷ್ಟಾವಧಿವರೆಗೆ ಮುಂದುವರಿಯುತ್ತದೆ.

ವೇತನ ಕೈಗೆ ಸಿಕ್ಕ ತಕ್ಷಣ ಖರೀದಿಯ ಭರಾಟೆ ಶುರುವಾಗುವುದರಿಂದ ತಿಳಿದೋ, ತಿಳಿಯದೆಯೋ ಇಂತಹ ಮಂದಿ ಉಳಿತಾಯಕ್ಕಿಂತ ಖರ್ಚುಗಳಿಗೆ ಹೆಚ್ಚು ಆದ್ಯತೆ ಕೊಟ್ಟಿರುತ್ತಾರೆ. ಬಂದ ಆದಾಯದಲ್ಲಿ ಮನಸೋ ಇಚ್ಛೆ ಖರ್ಚು ಮಾಡಿ ಏನಾದರು ಉಳಿದರಷ್ಟೇ ಉಳಿತಾಯ ಎನ್ನುವ ಧೋರಣೆ ಇಲ್ಲಿರುತ್ತದೆ. ಆದಾಯ–ಖರ್ಚು= ಉಳಿತಾಯ (ಸಿಕ್ಕ ಸಂಬಳಲ್ಲಿ ಖರ್ಚು ಮಾಡಿ ಉಳಿದದ್ದು ಉಳಿತಾಯ) ಎನ್ನುವ ಹಣಕಾಸು ನಿರ್ವಹಣೆ ಕ್ರಮ ನಿಮ್ಮದಾಗಿದ್ದರೆ ಈ ಕೂಡಲೇ ಎಚ್ಚೆತ್ತುಕೊಂಡು ಅದನ್ನು ಬದಲಿಸಿಕೊಳ್ಳವ ಅಗತ್ಯವಿದೆ.

ADVERTISEMENT

ಬಂದ ಆದಾಯದಲ್ಲಿ ಅಂದುಕೊಂಡಿರುವಷ್ಟು ಮೊತ್ತವನ್ನು ಕಡ್ಡಾಯವಾಗಿ ಉಳಿತಾಯ ಮಾಡಿ ನಂತರ ಖರ್ಚು ಮಾಡುತ್ತೇನೆ ಎನ್ನುವ ಮನಸ್ಥಿತಿ ಬೆಳೆಸಿಕೊಂಡರೆ ಬದುಕು ಬದಲಾಗುತ್ತದೆ.

ಉಳಿತಾಯಕ್ಕೆ ಸರಿಯಾದ ಸೂತ್ರ ಯಾವುದು?: 

ಸೂತ್ರ–1: ಆದಾಯ–ಖರ್ಚು= ಉಳಿತಾಯ ಇದು ಸರಿಯಾದ ಉಳಿತಾಯದ ಕ್ರಮವಲ್ಲ. 

ಸೂತ್ರ–2: ಆದಾಯ–ಉಳಿತಾಯ= ಖರ್ಚು ಇದು ಸರಿಯಾದ ಉಳಿತಾಯದ ಕ್ರಮ. 

ನೂರೆಂಟು ನೆಪಗಳು:

ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವವರಿಗೆ ಅನೇಕ ನೆಪಗಳಿರುತ್ತವೆ. ನೂರು, ಐನೂರು, ಸಾವಿರ ರೂಪಾಯಿ ಉಳಿಸಿ ಯಾರು ದೊಡ್ಡವರಾಗಿದ್ದಾರೆ? ಜಾಸ್ತಿ ದುಡ್ಡು ಸಿಕ್ಕಾಗ ಉಳಿಸಿದರೆ ಆಯ್ತು. ಹಣ ಸಾಕಾಗಲ್ಲ. ಮುಂದಿನ ತಿಂಗಳಿಂದ ಹೂಡಿಕೆ ಮಾಡುತ್ತೇನೆ. ಈ ಸಲ ಟ್ರಿಪ್‌ಗೆ ಹೋಗಬೇಕು. ಉಳಿಸೋಕೆ ದುಡ್ಡು ಸಾಕಾಗಲ್ಲ. ಹೀಗೆ ಕಾರಣಗಳನ್ನು ಕೊಡುತ್ತಾರೆ.

ಇಂತಹ ಧೋರಣೆಯಿಂದ ಉಳಿತಾಯದ ಅಭ್ಯಾಸ ದೂರವಾಗುವ ಜೊತೆಗೆ ಸಂಪತ್ತು ಸೃಷ್ಟಿಸಿಕೊಳ್ಳುವ ಅವಕಾಶವೂ ಕೈತಪ್ಪುತ್ತದೆ. ಹೂಡಿಕೆ ಮಾಡುವ ಆರಂಭಿಕ ಹಂತದಲ್ಲಿ ದೊಡ್ಡ ಮೊತ್ತವೋ, ಸಣ್ಣ ಮೊತ್ತವೋ ಅನ್ನೋದಕ್ಕಿಂತ ಉಳಿತಾಯಕ್ಕೆ ಚಾಲನೆ ಸಿಗುವುದು ಮುಖ್ಯವಾಗುತ್ತದೆ. ವೃತ್ತಿಯಲ್ಲಿ ಮುಂದೆ ಸಾಗುತ್ತಿರುವಂತೆಯೇ ವೇತನವೂ ಹೆಚ್ಚಳವಾಗುತ್ತದೆ. ಅದಕ್ಕೆ ತಕ್ಕಂತೆ ಉಳಿತಾಯ, ಹೂಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು.

ಎಲ್ಲಿ ಹೂಡಿಕೆ ಮಾಡಬೇಕು?:

ಉಳಿತಾಯ ಮಾಡಿದ ದುಡ್ಡನ್ನು ಸಾಸಿವೆ ಡಬ್ಬಿಯಲ್ಲಿ ಇಟ್ಟರೆ ದುಡ್ಡು ಬೆಳೆಯುವುದಿಲ್ಲ. ಉಳಿಸಿದ ದುಡ್ಡನ್ನು ಹೂಡಿಕೆ ಮಾಡಿದಾಗ ಮಾತ್ರ ಅದು ನಿಮಗಾಗಿ ದುಡಿಯುತ್ತದೆ, ಬೆಳೆಯುತ್ತದೆ. ಬೆಲೆ ಏರಿಕೆಯನ್ನು ಮೀರಿ ಲಾಭ ಪಡೆಯಲು ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆ ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಒಳ್ಳೆಯ ಆಯ್ಕೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಒಂದಷ್ಟು ಕಲಿಕೆ ಮತ್ತು ಪರಿಣತಿ ಬೇಕಾಗುತ್ತದೆ. ಆದರೆ, ಮ್ಯೂಚುವಲ್ ಫಂಡ್‌ಗಳಲ್ಲಿ ಫಂಡ್ ಮ್ಯಾನೇಜರ್ ನೆರವು ಸಿಗುವುದರಿಂದ ಹೂಡಿಕೆ ಕಷ್ಟ ಎನಿಸುವುದಿಲ್ಲ. ಮ್ಯೂಚುವಲ್ ಫಂಡ್‌ಗಳಲ್ಲಿ ₹100, ₹500 ಹೂಡಿಕೆಗೂ ಅವಕಾಶವಿದೆ. ಹಾಗಾಗಿ, ಉಳಿತಾಯಕ್ಕೆ ದೊಡ್ಡ ಮೊತ್ತಬೇಕೆಂದು ಸಮಯ ವ್ಯರ್ಥ ಮಾಡುತ್ತಾ ಕೂರುವುದು ಸರಿಯಲ್ಲ. ಮ್ಯೂಚುವಲ್ ಫಂಡ್ ಅರ್ಥವಾಗುವುದಿಲ್ಲ ಎನ್ನುವುದಾದರೆ ಎಲ್ಲ ಪ್ರಮುಖ ಬ್ಯಾಂಕ್‌ಗಳಲ್ಲೂ ಡೈರೆಕ್ಟ್ ಮ್ಯೂಚುವಲ್ ಫಂಡ್ ಹೂಡಿಕೆಗೆ ನೆರವಾಗುವ ಸಿಬ್ಬಂದಿ ಇರುತ್ತಾರೆ. ಅವರ ನೆರವು ಪಡೆಯಬಹುದು.

ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಬೇಡ. ಸ್ವಲ್ಪವೂ ರಿಸ್ಕ್ ಇರಬಾರದು. ಬೆಲೆ ಏರಿಕೆಗೆ ಸರಿಸಮವಾಗಿ ಗಳಿಕೆ, ಲಾಭ ಸಿಗದಿದ್ದರೂ ಅಡ್ಡಿಯಿಲ್ಲ ಎನ್ನುವವರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್‌ಸಿ), ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಹೆಣ್ಣು ಮಕ್ಕಳ ಹೆಸರಲ್ಲಿ ಹೂಡಿಕೆಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆ, ಫಿಕ್ಸೆಡ್ ಡೆಪಾಸಿಟ್, ಸಾವರಿನ್ ಗೋಲ್ಡ್ ಬಾಂಡ್, ಸರ್ಕಾರಿ ಬಾಂಡ್‌ನಂತಹ ಹೂಡಿಕೆಗಳನ್ನು ಪರಿಗಣಿಸಬಹುದು. ಒಟ್ಟಿನಲ್ಲಿ ನಿಮಗೆ ಸರಿ ಎನಿಸುವ ಯಾವುದಾದರೂ ಹಣಕಾಸು ಉತ್ಪನ್ನದ ಮೇಲೆ ಉಳಿತಾಯ ಹೂಡಿಕೆ ಶುರು ಮಾಡುವುದು ಅತ್ಯಗತ್ಯ. ಏಕೆಂದರೆ ಹಣ ಹಣ ಕೂಡಿದರಷ್ಟೇ ಝಣಝಣ ಕಾಂಚಾಣ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಷೇರುಪೇಟೆ | ಅಲ್ಪ ಇಳಿಕೆ ಕಂಡ ಸೂಚ್ಯಂಕಗಳು

ಅಕ್ಟೋಬರ್ 18ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ. 81224 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.19ರಷ್ಟು ಇಳಿಕೆ ಕಂಡಿದ್ದರೆ 24854 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.44ರಷ್ಟು ತಗ್ಗಿದೆ. ಇರಾನ್- ಇಸ್ರೇಲ್ ಬಿಕ್ಕಟ್ಟು ಚೀನಾ ಆರ್ಥಿಕತೆಯ ನಿಧಾನಗತಿ ಬೆಳವಣಿಗೆ ವಿದೇಶಿ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಆಟೊ ಶೇ 4.87 ಮಾಧ್ಯಮ ವಲಯ ಶೇ 2.11 ಲೋಹ ಶೇ 1.88 ಎಫ್ಎಂಸಿಜಿ ಶೇ 1.7 ಅನಿಲ ಮತ್ತು ತೈಲ ಶೇ 1.69 ಫಾರ್ಮಾ ಶೇ 1.02 ಎನರ್ಜಿ ಶೇ 0.85 ಮಾಹಿತಿ ತಂತ್ರಜ್ಞಾನ ಶೇ 0.41ರಷ್ಟು ಕುಸಿದಿವೆ. ನಿಫ್ಟಿ ಬ್ಯಾಂಕ್ ಶೇ 1.88 ಫೈನಾನ್ಸ್ ಶೇ 1.49 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.87 ಮತ್ತು ರಿಯಲ್ ಎಸ್ಟೇಟ್ ಶೇ 0.48ರಷ್ಟು ಗಳಿಸಿಕೊಂಡಿವೆ.

ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಬಜಾಜ್ ಆಟೊ ಶೇ 15.01 ನೆಸ್ಲೆ ಇಂಡಿಯಾ ಶೇ 6.52 ಟ್ರೆಂಟ್ ಶೇ 5.69 ಬಜಾಜ್ ಫೈನಾನ್ಸ್ ಶೇ 5.52 ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 5.46 ಮಾರುತಿ ಸುಜುಕಿ ಶೇ 5.26 ಹೀರೊ ಮೋಟೊಕಾರ್ಪ್‌ ಶೇ 4.78 ಅದಾನಿ ಎಂಟರ್ ಪ್ರೈಸಸ್ ಶೇ 4.33 ಟಾಟಾ ಸ್ಟೀಲ್ ಶೇ 3.36 ಮತ್ತು ಒಎನ್‌ಜಿಸಿ ಶೇ 3.2ರಷ್ಟು ಕುಸಿದಿವೆ. ವಿಪ್ರೊ ಶೇ 3.73 ಐಸಿಐಸಿಐ ಬ್ಯಾಂಕ್ ಶೇ 3.3 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 2.75 ಎಲ್ ಆ್ಯಂಡ್‌ ಟಿ ಶೇ 2.68 ಟೆಕ್ ಮಹೀಂದ್ರ ಶೇ 2.57 ಎಸ್‌ಬಿಐ ಶೇ 2.49 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 2.26 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 1.87 ಎಕ್ಸಿಸ್ ಬ್ಯಾಂಕ್ ಶೇ 1.79 ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಶೇ 1.57ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಬಜಾಜ್ ಹೌಸಿಂಗ್ ಫೈನಾನ್ಸ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಟಿ ಯೂನಿಯನ್ ಬ್ಯಾಂಕ್ ಬಜಾಜ್ ಫೈನಾನ್ಸ್ ಜೊಮಾಟೊ ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಅದಾನಿ ಎನರ್ಜಿ ಪೇಟಿಎಂ ಐಸಿಐಸಿಐ ಸೆಕ್ಯುರಿಟೀಸ್ ಹಿಂದುಸ್ತಾನ್‌ ಯೂನಿಲಿವರ್ ಬಜಾಜ್ ಫಿನ್‌ಸರ್ವ್ ಪಿಡಿಲೈಡ್ ಇಂಡಸ್ಟ್ರೀಸ್ ಟಿವಿಎಸ್ ಮೋಟರ್ ಕಂಪನಿ ಕರ್ಣಾಟಕ ಬ್ಯಾಂಕ್ ಐಟಿಸಿ ಕೋಲ್ ಇಂಡಿಯಾ ಎಚ್‌ಪಿಸಿಎಲ್ ಐಸಿಐಸಿಐ ಬ್ಯಾಂಕ್ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಜೆ.ಕೆ. ಸಿಮೆಂಟ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.